ನಮ್ಮ ನಾಡು-ನಮ್ಮ ಆಳ್ವಿಕೆ | ಕರ್ನಾಟಕಕ್ಕೆ ಬೇಕು ಕನ್ನಡ ಪಕ್ಷ: ಸಂಗೀತ ನಿರ್ದೇಶಕ ಹಂಸಲೇಖ

ಕರ್ನಾಟಕದ ನೆಲ-ಜಲ-ನುಡಿಯ ಹಿತ ಕಾಯುವ ತನ್ನದೇ ಕನ್ನಡ ಪಕ್ಷ ಬೇಕು. ಪ್ರಾದೇಶಿಕ ಪಕ್ಷದ ಮೂಲಕ ರಾಜ್ಯದ ಹಿತ ಕಾಯುವ ದಿಕ್ಕಿನಲ್ಲಿ ಹೊಸ ರಾಜಕಾರಣ ಆರಂಭಿಸಬೇಕು ಎಂಬ ಉದ್ದೇಶದಿಂದ ಬೆಂಗಳೂರಿನಲ್ಲಿ ಭಾನುವಾರ ಸಾಹಿತಿ, ಕಲಾವಿದರು, ಕನ್ನಡ ಹೋರಾಟಗಾರರ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಿತು.;

Update: 2024-08-26 08:30 GMT

"ರಾಜ್ಯಕ್ಕೆ ನಮ್ಮ ನೆಲ-ಜಲ-ನುಡಿಯ ಹಿತ ಕಾಯುವ ತನ್ನದೇ ಕನ್ನಡ ಪಕ್ಷ ಬೇಕು. ಮುಂದಿನ ಚುನಾವಣೆಗೆ ಕನ್ನಡ ಪಕ್ಷ ತನ್ನ ಧ್ವಜ ಹಾರಿಸಬೇಕು. ಇದಕ್ಕಾಗಿ ಕನ್ನಡಿಗರು ಹೆಗಲಿಗೆ ಹೆಗಲು ಕೊಡಬೇಕು" ಎಂದು ಸಂಗೀತ ನಿರ್ದೇಶಕ ಹಂಸಲೇಖ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಭಾನುವಾರ ಆಯೋಜಿಸಿದ್ದ ‘ನಮ್ಮ ನಾಡು -ನಮ್ಮ ಆಳ್ವಿಕೆ’ ಚಿಂತನಾ ಸಭೆಯಲ್ಲಿ ಅವರು ಮಾತನಾಡಿದರು.

‘‘ಕರ್ನಾಟಕ ಮತ್ತು ಕನ್ನಡ ಎಂದರೆ ಆಕ್ರೋಶ, ಆವೇಶ ವ್ಯಕ್ತಪಡಿಸುವ ಬಳಗವಿದೆ. ಅದಕ್ಕೆ ಒಂದು ಮಾರ್ಗಸೂಚಿ ಸಿದ್ಧಪಡಿಸಬೇಕು. ಕನ್ನಡದ ಮನಸ್ಸುಗಳನ್ನು ಈ ಮಾರ್ಗಸೂಚಿ ಕೈ ಹಿಡಿದು ನಡೆಸಬೇಕು. ಕನ್ನಡದ ಪಕ್ಷ ಸಮತ್ವ ಮತ್ತು ರುಜುತ್ವದ ಸಿದ್ಧಾಂತದಡಿಯಲ್ಲಿ ರೂಪುಗೊಳ್ಳಬೇಕು. ಕನ್ನಡಕ್ಕೆ, ಕರ್ನಾಟಕ ರಾಜ್ಯಕ್ಕೆ ಕನ್ನಡ ಪಕ್ಷ ಬೇಕು. ಇನ್ನು ಮುಂದಿನ ಚುನಾವಣೆಗಳಲ್ಲಿ ಕನ್ನಡ ಪಕ್ಷದ ಧ್ವಜ ಹಾರಿಸಬೇಕು. ಇದಕ್ಕಾಗಿ ಕನ್ನಡಿಗರು ಹೆಗಲಿಗೆ ಹೆಗಲು ಕೊಡಬೇಕು’’ ಎಂದರು.

