ಚಾಮರಾಜನಗರದಲ್ಲಿ ಹುಲಿಗಳ ಸಾವು ಮಾಸುವ ಮುನ್ನವೇ ಚಿರತೆ ಮೃತ, ವಿಷ ಪ್ರಾಶನದ ಶಂಕೆ
ಬಿಆರ್‌ಟಿ ಅರಣ್ಯ ವ್ಯಾಪ್ತಿಯ ಹರವೆ ಹೋಬಳಿ ತೆರಕಣಾಂಬಿ ಸಮೀಪದ ಕೊತ್ತಲವಾಡಿಯ ಕರಿಕ್ಲಲು ಕ್ವಾರಿಯಲ್ಲಿ ಚಿರತೆಯ ಕಳೇಬರ ಪತ್ತೆಯಾಗಿದೆ. ಮೃತ ಗಂಡು ಚಿರತೆಯು 5ರಿಂದ 6 ವರ್ಷ ವಯಸ್ಸಿನದ್ದಾಗಿದೆ.;
ಮೃತ ಚಿರತೆಯನ್ನು ವೀಕ್ಷಿಸುತ್ತಿರುವ ಅರಣ್ಯ ಅಧಿಕಾರಿಗಳು
ಚಾಮರಾಜನಗರದಲ್ಲಿ ಇತ್ತೀಚೆಗಷ್ಟೇ ವಿಷ ಪ್ರಾಶನದಿಂದ ತಾಯಿ ಹಾಗೂ ನಾಲ್ಕು ಮರಿ ಹುಲಿಗಳು ಮೃತಪಟ್ಟ ಘಟನೆ ಮಾಸುವ ಮುನ್ನವೇ ಬಿಆರ್‌ಟಿ ವ್ಯಾಪ್ತಿಯಲ್ಲಿ ಚಿರತೆಯೊಂದು ಮೃತಪಟ್ಟಿದ್ದು ಆತಂಕ ಮೂಡಿಸಿದೆ.
ಬಿಆರ್‌ಟಿ ಅರಣ್ಯ ವ್ಯಾಪ್ತಿಯ ಹರವೆ ಹೋಬಳಿ ತೆರಕಣಾಂಬಿ ಸಮೀಪದ ಕೊತ್ತಲವಾಡಿಯ ಕರಿಕ್ಲಲು ಕ್ವಾರಿಯಲ್ಲಿ ಚಿರತೆಯ ಕಳೇಬರ ಪತ್ತೆಯಾಗಿದೆ. ಮೃತ ಗಂಡು ಚಿರತೆಯು 5ರಿಂದ 6 ವರ್ಷ ವಯಸ್ಸಿನದ್ದಾಗಿದ್ದು, ಮೃತ ಚಿರತೆಯ ಸಮೀಪದಲ್ಲೇ ನಾಯಿ ಹಾಗೂ ಕರುವಿನ ಕಳೇಬರವೂ ಪತ್ತೆಯಾಗಿದೆ. ಚಿರತೆಯು ವಿಷಪ್ರಾಶನದಿಂದ ಮೃತ ಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ವಿಷಯ ತಿಳಿದ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು ಬಂಡೀಪುರದ ಶ್ವಾನದಳದಿಂದ ತಪಾಸಣೆ ನಡೆಸಲಾಯಿತು. ಪಶು ವೈದ್ಯ ಡಾ. ವಾಸಿಂ, ಡಾ.ಮೂರ್ತಿ ಅವರಿಂದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಚಿರತೆಯ ಕಳೇಬರವನ್ನು ಸುಡಲಾಯಿತು.
ಸ್ಥಳಕ್ಕೆ ಬಿಆರ್‌ಟಿ ಡಿಸಿಎಫ್ ಶ್ರೀಪತಿ, ಎಸಿಎಫ್ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಚಿರತೆಯ ಕೆಲವು ಅಂಗಾಂಗಗಳ ಸ್ಯಾಂಪಲ್‌ಗಳನ್ನು ಮೈಸೂರಿನಲ್ಲಿರುವ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ನಂತರ ಸತ್ಯಾಂಶ ತಿಳಿಯಲಿದೆ. ಈಗಾಗಲೇ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.