Garbage Problem Part 4 | ಸತ್ವ ಕಳೆದುಕೊಂಡ ನೆಲ, ಫಲ ಕೊಡದ ಮರಗಳು; ಎಂಎಸ್‌ಜಿಪಿ ಘಟಕದಿಂದ ಸಮಸ್ಯೆ ನೂರಾರು
ಬೆಂಗಳೂರಿನ ತ್ಯಾಜ್ಯವನ್ನು ತಂದು ಸುರಿಯುತ್ತಿರುವ ಎಂಎಸ್ ಜಿಪಿಗೆ ಗ್ರಾಮ ಪಂಚಾಯ್ತಿಯಿಂದ ಅನುಮತಿ ಸಿಕ್ಕಿಲ್ಲ. ಆದರೂ ಸ್ಥಳೀಯ ಆಡಳಿತಕ್ಕೆ ತ್ಯಾಜ್ಯ ವಿಲೇವಾರಿ ಘಟಕ ಡೋಂಟ್ ಕೇರ್ ಎನ್ನುತ್ತಿದೆ.;
ದೊಡ್ಡಬಳ್ಳಾಪುರದ ಜನತೆಗೆ ಬೆಂಗಳೂರಿನ ತ್ಯಾಜ್ಯ ಶಾಪವಾಗಿ ಕಾಡುತ್ತಿದೆ. ಬಿಬಿಎಂಪಿ ತಂದು ಸುರಿಯುತ್ತಿರುವ ಕಸವನ್ನು ಎಂಎಸ್ ಜಿಪಿ ಎಂಬ ಖಾಸಗಿ ಸಂಸ್ಥೆ ಸಂಸ್ಕರಣೆ ಮೂಲಕ ವಿಲೇವಾರಿ ಮಾಡುತ್ತಿದೆ.
ದೊಡ್ಡಬಳ್ಳಾಪುರ ತಾಲೂಕಿನ ಭಕ್ತರಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಈ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸ್ಥಳೀಯ ಆಡಳಿತದ ಅನುಮತಿಯೇ ಇಲ್ಲ. ಆದಾಗ್ಯೂ ಗ್ರಾಮ ಪಂಚಾಯ್ತಿ ಆಡಳಿತಕ್ಕೆ ಸೊಪ್ಪು ಹಾಕದ ಎಂಎಸ್ ಜಿಪಿ ಸಂಸ್ಥೆ, ಸರ್ಕಾರದ ಕೃಪಾಕಟಾಕ್ಷದಲ್ಲಿ ಅವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುತ್ತಿದೆ.
ಎಂಎಸ್ ಜಿಪಿ ಘಟಕವನ್ನು ಸ್ಥಗಿತಗೊಳಿಸುವಂತೆ ಗ್ರಾಮ ಪಂಚಾಯ್ತಿ ಸಭೆಗಳಲ್ಲಿ ಠರಾವು ಹೊರಡಿಸಿದರೂ, ನೋಟಿಸ್ ನೀಡಿದರೂ ಖಾಸಗಿ ಸಂಸ್ಥೆ ಮಾತ್ರ ಡೋಂಟ್ ಕೇರ್ ಎನ್ನುತ್ತಿದೆ.
ಸರ್ಕಾರವೇ ತ್ಯಾಜ್ಯ ಸಂಸ್ಕರಣೆ ಮಾಡಲು ಅನುಮತಿ ನೀಡಿರುವಾಗ ಸ್ಥಳೀಯ ಆಡಳಿತಕ್ಕೆ ಕಿಮ್ಮತ್ತು ಕೊಡುತ್ತಿಲ್ಲ.
"ಕಳೆದ ನಾಲ್ಕು ವರ್ಷಗಳ ಹಿಂದೆ ಎಂಎಸ್ ಜಿಪಿ ಘಟಕಕ್ಕೆ ಹಲವಾರು ಬಾರಿ ನೋಟಿಸ್ ನೀಡಿದ್ದೇವೆ. ಆದರೆ, ಒಂದಕ್ಕೆ ಪ್ರತಿಕ್ರಿಯೆ ನೀಡಿಲ್ಲ. ಇತ್ತೀಚೆಗೆ ಘಟಕದ ಸುತ್ತಮುತ್ತಲಿನ ಗ್ರಾಮಗಳ ಕುಡಿಯುವ ನೀರಿನ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಗಾಗಿ ಕಾಯುತ್ತಿದ್ದೇವೆ. ಎಂಎಸ್‌ಜಿಪಿ ಘಟಕದ ಸಮೀಪವಿರುವ ಎಲ್ಲಾ ಗ್ರಾಮಗಳಿಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಲಾಗುತ್ತಿದೆ. ಮುಂದಿನ ಪಂಚಾಯಿತಿ ಸಭೆಯಲ್ಲಿ ಈ ಕುರಿತು ಚರ್ಚಿಸಲಾಗುವುದು ಎಂದು ಭಕ್ತರಹಳ್ಳಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ( ಪಿಡಿಒ) ತ್ರಿವೇಣಿ ಅವರು ʼದ ಫೆಡರಲ್ ಕರ್ನಾಟಕಕ್ಕೆʼ ತಿಳಿಸಿದರು.
