KMF |ರೈತರಿಗೆ ಹಾಲಿನ ದರ ಹೆಚ್ಚಳದ ಸಿಹಿ, ಗ್ರಾಹಕರಿಗೆ ಬೆಲೆ ಏರಿಕೆ ಕಹಿ, ಕೆಎಂಎಫ್‌ಗೆ ಮೊಸರಿನ ಲಾಭ

ರಾಜ್ಯಾದ್ಯಂತ ಒಟ್ಟು 16 ಹಾಲು ಒಕ್ಕೂಟಗಳು ಕಾರ್ಯಾಚರಿಸುತ್ತಿದ್ದು, 24 ಸಾವಿರಕ್ಕೂ ಹೆಚ್ಚು ಹಳ್ಳಿಗಳಲ್ಲಿ 27ಲಕ್ಷ ಹಾಲು ಉತ್ಪಾದಕರನ್ನು ಒಳಗೊಂಡಿದೆ. ಪ್ರತಿ ನಿತ್ಯ 86 ಲಕ್ಷ ಲೀಟರ್ ಹಾಲು ಸಂಗ್ರಹಿಸುತ್ತಿದೆ. 2024 ಜೂನ್ 28 ರಂದು ಒಂದೇ ದಿನ 1 ಕೋಟಿ ಲೀಟರ್ ಹಾಲು ಸಂಗ್ರಹಿಸಿದ ಹೆಗ್ಗಳಿಕೆ ಕರ್ನಾಟಕ ಹಾಲು ಮಹಾಮಂಡಳದ್ದಾಗಿದೆ.;

Update: 2025-04-08 03:00 GMT

ರೈತರಿಗೆ ಹಾಲಿನ ದರದ ಏರಿಕೆಯ ಲಾಭ ವರ್ಗಾಯಿಸುವ ನೆಪದಲ್ಲಿ ಕೆಎಂಎಫ್‌ ಮೊಸರಿನ ಲಾಭ ಉಣ್ಣುತ್ತಿದೆ. ಆದರೆ, ಗ್ರಾಹಕರು ಮಾತ್ರ ಹಾಲು ಹಾಗೂ ಮೊಸರಿನ ದರ ಏರಿಕೆಯಿಂದ ತ್ರಾಸ ಅನುಭವಿಸುವಂತಾಗಿದೆ. 

ಲೀಟರ್‌ ಹಾಲಿನ ದರವನ್ನು 4 ರೂ.ಗೆ ಹೆಚ್ಚಿಸಿದ ಕಾರಣ ಗ್ರಾಹಕರು ಆತಂಕಗೊಂಡಿದ್ದರು. ಆದರೆ, 2ಜೂನ್‌ ತಿಂಗಳಲ್ಲಿ ಏರಿಕೆ ಮಾಡಿದ 50ಎಂಎಲ್‌ ಹೆಚ್ಚುವರಿ ಹಾಲು ಹಾಗೂ 2ರೂ. ಹಿಂಪಡೆದ ಬಳಿಕ ಒಟ್ಟಾರೆ ಲೀಟರ್‌ ಹಾಲಿನ ಮೇಲೆ 2 ರೂ. ಏರಿಕೆಯಾದಂತಾಗಿದೆ.

