
ಮದುವೆಗೆ ಕಸವೇ ಕಗ್ಗಂಟು: ಈ ಗ್ರಾಮಗಳ ಯುವಕರಿಗೆ ಹೆಣ್ಣು ಕೊಡೋರೆ ಇಲ್ಲ; ಹುಡುಗಿಗೆ ಗಂಡು ಸಿಗೋದೂ ಇಲ್ಲ!
ಎರಡು ದಶಕಗಳಿಂದ ಈ ಭಾಗದ ಸುಮಾರು 15ಕ್ಕೂ ಹೆಚ್ಚು ಗ್ರಾಮಗಳಿಗೆ ಮದುವೆಯಾಗಿ ಬಂದಿರುವ ಮಹಿಳೆಯರ ಪೈಕಿ ಹಲವರಿಗೆ ಗರ್ಭಪಾತವಾಗಿದೆ ಎನ್ನಲಾಗಿದೆ.
ಅರೆ ಮಲೆನಾಡಿನಂತಹ ಪರಿಸರ, ಸುತ್ತಲೂ ಅಭಿವೃದ್ಧಿಯ ನಾಗಾಲೋಟ, ಇನ್ನೂ ನಗರೀಕರಣ ಛಾಯೆ ಬೀಳದ, ಹಳ್ಳಿಗಾಡಿನ ಸೊಗಡು ಹೊದ್ದು ನಿಂತಿರುವ ಈ ಗ್ರಾಮಗಳಲ್ಲಿ ಯುವಕರ ವಯಸ್ಸು 35-40 ವರ್ಷವಾದರೂ ಮದುವೆ ಯೋಗ ಕೂಡಿ ಬರುತ್ತಿಲ್ಲ. ಯುವತಿಯರಿಗೆ ಕಂಕಣ ಬಲ ಕೂಡಿ ಬರುವುದಕ್ಕೆ ತೊಂದರೆಯಾಗುತ್ತಿದೆ!
ಇಲ್ಲಿನ ಸುಮಾರು ಐದಾರು ಗ್ರಾಮಗಳಲ್ಲಿ ಯುವಕರಿಗೆ ಮದುವೆ ಮಾಡಿಕೊಡಲು ಹೆಣ್ಣು ಹೆತ್ತವರು ಹಾಗೂ ಆ ಊರಿನಿಂದ ಹುಡುಗಿಯನ್ನು ತಮ್ಮ ಬಂಧುಗಳಿಗೆ ಮದುವೆ ಮಾಡಿಸಲು ಗಂಡಿನ ಕಡೆಯವರು ಹಿಂದು- ಮುಂದು ನೋಡುವ ಪರಿಸ್ಥಿತಿ ಒದಗಿ ಬಂದಿದೆ. ಹಾಗಂತ ಯುವಕ-ಯುವತಿಯರಲ್ಲಿ ಲೋಪವಿರಬಹುದು ಎಂದರ್ಥವಲ್ಲ.
ಬೆಂಗಳೂರಿನಿಂದ ಸುಮಾರು 54 ಕಿ.ಮೀ. ಹತ್ತಿರದಲ್ಲಿರುವ ದೊಡ್ಡಬಳ್ಳಾಪುರ ತಾಲೂಕಿನ ವ್ಯಥೆಯ ಕತೆಯಿದು. ಬೆಂಗಳೂರು ಉತ್ತರ ಜಿಲ್ಲೆ (ಹಿಂದಿನ ಗ್ರಾಮಾಂತರ ಜಿಲ್ಲೆ) ದೊಡ್ಡಬಳ್ಳಾಪುರ ತಾಲೂಕಿನ ಚಿಗರೇನಹಳ್ಳಿಯಲ್ಲಿ ತಲೆಎತ್ತಿರುವ ತ್ಯಾಜ್ಯ ಸಂಸ್ಕರಣಾ ಘಟಕವೇ ಈ ಸಾಮಾಜಿಕ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ.
