ಮುಂಗಾರು ಅಧಿವೇಶನ | ಬಿಜೆಪಿಯ 18 ಶಾಸಕರ ಅಮಾನತು ಆದೇಶ ವಾಪಸ್; ಪ್ರಸ್ತಾಪ ಅಂಗೀಕರಿಸಿದ ಸದನ
ಸರ್ಕಾರದ ವಿರುದ್ಧ ಸದನದ ಒಳಗೂ, ಹೊರಗು ಪ್ರತಿಭಟನೆ
ರಾಜ್ಯದಲ್ಲಿ ರೈತರು ರಸಗೊಬ್ಬರಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಉತ್ತರ ಕರ್ನಾಟಕಕ್ಕೆ ಯಾವುದೇ ಹೊಸ ನೀರಾವರಿ ಯೋಜನೆಗಳು ಇಲ್ಲದಾಗಿದೆ. ಪರೀಕ್ಷೆ ನಡೆಸಿ ನಾಲ್ಕು ವರ್ಷವಾದರೂ ಪಿಎಸ್‌ಐ ನೇಮಕಾತಿ ಆದೇಶ ನೀಡಿಲ್ಲ. ಈ ಎಲ್ಲ ವಿಚಾರಗಳನ್ನು ಪ್ರಸ್ತಾಪಿಸಿ ಸದನದ ಒಳಗೆ ಹಾಗೂ ಹೊರಗೆ ಹೋರಾಟ ಮಾಡುತ್ತೇವೆ ಎಂದು ಬಿಜಿಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದರು.
ಕಾಲ್ತುಳಿತ ದುರಂತಕ್ಕೆ ಸಿಎಂ, ಡಿಸಿಎಂ ನೇರ ಹೊಣೆ
ಆರ್‌ಸಿಬಿ ಆಟಗಾರರಿಗೆ ವಿಧಾನ ಸೌಧದ ಬಳಿ ಆಯೋಜಿಸಿದ್ದ ಕಾರ್ಯಕ್ರಮ ಆರಂಭ ಮುನ್ನವೇ ಕಾಲ್ತುಳಿತವಾಗಿತ್ತು. ಈ ವಿಷಯ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ಗೂ ಗೊತ್ತಿತ್ತು ಎಂದು ವಿಧಾನಪರಿಷತ್ ಸದಸ್ಯ ಎಸ್.ಎಲ್ ಬೋಜೇಗೌಡ ತಿಳಿಸಿದ್ದಾರೆ.
ವಿಧಾನ ಸೌಧದ ಬಳಿ ಈ ಘಟನೆ ಆಗಿಲ್ಲ ಎಂದು ಸಿಎಂ ತಿಳಿಸಿದ್ದರು. ಪ್ರಕರಣಕ್ಕೆ ಸಂಬಂಧಿದಂತೆ ಅಮಾಯಕ ಅಧಿಕಾರಿಗಳನ್ನ ಅಮಾನತು ಮಾಡಿದ್ದರು. ಕಾಲ್ತುಳಿತ ದುರಂತದ ಹೊಣೆಯನ್ನು ಸಿಎಂ, ಡಿಸಿಎಂ ಹೊರಬೇಕು ಎಂದರು.
ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದೆ: ಛಲವಾದಿ ನಾರಾಯಣಸ್ವಾಮಿ
ರಾಜ್ಯ ಸರ್ಕಾರ ಆರ್‌ಸಿಬಿ ಗೆಲುವಿನ ಲಾಭ ಪಡೆಯಲು ಮುಂದಾಗಿತ್ತು. ಕಪ್ ಆರ್‌ಸಿಬಿದು, ತಪ್ಪು ಸರ್ಕಾರದ್ದು ಎಂದು ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು. ಕಾಲ್ತುಳಿತದಲ್ಲಿ ಬಲಿಯಾದ 11 ಅಭಿಮಾನಿಗಳ ಸಾವಿಗೆ ರಾಜ್ಯ ಸರ್ಕಾರವೇ ಕಾರಣ. ಆರಂಭದಲ್ಲಿ ಪೊಲೀಸರ ತಪ್ಪಿಲ್ಲ ಎಂದಿದ್ದರು. ಬಳಿಕ ಪೊಲೀಸರದ್ದೇ ತಪ್ಪು ಎಂದು ಹೇಳಿದರು. ರಾಜ್ಯದಲ್ಲಿ ರೈತರಿಗೆ ರಸಗೊಬ್ಬರ ಸಿಗುತ್ತಿಲ್ಲ. ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಈ ಕಾರಣಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದೇವೆ ಎಂದರು.