ಲೀಟರ್‌ಗೆ 50 ರೂ.ಗಳಂತೆ ಪ್ರತಿ ನಿತ್ಯ 52 ಲಕ್ಷ ಲೀಟರ್‌ ಹಾಲು ಮಾರಾಟದಿಂದ ಕೆಎಂಎಫ್‌ಗೆ ನಿತ್ಯ ಅಂದಾಜು 26 ಕೋಟಿ ರೂ. ಆದಾಯ ಬರುತ್ತಿದೆ. ಅಂದಾಜು ನಿತ್ಯ 20 ಲಕ್ಷ ಲೀಟರ್‌ ಮೊಸರು ಮಾರಾಟದಿಂದ 10.20ಕೋಟಿ ರೂ. ಆದಾಯ ಬರುತ್ತಿದೆ. ಉಳಿದ ಉತ್ಪನ್ನಗಳ ಮಾರಾಟದ ಆದಾಯ ಹೊರತುಪಡಿಸಿ ಹಾಲು ಹಾಗೂ ಮೊಸರಿನಿಂದಲೇ ಬರುವ ಒಟ್ಟು ಅಂದಾಜು 36.20 ಕೋಟಿ ರೂ. ಗಳ ಪೈಕಿ 30 ಕೋಟಿ ರೂ.ಗಳನ್ನು ರೈತರಿಗೆ ನೀಡುತ್ತಿದೆ. ಅಂದಹಾಗೆ ರೈತರಿಂದ ಖರೀದಿಸುವ ಲೀಟರ್‌ ಹಾಲಿಗೆ 37 ರೂ.ಪಾವತಿಸುತ್ತಿದೆ. ಉಳಿದ ಆದಾಯವನ್ನು ಕಾರ್ಯ ನಿರ್ವಹಣೆ ವೆಚ್ಚವಾಗಿ ಬಳಸುತ್ತಿದೆ.  ಹಾಲಿನ ಪೌಡರ್‌, ತುಪ್ಪ ಹಾಗೂ ಹಾಲಿನ ಉತ್ಪನ್ನಗಳ ಮಾರಾಟದಿಂದ ಬರುವ ಆದಾಯವನ್ನು ಕೆಎಂಎಫ್‌ ಬಳಸುತ್ತಿದೆ.

ಹೈನುಗಾರರ ಪಾಲಿನ ಕಲ್ಪವೃಕ್ಷ ಕೆಎಂಎಫ್‌

ರಾಜ್ಯದ ಉದ್ದಗಲಕ್ಕೂ ಹೈನುಗಾರಿಕೆ ಮೂಲಕ ಮಾರುಕಟ್ಟೆ ಜಾಲ ವಿಸ್ತರಿಸಿಕೊಂಡಿರುವ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಹೈನುಗಾರ ರೈತರ ಪಾಲಿಗೆ ಕಲ್ಪವೃಕ್ಷದಂತಿದೆ. ರೈತರಿಂದ ಲಕ್ಷಾಂತರ ಲೀಟರ್‌ ಹಾಲು ಖರೀದಿಸಿ, ಅದನ್ನು ಸಂಸ್ಕರಿಸಿ ಗ್ರಾಹಕರಿಗೆ ತಲುಪಿಸುತ್ತಿರುವ ಕೆಎಂಎಫ್‌, ರೈತರಿಂದ ನಿತ್ಯ ೩೦ಕೋಟಿ ಮೌಲ್ಯದ ಹಾಲು ಖರೀದಿಸುತ್ತಿದೆ. 

ರಾಜ್ಯಾದ್ಯಂತ ಒಟ್ಟು 16 ಹಾಲು ಒಕ್ಕೂಟಗಳು ಕಾರ್ಯಾಚರಿಸುತ್ತಿದ್ದು, 24 ಸಾವಿರಕ್ಕೂ ಹೆಚ್ಚು ಹಳ್ಳಿಗಳಲ್ಲಿ 27ಲಕ್ಷ ಹಾಲು ಉತ್ಪಾದಕರನ್ನು ಒಳಗೊಂಡಿದೆ. ಪ್ರತಿ ನಿತ್ಯ 86 ಲಕ್ಷ ಲೀಟರ್ ಹಾಲು ಸಂಗ್ರಹಿಸುತ್ತಿದೆ. 2024 ಜೂನ್ 28 ರಂದು ಒಂದೇ ದಿನ 1 ಕೋಟಿ ಲೀಟರ್ ಹಾಲು ಸಂಗ್ರಹಿಸಿದ ಹೆಗ್ಗಳಿಕೆ ಕರ್ನಾಟಕ ಹಾಲು ಮಹಾಮಂಡಳದ್ದಾಗಿದೆ. 