ಬೆಂಗಳೂರಿನ ತ್ಯಾಜ್ಯ ವಿಲೇವಾರಿಗಾಗಿ 2014 ರಲ್ಲಿ ಸಲುವಾಗಿ ಆರಂಭಿಸಿದ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ನಿತ್ಯ 500 ಟನ್ ತ್ಯಾಜ್ಯವನ್ನು ತಂದು ಸುರಿಯಲಾಗುತ್ತದೆ. ಈ ಘಟಕವನ್ನು ಖಾಸಗಿ ಕಂಪೆನಿ ನಿರ್ವಹಿಸುತ್ತಿದೆ.
ಸಾಮರ್ಥ್ಯ ಮೀರಿ ಕಸ ದಾಸ್ತಾನು
ಎಂಎಸ್ ಜಿಪಿ ಘಟಕದ ಸಾಮರ್ಥ್ಯ ನಿತ್ಯ 500 ಟನ್. ಆದರೆ, ಪ್ರತಿನಿತ್ಯ ಸುಮಾರು 150 ಕ್ಕೂ ಹೆಚ್ಚು ಲಾರಿಗಳಲ್ಲಿ 1,500-2,000 ಟನ್ ತ್ಯಾಜ್ಯವನ್ನು ತಂದು ಸುರಿಯುತ್ತಿರುವುದರಿಂದ ಇಲ್ಲಿನ ಜನರು ಸಮಸ್ಯೆಗೆ ಸಿಲುಕುವಂತಾಗಿದೆ.
ಭಕ್ತರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಗರೇನಹಳ್ಳಿ, ತಣ್ಣೀರನಹಳ್ಳಿ, ಕಾಡತಿಪ್ಪೂರು, ಕಾಳೇನಹಳ್ಳಿ, ಬೊಮ್ಮಹಳ್ಳಿ, ಗುಂಡ್ಲಹಳ್ಳಿ, ಸಕ್ಕರೆಗೊಲ್ಲಹಳ್ಳಿ ಪಂಚಾಯಿತಿ ವ್ಯಾಪ್ತಿಯ ದೊಡ್ಡ ಮಂಕಳಾಲ, ಚಿಕ್ಕ ಮಂಕಳಾಲ ಗ್ರಾಮಗಳು ಈ ಘಟಕದಿಂದ ವಿಪರೀತ ಸಮಸ್ಯೆ ಅನುಭವಿಸುತ್ತಿವೆ. ಗ್ರಾಮಗಳಲ್ಲಿ ಸದಾ ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿಯಿದೆ. ಈಗಾಗಲೇ ಅಂತರ್ಜಲ ಕಲುಷಿತಗೊಂಡಿದ್ದು ಮಳೆ ಬಂದಾಗ ಕೆರೆ ಹಾಗೂ ಹಳ್ಳಗಳಲ್ಲಿನ ನೀರು ತ್ಯಾಜ್ಯದ ರಾಸಾಯನಿಕಗಳಿಂದ ಮಿಶ್ರಣ ಹೊಂದಿ ಕಪ್ಪು ಹಾಗೂ ಹಸಿರು ಬಣ್ಣಕ್ಕೆ ತಿರುಗುತ್ತದೆ.
150 ಹೆಚ್ಚು ಯುವಕರು ಅವಿವಾಹಿತರು
ಚಿಗರೇನಹಳ್ಳಿಯಲ್ಲಿರುವ ಎಂಎಸ್‌ಜಿಪಿ ತ್ಯಾಜ್ಯ ಘಟಕದಿಂದ ಸುತ್ತಲಿನ ಕಾಡತಿಪ್ಪೂರು, ತಣ್ಣೀರನಹಳ್ಳಿ , ಮೂಡ್ಲು ಕಾಳೇನಹಳ್ಳಿ ಹಾಗೂ ಬೊಮ್ಮನಹಳ್ಳಿ ಗ್ರಾಮದ ಸುಮಾರು 150 ಕ್ಕೂ ಅಧಿಕ ಯುವಕರು ವಯಸ್ಸು ಮೀರಿದ್ದರೂ, ಹುಡುಗಿ ಸಿಗುತ್ತಿಲ್ಲ. ಹಾಗಾಗಿ ಅವರೆಲ್ಲರೂ ಅವಿವಾಹಿತರಾಗಿದ್ದು, ಮದುವೆಯ ಆಸೆಯನ್ನೇ ಬಿಟ್ಟಿದ್ದಾರೆ.
