KEA BOT |ನೂರು ದಿನಗಳಲ್ಲಿ 5.15 ಲಕ್ಷ ಮಂದಿ ಫಟಾಫಟ್ ಉತ್ತರ; ದಾಖಲೆ ಬರೆದ ಕೆಇಎ ಚಾಟ್ಬಾಟ್
ವಿವಿಧ ನೇಮಕಾತಿ, ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕೆ ಲಿಖಿತ ಪರೀಕ್ಷೆ ಮತ್ತು ಸೀಟು ಹಂಚಿಕೆ ಪ್ರಕ್ರಿಯೆ ನಡೆಸುವ ಪ್ರಾಧಿಕಾರವು ಅಭ್ಯರ್ಥಿಗಳು ಮತ್ತು ಪೋಷಕರಿಗೆ ಅಗತ್ಯವಾದ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಒದಗಿಸುತ್ತಿದೆ.;
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆರಂಭಿಸಿರುವ ಕೆಇಎ ಬಾಟ್ (KEA BOT) ಕೇವಲ ನೂರು ದಿನಗಳಲ್ಲಿ 5.15 ಲಕ್ಷ ಪ್ರಶ್ನೆಗಳನ್ನು ಎದುರಿಸಿ, ಅಷ್ಟಕ್ಕೂ ಉತ್ತರ ಕೊಟ್ಟು ದಾಖಲೆ ಬರೆದಿದೆ.
ವಿವಿಧ ನೇಮಕಾತಿ, ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕೆ ಲಿಖಿತ ಪರೀಕ್ಷೆ ಮತ್ತು ಸೀಟು ಹಂಚಿಕೆ ಪ್ರಕ್ರಿಯೆ ನಡೆಸುವ ಪ್ರಾಧಿಕಾರವು ಅಭ್ಯರ್ಥಿಗಳು ಮತ್ತು ಪೋಷಕರಿಗೆ ಅಗತ್ಯವಾದ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಒದಗಿಸುತ್ತಿದೆ.
ತಂತ್ರಜ್ಞಾನದ ನೆರವಿನಿಂದ ವಿದ್ಯಾರ್ಥಿಗಳು, ಪೋಷಕರ ಪ್ರಶ್ನೆಗಳಿಗೆ ಯಾರ ಮಧ್ಯಸ್ಥಿಕೆ ಇಲ್ಲದೆಯೂ ಉತ್ತರ ಪಡೆಯುವ ಬಾಟ್ (BOT) ವ್ಯವಸ್ಥೆಯನ್ನು ಮಾರ್ಚ್ ತಿಂಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗಿತ್ತು.
ಬಾಟ್ ವ್ಯವಸ್ಥೆಗೆ ಮೇಲಿಂದ ಮೇಲೆ ಮಾಹಿತಿ ನೀಡಿ ಪರಿಷ್ಕರಿಸಿದ ಪರಿಣಾಮ ಈಗ ಸಮರ್ಪಕವಾಗಿ ಉತ್ತರಿಸುತ್ತಿದೆ. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ಮೇ 24ರಂದು ಕೆಇಎ ಬಾಟ್ ವ್ಯವಸ್ಥೆಯನ್ನು ಅಧಿಕೃತವಾಗಿ ಉದ್ಘಾಟಿಸಿದ್ದರು.
ಕನ್ನಡದಲ್ಲೂ ಉತ್ತರ
ಆರಂಭದಲ್ಲಿ ಇಂಗ್ಲಿಷ್ನಲ್ಲಿ ಉತ್ತರಿಸುತ್ತಿದ್ದ ಬಾಟ್ ಈಗ ಕನ್ನಡದಲ್ಲಿ ಕೇಳುವ ಪ್ರಶ್ನೆಗೂ ಉತ್ತರಿಸುತ್ತಿದೆ. ನಿತ್ಯವೂ ಅದಕ್ಕೆ ಮಾಹಿತಿ ನೀಡುವ ಕೆಲಸವನ್ನು ಕೆಇಎ ತಂಡ ಮಾಡುತ್ತಿದ್ದು, ಯಾರು ಏನೇ ಕೇಳಿದರೂ ಅದಕ್ಕೆ ಉತ್ತರಿಸುವ ಕೆಲಸ ಮಾಡುತ್ತಿದೆ. ಅಸಂಬಂಧ ಪ್ರಶ್ನೆ ಕೇಳಿದರೆ ಅದು ತನ್ನ ವ್ಯಾಪ್ತಿಯಲ್ಲಿ ಇಲ್ಲ ಎಂದೂ ಪ್ರತ್ಯುತ್ತರ ನೀಡಲಿದೆ. ಬಾಟ್ ವ್ಯವಸ್ಥೆ ಪರಿಚಯಿಸಿದ ಬಳಿಕ ನಿತ್ಯ ಪ್ರಶ್ನೆ ಕೇಳುವವರ ಸಂಖ್ಯೆ ಏರುತ್ತಲೇ ಇದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಹೇಳಿದ್ದಾರೆ.
