Namma Nandini| ರಾಜಸ್ಥಾನ. ಮಧ್ಯ ಪ್ರದೇಶದಲ್ಲಿ ́ನಮ್ಮ ನಂದಿನಿʼಯ ಅದ್ಧೂರಿ ಪ್ರವೇಶಕ್ಕೆ ಕೆಎಂಎಫ್ ಸಿದ್ಧತೆ

ರಾಜಸ್ಥಾನದಲ್ಲಿ ಹಾಲು ಸಂಗ್ರಹ ಪ್ರಾರಂಭಿಸಲು ಮತ್ತು ಕೊ-ಪ್ಯಾಕೇಜಿಂಗ್ ಸೆಂಟರ್​ಗಳನ್ನು ಸ್ಥಾಪಿಸಲು ಕೆಎಂಎಫ್ ಯೋಜಿಸಿದೆ. ಉತ್ತರ ಭಾರತದ ಮಾರುಕಟ್ಟೆಯಲ್ಲಿ ಪ್ರಭಾವ ಹೆಚ್ಚಿಸಲು ಮಧ್ಯಪ್ರದೇಶವನ್ನು ಪ್ರಮುಖ ಭಾಗವಾಗಿ ಪರಿಗಣಿಸಲು ಚಿಂತನೆ ನಡೆಸಿದೆ.;

Update: 2025-04-22 12:09 GMT

ನಂದಿನಿ ಹಾಲು 

ರಾಜ್ಯದ ಜನಪ್ರಿಯ ಹಾಲಿನ ಬ್ರಾಂಡ್‌ ನಂದಿನಿ, ಈಗ ದೇಶದ ಎರಡನೇ ಅತಿದೊಡ್ಡ ಹಾಲು ಉತ್ಪಾದಿಸುವ ರಾಜ್ಯ ರಾಜಸ್ಥಾನಕ್ಕೆ ಪ್ರವೇಶಿಸಲು ಸಜ್ಜಾಗಿದೆ. ರಾಜಸ್ಥಾನದಲ್ಲಿ  ಪ್ಯಾಕೇಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಕೆಎಂಎಫ್ ನಿರ್ಧರಿಸಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಬಿ ಶಿವಸ್ವಾಮಿ ತಿಳಿಸಿದ್ದಾರೆ.

ರಾಜಸ್ಥಾನದಲ್ಲಿ ಹಾಲು ಸಂಗ್ರಹ ಪ್ರಾರಂಭಿಸಲು ಮತ್ತು ಕೊ-ಪ್ಯಾಕೇಜಿಂಗ್ ಸೆಂಟರ್​ಗಳನ್ನು ಸ್ಥಾಪಿಸಲು ಕೆಎಂಎಫ್ ಯೋಜಿಸಿದೆ. ಪೂರೈಕೆ ಸರಪಳಿಯನ್ನು ಬಲಪಡಿಸಲು ಮತ್ತು ಉತ್ತರ ಭಾರತದ ಮಾರುಕಟ್ಟೆಯಲ್ಲಿ ಪ್ರಭಾವ ಹೆಚ್ಚಿಸಲು ರಾಜಸ್ಥಾನ ಮಾತ್ರವಲ್ಲದೆ, ಮಧ್ಯಪ್ರದೇಶವನ್ನು ಪ್ರಮುಖ ಭಾಗವಾಗಿ ಪರಿಗಣಿಸಲು ಚಿಂತನೆ ನಡೆಸಿದೆ ಎಂದು ಹೇಳಿದ್ದಾರೆ.

ಈ ಕ್ರಮವು ಕೋಲ್ಡ್ ಚೈನ್‌ನ ಮೇಲಿನ ಹೊರೆ ಕಡಿಮೆ ಮಾಡುವ ನಿರೀಕ್ಷೆಯಿದೆ. ಇದರಿಂದ ಪೌಷ್ಟಿಕಾಂಶದ ಮೌಲ್ಯ ಸಂರಕ್ಷಿಸಿ ಹಾಳಾಗುವ ಅಪಾಯ ಕಡಿಮೆಯಾಗಲಿದೆ. ಪ್ರೋಟೀನ್-ಭರಿತ ಆಹಾರಗಳು ಜನಪ್ರಿಯತೆ ಗಳಿಸುತ್ತಿರುವುದರಿಂದ, ಕೆಎಂಎಫ್ ಮೇ ತಿಂಗಳಲ್ಲಿ ಹೊಸ ಶ್ರೇಣಿಯ ಹೈ-ಪ್ರೋಟೀನ್ ಡೈರಿ ಉತ್ಪನ್ನಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ.

ಮುಂಬರುವ ಸಾಲಿನಲ್ಲಿ ಟೆಟ್ರಾ ಪ್ಯಾಕ್‌ಗಳಲ್ಲಿ ಪ್ರೋಟೀನ್-ಭರಿತ ಫ್ಲೇವರ್ಡ್ ಹಾಲು, ಜೊತೆಗೆ ಸಾದಾ ಮತ್ತು ಫ್ಲೇವರ್ಡ್ ಗ್ರೀಕ್ ಮೊಸರಿನಂತಹ ಹುದುಗಿಸಿದ ಉತ್ಪನ್ನ ಇರುತ್ತದೆ ಎಂದು ಶಿವಸ್ವಾಮಿ ಮಾಹಿತಿ ನೀಡಿದ್ದಾರೆ.