ಚಿಗರೇನಹಳ್ಳಿ, ಕಾಡತಿಪ್ಪೂರು, ತಣ್ಣೀರನಹಳ್ಳಿ ಮತ್ತು ಗುಂಡ್ಲಳ್ಳಿ, ಮೂಡ್ಲು ಕಾಳೇನಹಳ್ಳಿ- ಈ ಐದು ಗ್ರಾಮಗಳಲ್ಲಿ ಒಟ್ಟು ಸಾವಿರಕ್ಕೂ ಹೆಚ್ಚು ಯುವಕರಿದ್ದಾರೆ. ಆದರೆ, ಈ ಹಳ್ಳಿಯಲ್ಲಿ ಸರಾಸರಿ 30 ವಯಸ್ಸಿನೊಳಗೆ ಯುವಕರು ಮದುವೆಯಾಗುವುದು ಪ್ರತೀತಿ. ಈಗ ನಲವತ್ತು ಕಳೆದರೂ ಹುಡುಗಿ ಸಿಗುತ್ತಿಲ್ಲ ಎನ್ನುವುದು ಹಳ್ಳಿಗರ ಕೊರಗು.
ಈ ಗ್ರಾಮಗಳಿಗೆ ಹೆಣ್ಣಿನ ಕಡೆಯವರು ವರನನ್ನು ನೋಡಲು ಬಂದರೆ ಅವರಿಗೆ ಮೊದಲು ಸ್ವಾಗತ ಕೋರುವುದೇ ನೊಣಗಳು ಮತ್ತು ತ್ಯಾಜ್ಯದ ವಾಸನೆ. ಹುಡುಗಿಯನ್ನು ನೋಡಲು ಬಂದ ವರನ ಕಡೆಯವರಿಗೂ ಸಿಗುದವುದು ನೊಣಗಳ ಹಿಂಡಿನ ಸ್ವಾಗತ!
ಇನ್ನೊಂದು ಅಚ್ಚರಿ ಹುಟ್ಟಿಸುವ ಹಳ್ಳಿಗರ ಅಂಬೋಣವೇನೆಂದರೆ, ಕಲುಷಿತ ವಾತಾವರಣಲ್ಲಿ ವಿಷಗಾಳಿ ಸೇವಿಸಿದ ಯುವತಿಯರಿಗೆ ಆರೋಗ್ಯ ಸಮಸ್ಯೆ ಬರುವ ಸಾಧ್ಯತೆಯೂ ಗಂಡಿನ ಕಡೆಯವರಿಗೆ ಹೆಣ್ಣು ನಿರಾಕರಿಸಲು ಸಿಗುವ ಕಾರಣ!
