ನಾಲ್ವರು ನ್ಯಾಯಮೂರ್ತಿಗಳ ವರ್ಗಾವಣೆಗೆ ವಿರೋಧಿಸಿ ವಕೀಲರ ಪ್ರತಿಭಟನೆ
ಬೆಳಗ್ಗೆ 10.30ರಿಂದ 11.30ರವರೆಗೆ ಕಲಾಪದಿಂದ ಹೊರಗುಳಿದ ವಕೀಲರು, ''ನಮಗೆ ನ್ಯಾಯ ಬೇಕು' ಎಂಬ ಘೋಷಣೆಗಳನ್ನು ಕೂಗುತ್ತಾ ಹೈಕೋರ್ಟ್ ಗೋಲ್ಡನ್ ಗೇಟ್ ಮುಂಭಾಗದಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.;
ಸಾಂದರ್ಭಿಕ ಚಿತ್ರ
ಕರ್ನಾಟಕ ಹೈಕೋರ್ಟ್‌ನ ನಾಲ್ವರು ನ್ಯಾಯಮೂರ್ತಿಗಳಾದ ಕೆ.ನಟರಾಜನ್, ಹೇಮಂತ ಚಂದನ ಗೌಡರ್, ಎನ್.ಎಸ್.ಸಂಜಯಗೌಡ ಹಾಗೂ ಕೃಷ್ಣ ಎಸ್.ದೀಕ್ಷಿತ್ ಅವರ ವರ್ಗಾವಣೆ ವಿರೋಧಿಸಿ, ಬೆಂಗಳೂರು ವಕೀಲರ ಸಂಘ (ಎಎಬಿ), ಹೈಕೋರ್ಟ್‌ನ ಪದಾಂಕಿತ ಹಿರಿಯ ಹಾಗೂ ಎಲ್ಲ ವಕೀಲರು ಮಂಗಳವಾರ ಪ್ರತಿಭಟನೆ ನಡೆಸಿದರು.
ಕರ್ನಾಟಕದ ನಾಲ್ವರು ಸೇರಿದಂತೆ ಏಳು ಹೈಕೋರ್ಟ್ ನ್ಯಾಯಾಧೀಶರ ವರ್ಗಾವಣೆಗೆ ಸುಪ್ರೀಂ ಕೋರ್ಟ್‌ನ ಕೊಲಿಜಿಯಂ ಶಿಫಾರಸು ಮಾಡಿದ್ದು, ಇದಕ್ಕೆ ಬೆಂಗಳೂರು ವಕೀಲರ ಸಂಘ (ಎಎಬಿ) ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ. ಎಎಬಿ ಅಧ್ಯಕ್ಷ ವಿವೇಕ ರೆಡ್ಡಿ, ಉಪಾಧ್ಯಕ್ಷ ಗಿರೀಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಎಚ್.ವಿ.ಪ್ರವೀಣ್ ಗೌಡ ಮತ್ತು ಖಜಾಂಚಿ ಶ್ವೇತಾ ರವಿಶಂಕರ್ ಸೇರಿದಂತೆ ಮಾಜಿ ಅಡ್ವೊಕೇಟ್ ಜನರಲ್‌ಗಳಾದ ಬಿ.ವಿ.ಆಚಾರ್ಯ, ಉದಯ ಹೊಳ್ಳ, ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಂ.ಬಿ.ನರಗುಂದ ಸೇರಿದಂತೆ ನೂರಾರು ಹಿರಿ-ಕಿರಿಯ ವಕೀಲರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಬೆಳಗ್ಗೆ 10.30ರಿಂದ 11.30ರವರೆಗೆ ಕಲಾಪದಿಂದ ಹೊರಗುಳಿದ ವಕೀಲರು, ''ನಮಗೆ ನ್ಯಾಯ ಬೇಕು' ಎಂಬ ಘೋಷಣೆಗಳನ್ನು ಕೂಗುತ್ತಾ ಹೈಕೋರ್ಟ್ ಗೋಲ್ಡನ್ ಗೇಟ್ ಮುಂಭಾಗದಲ್ಲಿ ಕುಳಿತು ಶಾಂತಿಯುವ ಪ್ರತಿಭಟನೆ ನಡೆಸಿದರು.
ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರನ್ನು ಒಡಿಶಾ, ನ್ಯಾಯಮೂರ್ತಿ ಕೆ.ನಟರಾಜನ್ ಅವರನ್ನು ಕೇರಳ, ನ್ಯಾಯಮೂರ್ತಿ ಎನ್.ಎಸ್.ಸಂಜಯ್ ಗೌಡ ಅವರನ್ನು ಗುಜರಾತ್ ಹಾಗೂ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರನ್ನು ಮದ್ರಾಸ್ ಹೈಕೋರ್ಟ್‌ಗೆ ವರ್ಗಾಯಿಸಲು ಕೊಲಿಜಿಯಂ ಶಿಫಾರಸು ಮಾಡಿದೆ. ನ್ಯಾಯಾಂಗ ವ್ಯವಸ್ಥೆಯ ಗುಣಮಟ್ಟ ಸುಧಾರಿಸಲು ಹಾಗೂ ವೈವಿಧ್ಯತೆ ಕಾಪಾಡುವ ನಿಟ್ಟಿನಲ್ಲಿ ಏಪ್ರಿಲ್ 15 ಮತ್ತು 19ರಂದು ನಡೆದ ಸುಪ್ರೀಂ ಕೋರ್ಟ್ ಕೊಲಿಜಿಯಂನಲ್ಲಿ ವರ್ಗಾವಣೆ ಶಿಫಾರಸು ಮಾಡಲಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿಕೆಯಲ್ಲಿ ತಿಳಿಸಿದೆ.
ಜಡ್ಜ್‌ಗಳ ವರ್ಗಕ್ಕೆ ವಕೀಲರ ವಿರೋಧ
ಕರ್ನಾಟಕದ ನಾಲ್ವರು ನ್ಯಾಯಮೂರ್ತಿಗಳ ವರ್ಗಾವಣೆ ಸಂಬಂಧ ಧಾರವಾಡ ಮತ್ತು ಬೆಂಗಳೂರು ವಕೀಲರ ಸಂಘಗಳು ಇತ್ತೀಚೆಗೆ ಆಕ್ಷೇಪಿಸಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರಿಗೆ ಪತ್ರ ಬರೆದಿದ್ದವು. ಬೆಂಗಳೂರು ವಕೀಲರ ಸಂಘವು ನ್ಯಾಯಮೂರ್ತಿಗಳ ವರ್ಗಾವಣೆ ವಿಚಾರ ಚರ್ಚಿಸಲು ಸಮಯ ನೀಡುವಂತೆ ಸಿಜೆಐಗೆ ಕೋರಿತ್ತು.