ಇನ್ನು ಘಟಕದ ವ್ಯಾಪ್ತಿಗೆ ಸಕ್ಕರೆ ಗೊಲ್ಲಹಳ್ಳಿ ಪಂಚಾಯ್ತಿಯ ಗ್ರಾಮಗಳು ಸೇರಿದ್ದು, ಅಲ್ಲಿಯೂ ಘಟಕದಿಂದ ಸಮಸ್ಯೆ ಎದುರಿಸುವಂತಾಗಿದೆ.
"ನಮ್ಮ ಪಂಚಾಯಿತಿ ವ್ಯಾಪ್ತಿಯ ದೊಡ್ಡ ಮಂಕಳಾಲ, ಚಿಕ್ಕ ಮಂಕಳಾಲ, ಕಾಮನ ಅಗ್ರಹಾರದಲ್ಲಿ ಎಂಎಸ್ ಜಿಪಿ ಘಟಕದ ದುರ್ವಾಸನೆ ಹಾಗೂ ನೊಣಗಳ ಸಮಸ್ಯೆ ಇದೆ. ಹಲವಾರು ಸಾಂಕ್ರಾಮಿಕ ರೋಗಗಳಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಈ ಕುರಿತು ಹಲವು ಬಾರಿ ಹೋರಾಟ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರ ಆದಷ್ಟು ಶೀಘ್ರವಾಗಿ ಎಂಎಸ್‌ಜಿಪಿ ಘಟಕವನ್ನು ಸ್ಥಗಿತಗೊಳಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಶಾಸಕರ ನೇತೃತ್ವದಲ್ಲಿ ಬೃಹತ್ ಹೋರಾಟ ನಡೆಸಲಾಗುವುದು" ಎಂದು ಸಕ್ಕರೆಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಟಿ. ಹನುಮಂತಯ್ಯ 'ದ ಫೆಡರಲ್ ಕರ್ನಾಟಕ'ಕ್ಕೆ ತಿಳಿಸಿದರು.
ಹೋರಾಟಗಾರರ ವಿರುದ್ದ ಪ್ರಕರಣ ದಾಖಲು
ಎಂಎಸ್‌ಜಿಪಿ ಘಟಕದ ವಿರುದ್ದ 2021ರಲ್ಲಿ ಭಕ್ತರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ಸಿದ್ದಲಿಂಗಯ್ಯ ಹಾಗೂ ಸ್ಥಳೀಯ ಮುಖಂಡರಾದ ನಿರ್ಮಾಪಕ ಸತ್ಯಪ್ರಕಾಶ್ ನೇತೃತ್ವದಲ್ಲಿ ನೂರಾರು ರೈತರು ನಿರಂತರ 13ದಿನ ಹೋರಾಟ ನಡೆಸಿದ್ದರು. ಅಂದಿನ ಹೋರಾಟದಲ್ಲಿ ಪಟ್ಟನಾಯಕನಹಳ್ಳಿ ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ ಕೂಡ ಭಾಗವಹಿಸಿದ್ದರು. ಆದರೆ ಕೋವಿಡ್ ಮೂರನೇ ಅಲೆಯ ನೆಪದಲ್ಲಿ ಅಂದಿನ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರ ಸೆಕ್ಷನ್ 144 ಅಡಿ ಹೋರಾಟಗಾರರನ್ನು ಬಂಧಿಸಿ ಪ್ರತಿಭಟನೆ ಹತ್ತಿಕ್ಕಿತ್ತು. ಅಲ್ಲದೇ ಹೋರಾಟದ ಸ್ಥಳಕ್ಕೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಕೂಡ ಭೇಟಿ ನೀಡಿ ಎಂಎಸ್ ಜಿಪಿ ಘಟಕದ ಅವೈಜ್ಞಾನಿಕ ಕಸ ವಿಲೇವಾರಿ ಪ್ರಕ್ರಿಯೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಸತ್ವ ಹೀನವಾದ ಭೂಮಿ, ಫಲ ಕೊಡದ ಮರಗಳು
