LIVE ಮುಂಗಾರು ಅಧಿವೇಶನ | ಬಿಜೆಪಿಯ 18 ಶಾಸಕರ ಅಮಾನತು ಆದೇಶ ವಾಪಸ್; ಪ್ರಸ್ತಾಪ ಅಂಗೀಕರಿಸಿದ ಸದನ
x

ಮುಂಗಾರು ಅಧಿವೇಶನ | ಬಿಜೆಪಿಯ 18 ಶಾಸಕರ ಅಮಾನತು ಆದೇಶ ವಾಪಸ್; ಪ್ರಸ್ತಾಪ ಅಂಗೀಕರಿಸಿದ ಸದನ

ಶಾಸಕರಿಗೆ ಅನುದಾನ ಕೊರತೆ ವಿಚಾರವಾಗಿ ವಿಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲಿವೆ. ಇದಲ್ಲದೇ ಸರ್ಕಾರದ ವೈಫಲ್ಯಗಳನ್ನು ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ತಂತ್ರ ರೂಪಿಸಿವೆ.


ಇಂದಿನಿಂದ ಆರಂಭವಾದ ವಿಧಾನ ಮಂಡಲದ ಮುಂಗಾರು ಅಧಿವೇಶನದಲ್ಲಿ ಅಗಲಿದ ಸಾಹಿತಿಗಳಾದ ಎಚ್. ಎಸ್.ವೆಂಕಟೇಶಮೂರ್ತಿ, ಜಿ.ಎಸ್.ಸಿದ್ದಲಿಂಗಯ್ಯ, ಪೋಪ್ ಫ್ರಾನ್ಸಿಸ್, ಹಿರಿಯ ರಾಜಕಾರಣಿ ಡಾ.ಎನ್.ತಿಪ್ಪಣ್ಣ ಸೇರಿ ಹಲವು ಗಣ್ಯರಿಗೆ ಸಂತಾಪ ಸೂಚಿಸಲಾಯಿತು.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಎಕೆ. ಪಾಟೀಲ್‌ ಅವರು ಅಮಾನತುಗೊಂಡ ಸದಸ್ಯರ ಸದಸ್ಯತ್ವ ಸ್ಥಿರೀಕರಣಗೊಳಿಸುವ ಪ್ರಸ್ತಾಪವನ್ನು ಸದನದಲ್ಲಿ ಮಂಡಿಸಿದರು.

ಬಿಜೆಪಿಯ ಪ್ರತಿಪಕ್ಷ ನಾಯಕರು ಸೇರಿ ಹಲವರು 18ಬಿಜೆಪಿ ಸದಸ್ಯರ ಅಮಾನತು ಆದೇಶ ಹಿಂಪಡೆಯುವಂತೆ ಕೋರಿ ಸಭಾಧ್ಯಕ್ಷ ಯು.ಟಿ. ಖಾದರ್‌ ಅವರಿಗೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಭಾಧ್ಯಕ್ಷರು ಅಮಾನತು ಆದೇಶ ಹಿಂಪಡೆಯುವುದಾಗಿ ಅಧಿಕೃತವಾಗಿ ಪ್ರಕಟಿಸಿದರು.

ಈ ಹಿಂದೆ ಪ್ರತಿಪಕ್ಷ ನಾಯಕರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಅಮಾನತು ಆದೇಶ ಹಿಂಪಡೆಯುವಂತೆ ಮನವಿ ಸಲ್ಲಿಸಿದ್ದರು. ಪ್ರತಿಪಕ್ಷ ಸದಸ್ಯರ ಮನವಿ ಮೇರೆಗೆ ಸಿದ್ದರಾಮಯ್ಯ ಅವರು ಸಭೆ ನಡೆಸಿ ಸದಸ್ಯತ್ವ ಅಮಾನತು ಆದೇಶ ಹಿಂಪಡೆಯಲು ನಿರ್ಧರಿಸಿದ್ದರು.

