Namma Nandini | ಪಾಟ್ನಾದ ಮಹಾವೀರ ಮಂದಿರಕ್ಕೂ ನಂದಿನಿ ತುಪ್ಪ
ಬಿಹಾರದ ಪಾಟ್ನಾದಲ್ಲಿರುವ ಮಹಾವೀರ್ ಮಂದಿರಕ್ಕೆ ಕೆಎಂಎಫ್ ಪ್ರತಿ ತಿಂಗಳು 30 ಟನ್ ನಂದಿನಿ ತುಪ್ಪ ಸರಬರಾಜು ಮಾಡುತ್ತಿದೆ;
ಕೆಎಂಎಫ್ ನಂದಿನಿ ಬ್ರ್ಯಾಂಡ್ ತುಪ್ಪ ಕರ್ನಾಟಕ, ಆಂಧ್ರ ಪ್ರದೇಶ ಮಾತ್ರವಲ್ಲದೇ ಬಿಹಾರದಲ್ಲೂ ತನ್ನ ಗುಣಮಟ್ಟದಿಂದಾಗಿ ಮಾರುಕಟ್ಟೆ ವಿಸ್ತರಿಸಿಕೊಂಡಿದೆ.
ಬಿಹಾರದ ಪಾಟ್ನಾದಲ್ಲಿರುವ ಮಹಾವೀರ ಮಂದಿರಕ್ಕೆ ಕೆಎಂಎಫ್ ಪ್ರತಿ ತಿಂಗಳು 30 ಟನ್ ನಂದಿನಿ ತುಪ್ಪ ಸರಬರಾಜು ಮಾಡುತ್ತಿದೆ. ಮಹಾವೀರ ಮಂದಿರದಲ್ಲಿ ಲಡ್ಡು ತಯಾರಿಕೆಗೆ ತುಪ್ಪ ಪೂರೈಸುವಂತೆ ದೇವಸ್ಥಾನದ ಟ್ರಸ್ಟ್ ಕೇಳಿಕೊಂಡಿತ್ತು. ಅಂತೆಯೇ ಪ್ರತಿ ತಿಂಗಳು 30 ಟನ್ ನಂದಿನಿ ತುಪ್ಪ ಪೂರೈಸಲಾಗುತ್ತಿದೆ ಎಂದು ಕೆಎಂಎಫ್ ಮಾರುಕಟ್ಟೆ ವಿಭಾಗದ ನಿರ್ದೇಶಕ ಎಂ ರಘುನಂದನ್ ತಿಳಿಸಿದರು.
ʼದ ಫೆಡರಲ್ ಕರ್ನಾಟಕʼದೊಂದಿಗೆ ಈ ಕುರಿತ ಮಾಹಿತಿ ಹಂಚಿಕೊಂಡ ಅವರು, ಈಗಾಗಲೇ ಕೆಎಂಎಫ್ ಸಂಸ್ಥೆ ತಿರುಪತಿ ತಿರುಮಲ ದೇವಸ್ಥಾನಂ (ಟಿಟಿಡಿ)ಗೆ 350 ಮೆಟ್ರಿಕ್ ಟನ್ ನಂದಿನಿ ತುಪ್ಪ ಪೂರೈಕೆ ಆರಂಭಿಸಿದೆ. ಇದಕ್ಕಾಗಿ ನಮಗೆ ಟಿಟಿಡಿ ಆಡಳಿತ ಮಂಡಳಿಯು ಮೂರು ತಿಂಗಳ ಕಾಲಾವಕಾಶ ನೀಡಿದೆ. ಟಿಟಿಡಿ ಸಲ್ಲಿಸಿರುವ ಬೇಡಿಕೆಯ ತುಪ್ಪವನ್ನು ಒಂದೂವರೆ ತಿಂಗಳಲ್ಲೇ ಪೂರೈಸಲಾಗುವುದು. ಆ ನಂತರದಲ್ಲಿ ಟಿಟಿಡಿಯವರು ಹೆಚ್ಚುವರಿ ಅಥವಾ ನಿಯಮಿತವಾಗಿ ತುಪ್ಪ ಪೂರೈಸುವಂತೆ ಕೇಳಿದರೆ ಸರಬರಾಜು ಮಾಡಲಾಗುವುದು ಎಂದು ಹೇಳಿದರು.