ಜವಾಬ್ದಾರಿಗಳಿಂದ ನುಣುಚಿಕೊಳ್ಳುತ್ತಿರುವ ಸರ್ಕಾರ: ಬಿಜೆಪಿ, ಜೆಡಿಎಸ್ ಪ್ರತಿಭಟನೆ
ಜೂನ್.4ರಂದು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ದುರಂತ ಪ್ರಕರಣ, ರಸಗೊಬ್ಬರ ಕೊರತೆ ಸೇರಿದಂತೆ ರಾಜ್ಯದಲ್ಲಿ ಹಲವಾರು ಸಮಸ್ಯೆಗಳಿವೆ. ಆದರೆ ರಾಜ್ಯ ಸರ್ಕಾರ ಎಲ್ಲಾ ಜವಾಬ್ದಾರಿಗಳಿಂದ ತಪ್ಪಿಸಿಕೊಳ್ಳತ್ತಿದೆ ಎಂದು ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ವಿಧಾನಸೌಧ ಆವರಣದಲ್ಲಿರುವ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿದರು.
ಮಲ್ಲೇಶ್ವರಂನ 11ನೇ ಮುಖ್ಯರಸ್ತೆಗೆ ದಿವಂಗತ ಬಿ.ಸರೋಜಾದೇವಿ ಹೆಸರಿಡಲು ಮನವಿ
ಬೆಂಗಳೂರು ನಗರದ ಮಲ್ಲೇಶ್ವರಂನ 11ನೇ ಮುಖ್ಯ ರಸ್ತೆಗೆ ಚಿತ್ರನಟಿ ದಿವಂಗತ ಬಿ.ಸರೋಜಾದೇವಿ ಹೆಸರಿಡಬೇಕು ಹಾಗೂ ಅವರ ಹೆಸರಿನಲ್ಲಿ ಪ್ರಶಸ್ತಿ ಘೋಷಣೆ ಮಾಡಬೇಕು ಎಂದು ಪ್ರತಿಪಕ್ಷದ ನಾಯಕ ಆರ್. ಅಶೋಕ್ ವಿಧಾನಸಭಾ ಅಧಿವೇಶನದಲ್ಲಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಮೃತಪಟ್ಟ ಗಣ್ಯರಿಗೆ ವಿಧಾನಸಭಾ ಕಲಾಪದಲ್ಲಿ ಸಂತಾಪ ಸಲ್ಲಿಕೆ
ಇಂದಿನಿಂದ ಆರಂಭವಾಗಿರುವ ವಿಧಾನಸಭಾ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ ಸಲ್ಲಿಕೆಯಾಗಲಿದೆ. ಗುಜರಾತ್‌ನಲ್ಲಿ ಸಂಭವಿಸಿದ ವಿಮಾನ ದುರಂತ ಮತ್ತು ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತದಲ್ಲಿ ಮೃತಪಟ್ಟವರಿಗೆ ಶ್ರದ್ದಾಂಜಲಿ ಸಲ್ಲಿಸಲಾಗುವುದು.
ಮಾಜಿ ಸಚಿವ ಬೇಗಾನೆ ರಾಮಯ್ಯ, ಮಾಜಿ ಶಾಸಕ ಕಾಕಸೋ ಪಾಂಡುರಂಗ ಪಾಟೀಲ್, ಎನ್ ರಾಜಣ್ಣ, ಡೆರ್ರಿಕ್ ಎಂ. ಬಿ, ಹಂಗಾಮಿ ಸಭಾಪತಿ ಎನ್ ತಿಪ್ಪಣ್ಣ, ಮಾಜಿ ಉಪಸಭಾಪತಿ ಡೇವಿಡ್ ಸಿಮೆಯೋನ್, ಇಸ್ರೋ ಮಾಜಿ ಅಧ್ಯಕ್ಷ ಡಾ.ಕೆ. ಕಸ್ತೂರಿ ರಂಗನ್, ಕೃಷಿ ವಿಜ್ಞಾನಿ ಪ್ರೊ. ಸುಬ್ಬಣ್ಣ ಅಯ್ಯಪ್ಪನ್, ಅಣು ವಿಜ್ಞಾನಿ ಎಂ. ಆರ್. ಶ್ರೀನಿವಾಸನ್, ಸಾಹಿತಿ ಪ್ರೊ. ಜಿ. ಎಸ್. ಸಿದ್ದಲಿಂಗಯ್ಯ, ಹಿರಿಯ ಕವಿ ಡಾ. ಹೆಚ್. ಎಸ್. ವೆಂಕಟೇಶ ಮೂರ್ತಿ, ಚಿತ್ರನಟಿ ಬಿ. ಸರೋಜಾದೇವಿ, ಕ್ರೈಸ್ತ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರಿಗೆ ಸಂತಾಪ ಸಲ್ಲಿಕೆಯಾಗಲಿದೆ.