ಕಳೆದ ಬಜೆಟ್‌ ಅಧಿವೇಶನದಲ್ಲಿ ಬಾವಿಗಿಳಿದು ಪ್ರತಿಭಟನೆ ನಡೆಸುತ್ತಿದ್ದ ವೇಳೆ 18ಸದಸ್ಯರ ಸಭಾಧ್ಯಕ್ಷರ ಪೀಠದ ಮುಂದೆ ಅಗೌರವಯುವಾಗಿ ನಡೆದುಕೊಂಡಿದ್ದರು. ಸದಕ್ಕೆ ಅಗೌರವ ತಂದ ಹಿನ್ನೆಲೆಯಲ್ಲಿ ಅವರನ್ನು ಆರು ತಿಂಗಳ ಕಾಲ ಅಮಾನತು ಮಾಡಲಾಗಿತ್ತು. ಆದರೆ, ಪ್ರತಿಪಕ್ಷ ಸದಸ್ಯರ ಒತ್ತಾಯದ ಮೇರೆಗೆ ಅಮಾನತು ಆದೇಶವನ್ನು ಹಿಂಪಡೆಯಲಾಗಿದೆ.

ಪ್ರಶೋತ್ತರ ಹಾಗೂ ಗಮನ ಸೆಳೆಯುವ ಸೂಚನೆ ಕಲಾಪದಲ್ಲಿ ಎತ್ತಿನ ಹೊಳೆಯಲ್ಲಿ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಆಗುತ್ತಿರುವ ಅನ್ಯಾಯ ಹಾಗೂ ಯೋಜನೆ ವಿಳಂಬದ ಬಗ್ಗೆ ತೀವ್ರ ಚರ್ಚೆ ನಡೆಯುವ ಸಾಧ್ಯತೆ ಇದೆ.

ಸರ್ಕಾರದ ವೈಫಲ್ಯದ ವಿರುದ್ದ ಮೈತ್ರಿ ಹೋರಾಟ

ವಿಧಾನಮಂಡಲದ ಮುಂಗಾರು ಅಧಿವೇಶನದಲ್ಲಿ ಜೆಡಿಎಸ್ ಮತ್ತು ಬಿಜೆಪಿ (NDA) ಮೈತ್ರಿಕೂಟ ಜಂಟಿಯಾಗಿ ಸರ್ಕಾರದ ವೈಫಲ್ಯಗಳ ವಿರುದ್ಧ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ. ಭಾನುವಾರ ಈ ಸಂಬಂಧ ನಡೆದ ಸಮನ್ವಯ ಸಭೆಯಲ್ಲಿ ಸುಮಾರು ಒಂದು ಗಂಟೆಗಳ ಸಮಾಲೋಚನೆ ನಡೆಸಲಾಯಿತು.

ಸಭೆಯ ನಂತರ ಮಾಧ್ಯಮಗಳ ಜತೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ಅವರು, ಸರ್ಕಾರ ಎರಡು ವರ್ಷಗಳಲ್ಲಿ ಭ್ರಷ್ಟಾಚಾರ, ದುರಾಡಳಿತದಲ್ಲಿ ತೊಡಗಿಸಿಕೊಂಡಿದೆ. ಯಾವ ವಿಚಾರಗಳನ್ನು ಚರ್ಚಿಸಬೇಕು ಎಂದು ಆಂತರಿಕ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದರು.

ಸಂಸತ್ ಕಲಾಪ ನಡೆಯುತ್ತಿರುವ ಕಾರಣ ಕುಮಾರಸ್ವಾಮಿ ಅವರು ಈ ಸಭೆಗೆ ಬಂದಿರಲಿಲ್ಲ.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಮಾತನಾಡಿ; ರೈತರಿಗೆ ರಸಗೊಬ್ಬರ ವಿತರಣೆ ಮಾಡಿಲ್ಲ. ಎಲ್ಲದಕ್ಕೂ ಕೇಂದ್ರ ಸರ್ಕಾರಕ್ಕೆ ಬೊಟ್ಟು ಮಾಡ್ತಾರೆ. ಅಧಿವೇಶನದಲ್ಲಿ ಬೆಲೆ ಏರಿಕೆ, ಕಾಲ್ತುಳಿತ ಎಲ್ಲವನ್ನ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.