ಕಳೆದ ಹದಿನೇಳು ವರ್ಷಗಳಿಂದ ಟೆರ್ರಾಫಾರಂ ಹಾಗೂ ಎಂಎಸ್‌ಜಿಪಿ ಘಟಕಕ್ಕೆ ಬೆಂಗಳೂರಿನ ಲಕ್ಷಾಂತರ ಟನ್ ತ್ಯಾಜ್ಯವನ್ನು ತಂದು ಸುರಿದ ಪರಿಣಾಮ ಸುತ್ತಮುತ್ತಲಿನ ಗ್ರಾಮಗಳ ಭೂಮಿ ತನ್ನ ಸತ್ವ ಕಳೆದುಕೊಂಡಿದೆ. ಎಂಎಸ್‌ಜಿಪಿ ಘಟಕದ ಬಳಿ ಬೃಹತ್ ಹುಣಸೆ ಹಾಗೂ ಮಾವಿನ ಮರಗಳಿದ್ದವು. ಆದರೆ ಇಂದು ಆ ಮರಗಳು ಫಲ ನೀಡುತ್ತಿಲ್ಲ. ಹಲವು ವರ್ಷಗಳ ಹಿಂದೆ ರಾಗಿ, ಜೋಳ, ತೊಗರಿ, ಅವರೆ ಸೇರಿದಂತೆ ತರಕಾರಿ ಬೆಳೆಗಳು ಹೆಚ್ಚು ಪೋಷಕಾಂಶದಿಂದ ಕೂಡಿರುತ್ತಿದ್ದವು. ಆದರೆ ಇದೀಗ ಭೂಮಿಯಲ್ಲಿ ಸತ್ವವೂ ಇಲ್ಲ. ಬೆಳೆಗಳಲ್ಲಿ ಪೋಷಕಾಂಶವೂ ಇಲ್ಲ ಎಂದು ಗುಂಡ್ಲಹಳ್ಳಿ ಗ್ರಾಮದ ರೈತ ಹನುಮಂತರಾಯಪ್ಪ ಅವರು 'ದ ಫೆಡರಲ್ ಕರ್ನಾಟಕ'ಕ್ಕೆ ತಿಳಿಸಿದರು.
ಬೆಂಗಳೂರಿಗೆ ಕಾವೇರಿ ನೀರು, ಗ್ರಾಮಾಂತರಕ್ಕೆ ಕೊಳಚೆ ನೀರು
2014ರಲ್ಲಿ ಆರಂಭವಾದ ಎಂಎಸ್‌ಜಿಪಿ ಘಟಕ ವಿಚಾರವಾಗಿ ರಾಜಕೀಯ ಹಗ್ಗಜಗ್ಗಾಟವೂ ನಡೆಯುತ್ತಿದೆ. ಮನಸ್ಸು ಮಾಡಿದ್ದರೆ ಅಂದಿನ ಶಾಸಕ ಟಿ. ವೆಂಕಟರಮಣಯ್ಯ ಅವರು ಘಟಕವನ್ನು ನಿಲ್ಲಿಸಬಹುದಿತ್ತು. ಆದರೆ ಅವರು ರೈತರ ಸಮಸ್ಯೆಗಳನ್ನು ಆಲಿಸಲಿಲ್ಲ ಎಂದು ಬಿಜೆಪಿ ನಾಯಕರು ದೂರುತ್ತಾರೆ.
ಎಂಎಸ್‌ಜಿಪಿ ಘಟಕದ ಕುರಿತು ಹೈಕೋರ್ಟ್‌ನಲ್ಲಿ ಪ್ರಕರಣ ಕೂಡ ದಾಖಲಾಗಿದೆ. ಈ ಹಿಂದೆ ಹಿರಿಯ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಭೋಲಾ ಪಂಡಿತ್ ಅವರು ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸುತ್ತಮುತ್ತಲಿನ ಗ್ರಾಮಗಳ ಜನರ ಸಮಸ್ಯೆಗಳ ವರದಿಯನ್ನು ಹೈಕೋರ್ಟ್‌ಗೆ ಸಲ್ಲಿಸಿದ್ದರು.