ಅವಿವಾಹಿತ ಯುವತಿಯರ ಸಂಖ್ಯೆಯೂ ಹೆಚ್ಚಳ
ದಶಕದಿಂದ ವಿಷಯುಕ್ತ ಗಾಳಿ ಹಾಗೂ ಕಲುಷಿತ ನೀರು ಸೇವನೆ ಮಾಡಿರುವುದರಿಂದ ಮಹಿಳೆಯರಲ್ಲಿ ಹಲವಾರು ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ. ಈ ಭಾಗದ ಗ್ರಾಮಗಳಲ್ಲಿನ ಯುವತಿಯರನ್ನು ಮದುವೆಯಾದರೆ ನಂತರ ಜನಿಸುವ ಮಕ್ಕಳು ಅಂಗವೈಕಲ್ಯಕ್ಕೆ ತುತ್ತಾಗಬಹುದು ಎಂಬ ವಿಷಯ ಒಬ್ಬರಿಂದ ಇನ್ನೊಬ್ಬರಿಗೆ ಪ್ರಚಾರವಾಗಿ, ಬಹುತೇಕರು ಮದುವೆಯಾಗಲು ಮುಂದೆ ಬರುತ್ತಿಲ್ಲ. ಈಗಾಗಲೇ ಮೂವತ್ತು ವರ್ಷ ದಾಟಿದ ಸುಮಾರು 25ಕ್ಕೂ ಹೆಚ್ಚು ಯುವತಿಯರು ಗ್ರಾಮಗಳಲ್ಲಿದ್ದಾರೆ ಎಂದು ರೈತ ರಂಗಪ್ಪ ʼದ ಫೆಡರಲ್ ಕರ್ನಾಟಕಕ್ಕೆʼ ಮಾಹಿತಿ ನೀಡಿದರು.
ಬೆಟ್ಟದಷ್ಟು ಎತ್ತರವಿರುವ ಕಸದ ರಾಶಿಯನ್ನು ನೋಡತ್ತಲೇ ಹೆಣ್ಣಿನ ಪೋಷಕರು ಮರು ಮಾತನಾಡದೆ ಸಂಬಂಧ ಮುಂದುವರಿಸಲು ನಿರಾಕರಿಸಿ ಹೋಗಿರುವ ಉದಾಹರಣೆಗಳಿವೆ. ಈಗಾಗಲೇ ಹಲವಾರು ಯುವಕರಿಗೆ ವಯೋಮಿತಿ 40 ವರ್ಷ ಮೀರುತ್ತಿದ್ದು ಮುಂದೇನು ಎಂಬ ಪ್ರಶ್ನೆ ಎದುರಾಗಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಸರ್ಕಾರ ಈ ಕೂಡಲೇ ಎಂಎಸ್‌ಜಿಪಿ ಘಟಕವನ್ನು ಸ್ಥಳಾಂತರಿಸಬೇಕು. ಇಲ್ಲವಾದಲ್ಲಿ ಯುವಕರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಭಕ್ತರಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಸಿದ್ದಲಿಂಗಯ್ಯ ʼದ ಫೆಡರಲ್ ಕರ್ನಾಟಕʼ ಕ್ಕೆ ತಿಳಿಸಿದರು.
ಗ್ರಾಮ ತೊರೆಯುತ್ತಿರುವ ಯುವಕರು
ಎಂಎಸ್‌ಜಿಪಿ ಘಟಕದ ಸುತ್ತಲಿನ ಗ್ರಾಮಗಳು ಈಗಾಗಲೇ ನೊಣಗಳ ಹಾವಳಿಗೆ ಹೈರಾಣಾಗಿವೆ. ಕಸದ ದುರ್ವಾಸನೆಯಿಂದ ಉಸಿರಾಡಲೂ ಕಷ್ಟವಾಗಿದೆ. ಅಂತರ್ಜಲ ಹಾಗೂ ನೀರಿನ ಆಕರಗಳಾದ ಕೆರೆ, ಕಟ್ಟೆ, ಹಳ್ಳಗಳಲ್ಲಿ ರಾಸಾಯನಿಕ ಯುಕ್ತ ನೀರು ಸಂಗ್ರಹವಾಗಿದ್ದು, ಕುಡಿಯುವ ನೀರು ಕಲುಷಿತವಾಗಿದೆ. ಹಾಗಾಗಿ ಯಾರೂ ಕೂಡ ಈ ಗ್ರಾಮಗಳ ಯುವಕರಿಗೆ ಹೆಣ್ಣು ನೀಡುತ್ತಿಲ್ಲ. ಆದ್ದರಿಂದ ಬಹುತೇಕ ಯುವಕರು ವಿದ್ಯಾಭ್ಯಾಸ ಮುಗಿಸಿದ ಕೂಡಲೇ ದೊಡ್ಡಬಳ್ಳಾಪುರ, ದಾಬಸ್‌ಪೇಟೆ ಹಾಗೂ ತುಮಕೂರಿಗೆ ಉದ್ಯೋಗಕ್ಕಾಗಿ ಗುಳೆ ಹೋಗುವ ಪರಿಸ್ಥಿತಿ ಇದೆ. ಇದರಿಂದ ಗ್ರಾಮಗಳಲ್ಲಿ ಕೆಲವೇ ಕೆಲವು ಯುವಕರಿದ್ದು ಹೆಚ್ಚಿನ ಜನರು ಗ್ರಾಮಗಳನ್ನು ತೊರೆಯುತ್ತಿದ್ದಾರೆ ಎಂದು ಭಕ್ತರಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ತಣ್ಣೀರನಹಳ್ಳಿ ಭೀಮರಾಜು ʼದ ಫೆಡರಲ್ ಕರ್ನಾಟಕಕ್ಕೆʼ ತಿಳಿಸಿದರು.
