ಭೂಸ್ವಾಧೀನ ವಿವಾದ | ದೇವನಹಳ್ಳಿ ರೈತರ ಬೆಂಬಲಕ್ಕೆ ನಿಂತ ನಟಿ ರಮ್ಯಾ

ರೈತರ ಬಗ್ಗೆ ಕರುಣೆ ಇರಲಿ. ರೈತರಿಗೆ ಒಳ್ಳೆಯದನ್ನು ಮಾಡಬೇಕು. ಈ ಕಥೆ ಕರ್ನಾಟಕದ ರೈತರದ್ದು ಮಾತ್ರವಲ್ಲ, ದೇಶಾದ್ಯಂತ ಇರುವ ರೈತರದ್ದಾಗಿದೆ ಎಂದು ನಟ ರಮ್ಯಾ ತಿಳಿಸಿದ್ದಾರೆ.;

Update: 2025-07-02 13:34 GMT

ನಟಿ ರಮ್ಯಾ

ಬೆಂಗಳೂರು ಉತ್ತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯಲ್ಲಿKIADB ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಬೆಂಬಲ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಹೋರಾಟಕ್ಕೆ ಬಹುಭಾಷಾ ನಟ ಪ್ರಕಾಶ್ ರೈ ಅವರು ಬೆಂಬಲ ನೀಡಿದ್ದು, ಈಗ ರಮ್ಯಾ ಕೂಡ ರೈತರ ಬೆನ್ನಿಗೆ ನಿಂತಿರುವುದು ಸರ್ಕಾರಕ್ಕೆ ತಲೆ ನೋವಾಗಿ ಪರಿಣಮಿಸಿದೆ. 

ಹೈಟೆಕ್ ಡಿಫೆನ್ಸ್ ಅಂಡ್ ಏರೋಸ್ಪೇಸ್ ಪಾರ್ಕ್ ನಿರ್ಮಾಣಕ್ಕಾಗಿ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ 1777 ಎಕರೆಗೂ ಹೆಚ್ಚು ಭೂಮಿ ಸ್ವಾಧೀನಪಡಿಸಿಕೊಳ್ಳಲು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ರೈತರು 1190 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು, ದಿನೇ ದಿನೇ ಉಗ್ರ ರೂಪ ಪಡೆದುಕೊಳ್ಳುತ್ತಿದೆ.

ಕಾಂಗ್ರೆಸ್ಸಿಗರೇ ಆಗಿರುವ ನಟಿ ರಮ್ಯಾ  ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಭೂಸ್ವಾಧೀನ ನಿರ್ಧಾರ ಪ್ರಶ್ನಿಸಿದ್ದು, ಸಿಎಂ ಅವರನ್ನು ಟ್ಯಾಗ್ ಮಾಡಿ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. 

"ರೈತರ ಸಮಸ್ಯೆಗಳಿಗೆ ಸ್ಪಂದಿಸಿ, ಅವರ ಬಗ್ಗೆಯೂ ಕರುಣೆ ಇರಲಿ. ರೈತರಿಗೆ ಒಳ್ಳೆಯದನ್ನು ಮಾಡಬೇಕು. ಈ ಕಥೆ ಕರ್ನಾಟಕದ ರೈತರದ್ದು ಮಾತ್ರವಲ್ಲ, ದೇಶಾದ್ಯಂತ ಇರುವ ರೈತರದ್ದಾಗಿದೆ. ಕೈಗಾರಿಕೆಗಳು ಉದ್ಯೋಗಗಳನ್ನು ಸೃಷ್ಟಿಸುವಾಗ, ರೈತರ ಜೀವನೋಪಾಯವನ್ನೂ ಖಚಿತಪಡಿಸಿಕೊಳ್ಳಬೇಕು" ಎಂದು ಒತ್ತಾಯಿಸಿದ್ದಾರೆ.

ರೈತರ ಅನಿರ್ದಿಷ್ಟಾವಧಿ ಮುಷ್ಕರ ನಿರ್ಣಾಯಕ ಹಂತ ತಲುಪಿದ್ದು, ಇತ್ತೀಚೆಗೆ ನಟ ಪ್ರಕಾಶ್ ರೈ ಕೂಡ ರೈತರ ಪ್ರತಿಭಟನೆ ಬೆಂಬಲಿಸಿ, ಭಾಗವಹಿಸಿದ್ದರು. ರೈತ ಮುಖಂಡರೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದ ಅವರು, "ರೈತರ ಭೂಮಿ ಸ್ವಾಧೀನ ತಪ್ಪು. ಈ ನಿರ್ಧಾರ ಸರಿಯಲ್ಲ. ಬೆಳೆ ಬೆಳೆಯುವ ಭೂಮಿಯನ್ನು ಕಾರ್ಪೊರೇಟ್ ಕಂಪನಿಗಳಿಗೆ ನೀಡಬಾರದು. ಹೋರಾಟಗಾರ ರೈತರ ಬಂಧನ ಸರಿಯಲ್ಲ " ಎಂದು ಖಂಡಿಸಿದ್ದರು. ಅನ್ನ ಹಾಕುವ ಭೂಮಿ ಕಸಿದುಕೊಳ್ಳದಂತೆ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದರು.

Tags:    

Similar News