Namma Metro | ಹೆಬ್ಬಾಳದಲ್ಲಿ ಮೆಟ್ರೋಗೆ ಜಮೀನು; ಕಾನೂನು ತೊಡಕು ಬಗೆಹರಿಸಿ ಹಸ್ತಾಂತರಿಸಲು ನಿರ್ಧಾರ

ಮೆಟ್ರೋಗೆ ಭೂಮಿ ಹಸ್ತಾಂತರ ಸಂಬಂಧ ಫೆ.28 ರಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹಾಗೂ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದೆ.;

Update: 2025-03-02 05:42 GMT
ಮೆಟ್ರೋ ರೈಲು

ಹೆಬ್ಬಾಳದಲ್ಲಿ ಮಲ್ಟಿ ಮಾಡೆಲ್‌ ಟ್ರಾನ್ಸ್‌ಪೋರ್ಟ್‌ ಹಬ್‌ ನಿರ್ಮಾಣಕ್ಕೆ ಅಡ್ಡಿಯಾಗಿರುವ ತೊಡಕುಗಳ ನಿವಾರಣೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಮೆಟ್ರೋ ಮೂರನೇ ಹಂತದ ಕಾಮಗಾರಿಗಾಗಿ ಬಿಎಂಆರ್‌ಸಿಎಲ್‌ಗೆ 45 ಎಕರೆ ಭೂಮಿ ನೀಡಲು ಸರ್ಕಾರ ತೀರ್ಮಾನಿಸಿದೆ. ಅದಕ್ಕೂ ಮನ್ನ, ಭೂಮಿ ಹಸ್ತಾಂತರಕ್ಕೆ ಎದುರಾಗಿರುವ ಕಾನೂನು ತೊಡಕುಗಳನ್ನು ಇತ್ಯರ್ಥ ಪಡಿಸಿಕೊಳ್ಳಲು ನಿರ್ಧರಿಸಿದೆ. 

ಮೆಟ್ರೋಗೆ ಭೂಮಿ ಹಸ್ತಾಂತರ ಸಂಬಂಧ ಫೆ.28 ರಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹಾಗೂ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದೆ.  

ಹೆಬ್ಬಾಳದಲ್ಲಿ ಒಟ್ಟು 55 ಎಕರೆ 13 ಗುಂಟೆ ಭೂಮಿ ಕೆಐಎಡಿಬಿ ಸ್ವಾಧೀನದಲ್ಲಿದೆ. ಈ ಜಾಗದಲ್ಲಿ 45 ಎಕರೆ 5 ಗುಂಟೆ ಭೂಮಿ ನೀಡುವಂತೆ ಮೆಟ್ರೋ ಮನವಿ ಮಾಡಿರುವ ಹಿನ್ನೆಲೆಯಲ್ಲಿ ಚರ್ಚೆ ನಡೆಸಲಾಗಿದೆ. ಕೆಲ ವರ್ಷಗಳ ಹಿಂದೆ ಹೆಬ್ಬಾಳ ಅಮಾನಿಕೆರೆ ಗ್ರಾಮದ 55.13 ಎಕರೆ ಭೂಮಿಯನ್ನು ಖಾಸಗಿ ಕಂಪೆನಿಗಾಗಿ ಕೆಐಎಡಿಬಿ ಸ್ವಾಧೀನಪಡಿಸಿಕೊಂಡಿತ್ತು. ಆದರೆ, ಈವರೆಗೂ ಯೋಜನೆ ಕಾರ್ಯಗತಗೊಳಿಸಿರಲಿಲ್ಲ. ಈ ಹಿಂದಿನ ಬಿಜೆಪಿ ಸರ್ಕಾರ ಯೋಜನೆ ಜಾರಿಗಾಗಿ ಮೂರು ವರ್ಷಗಳ ಕಾಲಾವಕಾಶ ನೀಡಿ ಆದೇಶ ಹೊರಡಿಸಿದೆ. ಇನ್ನೊಂದೆಡೆ, ನ್ಯಾಯಾಲಯದ ಆದೇಶವೂ ಇದೆ. ಹೀಗಾಗಿ ಏಕಾಏಕಿ ಮೆಟ್ರೋ ಸಂಸ್ಥೆಗೆ ಜಮೀನನ್ನು ಹಸ್ತಾಂತರಿಸುವುದು ಮತ್ತಷ್ಟು ಜಟಿಲತೆಗೆ ದಾರಿಯಾಗುತ್ತದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಅಭಿಪ್ರಾಯಪಟ್ಟಿದ್ದಾರೆ.