ಘಟಕದ ಸುತ್ತಲಿನ ನೂರಾರು ಚೆಕ್ ಡ್ಯಾಂಗಳು,ಕುಂಟೆಗಳು, ಹಳ್ಳಗಳು ಹಾಗೂ ಕೆರೆಗಳು ಮಲೀನಗೊಂಡಿವೆ. ಜಾನುವಾರುಗಳು ನೀರು ಕುಡಿಯಲೂ ಯೋಗ್ಯವಾಗಿಲ್ಲ. ಈ ಮೊದಲು ಸ್ಥಳಿಯರು ಅಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಆದರೆ, ಇತ್ತೀಚೆಗೆ ಸುಮಾರು 150ಕ್ಕೂ ಹೆಚ್ಚು ಅಕ್ರಮ ಬಾಂಗ್ಲಾ ಪ್ರಜೆಗಳನ್ನು ಕರೆತಂದು ಕೆಲಸ ಮಾಡಿಸುತ್ತಿದ್ದಾರೆ. ಮಕ್ಕಳಿಗೆ ಅಲ್ಲಿಯೇ ಅಂಗನವಾಡಿ ಕೇಂದ್ರಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ತ್ಯಾಜ್ಯವನ್ನು ಗೊಬ್ಬರ ಮಾಡಲಾಗುವುದು ಎಂದು ಸರ್ಕಾರ ಹೇಳುತ್ತಿದೆ. ಆದರೆ ಶೇ.15-20 ರಷ್ಟು ತ್ಯಾಜ್ಯವನ್ನು ಮಾತ್ರ ಗೊಬ್ಬರ ಮಾಡಿ ಉಳಿದ ತ್ಯಾಜ್ಯವನ್ನು ಮಣ್ಣಿನಡಿ ಹೂತು ಹಾಕಲಾಗುತ್ತಿದೆ. ಕಸವನ್ನು ಬೆಟ್ಟಗಳಂತೆ ರಾಶಿ ಮಾಡಲಾಗಿದೆ ಎಂದು ಭಕ್ತರಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಿದ್ದಲಿಂಗಯ್ಯ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ರಾಜ್ಯ ನಾಯಕರು ಬೆಂಗಳೂರಿಗೆ ಕಾವೇರಿ ನೀರು ನೀಡುತ್ತಾರೆ. ಆದರೆ ಗ್ರಾಮಾಂತರಕ್ಕೆ ತ್ಯಾಜ್ಯದ ವಿಷಯುಕ್ತ ನೀರನ್ನು ನೀಡುತ್ತಾರೆ. ಸರ್ಕಾರ ಶೀಘ್ರವೇ ಎಂಎಸ್‌ಜಿಪಿ ಘಟಕವನ್ನು ರದ್ದುಗೊಳಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ದ ಬೃಹತ್ ಹೋರಾಟ ಮಾಡಲಾಗುವುದು ಎಂದು ಆಕ್ರೋಶ ಹೊರಹಾಕಿದರು.
ಶ್ವಾಸಕೋಶ, ಚರ್ಮ ಸಂಬಂಧಿತ ಕಾಯಿಲೆ ಅಧಿಕ
ಎಂಎಸ್‌ಜಿಪಿ ಘಟಕದಿಂದ ಸುತ್ತಲಿನ ಗ್ರಾಮಗಳ ಜನರು ಶ್ವಾಸಕೋಶ ಹಾಗೂ ಚರ್ಮ ಸಂಬಂಧಿತ ಕಾಯಿಲೆಗಳಿಂದ ನರಳುವಂತಾಗಿದೆ. ಹಿರಿಯ ನಾಗರಿಕರು ಶ್ವಾಸಕೋಶಕ್ಕೆ ಸಂಬಂಧಿಸಿದಂತೆ ಉಸಿರಾಟದ ತೊಂದರೆ ಹಾಗೂ ಮಕ್ಕಳಲ್ಲಿ ಚರ್ಮರೋಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಕೆಲವೊಬ್ಬರು ಪ್ರಾಥಮಿಕ ಚಿಕಿತ್ಸಾ ಕೇಂದ್ರದಲ್ಲೇ ಗುಣಮುಖರಾಗುತ್ತಾರೆ. ಇನ್ನೂ ಕೆಲವರನ್ನು ತಾಲೂಕು ಆಸ್ಪತ್ರೆಗೆ ಕಳುಹಿಸುತ್ತೇವೆ ಎಂದು ಕೋನೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಕಿ ಸವಿತಾ ಅವರು ʼದ ಫೆಡರಲ್ ಕರ್ನಾಟಕಕ್ಕೆʼ ತಿಳಿಸಿದರು.