ಶಾಸಕರ ಅನುದಾನದಲ್ಲೂ ತಾರತಮ್ಯ ಆಗಿದೆ. ಎಲ್ಲ ಇಲಾಖೆಗೂ ಅನುದಾನ ಕೊಟ್ಟಿಲ್ಲ. ಎಲ್ಲ ವಿಚಾರಗಳ ಬಗ್ಗೆ, ಸರ್ಕಾರದ ಲೋಪದೋಷದ ಬಗ್ಗೆ ಚರ್ಚೆ ಮಾಡ್ತೇವೆ. ಯುವನಿಧಿಗೆ 2.80 ಲಕ್ಷ ಜನ ಮಾತ್ರ ಅರ್ಜಿ ಹಾಕಿದಾರೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರತಿತಂತ್ರ ಹೆಣೆದ ಸರ್ಕಾರ

ಹತ್ತು ಹಲವು ಅಸ್ತ್ರಗಳೊಂದಿಗೆ ಸರ್ಕಾರವನ್ನು ಕಟ್ಟಿ ಹಾಕಲು ಪ್ರತಿ ಪಕ್ಷಗಳು ರೂಪಿಸಿರುವ ತಂತ್ರಕ್ಕೆ ಸರ್ಕಾರ ಪ್ರತಿತಂತ್ರ ರೂಪಿಸಿದೆ.

ಸದನದಲ್ಲಿ ಪ್ರತಿ ಹಂತದಲ್ಲೂ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ, ಜೆಡಿಎಸ್ ಯೋಜನೆ ರೂಪಿಸಿವೆ. ಪ್ರಮುಖವಾಗಿ ಸರ್ಕಾರದ ವೈಫಲ್ಯಗಳನ್ನು ಪ್ರಸ್ತಾಪಿಸಿ ಮುಜುಗರವನ್ನುಂಟು ಮಾಡಲು ತಯಾರಿ ನಡೆಸಿವೆ.

ಆದರೆ, ಪ್ರತಿಪಕ್ಷಗಳ ವಿರುದ್ದ ಒಟ್ಟಾಗಿ ಹೋರಾಟ ನಡೆಸಲು ತಯಾರಾಗಿರುವ ಸರ್ಕಾರ ಅಂಕಿ, ಅಂಶಗಳ ಸಮೇತ ದಾಖಲೆ ಒದಗಿಸಿ ಬಿಜೆಪಿ, ಜೆಡಿಎಸ್ ಆರೋಪಗಳಿಗೆ ಠಕ್ಕರ್ ನೀಡಲು ಮುಂದಾಗಲಿದೆ.

ವಿಪಕ್ಷಗಳ ಬಳಿ ಇರುವ ಅಸ್ತ್ರಗಳೇನು?

* ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣ, ಪೋಲಿಸ್ ಅಧಿಕಾರಿಗಳ ಅಮಾನತು ಹಾಗೂ ಮರು ನೇಮಕ ದಂದ್ವ.

*ರಾಜ್ಯದಲ್ಲಿ ರಸಗೊಬ್ಬರ ಅಭಾವದಿಂದ ರೈತರ ಆಕ್ರೋಶ ವಿಚಾರ.

*ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಕುರಿತು ಪ್ರಸ್ತಾಪ.

* ಪ್ರತಿಪಕ್ಷಗಳ ಶಾಸಕರಿಗೆ ಅನುದಾನ ಹಂಚಿಕೆಯಲ್ಲಿ ಅಗಿರುವ ತಾರತಮ್ಯ.

* ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಜಾತಿಗಣತಿ ವರದಿಯನ್ನು ಕೈಬಿಟ್ಟಿರುವುದು‌.

*ಎಸ್‌ಸಿಎಸ್‌ಪಿ, ಟಿಎಸ್‌ಪಿ ಹಣ ದುರ್ಬಳಕೆ ವಿಚಾರ.

* ಒಳಮೀಸಲಾತಿ ವಿಳಂಬ ಆಗಿರುವುದು.