ರಾಜ್ಯಾದ್ಯಂತ 15, 700ಕ್ಕೂ ಹೆಚ್ಚು ಸಹಕಾರ ಸಂಘಗಳು ರೈತರಿಂದ ನಿತ್ಯ ಬೆಳಿಗ್ಗೆ ಹಾಗೂ ಸಂಜೆ ಹಾಲು ಸಂಗ್ರಹಿಸುತ್ತಿವೆ. ಕೆಎಂಎಫ್‌ ತನ್ನ ನಂದಿನಿ ಬ್ರ್ಯಾಂಡ್‌ ಅಡಿಯಲ್ಲಿ ಹಾಲು ಹಾಗೂ ಅದರ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸುತ್ತಿದ್ದು, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಲಕ್ಷಾಂತರ ಸಂಖ್ಯೆಯ ಉದ್ಯೋಗ ಸೃಷ್ಟಿಸಿದೆ. ಕೆಎಂಎಫ್ ಒಟ್ಟು 148 ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆ ಪೂರೈಸುತ್ತಿದೆ.

52ಲಕ್ಷ ಲೀಟರ್‌ ಹಾಲು ಮಾರಾಟ

ಹೈನುಗಾರರಿಂದ ನಿತ್ಯ ಸಂಗ್ರಹಿಸುವ 86ಲಕ್ಷ ಲೀಟರ್‌ ಹಾಲಿನ ಪೈಕಿ ಪ್ರಸಕ್ತ ವರ್ಷದ ಮಾರ್ಚ್‌ ತಿಂಗಳಲ್ಲಿ 52ಲಕ್ಷ ಲೀಟರ್‌ ಹಾಲನ್ನು ಪಾಕೆಟ್‌ಗಳ ಮೂಲಕ ಕೆಎಂಎಫ್‌ ಮಾರಾಟ ಮಾಡಿದೆ. ಸದ್ಯ ರೈತರಿಂದ 37 ರೂ.ಗೆ ಲೀಟರ್ ಹಾಲು ಖರೀದಿಸಿ, ಅದನ್ನು ಸಂಸ್ಕರಣೆ, ಪಾಕೆಟ್ ಮಾಡಿ ಗರಿಷ್ಠ 56 ರೂಗಳಿಗೆ ಮಾರಾಟ ಮಾಡುತ್ತಿದೆ. ಫ್ಯಾಟ್‌ ಹಾಗೂ ಎಸ್‌ಎನ್‌ಎಫ್‌ ಆಧರಿಸಿ ಹಾಲಿನ ದರ ನಿಗದಿ ಮಾಡಲಾಗುತ್ತದೆ. ಇತ್ತೀಚೆಗೆ ನವದೆಹಲಿ, ಹರಿಯಾಣದಲ್ಲೂ ನಂದಿನಿ ಹಾಲಿನ ಮಾರಾಟ ವಿಸ್ತರಣೆ ಮಾಡಲಾಗಿದೆ.

ಹಾಲಿನ ದರ ಏರಿಕೆಯ ಲಾಭವನ್ನು ಸಂಪೂರ್ಣ ರೈತರಿಗೆ ವರ್ಗಾಯಿಸುತ್ತಿದೆ. ನಿತ್ಯ ಹೈನುಗಾರರಿಗೆ ೩೦ ಕೋಟಿ ರೂ. ಪಾವತಿಸಲಾಗುತ್ತಿದೆ, ಇದರಿಂದ ಹೈನುಗಾರಿಕೆಗೆ ಉತ್ತೇಜನ ನೀಡುವಲ್ಲಿ ಕೆಎಂಎಫ್‌ ಪೂರಕವಾಗಿ ಕೆಲಸ ಮಾಡುತ್ತಿದೆ ಎಂದು ಕೆಎಂಎಫ್‌ ಪಶು ಸಂಗೋಪನೆ ವಿಭಾಗದ ಕಾರ್ಯ ನಿರ್ವಾಹಕ ಅಧಿಕಾರ ಬಸವರಾಜ ಕೊಣ್ಣೂರ ಅವರು ದ ಫೆಡರಲ್‌ ಕರ್ನಾಟಕಕ್ಕೆ ತಿಳಿಸಿದರು. 