ʻʻನಮ್ಮ ಮಾತೆಯೇ ಕನ್ನಡ ಮಾತೆ, ಹೀಗಾಗಿ ಕನ್ನಡ ಭಾರತದ ಮಗಳಲ್ಲ ಎನ್ನೋದು ಸರಿಯಾದ ಮಾತು. ನರೇಂದ್ರ ಮೋದಿಯವರು ಪ್ರಧಾನಿ ಆಗುವ ದೃಶ್ಯ ಟಿವಿಯಲ್ಲಿ ಬರುತ್ತದೆ. ಇಷ್ಟುದೊಡ್ಡ ಬಹುಮತದಲ್ಲಿ ಗೆದ್ದು ಬರಬೇಕು ಅಂದರೆ ಇಷ್ಟು ವರ್ಷಗಳ ಕಾಲ ಕಾದಿದ್ದಾರೆ. ಪ್ರಧಾನಮಂತ್ರಿ ಏನು ಮಾಡಬಹುದು ಎಂದು ನಾನು ಕಾದು ನೋಡುತ್ತಿದ್ದೆ. ಸಂಸತ್ ಭವನಕ್ಕೆ ನಮಸ್ಕರಿಸುತ್ತಾರೆ, ಅದನ್ನು ನೋಡಿ ಮೈ ರೋಮಾಂಚನವಾಯಿತು. ಕೇರಳದವರಿಗೆ ರಾಜಕೀಯದ ಹುನ್ನಾರ ಬೇಗ ಗೊತ್ತಾಗುತ್ತದೆ. ನನ್ನ ಸ್ಟುಡಿಯೋದಲ್ಲಿದ್ದ ಕೇರಳದ ವ್ಯಕ್ತಿಯೊಬ್ಬ ಇದು ನಾಟಕ ಎಂದು ಹೇಳಿದ್ದನು. ಆದರೆ ಕನ್ನಡಿಗನಾಗಿ ನಾನು ಭಾವುಕನಾಗಿದ್ದೆ. ಅಂದು ಸಂಸತ್‌ಗೆ ನಮಸ್ಕರಿಸಿದ ಮೋದಿ ಆಮೇಲೆ ಸಂಸತ್‌ನ್ನು ಬದಲಾಯಿಸಿದರು ಈಗ ಸಂವಿಧಾನಕ್ಕೆ ನಮಸ್ಕರಿಸಿದ್ದಾರೆ, ಸಂವಿಧಾನ ಬದಲಾಗತ್ತೆ ಎಂದು ಆ ಹುಡುಗ ನನಗೆ ಫೋನ್ ಮಾಡಿ ಹೇಳಿದ್ದ. ಏನೇ ಬೆಣ್ಣೆ ಮಾತುಗಳನ್ನಾಡಿದರೂ ಇದೇ ಭವಿಷ್ಯʼʼ ಎಂದು ಹಂಸಲೇಖ ಹೇಳಿದರು.

ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ, ʻʻದೆಹಲಿ ಹೈಕಮಾಂಡ್‌ ಕೇಂದ್ರಿತ ಪಕ್ಷಗಳು ಅಪಾಯಕಾರಿ. ಹಾಗಾಗಿ, ನಮ್ಮದೇ ಸ್ವಾಯತ್ತ, ಸ್ವತಂತ್ರ ಪಕ್ಷ ಸ್ಥಾಪನೆಯ ಅಗತ್ಯವಿದೆ’’ ಎಂದು ಪ್ರತಿಪಾದಿಸಿದರು.

ʻʻಕರ್ನಾಟಕ ಕೇಂದ್ರಿತ ಪ್ರಾದೇಶಿಕ ಪಕ್ಷ ರಚನೆಗೆ ಕನಸು ಈಗ ಚಿಗುರೊಡೆದಿದೆ. ಇದನ್ನು ಚಿವುಟುವ ಶಕ್ತಿಗಳಿವೆ. ಹುಷಾರಾಗಿ ಹೆಜ್ಜೆ ಇಡಬೇಕು. ಮೊದಲು ಹಳ್ಳಿಗಳಿಗೆ ಹೋಗಿ ಕನ್ನಡದ ಶಕ್ತಿ ಬಗ್ಗೆ ಜಾಗೃತಿ ಮೂಡಿಸಬೇಕು. ವಿಷಯಾಧಾರಿತವಾಗಿ ಚಳವಳಿಯಾಗಬೇಕು. ಆಗ ಮಾತ್ರ ಕನ್ನಡ ಕೇಂದ್ರಿತ ಪ್ರಾದೇಶಿಕ ಪಕ್ಷಕ್ಕೆ ಪೂರಕವಾದ ವಾತಾವರಣ ನಿರ್ಮಾಣ ಸಾಧ್ಯ’’ ಎಂದು ಸಲಹೆ ನೀಡಿದರು.