*ಧರ್ಮಸ್ಥಳ ನಡೆಯುತ್ತಿರುವ ತನಿಖೆ ವಿಚಾರ, ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಅವರು ನಡೆಸಿದ ಸಭೆಗಳು.

*ಚುನಾವಣಾ ಅಕ್ರಮವೆಂದು ರಾಹುಲ್ ಗಾಂಧಿ ಮಾಡಿರುವ ಆರೋಪಕ್ಕೆ ತಿರುಗೇಟು ನೀಡುವ ವಿಚಾರಗಳು ಪ್ರಮುಖವಾಗಿ ಚರ್ಚೆಗೆ ಬರಲಿವೆ.


ಸರ್ಕಾರದ ಬಳಿ ಇರುವ ಅಸ್ತ್ರಗಳೇನು?

* ಕೇಂದ್ರದ ಅನುದಾನ ತಾರತಮ್ಯ, ಮತಗಳ್ಳತನ ಹಾಗೂ ಮತಪಟ್ಟಿ ಹಗರಣ.

* ರೈತರ ಮೇಲೆ ಬಿಜೆಪಿ ಸರ್ಕಾರದ ಮೇಲೆ ನಡೆದಿರುವ ಗೋಲಿಬಾರ್ ವಿಚಾರ ಪ್ರಸ್ತಾಪ.

* ತಲಾದಾಯದಲ್ಲಿ ಕರ್ನಾಟಕ ದೇಶದಲ್ಲೇ ನಂ.1 ಆಗಿದೆ ಎಂಬುದನ್ನು ಗಟ್ಟಿಯಾಗಿ ಹೇಳುವುದು‌.

* ಚಿಕ್ಕಬಳ್ಳಾಪುರದಲ್ಲಿ ಸಂಸದರ ಹೆಸರು ಬರೆದಿಟ್ಟು ಕಾರು ಚಾಲಕ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ಪ್ರಸ್ತಾಪಿಸುವುದು.

* ಗ್ಯಾರಂಟಿ ಸಾಧನೆಯನ್ನು ಪ್ರಸ್ತಾಪಿಸುವುದು. ಬಿಜೆಪಿ ಅವಧಿಯಲ್ಲಿ ಮಾಡಿದ್ದ ಯಡವಟ್ಟುಗಳನ್ನು ಪ್ರಸ್ತಾಪಿಸುವುದು‌.

Live Updates

  • 11 Aug 2025 1:54 PM IST

    ಸರ್ಕಾರದ ವಿರುದ್ಧ ಸದನದ ಒಳಗೂ, ಹೊರಗು ಪ್ರತಿಭಟನೆ

    ರಾಜ್ಯದಲ್ಲಿ  ರೈತರು ರಸಗೊಬ್ಬರಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಉತ್ತರ ಕರ್ನಾಟಕಕ್ಕೆ ಯಾವುದೇ ಹೊಸ ನೀರಾವರಿ ಯೋಜನೆಗಳು ಇಲ್ಲದಾಗಿದೆ. ಪರೀಕ್ಷೆ ನಡೆಸಿ ನಾಲ್ಕು ವರ್ಷವಾದರೂ ಪಿಎಸ್‌ಐ ನೇಮಕಾತಿ ಆದೇಶ ನೀಡಿಲ್ಲ. ಈ ಎಲ್ಲ ವಿಚಾರಗಳನ್ನು ಪ್ರಸ್ತಾಪಿಸಿ ಸದನದ ಒಳಗೆ ಹಾಗೂ ಹೊರಗೆ ಹೋರಾಟ ಮಾಡುತ್ತೇವೆ ಎಂದು ಬಿಜಿಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದರು.

     

  • 11 Aug 2025 1:42 PM IST

    ಕಾಲ್ತುಳಿತ ದುರಂತಕ್ಕೆ ಸಿಎಂ, ಡಿಸಿಎಂ ನೇರ ಹೊಣೆ

    ಆರ್‌ಸಿಬಿ ಆಟಗಾರರಿಗೆ ವಿಧಾನ ಸೌಧದ ಬಳಿ ಆಯೋಜಿಸಿದ್ದ ಕಾರ್ಯಕ್ರಮ ಆರಂಭ ಮುನ್ನವೇ ಕಾಲ್ತುಳಿತವಾಗಿತ್ತು. ಈ ವಿಷಯ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ಗೂ ಗೊತ್ತಿತ್ತು ಎಂದು ವಿಧಾನಪರಿಷತ್ ಸದಸ್ಯ ಎಸ್‌.ಎಲ್‌ ಬೋಜೇಗೌಡ ತಿಳಿಸಿದ್ದಾರೆ.