2024ನೇ ಆರ್ಥಿಕ ವರ್ಷದಲ್ಲಿ ಕೆಎಂಎಫ್ ದಿನಕ್ಕೆ ಸರಾಸರಿ 43 ಲಕ್ಷ ಲೀಟರ್ ಹಾಲನ್ನು ಮಾರಾಟ ಮಾಡುತ್ತಿತ್ತು. ಈ ವರ್ಷ ಮಾರ್ಚ್‌ ತಿಂಗಳಲ್ಲಿ ಸರಾಸರಿ ೫೨ ಲಕ್ಷ ಲೀಟರ್‌ ಹಾಲು ಮಾರಾಟವಾಗುತ್ತಿದೆ. ಬೇಸಿಗೆಯ ಕಾರಣ ಮೊಸರಿಗೆ ಹೆಚ್ಚು ಬೇಡಿಕೆ ಕಂಡುಬರುತ್ತಿದ್ದು, ಮಾರಾಟವೂ ಹೆಚ್ಚಿದೆ.  

20 ಲಕ್ಷ ಲೀಟರ್‌ಗೂ ಹೆಚ್ಚು ಹಾಲಿನಲ್ಲಿ ಮೊಸರು, ಮಜ್ಜಿಗೆ ಹಾಗೂ ಇತರೆ ಉಪ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಿದೆ. ಉಳಿದ ಹಾಲನ್ನು ಪೌಡರ್ ತಯಾರಿಕೆಗೆ ಬಳಸುತ್ತಿದೆ. 

2024-25 ನೇ ಸಾಲಿನಲ್ಲಿ ತುಪ್ಪದ ಬೇಡಿಕೆ ಶೇ 32 ರಷ್ಟು ಹೆಚ್ಚಳವಾಗಿದೆ. ಇದರ ಹಿಂದಿನ ವರ್ಷ ಸುಮಾರು 800 ಟನ್ ತುಪ್ಪದ ಕೊರತೆ ಉಂಟಾಗಿತ್ತು. ಈ ಕೊರತೆ ನೀಗಿಸಲು ಕೆಎಂಎಫ್ ಸುಮಾರು 8 ಲಕ್ಷ ಲೀಟರ್ ಹಾಲನ್ನು ಬೆಣ್ಣೆಗೆ ಪರಿವರ್ತಿಸಿ, ತುಪ್ಪ ಉತ್ಪಾದನೆಗೆ ಬಳಸಿತ್ತು.

ಹಾಲಿನ ಸಂಸ್ಕರಣೆ ಹಾಗೂ ಕಾರ್ಯಾಚರಣೆ ವಿಧಾನಗಳು ದುಬಾರಿಯಾಗಿರುವುದರಿಂದ ಒಂದು ಲೀಟರ್ ಪಾಕೆಟ್ ಹಾಲಿನ ಮೇಲೆ ಕೆಎಂಎಫ್‌ಗೆ 1 ರಿಂದ 2 ರೂ. ನಷ್ಟವಾಗುತ್ತಿದೆ. ಆದರೆ, ತುಪ್ಪ, ಮೊಸರು ಹಾಗೂ ಇತರೆ ಉತ್ಪನ್ನಗಳ ಮಾರಾಟದಿಂದ ಅದನ್ನು ಸರಿದೂಗಿಸಲಾಗುತ್ತಿದೆ ಎಂಬುದು ಕೆಎಂಎಫ್‌ ಅಧಿಕಾರಿಗಳ ಮಾತು. 

