ಕೃಷ್ಣಾ ಮೇಲ್ದಂಡೆ ಯೋಜನೆಗೆ ಚುರುಕು: 5.94 ಲಕ್ಷ ಹೆಕ್ಟೇರ್‌ಗೆ ನೀರಾವರಿ ಭಾಗ್ಯ

ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣ-2ರ ತೀರ್ಪಿನ ಅನ್ವಯ, ಕರ್ನಾಟಕಕ್ಕೆ ಹಂಚಿಕೆಯಾಗಿರುವ 130 ಟಿಎಂಸಿ ನೀರನ್ನು ಬಳಸಿಕೊಂಡು, ಸುಮಾರು 5.94 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.;

Update: 2025-09-10 15:07 GMT

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌

Click the Play button to listen to article

ಉತ್ತರ ಕರ್ನಾಟಕದ ದಶಕಗಳ ಕನಸಾದ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರ ಅನುಷ್ಠಾನಕ್ಕೆ ರಾಜ್ಯ ಸರ್ಕಾರವು ಮಹತ್ವದ ಹೆಜ್ಜೆ ಇಟ್ಟಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ, ಯೋಜನೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ, ರೈತರ ಜಮೀನುಗಳಿಗೆ ನೀರು ಹರಿಸುವ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಲಾಗಿದೆ.

ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣ-2ರ ತೀರ್ಪಿನ ಅನ್ವಯ, ಕರ್ನಾಟಕಕ್ಕೆ ಹಂಚಿಕೆಯಾಗಿರುವ 130 ಟಿಎಂಸಿ ನೀರನ್ನು ಬಳಸಿಕೊಂಡು, ಸುಮಾರು 5.94 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಇದಕ್ಕಾಗಿ, ಆಲಮಟ್ಟಿ ಜಲಾಶಯದ ನೀರಿನ ಸಂಗ್ರಹಣಾ ಮಟ್ಟವನ್ನು 519 ಮೀಟರ್‌ನಿಂದ 524 ಮೀಟರ್‌ಗೆ ಎತ್ತರಿಸಲು ನಿರ್ಧರಿಸಲಾಗಿದೆ. ಇದರಿಂದಾಗಿ, ಹೆಚ್ಚುವರಿಯಾಗಿ 100 ಟಿಎಂಸಿ ನೀರನ್ನು ಸಂಗ್ರಹ ಸಾಧ್ಯವಾಗಲಿದೆ.

ಈ ಬೃಹತ್ ಯೋಜನೆಗೆ ಒಟ್ಟು 1,33,867 ಎಕರೆ ಜಮೀನು ಭೂಸ್ವಾಧೀನದ ಅಗತ್ಯವಿದೆ. ಇದರಲ್ಲಿ 75,563 ಎಕರೆ ಜಮೀನು ಹಿನ್ನೀರಿನಲ್ಲಿ ಮುಳುಗಡೆಯಾಗಲಿದೆ. ಈ ಭೂಸ್ವಾಧೀನ ಪ್ರಕ್ರಿಯೆಯನ್ನು ಒಂದೇ ಹಂತದಲ್ಲಿ ಪೂರ್ಣಗೊಳಿಸಲು ಸರ್ಕಾರ ತೀರ್ಮಾನಿಸಿದೆ. ಜಮೀನು ಕಳೆದುಕೊಳ್ಳುವ ರೈತರಿಗೆ ನ್ಯಾಯಯುತವಾದ ಪರಿಹಾರವನ್ನು ಒದಗಿಸಲು ಮತ್ತು ಸಂತ್ರಸ್ತರಿಗೆ ಸೂಕ್ತ ಪುನರ್ವಸತಿ ಕಲ್ಪಿಸಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದರು. ಈ ಕುರಿತು ಶೀಘ್ರದಲ್ಲೇ ಸಚಿವ ಸಂಪುಟ ಸಭೆಯಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಈ ಯೋಜನೆಯ ಅಂದಾಜು ವೆಚ್ಚವು ಆರಂಭದಲ್ಲಿ 51,148 ಕೋಟಿ ರೂಪಾಯಿ. ಆದರೆ, ಪ್ರಸ್ತುತ ಇದು ಪರಿಷ್ಕರಣೆಗೊಂಡು 87,818 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಇದರಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆಂದೇ 40,557 ಕೋಟಿ ರೂಪಾಯಿಗೆ ಮೀಸಲಿಡಲಾಗಿದೆ. ಯೋಜನೆಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಿ, ಈ ಭಾಗದ ರೈತರ ಬಹುದಿನಗಳ ಕನಸನ್ನು ನನಸು ಮಾಡಲು ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಿದೆ.

Tags:    

Similar News