    ವಿಧಾನ ಸೌಧದ ಬಳಿ ಈ ಘಟನೆ ಆಗಿಲ್ಲ ಎಂದು ಸಿಎಂ ತಿಳಿಸಿದ್ದರು. ಪ್ರಕರಣಕ್ಕೆ ಸಂಬಂಧಿದಂತೆ ಅಮಾಯಕ ಅಧಿಕಾರಿಗಳನ್ನ ಅಮಾನತು ಮಾಡಿದ್ದರು. ಕಾಲ್ತುಳಿತ ದುರಂತದ ಹೊಣೆಯನ್ನು ಸಿಎಂ, ಡಿಸಿಎಂ ಹೊರಬೇಕು ಎಂದರು.

     

  • 11 Aug 2025 1:25 PM IST

    ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದೆ: ಛಲವಾದಿ ನಾರಾಯಣಸ್ವಾಮಿ

    ರಾಜ್ಯ ಸರ್ಕಾರ ಆರ್‌ಸಿಬಿ ಗೆಲುವಿನ ಲಾಭ ಪಡೆಯಲು ಮುಂದಾಗಿತ್ತು. ಕಪ್‌ ಆರ್‌ಸಿಬಿದು, ತಪ್ಪು ಸರ್ಕಾರದ್ದು ಎಂದು ವಿಧಾನಪರಿಷತ್‌ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು. ಕಾಲ್ತುಳಿತದಲ್ಲಿ ಬಲಿಯಾದ 11 ಅಭಿಮಾನಿಗಳ ಸಾವಿಗೆ ರಾಜ್ಯ ಸರ್ಕಾರವೇ ಕಾರಣ. ಆರಂಭದಲ್ಲಿ ಪೊಲೀಸರ ತಪ್ಪಿಲ್ಲ ಎಂದಿದ್ದರು. ಬಳಿಕ ಪೊಲೀಸರದ್ದೇ ತಪ್ಪು ಎಂದು ಹೇಳಿದರು. ರಾಜ್ಯದಲ್ಲಿ ರೈತರಿಗೆ ರಸಗೊಬ್ಬರ ಸಿಗುತ್ತಿಲ್ಲ. ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಈ ಕಾರಣಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದೇವೆ ಎಂದರು.

     

  • 11 Aug 2025 1:16 PM IST

    ಜವಾಬ್ದಾರಿಗಳಿಂದ ನುಣುಚಿಕೊಳ್ಳುತ್ತಿರುವ ಸರ್ಕಾರ: ಬಿಜೆಪಿ, ಜೆಡಿಎಸ್‌ ಪ್ರತಿಭಟನೆ

    ಜೂನ್‌.4ರಂದು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ದುರಂತ ಪ್ರಕರಣ, ರಸಗೊಬ್ಬರ ಕೊರತೆ ಸೇರಿದಂತೆ ರಾಜ್ಯದಲ್ಲಿ ಹಲವಾರು ಸಮಸ್ಯೆಗಳಿವೆ. ಆದರೆ ರಾಜ್ಯ ಸರ್ಕಾರ ಎಲ್ಲಾ ಜವಾಬ್ದಾರಿಗಳಿಂದ ತಪ್ಪಿಸಿಕೊಳ್ಳತ್ತಿದೆ ಎಂದು ಬಿಜೆಪಿ ಹಾಗೂ ಜೆಡಿಎಸ್‌ ಸದಸ್ಯರು ವಿಧಾನಸೌಧ ಆವರಣದಲ್ಲಿರುವ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿದರು.

