ಕೃಷ್ಣಾ ಜಲವಿವಾದ ನ್ಯಾಯಮಂಡಳಿ ಅವಧಿ ವಿಸ್ತರಣೆ: ರಾಜ್ಯಕ್ಕೆ ಆಘಾತ ತಂದ ಕೇಂದ್ರದ ನಿರ್ಣಯ
x

ಕೃಷ್ಣಾ ಜಲವಿವಾದ ನ್ಯಾಯಮಂಡಳಿ ಅವಧಿ ವಿಸ್ತರಣೆ: ರಾಜ್ಯಕ್ಕೆ ಆಘಾತ ತಂದ ಕೇಂದ್ರದ ನಿರ್ಣಯ

ನ್ಯಾಯಮಂಡಳಿಯ ಅವಧಿಯನ್ನು 2026ರ ಜುಲೈ 31ರ ವರೆಗೆ ವಿಸ್ತರಿಸಿ ಬುಧವಾರ ಆದೇಶ ಹೊರಡಿಸಿದೆ.


ಕೇಂದ್ರ ಜಲಶಕ್ತಿ ಸಚಿವಾಲಯವು ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರಗಳ ನಡುವಿನ ಕೃಷ್ಣಾ ನದಿ ನೀರಿನ ವಿವಾದ ಪರಿಹರಿಸಲು ರಚಿಸಲಾದ ಕೃಷ್ಣಾ ಜಲವಿವಾದ ನ್ಯಾಯಮಂಡಳಿಯ ಅಧಿಕಾರಾವಧಿಯನ್ನು ವಿಸ್ತರಿಸಿದೆ.

ನ್ಯಾಯಮಂಡಳಿಯು ತನ್ನ ಕಾರ್ಯವನ್ನು ಪೂರ್ಣಗೊಳಿಸಲು ಹೆಚ್ಚಿನ ಸಮಯ ಕೋರಿದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಂತರ-ರಾಜ್ಯ ನದಿ ನೀರು ವಿವಾದ ಕಾಯ್ದೆ 1956ರ ಅಡಿಯಲ್ಲಿ ಈ ವಿಸ್ತರಣೆ ಮಾಡಲಾಗಿದೆ.

ಕೃಷ್ಣಾ ನದಿಗೆ ಸಂಬಂಧಿಸಿ ದೀರ್ಘಕಾಲದಿಂದ ಇರುವ ಅಂತರ-ರಾಜ್ಯ ಜಲ ವಿವಾದದ ಅಂತಿಮ ವರದಿ ಸಲ್ಲಿಸಲು ಕೃಷ್ಣಾ ಜಲವಿವಾದ ನ್ಯಾಯಮಂಡಳಿಗೆ ಮತ್ತೆ ಒಂದು ವರ್ಷ ಕಾಲಾವಕಾಶವನ್ನು ಕೇಂದ್ರ ಜಲಶಕ್ತಿ ಸಚಿವಾಲಯ ನೀಡಿದೆ. ನ್ಯಾಯಮಂಡಳಿಯ ಅವಧಿಯನ್ನು 2026ರ ಜುಲೈ 31ರ ವರೆಗೆ ವಿಸ್ತರಿಸಿ ಬುಧವಾರ ಆದೇಶ ಹೊರಡಿಸಿದೆ.

ಕರ್ನಾಟಕಕ್ಕೆ ಆಘಾತ

ಕೃಷ್ಣಾ ಜಲ ವಿವಾದ ನ್ಯಾಯಾಧೀಕರಣ-2 (ಬ್ರಿಜೇಶ್ ಕಮಾರ್ ಆಯೋಗ)ರ ಅವಧಿಯನ್ನು ಮತ್ತೊಂದು ವರ್ಷ ವಿಸ್ತರಿಸಿರುವ ಕೇಂದ್ರ ಸರ್ಕಾರದ ಕ್ರಮವು, ಇತ್ಯರ್ಥವಾಗಿರುವ ಜಲ ವಿವಾದದಲ್ಲಿ ನ್ಯಾಯ ಅಪೇಕ್ಷಿಸುತ್ತಿದ್ದ ಕರ್ನಾಟಕಕ್ಕೆ ಆಘಾತ ತಂದಿದೆ.