ಕಾಡುಗೋಡಿಯಲ್ಲಿ ಅರಣ್ಯ ಭೂಮಿ ತೆರವು; ನಿಲುವಳಿ ಸೂಚನೆ ಮಂಡನೆ
ಬೆಂಗಳೂರಿನ ಕಾಡುಗೋಡಿ ಪ್ಲಾಂಟೇಷನ್ ಪ್ರದೇಶದಲ್ಲಿ ದಶಕಗಳಿಂದ ವಾಸ ಮಾಡುತ್ತಿದ್ದ ದಿನ್ನೂರು ಗ್ರಾಮದ ಹಿಂದುಳಿದ ಮತ್ತು ದಲಿತ ಕುಟುಂಬಗಳನ್ನು ಸರ್ಕಾರ ಏಕಾಏಕಿ ಎತ್ತಂಗಡಿ ಮಾಡಿ, "ಅರಣ್ಯ ಭೂಮಿ” ಎಂದು ಘೋಷಿಸಿದೆ. ರೈತರ ಅನುಮತಿ, ಪರಿಶೀಲನೆ ಹಾಗೂ ದಾಖಲಾತಿಗಳ ಪರಿಶೀಲನೆ ಮಾಡದೇ ನಿರ್ಧಾರ ಕೈಗೊಂಡಿರುವುದು ಕಾನೂನು ಬಾಹಿರ. ಇದು ಸಂವಿಧಾನದಲ್ಲಿ ಭದ್ರಪಡಿಸಿದ ಸಾಮಾಜಿಕ ಹಾಗೂ ಆರ್ಥಿಕ ನ್ಯಾಯಕ್ಕೆ ವಿರುದ್ಧವಾಗಿದೆ. ಈ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಮೇಲೆ ಸರ್ಕಾರ ತೆಗೆದುಕೊಂಡ ಕ್ರಮಗಳೇನು ಎಂಬುದರ ಕುರಿತು ಚರ್ಚಿಸಕು ಅವಕಾಶ ನೀಡುವಂತೆ ಬಿಜೆಪಿ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ನಿಲುವಳಿ ಸೂಚನೆ ಮಂಡಿಸಿದ್ದಾರೆ.
ಅಧಿವೇಶನದಲ್ಲಿ 18 ವಿಧೇಯಕಗಳ ಮಂಡನೆ ಸಾಧ್ಯತೆ
ಮುಂಗಾರು ಅಧಿವೇಶನದಲ್ಲಿ 18ಕ್ಕೂ ಹೆಚ್ಚು ವಿಧೇಯಕಗಳು ಮಂಡನೆಯಾಗಲಿವೆ.
* ಕರ್ನಾಟಕ ದೇವದಾಸಿ ಪದ್ಧತಿ (ತಡೆಗಟ್ಟುವಿಕೆ, ನಿಷೇಧ, ಪರಿಹಾರ ಮತ್ತು ಪುನರ್ವಸತಿ) ಮಸೂದೆ, 2025
* ನೋಂದಣಿ (ಕರ್ನಾಟಕ ತಿದ್ದುಪಡಿ) ಮಸೂದೆ, 2025
* ಕರ್ನಾಟಕ ಪುರಸಭೆಗಳ ಹಾಗೂ ಇತರೆ ಕಾನೂನುಗಳ (ತಿದ್ದುಪಡಿ) ಮಸೂದೆ, 2025
* ಕರ್ನಾಟಕ ಭೂ ಸುಧಾರಣೆಗಳು ಮತ್ತು ಇತರೆ ಕಾನೂನು (ತಿದ್ದುಪಡಿ) ಮಸೂದೆ, 2025
* ಗ್ರೇಟರ್ ಬೆಂಗಳೂರು ಆಡಳಿತ (ತಿದ್ದುಪಡಿ) ಮಸೂದೆ, 2025
* ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆ, ನಿಯಂತ್ರಣ) (ತಿದ್ದುಪಡಿ) ಮಸೂದೆ, 2025
* ಕರ್ನಾಟಕ ರಾಜ್ಯ ಸಹಕಾರ ಸಂಘಗಳ ತಿದ್ದುಪಡಿ ವಿಧೇಯಕ, 2024