ಮಹಾವೀರ ಮಂದಿರದ ವಿಶೇಷ ಏನು?
17-18ನೇ ಶತಮಾನದ(ಕ್ರಿ.ಶ 1730) ಮಹಾವೀರ ಮಂದಿರವು ಹಿಂದೂಗಳ ಪವಿತ್ರ ಯಾತ್ರಾಸ್ಥಳ. ಇಲ್ಲಿನ ಆರಾಧ್ಯದೈವ ಹನುಮಾನ್ ದೇವರು. ಪ್ರತಿವರ್ಷ ಮಹಾವೀರ ಮಂದಿರಕ್ಕೆ ಲಕ್ಷಾಂತರ ಮಂದಿ ಯಾತ್ರಾರ್ಥಿಗಳು ಭೇಟಿ ನೀಡುತ್ತಾರೆ. ದೇವಸ್ಥಾನದ ನಿರ್ವಹಣೆಯನ್ನು ಮಹಾವೀರ ಮಂದಿರ ದೇವಸ್ಥಾನ ಟ್ರಸ್ಟ್ ನೋಡಿಕೊಳ್ಳುತ್ತಿದೆ.
ಕ್ರಿ.ಶ 1730ರಲ್ಲಿ ಸ್ವಾಮಿ ಬಾಲನಂದರು ಮಹಾವೀರ ಮಂದಿರ ನಿರ್ಮಿಸಿದರು. 1947ರಲ್ಲಿ ದೇವಾಲಯ ಹೆಚ್ಚು ಪ್ರವರ್ಧಮಾನಕ್ಕೆ ಬಂದಿತು. ಭಾರತ-ಪಾಕಿಸ್ತಾನ ಇಬ್ಭಾಗವಾದ ಸಂದರ್ಭದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ನಿರಾಶ್ರಿತರು ಪಾಟ್ನಾಗೆ ವಲಸೆ ಬಂದರು. 1987 ರಲ್ಲಿ ಹಳೆಯ ಮಂದಿರವನ್ನು ಕೆಡವಿ ನವೀಕರಿಸಲಾಯಿತು. ಹನುಮಂತನ ಅವತಾರ ಎನಿಸಿರುವ ಸಂಕಟ ಮೋಚನ ವಿಗ್ರಹವನ್ನು ಇಲ್ಲಿ ಕಾಣಬಹುದಾಗಿದೆ.
ದಲಿತ ಅರ್ಚಕರಿಂದ ಪೂಜೆ
ಮಹಾವೀರ ಮಂದಿರದ ಖ್ಯಾತ ಅರ್ಚಕರಾಗಿದ್ದ ರಾಮಚಂದ್ರ ಪರಮಹಂಸ, ಬಾಬಾ ಗೋರಖನಾಥ ಧಾಮದ ಮಹಾಂತ ಅವೈದ್ಯನಾಥ ಹಾಗೂ ಮಹಾಂತ ಅವಧ್ ಕಿಶೋರ್ ದಾಸ್ ಅವರು 1993ರಲ್ಲಿ ದಲಿತ ಅರ್ಚಕರನ್ನು ನೇಮಿಸಿ ಸಾಮರಸ್ಯಕ್ಕೆ ಮುನ್ನುಡಿ ಬರೆದಿದ್ದರು. ಸೂರ್ಯವಂಶಿ ದಾಸ್ ಎಂಬ ದಲಿತ ಅರ್ಚಕರನ್ನು ದೇವಾಲಯದ ಪೂಜಾ ಕೈಂಕರ್ಯ ನೋಡಿಕೊಳ್ಳಲು ನೇಮಿಸಲಾಗಿತ್ತು.
ಇಂತಹ ಐತಿಹಾಸಿಕ ವಿಶೇಷ ಹೊಂದಿರುವ ಮಂದಿರಕ್ಕೆ ತುಪ್ಪ ಸರಬರಾಜು ಮಾಡುವ ಅವಕಾಶ ಇದೀಗ ಕನ್ನಡಿಗರ ಹೆಮ್ಮೆಯ ʼನಮ್ಮ ನಂದಿನಿʼಗೆ ಒದಗಿ ಬಂದಿದೆ.