ಮಹಿಳೆಯರಲ್ಲಿ ಹೆಚ್ಚಿದ ಗರ್ಭಪಾತ?
ಎರಡು ದಶಕಗಳಿಂದ ಭಕ್ತರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಗುಂಡ್ಲಹಳ್ಳಿ ಬಳಿ ಟೆರ್ರಾಫಾರಂ ಹಾಗೂ ಚಿಗರೇನಹಳ್ಳಿ ಬಳಿಯ ಎಂಎಸ್‌ಜಿಪಿ ಘಟಕದಿಂದ ಸುಮಾರು 15ಕ್ಕೂ ಹೆಚ್ಚು ಗ್ರಾಮಗಳಿಗೆ ಮದುವೆಯಾಗಿ ಬಂದಿರುವ ಮಹಿಳೆಯರ ಪೈಕಿ ಹಲವರಿಗೆ ಗರ್ಭಪಾತವಾಗಿದೆ ಎನ್ನಲಾಗಿದೆ.
ಇದಕ್ಕೆ ಮುಖ್ಯ ಕಾರಣವೆಂದರೆ ಎರಡೂ ತ್ಯಾಜ್ಯ ಘಟಕಗಳಿಂದ ಈಗಾಗಲೇ ಇಲ್ಲಿನ ಪರಿಸರ ಹಾಗೂ ಅಂತರ್ಜಲ ಸಂಪೂರ್ಣ ಕಲುಷಿತಗೊಂಡಿರುವುದು. ರಾಸಾಯನಿಕ ಯುಕ್ತ ನೀರನ್ನು ಕುಡಿಯುವುದರಿಂದ ಹಾಗೂ ವಾಸನೆಯುಕ್ತ ಗಾಳಿಯನ್ನೆ ಪ್ರತಿದಿನ ಉಸಿರಾಡುವುದರಿಂದ ಮಹಿಳೆಯರಲ್ಲಿ ಗರ್ಭಪಾತಗಳಾಗುತ್ತಿದೆ. ಮಹಿಳೆಯರು ಹಾಗೂ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಎಂಎಸ್‌ಜಿಪಿ ಘಟಕವನ್ನು ಸ್ಥಗಿತಗೊಳಿಸಬೇಕು ಎಂದು ಯುವಕ ರಕ್ಷಿತ್ ಎಚ್. ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಸಾಯನಿಕಯುಕ್ತ ನೀರಿನಿಂದ ಗರ್ಭಪಾತ ಹೆಚ್ಚು: ತಜ್ಞರು
ತ್ಯಾಜ್ಯದಿಂದ ಹರಿದು ಅಂತರ್ಜಲ ಸೇರುವ ವಿಕಿರಣ ಶೀಲ ವಿಷಕಾರಿ ಅಂಶಗಳನ್ನು ನೀರಿನ ಮೂಲಕ ಗರ್ಭಿಣಿಯರು ಸೇವಿಸುವುದರಿಂದ ಸ್ವಾಭಾವಿಕ ಗರ್ಭಪಾತದ ಅಪಾಯ ಹೆಚ್ಚಾಗಿರುತ್ತದೆ. ಕುಡಿಯುವ ನೀರಿನಲ್ಲಿ ಕಂಡುಬರುವ ವಿವಿಧ ಮಾಲಿನ್ಯಕಾರಕಗಳು ಗರ್ಭಧಾರಣೆಯ ಮೇಲೆ ಪರಿಣಾಮ ಬೀರುತ್ತವೆ. ತ್ಯಾಜ್ಯದ ನೀರಿನಲ್ಲಿ ಅತಿಯಾದ ತಾಮ್ರದ ಮಟ್ಟ ಇದ್ದರೆ ಪ್ರಿಕ್ಲಾಂಪ್ಸಿಯಾ (ಅಧಿಕ ರಕ್ತದೊತ್ತಡ ಮತ್ತು ಅಂಗಾಂಗ ವ್ಯವಸ್ಥೆಗಳಿಗೆ ಹಾನಿಯಾಗುವ ಲಕ್ಷಣ) ಮತ್ತು ನರ ದೌರ್ಬಲ್ಯದಂತಹ ಕಾಯಿಲೆಗಳಿಗೆ ಕಾರಣವಾಗಲಿದೆ. ಹೃದಯ ಸಮಸ್ಯೆ , ಯಕೃತ್ತಿನ ಸಿರೋಸಿಸ್‌ಗೂ ಕಾರಣವಾಗಬಹುದು. ಕ್ರೋಮಿಯಂ ಮಿಶ್ರಿತ ನೀರು ಸೇವಿಸುವುದರಿಂದ ಗರ್ಭಾವಸ್ಥೆಯಲ್ಲಿ ಮತ್ತು ಹೆರಿಗೆಯ ಸಮಯದಲ್ಲಿ ತೊಡಕುಗಳು ಉಂಟಾಗಬಹುದು. ಭ್ರೂಣದ ತೂಕ ಮತ್ತು ವಿರೂಪಗಳು ಸೇರಿದಂತೆ ಬೆಳವಣಿಗೆಯ ದೋಷಗಳು ಉಂಟಾಗಬಹುದು ಎಂದು ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ ಮಾಜಿ ನಿರ್ದೇಶಕಿ ಡಾ. ಆಶಾ ಬೆನಕಪ್ಪ ʼದ ಫೆಡರಲ್ ಕರ್ನಾಟಕಕ್ಕೆʼ ತಿಳಿಸಿದರು.
ಈ ಮೇಲಿನ ಸಮಸ್ಯೆಗಳು ಸೇರಿದಂತೆ ಭಕ್ತರಹಳ್ಳಿ ಹಾಗೂ ಸಕ್ಕರೆಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ, ಮಕ್ಕಳಲ್ಲಿ ಹಾಗೂ ಹಿರಿಯ ನಾಗರಿಕರಲ್ಲಿ ಉಸಿರಾಟದ ಸಮಸ್ಯೆ, ಊಟ ಮಾಡುವಾಗ ನೊಣದ ಹಾವಳಿಯ ಸಮಸ್ಯೆಗಳಿವೆ.
ಸ್ಥಳೀಯ ಮಟ್ಟದಲ್ಲಿ ಹಲವು ಬಾರಿ ಹೋರಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ.ಆದಷ್ಟು ಶೀಘ್ರವೇ ಎಂಎಸ್‌ಜಿಪಿ ಘಟಕವನ್ನು ಸ್ಥಗಿತಗೊಳಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ದ ಬೃಹತ್ ಹೋರಾಟ ನಡೆಸಲಾಗುವುದು ಎಂದು ಘಟಕದ ಸುತ್ತಲಿನ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.