ಜೂ.11ರಂದು ಹೆಚ್ಚು ಸ್ಪಂದನೆ
ಚಾಟ್ ಬಾಟ್ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಆರಂಭಿಸಿದ ಮೊದಲ ದಿನ ಕೇವಲ 102 ಆಸಕ್ತರು ಪ್ರಶ್ನೆ ಕೇಳಿ ಉತ್ತರ ಪಡೆದಿದ್ದರು. ನಂತರ ಇದು ಒಂದೇ ಸಮನೆ ಏರುತ್ತಲೇ ಇದೆ. ಜೂನ್ 11ರಂದು ಇದುವರೆಗಿನ ಅತಿ ಹೆಚ್ಚು ಅಂದರೆ 35,369 ಮಂದಿ ಪ್ರಶ್ನೆ ಕೇಳಿ ಮಾಹಿತಿ ಪಡೆದುಕೊಂಡಿದ್ದಾರೆ.
ಜೂನ್ 12ರಂದು 34,414, ಜೂನ್ 13ರಂದು 23,122, ಜೂನ್ 14ರಂದು 28,082 ಮಂದಿ, ಜೂನ್ 15ರಂದು 18,294 ಮತ್ತು ಜೂನ್ 16ರಂದು 16,287 ಮಂದಿ ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆದಿದ್ದಾರೆ ಎಂದು ಪ್ರಸನ್ನ ವಿವರಿಸಿದರು.
ವಿದ್ಯಾರ್ಥಿಗಳು ಹಾಗೂ ಪೋಷಕರು ಕೇಳಿರುವ ಹೆಚ್ಚು ಪ್ರಶ್ನೆಗಳಲ್ಲಿ ಕಳೆದ ವರ್ಷದ ಕಟ್ ಆಫ್ ರ್ಯಾಂಕ್ ಕುರಿತಾಗಿಯೇ ಇವೆ. ಒಟ್ಟು 5.15 ಲಕ್ಷ ಪ್ರಶ್ನೆಗಳಲ್ಲಿ2.7 ಲಕ್ಷ ಮಂದಿ ಕಟ್ ಆಫ್ ರ್ಯಾಂಕ್ ಕುರಿತು ಪ್ರಶ್ನೆ ಕೇಳಿ ಉತ್ತರ ಪಡೆದಿದ್ದಾರೆ.
ಇದಲ್ಲದೇ ಪ್ರವೇಶಾತಿ, ಅರ್ಹತೆ, ಪರೀಕ್ಷಾ ವೇಳಾಪಟ್ಟಿ, ಮುಖ್ಯವಾದ ದಿನಾಂಕಗಳು, ಪ್ರವೇಶಪತ್ರ ಇತ್ಯಾದಿಗಳ ಡೌನ್ ಲೋಡ್, ಹೊಸ ಪ್ರಕಟಣೆಗಳು, ನೇಮಕಾತಿ ಮುಂತಾದವುಗಳನ್ನು ತಿಳಿದುಕೊಳ್ಳಲು ಚಾಟ್-ಬಾಟ್ ಬಳಸಿದ್ದಾರೆ. ಕೆಲ ಸಂದರ್ಭದಲ್ಲಿ ಸರಿಯಾಗಿ ಉತ್ತರ ನೀಡದಿದ್ದಾಗ ಅದನ್ನು ಗಮನಿಸಿ, ಸರಿ ಮಾಡುವ ಕೆಲಸವೂ ನಮ್ಮಿಂದ ಆಗುತ್ತಿದೆ ಎಂದು ಕೆಇಎ ತಿಳಿಸಿದೆ.