ಕೃಷ್ಣ ಜಲ ವಿವಾದ ನ್ಯಾಯಾಧೀಕರಣ-2ರ ಅಂತಿಮ ತೀರ್ಪನ್ನು ಕೇಂದ್ರ ಸರ್ಕಾರದ ಗೆಜೆಟ್‌ನಲ್ಲಿ ಪ್ರಕಟಿಸಬೇಕೆಂದು ಕರ್ನಾಟಕ ಕಳೆದ ಹತ್ತು ವರ್ಷಗಳಿಂದ ಒತ್ತಾಯ ಮಾಡುತ್ತಿದೆ.

ಕೇಂದ್ರ ಸರ್ಕಾಟ ಗೆಜೆಟ್‌ನಲ್ಲಿ ಪ್ರಕಟಣೆ ಮಾಡದೇ ಇರುವುದರಿಂದ 200 ಟಿಎಂಸಿ ಕರ್ನಾಟಕದ ಪಾಲಿನ ನೀರು ರಾಜ್ಯಕ್ಕೆ ದಕ್ಕದೇ ಬಹುದೊಡ್ಡ ಅನ್ಯಾಯಕ್ಕೆ ಕಾರಣವಾಗಿದೆ.

ಕೇಂದ್ರದ ನಿರ್ಣಯಕ್ಕೆ ಪ್ರತಿಕ್ರಿಯೆ ನೀಡಿದ ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ.ಪಾಟೀಲ್, ಕೇಂದ್ರ ಸರ್ಕಾರ ಕೂಡಲೇ ಈ ಅವಧಿ ವಿಸ್ತರಣೆಯನ್ನು ಮರಳಿ ಪಡೆಯಬೇಕು. ಇಲ್ಲವೇ ಗೆಜೆಟ್‌ನಲ್ಲಿ ಪ್ರಕಟಿಸಲು ನ್ಯಾಯ ಯುತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರ ಪ್ರದೇಶದ ನಡುವಣ ನೀರು ಹಂಚಿಕೆ ವಿವಾದಗಳ ಮಧ್ಯಸ್ಥಿಕೆ ವಹಿಸಲು 2004ರಲ್ಲಿ ನ್ಯಾಯಮಂಡಳಿ ರಚಿಸಲಾಗಿತ್ತು. ನ್ಯಾಯಮಂಡಳಿ 2010ರಲ್ಲಿ ಆರಂಭಿಕ ವರದಿ ಸಲ್ಲಿಸಿತ್ತು. ಮೂರು ರಾಜ್ಯಗಳಿಗೆ ನೀರು ಹಂಚಿಕೆ ಮಾಡಿತ್ತು. ಆದರೆ, ವರದಿಯ ಕೆಲವೊಂದು ಅಂಶಗಳಿಗೆ ರಾಜ್ಯಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಬಳಿಕ ನ್ಯಾಯಮಂಡಳಿಯ ಅವಧಿಯನ್ನು ವಿಸ್ತರಿಸಲಾಗಿತ್ತು.

2014ರಲ್ಲಿ ಆಂಧ್ರ ಪ್ರದೇಶದ ವಿಭಜನೆಯು ಜಲವಿವಾದವನ್ನು ಮತ್ತಷ್ಟು ಜಟಿಲಗೊಳಿಸಿತು. ಹೊಸದಾಗಿ ರೂಪುಗೊಂಡ ತೆಲಂಗಾಣವು ಕೃಷ್ಣಾ ಜಲ ವಿವಾದದಲ್ಲಿ ಪಾಲುದಾರನಾಯಿತು. ಅಂದಿನಿಂದ, ನ್ಯಾಯಮಂಡಳಿಯ ಗಡುವನ್ನು ಅಧಿಸೂಚನೆಗಳ ಮೂಲಕ ಹಲವು ಬಾರಿ ವಿಸ್ತರಿಸಲಾಗಿದೆ.

Read More
Next Story