ನಷ್ಟದ ಸುಳಿಯಲ್ಲಿ ಜಿಲ್ಲಾ ಒಕ್ಕೂಟಗಳು

ಹಾಲಿನ ಉತ್ಪಾದನಾ ವೆಚ್ಚ, ವೇತನ ಹಾಗೂ ಸಾಗಣೆ ವೆಚ್ಚದ ಏರಿಕೆಯಿಂದಾಗಿ ಹಾಲು ಒಕ್ಕೂಟಗಳು ಆರ್ಥಿಕ ನಷ್ಟದತ್ತ ವಾಲುತ್ತಿವೆ. ಈಗಾಗಲೇ ಬಳ್ಳಾರಿ ಸೇರಿದಂತೆ ಕೆಲ ಜಿಲ್ಲೆಗಳ ಹಾಲು ಒಕ್ಕೂಟಗಳು ನಷ್ಟದಲ್ಲಿದ್ದು, ಸರಾಸರಿ 1.4 ಕೋಟಿ ರೂ. ನಷ್ಟ ಅನುಭವಿಸಿವೆ. ಸಂಕಷ್ಟದಲ್ಲಿರುವ ಹೈನೋದ್ಯಮವನ್ನು ಉಳಿಸಲು ಹಾಲು ಹಾಗೂ ಮೊಸರಿನ ದರ ಲೀಟರ್‌ಗೆ 4 ರೂ. ಹೆಚ್ಚಿಸುವುದು ಅನಿವಾರ್ಯವಾಗಿತ್ತು ಎನ್ನಲಾಗಿದೆ.  

ಕರ್ನಾಟಕ ಹಾಲು ಮಹಾ ಮಂಡಳ ಹಾಗೂ ಜಿಲ್ಲಾ ಹಾಲು ಒಕ್ಕೂಟಗಳು 2024-25 ರಲ್ಲಿ (ಮೇ ವರೆಗೆ) 4055 ಕೋಟಿ ವಹಿವಾಟು ನಡೆಸಿವೆ. 2023-24 ರಲ್ಲಿ 21,328 ಕೋಟಿ, 2022-23 ರಲ್ಲಿ 20,618  ಕೋಟಿ ವಹಿವಾಟು ದಾಖಲಿಸಿವೆ. 

2021 ರಲ್ಲಿ ಕೆಎಂಎಫ್ 5356 ಕೋಟಿ ರೂ ಲಾಭ ಗಳಿಸಿತ್ತು. 2022 ರಲ್ಲಿ 6600 ಕೋಟಿ ರೂ, 2023ರ ಆದಾಯ 6,136.5 ಕೋಟಿ ರೂ., 2024ನೇ ಹಣಕಾಸು ವರ್ಷದಲ್ಲಿ 5,951 ಕೋಟಿ ರೂ. ಆದಾಯ ಇತ್ತು. 