     

        

  • 11 Aug 2025 12:44 PM IST

    ಮಲ್ಲೇಶ್ವರಂನ 11ನೇ ಮುಖ್ಯರಸ್ತೆಗೆ ದಿವಂಗತ ಬಿ.ಸರೋಜಾದೇವಿ ಹೆಸರಿಡಲು ಮನವಿ

    ಬೆಂಗಳೂರು ನಗರದ ಮಲ್ಲೇಶ್ವರಂನ 11ನೇ ಮುಖ್ಯ ರಸ್ತೆಗೆ ಚಿತ್ರನಟಿ ದಿವಂಗತ ಬಿ.ಸರೋಜಾದೇವಿ ಹೆಸರಿಡಬೇಕು ಹಾಗೂ ಅವರ ಹೆಸರಿನಲ್ಲಿ ಪ್ರಶಸ್ತಿ ಘೋಷಣೆ ಮಾಡಬೇಕು ಎಂದು ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌ ವಿಧಾನಸಭಾ ಅಧಿವೇಶನದಲ್ಲಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

     

     

  • 11 Aug 2025 12:03 PM IST

    ಮೃತಪಟ್ಟ ಗಣ್ಯರಿಗೆ ವಿಧಾನಸಭಾ ಕಲಾಪದಲ್ಲಿ ಸಂತಾಪ ಸಲ್ಲಿಕೆ

    ಇಂದಿನಿಂದ ಆರಂಭವಾಗಿರುವ ವಿಧಾನಸಭಾ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ ಸಲ್ಲಿಕೆಯಾಗಲಿದೆ. ಗುಜರಾತ್‌ನಲ್ಲಿ ಸಂಭವಿಸಿದ ವಿಮಾನ ದುರಂತ ಮತ್ತು ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತದಲ್ಲಿ‌ ಮೃತಪಟ್ಟವರಿಗೆ ಶ್ರದ್ದಾಂಜಲಿ ಸಲ್ಲಿಸಲಾಗುವುದು. 

    ಮಾಜಿ ಸಚಿವ ಬೇಗಾನೆ ರಾಮಯ್ಯ, ಮಾಜಿ ಶಾಸಕ ಕಾಕಸೋ ಪಾಂಡುರಂಗ ಪಾಟೀಲ್, ಎನ್ ರಾಜಣ್ಣ, ಡೆರ್ರಿಕ್ ಎಂ. ಬಿ, ಹಂಗಾಮಿ ಸಭಾಪತಿ ಎನ್ ತಿಪ್ಪಣ್ಣ, ಮಾಜಿ ಉಪಸಭಾಪತಿ ಡೇವಿಡ್ ಸಿಮೆಯೋನ್, ಇಸ್ರೋ ಮಾಜಿ ಅಧ್ಯಕ್ಷ ಡಾ.ಕೆ. ಕಸ್ತೂರಿ ರಂಗನ್, ಕೃಷಿ ವಿಜ್ಞಾನಿ ಪ್ರೊ. ಸುಬ್ಬಣ್ಣ ಅಯ್ಯಪ್ಪನ್, ಅಣು ವಿಜ್ಞಾನಿ ಎಂ. ಆರ್. ಶ್ರೀನಿವಾಸನ್, ಸಾಹಿತಿ ಪ್ರೊ. ಜಿ. ಎಸ್. ಸಿದ್ದಲಿಂಗಯ್ಯ, ಹಿರಿಯ ಕವಿ ಡಾ. ಹೆಚ್. ಎಸ್. ವೆಂಕಟೇಶ ಮೂರ್ತಿ, ಚಿತ್ರನಟಿ ಬಿ. ಸರೋಜಾದೇವಿ, ಕ್ರೈಸ್ತ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರಿಗೆ ಸಂತಾಪ ಸಲ್ಲಿಕೆಯಾಗಲಿದೆ.