ʻʻರಾಜಕಾರಣಿಗಳಿಗೆ ಇಚ್ಛಾಶಕ್ತಿ ಇದ್ದರೆ ಕನ್ನಡಕ್ಕೆ ಶಕ್ತಿ ದೊರೆಯುತ್ತದೆ. ಆದರೆ, ಇಂಗ್ಲಿಷ್‌ ಮಾಧ್ಯಮದ ಶಾಲೆಗಳನ್ನು ನಡೆಸುತ್ತಾ, ತಮ್ಮ ಮಕ್ಕಳನ್ನು ಇಂಗ್ಲಿಷ್‌ ಶಾಲೆಗಳಲ್ಲಿ ಓದಿಸುವ ರಾಜಕಾರಣಿಗಳೇ ಇರುವಾಗ ಕನ್ನಡಕ್ಕೆ ಶಕ್ತಿ ನೀಡಲು ಸಾಧ್ಯವಿಲ್ಲ’’ ಎಂದು ಹೇಳಿದರು.

ʻʻನಗರದಲ್ಲಿ ಇರುವವರು, ಪದವೀಧರರು ಮಾತ್ರ ಈ ವಿಚಾರದಲ್ಲಿ ಚರ್ಚೆ ಮಾಡಿದರೆ ಸಾಲದು. ಕನ್ನಡವನ್ನು ನಿಜವಾಗಿಯೂ ಉಳಿಸುವವರು ಹಳ್ಳಿಯ ಜನರು. ಅವರನ್ನೂ ಒಳಗೊಂಡು, ನಾವೆಲ್ಲರೂ ಕನ್ನಡದ ಸ್ವಯಂಸೇವಕರಾಗಿ ದುಡಿಯಬೇಕು. ಹಾಗಾದಾಗ ಮಾತ್ರ ಕನ್ನಡದ ಪಕ್ಷ ಕಟ್ಟುವ ಈ ಪ್ರಯತ್ನ ಸಫಲವಾಗುತ್ತದೆʼʼ ಎಂದರು.

ಸಭೆಯಲ್ಲಿ ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಸಾಹಿತಿಗಳು, ಕಲಾವಿದರು, ಪತ್ರಕರ್ತರು ಮತ್ತು ಟೆಕ್ಕಿಗಳು ಕರ್ನಾಟಕ ಕೇಂದ್ರಿತ ಪ್ರಾದೇಶಿಕ ಪಕ್ಷ ರಚನೆ ಸಂಬಂಧ ಬೆಂಬಲ ಸೂಚಿಸಿದರು. ಪ್ರಾದೇಶಿಕ ಪಕ್ಷ ರಚನೆ ಕುರಿತು ಸಲಹೆ, ಸೂಚನೆಗಳನ್ನು ನೀಡಿದರು.

ಸಭೆ ಆಯೋಜಿಸಿದ ಉದ್ದೇಶವನ್ನು ವಿವರಿಸಿದ ಚಿತ್ರ ಸಾಹಿತಿ ಕವಿರಾಜ್, ʻʻಮೇಕೆದಾಟು ಯೋಜನೆಗೆ ಅನುಮತಿ ಪಡೆಯಲು ನಾವು ದೆಹಲಿಯ ಹೈಕಮಾಂಡ್‌ಗಳ ಮುಂದೆ ಬಾಗಿ ನಿಲ್ಲಬೇಕಾಗಿದೆ. ನಮ್ಮ ಶೈಕ್ಷಣಿಕ ಸಂಸ್ಥೆಗಳಲ್ಲಿ ನಮ್ಮ ಮಕ್ಕಳ ಸೀಟುಗಳನ್ನು ಉತ್ತರ ಭಾರತೀಯರು ನೀಟ್‌ನಂತಹ ಪರೀಕ್ಷೆ ಮೂಲಕ ಕಸಿದುಕೊಳ್ಳುತ್ತಿದ್ದಾರೆ. ಪ್ರಬಲ ಪ್ರಾದೇಶಿಕ ಪಕ್ಷವಿರುವ ತಮಿಳುನಾಡಿಗೆ ಇಂತಹ ಸಮಸ್ಯೆ ಇಲ್ಲ. ಹೀಗಾಗಿ ಕರ್ನಾಟಕಕ್ಕೆ ಅಂತಹ ಪ್ರಾದೇಶಿಕ ಪಕ್ಷದ ಅನಿವಾರ್ಯತೆ ಇದೆʼʼ ಎಂದು ಹೇಳಿದರು.

ಚಿತ್ರ ಸಾಹಿತಿ ಕವಿರಾಜ್, ಕನ್ನಡ ಹಕ್ಕುಗಳ ಹೋರಾಟಗಾರ ಅರುಣ್ ಜಾವಗಲ್‌, ಚಿತ್ರ ನಿರ್ದೇಶಕ ಗಿರಿರಾಜ್ ಸೇರಿ ಹಲವು ಕನ್ನಡಪರ ಹೋರಾಟಗಾರರು ಈ ಮಹತ್ವದ ಸಭೆಯನ್ನು ಆಯೋಜಿಸಿದ್ದರು.

Tags:    

Similar News