ನೀಟ್ ರ್ಯಾಂಕಿಂಗ್ ಮಾಹಿತಿಯೂ ಲಭ್ಯ
ಸದ್ಯ ಸಿಇಟಿ, ನೀಟ್ ರ್ಯಾಂಕ್ ಪ್ರಕಟವಾಗಿದ್ದು, ಅದನ್ನು ಆಧಾರವಾಗಿ ಇಟ್ಟುಕೊಂಡು ಕಳೆದ ವರ್ಷ ಯಾವ ಕಾಲೇಜಿನಲ್ಲಿ ಸೀಟು ಸಿಕ್ಕಿತ್ತು ಎನ್ನುವುದನ್ನೂ ಬಾಟ್ ಮೂಲಕ ಸುಲಭವಾಗಿ ಪಡೆಯಬಹುದು. ಇದು ನೈಜ ಮಾಹಿತಿ ಆಗಿದ್ದು, ಅಲ್ಲಿ-ಇಲ್ಲಿ ಮಾಹಿತಿ ಪಡೆಯುವುದರ ಬದಲು, ಬಾಟ್ ಮೂಲಕವೇ ಅಧಿಕೃವಾಗಿ ಪಡೆಯಬಹುದು. ತಮಗೆ ಯಾವ ಕಾಲೇಜಿನಲ್ಲಿ ಸೀಟು ಸಿಗಬಹುದು ಎಂಬುದರ ಅಂದಾಜು ಇದರಿಂದ ಮಾಡಬಹುದು ಎಂದು ಕೆಇಎ ತಿಳಿಸಿದೆ.
ಕೆಇಎ ವಿಕಸನ ಯೂಟ್ಯೂಬ್ ಚಾನಲ್
ಅಭ್ಯರ್ಥಿಗಳಿಗೆ ಬೇಕಾದ ಮಾಹಿತಿ ಒದಗಿಸಲು ಚಾಟ್-ಬಾಟ್ ಜೊತೆಗೆ `ಕೆಇಎ ವಿಕಸನ’ (kea vikasana) ಎನ್ನುವ ಯೂಟ್ಯೂಬ್ ಚಾನಲ್ ಕೂಡ ಆರಂಭಿಸಲಾಗಿದೆ. ಇದರಲ್ಲಿ ಅಪ್ ಲೋಡ್ ಮಾಡುವ ವಿಡಿಯೊಗಳನ್ನು ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸುತ್ತಿದ್ದಾರೆ. 48 ಸಾವಿರ ಮಂದಿ ಚಂದಾದಾರರಾಗಿದ್ದಾರೆ.
ಕೆಇಎ ಎಕ್ಸ್ (ಟ್ವೀಟರ್)
ಕ್ಷಣ ಕ್ಷಣದ ಅಪ್ಡೇಟ್ ಗಾಗಿ ಕೆಇಎ ಎಕ್ಸ್ (@KEA_karnataka) ಸಾಮಾಜಿಕ ಜಾಲತಾಣವೂ ಜನಪ್ರಿಯವಾಗಿದ್ದು, 35,700 ಮಂದಿ ಚಂದಾದಾರರಾಗಿದ್ದಾರೆ. ಒಟ್ಟಿನಲ್ಲಿ ತಂತ್ರಜ್ಞಾನದ ನೆರವಿನ ಮೂಲಕ ಪೋಷಕರು/ಅಭ್ಯರ್ಥಿಗಳನ್ನು ಕ್ಷಣಾರ್ಧದಲ್ಲಿ ತಲುಪುವ ಕೆಲಸವನ್ನು ಪ್ರಾಧಿಕಾರ ಅಚ್ಚುಕಟ್ಟಾಗಿ ಮಾಡುತ್ತಿದೆ. ಬೇರೆ ಯಾರೋ ಮಾತು ಕೇಳಿ ಮೋಸ ಹೋಗುವುದರ ಬದಲು, ಪ್ರಾಧಿಕಾರದ ಅಧಿಕೃತ ಸಾಮಾಜಿಕ ಜಾಲ ತಾಣಗಳನ್ನು ಫಾಲೊ ಮಾಡಿ, ತಾಜಾ ಮಾಹಿತಿ ಪಡೆಯುವುದು ಒಳ್ಳೆಯದು ಎಂದು ಕಾರ್ಯ ನಿರ್ವಾಹಕ ನಿರ್ದೇಶಕ ಪ್ರಸನ್ನ ಸಲಹೆ ನೀಡಿದ್ದಾರೆ.