  • 11 Aug 2025 11:38 AM IST

    ಕಾಡುಗೋಡಿಯಲ್ಲಿ ಅರಣ್ಯ ಭೂಮಿ ತೆರವು; ನಿಲುವಳಿ ಸೂಚನೆ ಮಂಡನೆ

    ಬೆಂಗಳೂರಿನ ಕಾಡುಗೋಡಿ ಪ್ಲಾಂಟೇಷನ್‌ ಪ್ರದೇಶದಲ್ಲಿ ದಶಕಗಳಿಂದ ವಾಸ ಮಾಡುತ್ತಿದ್ದ ದಿನ್ನೂರು ಗ್ರಾಮದ ಹಿಂದುಳಿದ ಮತ್ತು ದಲಿತ ಕುಟುಂಬಗಳನ್ನು ಸರ್ಕಾರ ಏಕಾಏಕಿ ಎತ್ತಂಗಡಿ ಮಾಡಿ, "ಅರಣ್ಯ ಭೂಮಿ” ಎಂದು ಘೋಷಿಸಿದೆ. ರೈತರ ಅನುಮತಿ, ಪರಿಶೀಲನೆ ಹಾಗೂ ದಾಖಲಾತಿಗಳ ಪರಿಶೀಲನೆ ಮಾಡದೇ ನಿರ್ಧಾರ ಕೈಗೊಂಡಿರುವುದು ಕಾನೂನು ಬಾಹಿರ. ಇದು ಸಂವಿಧಾನದಲ್ಲಿ ಭದ್ರಪಡಿಸಿದ ಸಾಮಾಜಿಕ ಹಾಗೂ ಆರ್ಥಿಕ ನ್ಯಾಯಕ್ಕೆ ವಿರುದ್ಧವಾಗಿದೆ. ಈ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ನೀಡಿದ ತೀರ್ಪಿನ ಮೇಲೆ ಸರ್ಕಾರ ತೆಗೆದುಕೊಂಡ ಕ್ರಮಗಳೇನು ಎಂಬುದರ ಕುರಿತು ಚರ್ಚಿಸಕು ಅವಕಾಶ ನೀಡುವಂತೆ ಬಿಜೆಪಿ ವಿಧಾನ ಪರಿಷತ್‌ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ನಿಲುವಳಿ ಸೂಚನೆ ಮಂಡಿಸಿದ್ದಾರೆ. 

  • 11 Aug 2025 11:08 AM IST

    ಅಧಿವೇಶನದಲ್ಲಿ 18 ವಿಧೇಯಕಗಳ ಮಂಡನೆ ಸಾಧ್ಯತೆ

    ಮುಂಗಾರು ಅಧಿವೇಶನದಲ್ಲಿ 18ಕ್ಕೂ ಹೆಚ್ಚು ವಿಧೇಯಕಗಳು ಮಂಡನೆಯಾಗಲಿವೆ. 

    * ಕರ್ನಾಟಕ ದೇವದಾಸಿ ಪದ್ಧತಿ (ತಡೆಗಟ್ಟುವಿಕೆ, ನಿಷೇಧ, ಪರಿಹಾರ ಮತ್ತು ಪುನರ್ವಸತಿ) ಮಸೂದೆ, 2025

    * ನೋಂದಣಿ (ಕರ್ನಾಟಕ ತಿದ್ದುಪಡಿ) ಮಸೂದೆ, 2025

    * ಕರ್ನಾಟಕ ಪುರಸಭೆಗಳ ಹಾಗೂ ಇತರೆ ಕಾನೂನುಗಳ (ತಿದ್ದುಪಡಿ) ಮಸೂದೆ, 2025

    * ಕರ್ನಾಟಕ ಭೂ ಸುಧಾರಣೆಗಳು ಮತ್ತು ಇತರೆ ಕಾನೂನು (ತಿದ್ದುಪಡಿ) ಮಸೂದೆ, 2025

    * ಗ್ರೇಟರ್ ಬೆಂಗಳೂರು ಆಡಳಿತ (ತಿದ್ದುಪಡಿ) ಮಸೂದೆ, 2025

    * ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆ, ನಿಯಂತ್ರಣ) (ತಿದ್ದುಪಡಿ) ಮಸೂದೆ, 2025

    * ಕರ್ನಾಟಕ ರಾಜ್ಯ ಸಹಕಾರ ಸಂಘಗಳ ತಿದ್ದುಪಡಿ ವಿಧೇಯಕ, 2024

Read More
Next Story