ಮೆಟ್ರೋಗೆ ಭೂಮಿ ನೀಡಲು ಬದ್ಧ

ಬಿಎಂಆರ್‌ಸಿಎಲ್‌ಗೆ ಭೂಮಿ ನೀಡಲು ಸರ್ಕಾರ ಬದ್ಧವಾಗಿದೆ. ಈ ಸಂಬಂಧ ಯೋಜನಾ ಪ್ರವರ್ತಕರೊಂದಿಗಿನ ಮಾತುಕತೆ, ಸೂಕ್ತ ಕಾನೂನು ನೆರವು ಸೇರಿದಂತೆ ಎಲ್ಲ ಸಾಧ್ಯತೆಗಳನ್ನೂ ಪರಿಶೀಲಿಸಲಾಗುತ್ತಿದೆ. ಹೆಬ್ಬಾಳದಲ್ಲಿ ಬಹುಮಾದರಿ ಸಾರಿಗೆ ಹಬ್ ನಿರ್ಮಾಣವಾದರೆ ಲಕ್ಷಾಂತರ ಮಂದಿಗೆ ಅನುಕೂಲವಾಗಲಿದೆ. ಆದರೆ, ಅವಸರದಿಂದಾಗಿ ಇನ್ನಷ್ಟು ಹೊಸ ಸಮಸ್ಯೆ ಉದ್ಭವಿಸಬಾರದು. ಜೊತೆಗೆ ಹಸ್ತಾಂತರ ಪ್ರಕ್ರಿಯೆ ಕೂಡ ವಿಳಂಬ‌ ಆಗಬಾರದು. ಇದರಿಂದ ಜನಪರ ಯೋಜನೆ ಅನುಷ್ಠಾನಕ್ಕೆ ತೊಡಕು ಉಂಟಾಗಲಿದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಎಚ್ಚರಿಕೆಯಿಂದ ಹೆಜ್ಜೆ ಇಡಲಾಗುವುದು ಎಂದು ಪಾಟೀಲ್‌ ತಿಳಿಸಿದ್ದಾರೆ.

ಏನಿದು ವಿವಾದ ?

2000ನೇ ಇಸವಿಯಲ್ಲಿ ಹೆಬ್ಬಾಳದ ಅಮಾನಿಕೆರೆ ಗ್ರಾಮದಲ್ಲಿ ಖಾಸಗಿ ಕಂಪನಿಗಾಗಿ ಕೆಐಎಡಿಬಿಯು 55 ಎಕರೆ ಭೂಸ್ವಾಧೀನ ಮಾಡಿಕೊಂಡಿತ್ತು. ಆದರೆ, ಕಾರಣಾಂತರದಿಂದ ಕಂಪನಿಯು ಕಾಮಗಾರಿ ಆರಂಭಿಸಿರಲಿಲ್ಲ. ಈಗ ಇದೇ ಪ್ರದೇಶದಲ್ಲಿ ನಮ್ಮ ಮೆಟ್ರೋದ ಮೂರನೇ ಹಂತದ ಯೋಜನೆ ಕಾಮಗಾರಿ ನಡೆಯುತ್ತಿದೆ. ಯೋಜನೆಗಾಗಿ ಮೆಟ್ರೋ 45 ಎಕರೆ ಭೂಮಿ ಕೇಳಿದ್ದು, ಎಕರೆಗೆ ತಲಾ 12.10 ಕೋಟಿ ನೀಡುವುದಾಗಿ ಹೇಳಿದೆ. ಈ ಮೊದಲು ಬಿಎಂಆರ್‌ಸಿಎಲ್ 6712.97 ಚ.ಮೀ ಜಾಗ ಮಾತ್ರ ಕೇಳಿತ್ತು. ಈಗ 3ನೇ ಹಂತದ ಯೋಜನೆಗೆ 45 ಎಕರೆ ಕೇಳುತ್ತಿದೆ. ಆದರೆ, ಕಂಪೆನಿಯು ನ್ಯಾಯಾಲಯದ ಮೊರೆ ಹೋಗಿರುವುದರಿಂದ ಭೂಮಿ ಹಸ್ತಾಂತರ ವಿಳಂಬವಾಗಿದೆ.