ಖಾಸಗಿ ಕಂಪನಿಗಳ ಸೆಡ್ಡು

ಕೆಲ ಖಾಸಗಿ ಕಂಪನಿಗಳು ರೈತರಿಗೆ ಕೆಎಂಎಫ್‌ಗಿಂತ ಹೆಚ್ಚಿನ ದರ ನೀಡಿ ಹಾಲು ಖರೀದಿಸುತ್ತಿರುವುದು ಹೊಡೆತಕ್ಕೆ ಪ್ರಮುಖ ಕಾರಣವಾಗಿದೆ.  ಖಾಸಗಿ ಕಂಪನಿಗಳು ಉತ್ತಮ ಸಾಗಣೆ ಜಾಲ ಹೊಂದಿವೆ. ಫ್ಯಾಟ್‌, ಎಸ್‌ಎನ್‌ಎಫ್‌ ಸರಿಯಾದ ಪ್ರಮಾಣದಲ್ಲಿ ಇಲ್ಲದಿದ್ದರೂ ಲೀಟರ್‌ಗೆ 50ರೂ.ಗಿಂತ ಹೆಚ್ಚಿನ ದರ ನೀಡುತ್ತಿದ್ದು, ಪಾಕೆಟ್‌ ಹಾಲನ್ನು 80-90 ರೂ. ಮಾರಾಟ ಮಾಡುತ್ತಿವೆ. ಇವುಗಳ ಕಾರ್ಯನಿರ್ವಹಣೆ ವೆಚ್ಚ ಶೇ 10 ರಷ್ಟಿರುತ್ತದೆ. ಆದರೆ, ಕೆಎಂಎಫ್‌ ಕಾರ್ಯ ನಿರ್ವಹಣೆ ವೆಚ್ಚ ಶೇ ೬೫ ರಷ್ಟಿದ್ದು, ಮಾರುಕಟ್ಟೆಯಲ್ಲಿ ಈ ಪ್ರಮಾಣದ ಕಾರ್ಯ ನಿರ್ವಹಣೆ ವೆಚ್ಚ ನಷ್ಟದ ಮುನ್ಸೂಚನೆಯಾಗಿದೆ ಎಂದು ತಜ್ಞರು ವ್ಯಾಖ್ಯಾನಿಸುತ್ತಾರೆ. ಮಾರುಕಟ್ಟೆಯಲ್ಲಿ ಯಾವುದೇ ಒಂದು ಕಂಪನಿಯ ಕಾರ್ಯನಿರ್ವಹಣೆ ವೆಚ್ಚ ಶೇ 20 ಕ್ಕಿಂತ ಹೆಚ್ಚಾದರೆ ಕಳವಳಕಾರಿಯಾಗಿರುತ್ತದೆ. 

ಹೈನುಗಾರರ ಕಲ್ಯಾಣ ಟ್ರಸ್ಟ್ 

ಕೆಎಂಎಫ್‌ ನಂದಿನಿ ಬಾಲಕಿಯರ ವಿದ್ಯಾರ್ಥಿ ನಿಲಯ ಸ್ಥಾಪಿಸಿದ್ದು, 290 ವಿದ್ಯಾರ್ಥಿನಿಯರಿಗೆ ವಸತಿ ಸೌಲಭ್ಯ ಕಲ್ಪಿಸಿದೆ. ಇದಕ್ಕಾಗಿ ಪ್ರತಿ ವಿದ್ಯಾರ್ಥಿಗೆ ಮಾಸಿಕ ವಸತಿ ಮತ್ತು ಆಹಾರ ಶುಲ್ಕವಾಗಿ ರೂ.3000 ವ್ಯಯಿಸುತ್ತಿದೆ. ಪ್ರತಿಭಾ ಪುರಸ್ಕಾರ ನೀಡುತ್ತಿದೆ.

ಕ್ಷೀರಭಾಗ್ಯ ಯೋಜನೆಯಡಿ ರಾಜ್ಯಾದ್ಯಂತ 55,683 ಸರ್ಕಾರಿ ಶಾಲೆಗಳು ಹಾಗೂ 64 ಸಾವಿರ ಅಂಗನವಾಡಿಗಳಿಗೆ ಹಾಲು ಪೂರೈಸುತ್ತಿದೆ. ಗ್ರಾಮೀಣಾ ಭಾಗದಲ್ಲಿ ಹೈನೋದ್ಯಮವನ್ನು ಬಲಪಡಿಸಲು ರೈತರಿಗೆ ಪ್ರೋತ್ಸಾಹಧನ ನೀಡುತ್ತಿದೆ. 2008ರಿಂದ ಆರಂಭಿಸಲಾದ ಪ್ರೋತ್ಸಾಹ ಧನ ಯೋಜನೆಯಲ್ಲಿ 2016 ರವರೆಗೆ 11 ರೂ. ಪ್ರೋತ್ಸಾಹಧನ ನೀಡಿದೆ. ೨೦೦೮ ರಿಂದ 2024-24 ರವರೆಗೆ ಒಟ್ಟು 13,515ಕೋಟಿ ಪ್ರೋತ್ಸಾಹಧನ ನೀಡಿದೆ.

Tags:    

Similar News