ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪ್ರಯಾಣ ಸೌಲಭ್ಯ ಘೋಷಣೆ; ಸಿಎಂಗೆ ತಿರುಗೇಟು ಕೊಟ್ಟರೆ ಡಿಕೆಶಿ?

ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸುವ ಯೋಜನೆ ಬಗ್ಗೆ ಸರ್ಕಾರದಲ್ಲಿ ಚರ್ಚೆಯಾಗಿದ್ದರೂ ಅಧಿಕೃತವಾಗಿ ಸಿಎಂ ಸಿದ್ದರಾಮಯ್ಯ ಅವರು ಘೋಷಣೆ ಮಾಡಿರಲಿಲ್ಲ.;

Update: 2025-07-11 08:06 GMT

ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಎಲ್‌ಕೆಜಿಯಿಂದ ಪಿಯುಸಿವರೆಗೆ ಓದುತ್ತಿರುವ ಮಕ್ಕಳಿಗೆ ರಾಜ್ಯ ಸರ್ಕಾರ ಉಚಿತ ಪ್ರಯಾಣ ಸೌಲಭ್ಯ ಘೋಷಿಸಿದೆ. 

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈ ಹೊಸ ಘೋಷಣೆ‌ಯನ್ನು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಪೋಸ್ಟರ್‌ನಲ್ಲಿ ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಇಲಾಖೆ ಸಚಿವರ ಭಾವಚಿತ್ರವೂ ಹಾಕದಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ಡಿ.ಕೆ. ಶಿವಕುಮಾರ್‌ ಅವರ ಈ ಏಕಪಕ್ಷಿಯ ನಡೆ ಸರ್ಕಾರಕ್ಕೆ ಮುಜುಗರ ತಂದಿದೆ. 

ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸುವ ಯೋಜನೆ ಬಗ್ಗೆ ಸರ್ಕಾರದಲ್ಲಿ ಚರ್ಚೆಯಾಗಿದ್ದರೂ ಅಧಿಕೃತವಾಗಿ ಸಿಎಂ ಸಿದ್ದರಾಮಯ್ಯ ಅವರು ಘೋಷಣೆ ಮಾಡಬೇಕಿತ್ತು. ಆದರೆ, ಡಿ.ಕೆ. ಶಿವಕುಮಾರ್‌ ಅವರೇ ನೇರವಾಗಿ ಯೋಜನೆ ಘೋಷಣೆ ಮಾಡಿರುವುದು ರಾಜಕೀಯವಾಗಿಯೂ ಚರ್ಚೆಗೆ ವೇದಿಕೆಯಾಗಿದೆ.

ಸಿಎಂಗೆ ತಿರುಗೇಟು ಕೊಟ್ಟರೆ ಡಿಕೆಶಿ?

ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಈಚೆಗೆ ʼನಾನೇ ಐದು ವರ್ಷ ಸಿಎಂʼ ಎಂಬ ಹೇಳಿಕೆ ನೀಡಿದ್ದಕ್ಕೆ ಸಿಎಂಗೂ ಮೊದಲೇ ಡಿ.ಕೆ ಶಿವಕುಮಾರ್‌ ಯೋಜನೆ ಘೋಷಣೆ ಮಾಡಿ ತಿರುಗೇಟು ನೀಡಿದರೆ ಎಂಬ ಚರ್ಚೆ ಆರಂಭವಾಗಿದೆ.

ಮುಖ್ಯಮಂತ್ರಿ ಬದಲಾವಣೆ ವಿಚಾರವನ್ನು ಮೊದಲು ಪ್ರಸ್ತಾಪಿಸಿದ್ದ ಡಿ.ಕೆ.ಶಿವಕುಮಾರ್‌ ಅವರು ಆ ಬಳಿಕ ನಡೆದ ರಾಜಕೀಯ ಬೆಳವಣಿಗೆಗಳಿಂದ ಸಾಕಷ್ಟು ಮುಜುಗರ ಅನುಭವಿಸಿದ್ದರು. ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೂ ತಾರದೇ ಹಲವು ನಿರ್ಧಾರಗಳನ್ನು ತೆಗೆದುಕೊಂಡಿದ್ದರು. ಆರ್‌ಸಿಬಿ ವಿಜಯೋತ್ಸವ ಕಾರ್ಯಕ್ರಮದುದ್ದಕ್ಕೂ ಖುದ್ದು ಭಾಗಿಯಾಗಿದ್ದರು. ಕಾಲ್ತುಳಿತ ದುರಂತದ ಬಳಿಕ ಡಿ.ಕೆ. ಶಿವಕುಮಾರ್‌ ಅವರ ನಡೆ ಸರ್ಕಾರಕ್ಕೆ ಮುಜುಗರ ತಂದು, ಟೀಕೆ ಎದುರಿಸಬೇಕಾಗಿತ್ತು. ಈಗ ಸಿಎಂ ಅವರಿಗೂ ಮೊದಲೇ ಯೋಜನೆ ಘೋಷಣೆ ಮಾಡಿರುವುದು ಸಿಎಂ ಬದಲಾವಣೆ ವಿಚಾರದಲ್ಲಿ ಸಿಎಂ ಹೇಳಿಕೆಗೆ ಠಕ್ಕರ್‌ ನೀಡಿರಬಹುದು ಎಂದು ವಿಶ್ಲೇಷಿಸಲಾಗಿದೆ.      

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಮಾತ್ರ ಉಚಿತ ಪ್ರಯಾಣ ಸೌಲಭ್ಯ ಒದಗಿಸಲಾಗಿದೆ. ಅದೇ ರೀತಿ ಕೆಪಿಎಸ್‌ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ ಅವಕಾಶ ಒದಗಿಸುವ ಮಹತ್ವದ ಯೋಜನೆಯನ್ನು ಸರ್ಕಾರದ‌ ಮುಖ್ಯಸ್ಥರಾಗಿರುವ ಸಿಎಂ ಸಿದ್ದರಾಮಯ್ಯ ಅವರು ಘೋಷಿಸಬೇಕಿತ್ತು. ಅದಕ್ಕೂ ಮೊದಲೇ ಡಿ.ಕೆ. ಶಿವಕುಮಾರ್‌ ಅವರು ಎಕ್ಸ್‌ ಖಾತೆಯಲ್ಲಿ ಹೊಸ ಯೋಜನೆ ಘೋಷಿಸಿ ಅದರ ಲಾಭ ಪಡೆಯಲು ಯತ್ನಿಸಿದ್ದಾರೆ ಎಂದು ಹೇಳಲಾಗಿದೆ. 

ಯೋಜನೆಯ ಲಾಭವೇನು?

ಸರ್ಕಾರಿ ಶಾಲೆಯ ಮಕ್ಕಳ ಹಾಜರಾತಿ ಹಾಗೂ ಗುಣಮಟ್ಟ ಹೆಚ್ಚಿಸಲು ಉಚಿತ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ. ಎಲ್ ಕೆಜಿಯಿಂದ ಪಿಯುಸಿ ವರೆಗೆ ವಿದ್ಯಾಭ್ಯಾಸ ಮಾಡುವ ಮಕ್ಕಳಿಗೆ ಯೋಜನೆಯ ಲಾಭ ಸಿಗಲಿದೆ.  ಬಡ ಮಕ್ಕಳಿಗೆ ಇದರಿಂದ ಅನುಕೂಲವಾಗಲಿದ್ದು, ಶಿಕ್ಷಣ ಸಬಲೀಕರಣದಲ್ಲಿ ಮಹತ್ವದ ಹೆಜ್ಜೆ ಎಂದು ಡಿ.ಕೆ.ಶಿವಕುಮಾರ್ ಅವರು ತಮ್ಮ ಪೋಸ್ಟರ್ ನಲ್ಲಿ ಪ್ರಕಟಿಸಿದ್ದಾರೆ.

ಯಾರಿಗೆ ಅನುಕೂಲ?

ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮತ್ತು ವಿದ್ಯಾರ್ಥಿಗಳನ್ನು ಶಾಲೆಗಳಿಗೆ ಆಕರ್ಷಿಸಲು ಸರ್ಕಾರವು ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ಉಚಿತ ಸಾರಿಗೆ ಸೌಲಭ್ಯ ಕಲ್ಪಿಸಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದರು. ಆದರೆ, ಯೋಜನೆಯನ್ನು ಅಧಿಕೃತವಾಗಿ ಘೋಷಿಸಿರಲಿಲ್ಲ. ಶಾಲೆಯಿಂದ 4-5 ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಮಕ್ಕಳಿಗೆ ಉಚಿತ ಬಸ್ ಸೌಲಭ್ಯ ಸಿಗಲಿದೆ. ರಾಜ್ಯದಲ್ಲಿ 285 ಕೆಪಿಎಸ್ ಶಾಲೆಗಳಿದ್ದು, ಮುಂದಿನ ದಿನಗಳಲ್ಲಿ 500 ಕ್ಕೂ ಹೆಚ್ಚು ಶಾಲೆಗಳನ್ನು ಆರಂಭಿಸುವ ಉದ್ದೇಶವಿದೆ ಎಂದು ಹೇಳಿದ್ದರು.

Tags:    

Similar News