2024 ಮಾರ್ಚ್‌ ತಿಂಗಳಲ್ಲಿ 45 ಎಕರೆ ಭೂಮಿ ನೀಡುವಂತೆ ಬಿಎಂಆರ್‌ಸಿಎಲ್‌ ಸರ್ಕಾರಕ್ಕೆ ಮನವಿ ಮಾಡಿತ್ತು. ನವೆಂಬರ್‌ ತಿಂಗಳಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು, ಮೆಟ್ರೋಗೆ ತ್ವರಿತವಾಗಿ ಭೂಮಿ ಹಸ್ತಾಂತರಿಸುವಂತೆ ಮನವಿ ಮಾಡಿದ್ದರು.

ಖಾಸಗಿ ಕಂಪೆನಿ ಖರೀದಿಸಿದ್ದ ಭೂಮಿ

೨೦೦೦ರಲ್ಲಿ ಲೇಕ್‌ ವ್ಯೂ ಟೂರಿಸಂ ಎಂಬ ಕಂಪೆನಿ 55.1 ಎಕರೆ ಖಾಸಗಿ ಭೂಮಿ ಖರೀದಿಸಿತ್ತು. ಆದರೆ,ಈವರೆಗೂ ಯೋಜನೆ ಕಾರ್ಯಗತಗೊಳಿಸಿರಲಿಲ್ಲ. ಪ್ರತಿ ಎಕರೆಗೆ 12.10 ಕೋಟಿ ರೂ. ನೀಡುವಂತೆ ಲೇಕ್‌ ವ್ಯೂ ಟೂರಿಸಂ ಕಂಪೆನಿಗೆ 2024 ಜೂನ್‌ ತಿಂಗಳಲ್ಲಿ ಕೆಐಎಡಿಬಿ ನೋಟಿಸ್‌ ನೀಡಿತ್ತು. ಆದರೆ ಕಂಪೆನಿ ಈವರೆಗೂ ಹಣ ಪಾವತಿಸಿರಲಿಲ್ಲ. ಇದರಿಂದ ಕೆಐಎಡಿಬಿಯು ಭೂ ಮಾಲೀಕರಿಗೆ ಪರಿಹಾರ ನೀಡಲು ಸಾಧ್ಯವಾಗಿರಲಿಲ್ಲ, ಹಾಗಾಗಿ ಕೆಐಎಡಿಬಿ ಆ ಭೂಮಿಯನು ಸ್ವಾಧೀನಪಡಿಸಿಕೊಂಡಿತ್ತು.

ಮೆಟ್ರೋ ಯೋಜನೆ ಏನು?

ಹೆಬ್ಬಾಳದಲ್ಲಿ 45 ಎಕರೆ ವಿಸ್ತೀರ್ಣದಲ್ಲಿ ಮಲ್ಟಿ ಮಾಡೆಲ್‌ ಟ್ರಾನ್ಸ್‌ಪೋರ್ಟ್‌ ಹಬ್‌ ನಿರ್ಮಾಣ ಮಾಡಲು ಮೆಟ್ರೋ ನಿರ್ಧರಿಸಿದೆ. ಈ ಜಾಗದಲ್ಲಿ ಸಬ್‌ ಅರ್ಬನ್‌ ರೈಲು, ಮೆಟ್ರೊ, ಬಸ್‌ ಟರ್ಮಿನಲ್‌, ಬಹುಮಹಡಿಯ ಪಾರ್ಕಿಂಗ್‌ ವ್ಯವಸ್ಥೆ, 6.65 ಎಕರೆಯಲ್ಲಿ ಬಿಎಂಆರ್‌ಸಿಎಲ್‌ ಸಿಬ್ಬಂದಿಗೆ ವಸತಿ ಸೌಲಭ್ಯ ಕಲ್ಪಿಸಲಿದೆ. 36 ಕಿ.ಮೀ (ಹೆಬ್ಬಾಳ- ಸರ್ಜಾಪುರ) ಉದ್ದದ ಮೆಟ್ರೊ ಮಾರ್ಗವನ್ನು 28,405 ಕೋಟಿ ರೂ. ವೆಚ್ಚದಲ್ಲಿ ಕಾರ್ಯಗತಗೊಳಿಸಲು ಮೆಟ್ರೋ ನಿರ್ಧರಿಸಿದೆ.

Tags:    

Similar News