ದೆಹಲಿಯಲ್ಲೂ ವಿಸ್ತರಣೆ

ನಂದಿನಿ ಹಾಲು ಹಾಗೂ ಅದರ ಉತ್ಪನ್ನಗಳ ಮಾರುಕಟ್ಟೆ ಈಗ ರಾಜಧಾನಿ ದೆಹಲಿಗೂ ವಿಸ್ತರಿಸಿದೆ.  ಆಂಧ್ರಪ್ರದೇಶ ಸರ್ಕಾರ, ತಿರುಪತಿ ಲಡ್ಡು ತಯಾರಿಕೆಗೆ ನಂದಿನಿ ತುಪ್ಪ ಖರೀದಿಸಿದ ನಂತರ ರಾಜ್ಯದ ಡೈರಿ ಉತ್ಪನ್ನಗಳಿಗೆ ಭಾರೀ ಬೇಡಿಕೆ ಬಂದಿದೆ. ಈಗಾಗಲೇ ನಂದಿನಿ ಬ್ರ್ಯಾಂಡ್‌ನ ಹಾಲು, ಮೊಸರು, ತುಪ್ಪ ಹಾಗೂ ಇನ್ನಿತರೆ ಉತ್ಪನ್ನಗಳು ಕರ್ನಾಟಕ ಅಲ್ಲದೇ, ಮುಂಬೈ, ನಾಗ್ಪುರ, ಪುಣೆ ಮತ್ತು ಸೊಲ್ಲಾಪುರ, ಗೋವಾ, ಹೈದರಾಬಾದ್, ಪಟನಾ, ಚೆನ್ನೈ ಮತ್ತು ಕೇರಳದಲ್ಲಿ ಮಾರಾಟವಾಗುತ್ತಿವೆ.

ಅಮೂಲ್‌ಗೆ ಪೈಪೋಟಿ

ದೆಹಲಿಯಲ್ಲಿ ಗುಜರಾತ್‌ನ ಅಮೂಲ್‌ ಬ್ರ್ಯಾಂಡ್‌ ಉತ್ಪನ್ನಗಳು ಮಾರುಕಟ್ಟೆ ಆವರಿಸಿವೆ. ಈಗ ಅಮೂಲ್‌ ಉತ್ಪನ್ನಗಳಿಗೆ ನಂದಿನಿ ಬ್ರ್ಯಾಂಡ್‌ ಪೈಫೋಟಿ ನೀಡಲಿದೆ. ದೆಹಲಿಯಲ್ಲಿ ಮದರ್ ಡೈರಿ, ಅಮೂಲ್‌, ಮಧುಸೂದನ್ ಹಾಗೂ ನಮಸ್ತೆ ಇಂಡಿಯಾ ಸೇರಿದಂತೆ ಹಲವು ಬ್ರ್ಯಾಂಡ್‌ಗಳ ಹಾಲು, ಮೊಸರು ಮಾರಾಟ ಹೆಚ್ಚಿದೆ. ಈಗ ರಾಜ್ಯದ ಅತಿ ಹೆಚ್ಚು ಹಾಲು ಉತ್ಪಾದನೆಯಾಗುವ ಮಂಡ್ಯದಿಂದ (ಮನ್ಮುಲ್‌) ಕೆಎಂಎಫ್ ಹಾಲಿನ ಉತ್ಪನ್ನಗಳನ್ನು ದೆಹಲಿಗೆ ಸರಬರಾಜು ಮಾಡಲು ಟೆಂಡರ್‌ ಪಡೆಯಲಾಗಿದೆ.

ನಿತ್ಯ 84ಲಕ್ಷ ಲೀಟರ್‌ ಹಾಲು ಉತ್ಪಾದನೆ

ಕರ್ನಾಟಕ ಹಾಲು ಒಕ್ಕೂಟ ನಿತ್ಯ 84 ಲಕ್ಷ ಲೀಟರ್‌ ಹಾಲು ಉತ್ಪಾದಿಸುತ್ತಿದೆ. ರಾಜ್ಯದ 22ಸಾವಿರ ಗ್ರಾಮಗಳಿಂದ 15 ಒಕ್ಕೂಟಗಳು ಹಾಲು ಸಂಗ್ರಹಿಸುತ್ತಿವೆ. 24 ಲಕ್ಷ ಹಾಲು ಉತ್ಪಾದಕರು ಮತ್ತು 14 ಸಾವಿರ ಸಹಕಾರಿ ಸಂಘಗಳ ವ್ಯಾಪಕ ಜಾಲ ಹೊಂದಿದೆ. ಪ್ರತಿದಿನ 84 ಲಕ್ಷ ಲೀಟರ್‌ ಹಾಲನ್ನು ಉತ್ಪಾದಿಸಿ ಸಂಸ್ಕರಣೆ ಮಾಡಲಾಗುತ್ತದೆ. ಇದರಿಂದ 65ಕ್ಕೂ ಹೆಚ್ಚು ಹಾಲಿನ ಉಪ ಉತ್ಪನ್ನಗಳನ್ನು ಸಿದ್ಧಪಡಿಸಲಾಗುತ್ತಿದೆ. ಕೆಎಂಎಫ್ ರೈತರಿಗೆ ಪ್ರತಿದಿನ 17 ಕೋಟಿ ರೂ. ಹಣ ನೀಡುತ್ತದೆ. 2021-22 ರಲ್ಲಿ ಸುಮಾರು 19,800 ಕೋಟಿ ರೂ. ವಹಿವಾಟು ದಾಖಲಿಸಿದೆ.

Tags:    

Similar News