ಕರ್ನಾಟಕ ಉದ್ಯೋಗ ಮೀಸಲು ಮಸೂದೆಯಿಂದ ಕಂಪನಿಗಳ ಸ್ಥಳಾಂತರ ಸಾಧ್ಯತೆ: ನಾಸ್ಕಾಂ

Update: 2024-07-17 12:25 GMT

ಖಾಸಗಿ ವಲಯದ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಮೀಸಲು ಕಡ್ಡಾಯಗೊಳಿಸುವ ಮಸೂದೆ ಬಗ್ಗೆ ರಾಷ್ಟ್ರೀಯ ಸಾಫ್ಟ್‌ವೇರ್ ಮತ್ತು ಸೇವಾ ಕಂಪನಿಗಳ ಸಂಘ (ನಾಸ್ಕಾಂ) ನಿರಾಶೆ ಮತ್ತು ಕಳವಳ ವ್ಯಕ್ತಪಡಿಸಿದೆ. 

ಕರ್ನಾಟಕ ರಾಜ್ಯ ಸ್ಥಳೀಯ ಉದ್ಯಮಗಳು, ಕಾರ್ಖಾನೆಗಳ ಸ್ಥಾಪನೆ ಮಸೂದೆ 2024, ಖಾಸಗಿ ಸಂಸ್ಥೆಗಳು ಗ್ರೂಪ್ ಸಿ ಮತ್ತು ಡಿ ವರ್ಗದ ಹುದ್ದೆಗಳಿಗೆ ಕನ್ನಡಿಗರನ್ನು ನೇಮಕ ಮಾಡಿಕೊಳ್ಳಬೇಕು ಎಂದು ಹೇಳುತ್ತದೆ. ಜೊತೆಗೆ, ಖಾಸಗಿ ಸಂಸ್ಥೆಗಳು ಉದ್ಯೋಗಗಳಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ ನೀಡಬೇಕಿದೆ. 

ನಾಸ್ಕಾಂ ಸರ್ಕಾರೇತರ ವ್ಯಾಪಾರ ಸಂಘಟನೆ ಮತ್ತು ವಕಾಲತ್ತು ಗುಂಪು. ಇದು ಭಾರತೀಯ ತಂತ್ರಜ್ಞಾನ ಉದ್ಯಮಕ್ಕೆ ಸೇವೆ ಸಲ್ಲಿಸುತ್ತದೆ. 

ʻನಾಸ್ಕಾಂ ಮತ್ತು ಅದರ ಸದಸ್ಯರು ನಿರಾಶೆಗೊಂಡಿದ್ದು, ಮಸೂದೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ,ʼ ಎಂದು ಹೇಳಿದೆ. ರಾಜ್ಯದ ಟೆಕ್ ವಲಯವು ಒಟ್ಟು ಉತ್ಪನ್ನದಲ್ಲಿ ಶೇ.25 ರಷ್ಟು ಪಾಲು ನೀಡುತ್ತಿದೆ. ದೇಶಿ ಡಿಜಿಟಲ್ ಪ್ರತಿಭೆಯ ಕಾಲು ಭಾಗ, 11,000 ಕ್ಕೂ ಹೆಚ್ಚು ಸ್ಟಾರ್ಟ್‌ ಅಪ್‌ಗಳು ಮತ್ತು ಜಾಗತಿಕ ಸಾಮರ್ಥ್ಯ ಕೇಂದ್ರಗಳಲ್ಲಿ ಶೇ. 30ರಷ್ಟು ರಾಜ್ಯದಲ್ಲಿದೆ ಎಂದು ಅಸೋಸಿಯೇಷನ್ ಹೇಳಿದೆ. 

ʻಸ್ಥಳೀಯವಾಗಿ ನುರಿತ ಪ್ರತಿಭೆಗಳು ವಿರಳವಾಗಿರುವುದರಿಂದ, ಕಂಪನಿಗಳು ಸ್ಥಳಾಂತರಕ್ಕೆ ಮುಂದಾಗಬಹುದು. ಇಂದಿನ ಸ್ಪರ್ಧಾತ್ಮಕ ಜಗತ್ತಿ ನಲ್ಲಿ ಜ್ಞಾನಾಧರಿತ ವ್ಯವಹಾರಗಳು ಪ್ರತಿಭೆ ಮತ್ತು ನುರಿತ ಕೆಲಸಗಾರರನ್ನು ಆಕರ್ಷಿಸ ಬೇಕಿದ್ದು, ಅದು ಯಶಸ್ಸಿಗೆ ನಿರ್ಣಾಯಕವಾಗುತ್ತದೆ. ಜಾಗತಿಕವಾಗಿ ನುರಿತ ಪ್ರತಿಭೆಗಳಿಗೆ ಕೊರತೆಯಿದೆ; ಕರ್ನಾಟಕವೂ ಇದಕ್ಕೆ ಹೊರತಾಗಿಲ್ಲ. ಕರ್ನಾಟಕದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ತಂತ್ರಜ್ಞಾನ ಕ್ಷೇತ್ರ ನಿರ್ಣಾಯಕ ವಾಗಿದೆ. ಬೆಂಗಳೂರನ್ನು ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಯಲಾಗುತ್ತದೆ,ʼ ಎಂದು ಹೇಳಿದೆ. 

ಮಸೂದೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ನಾಸ್ಕಾಂ, ಅದನ್ನು ಹಿಂಪಡೆಯುವಂತೆ  ಸರ್ಕಾರವನ್ನು ಒತ್ತಾಯಿಸಿದೆ. 

ʻಮಸೂದೆಯು ಪ್ರಗತಿಯ ಹಿನ್ನಡೆಗೆ, ಕಂಪನಿಗಳ ವಲಸೆ ಮತ್ತು ಸ್ಟಾರ್ಟಪ್‌ಗಳನ್ನು ನಿಗ್ರಹಿಸಲಿದೆ. ಜಾಗತಿಕ ಸಂಸ್ಥೆಗಳು (ಜಿಸಿಸಿ) ರಾಜ್ಯದಲ್ಲಿ ಹೂಡಿಕೆ ಮಾಡಲು ಬಯಸುತ್ತಿರುವಾಗ, ಮಸೂದೆಯಿಂದ ನುರಿತ ಸಿಬ್ಬಂದಿ ಕೊರತೆಯುಂಟಾಗಿ ಕಂಪನಿಗಳು ಸ್ಥಳಾಂತರಗೊಳ್ಳಲು ಪ್ರೇರೇಪಿಸಬಹುದು,ʼ ಎಂದು ಹೇಳಿದೆ. 

ಈ ಸಂಬಂಧ ರಾಜ್ಯದ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ, ರಾಜ್ಯದ ಪ್ರಗತಿ ಹಳಿತಪ್ಪದಂತೆ ತಡೆಯಲು ನಾಸ್ಕಾಂ ಬಯಸುತ್ತಿದೆ ಎಂದು ಹೇಳಿದೆ.

Tags:    

Similar News