ಕ್ವಾಂಟಮ್‌ ಉದ್ಯಮ ಆರಂಭಕ್ಕೆ ಕರ್ನಾಟಕ, ಆಂಧ್ರ ನಡುವೆ ಪೈಪೋಟಿ

ಕರ್ನಾಟಕ ಕ್ವಾಂಟಮ್‌ ಕಂಪ್ಯೂಟರ್‌ ಕ್ಷೇತ್ರದಲ್ಲಿ ದೇಶವನ್ನು ಮುನ್ನಡೆಸಲು ಸಜ್ಜಾದರೆ ಆಂಧ್ರಪ್ರದೇಶವು ಈ ಅವಕಾಶವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಪ್ರಯತ್ನ ನಡೆಸಿದೆ.;

Update: 2025-08-01 03:32 GMT

ವಿಶ್ವ ಮಟ್ಟದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಕ್ವಾಂಟಮ್‌ ಕೇತ್ರದಲ್ಲಿ ನೆಲೆ ಕಂಡುಕೊಳ್ಳಲು ಕರ್ನಾಟಕ ಮತ್ತು ಆಂಧ್ರಪ್ರದೇಶ ನಡುವೆ ತೀವ್ರ ಪೈಪೋಟಿ ಆರಂಭಗೊಂಡಿದೆ. ಐಟಿ- ಬಿಟಿ, ನ್ಯಾನೋ, ವೈಮಾಂತರಿಕ್ಷ, ಸಂಶೋಧನೆ ಮತ್ತು ಅಭಿವೃದ್ಧಿ ಸೇರಿ ನಾವೀನ್ಯತೆ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಕ್ಷೇತ್ರದಲ್ಲಿ  ಮುಂಚೂಣಿಯಲ್ಲಿರುವ ಬೆಂಗಳೂರು ಕ್ವಾಂಟಮ್‌ ಕಂಪ್ಯೂಟರ್‌ ಕ್ಷೇತ್ರದಲ್ಲೂ ದೇಶವನ್ನು ಮುನ್ನಡೆಸಲು ಸಜ್ಜಾಗಿದೆ. ಈ ನಡುವೆ, ಆಂಧ್ರಪ್ರದೇಶವೂ ಈ ಅವಕಾಶವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಪ್ರಯತ್ನ ಕೈಗೊಂಡಿದೆ. 

ಮುಂದಿನ ಹಂತದ ತಂತ್ರಜ್ಞಾನದಲ್ಲಿ ಜಾಗತಿಕವಾಗಿ ಸ್ಪರ್ಧಿಸಲು ಬಯಸಿದರೆ ಖಾಸಗಿ ವಲಯದ ನಿಧಿಯನ್ನು ಹೆಚ್ಚಿಸಬೇಕು ಮತ್ತು ಕ್ವಾಂಟಮ್ ಅನ್ನು ಗಂಭೀರ ವ್ಯಾಪಾರ ಅವಕಾಶವೆಂದು ಪರಿಗಣಿಸಬೇಕು. ಈ ನಿಟ್ಟಿನಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳು ಕಾರ್ಯನಿರ್ವಹಿಸುತ್ತಿವೆ. ಆದರೆ, ಕರ್ನಾಟಕವು ಮುಂದಿದ್ದು, ಈಗಾಗಲೇ ಬೆಂಗಳೂರಲ್ಲಿ ದೇಶದ ಮೊದಲ ಕ್ವಾಂಟಮ್ ಕಂಪ್ಯೂಟರ್  ಕಾರ್ಯನಿರ್ವಹಿಸುತ್ತಿದೆ. ಕ್ಯೂಪಿಎಐನಿಂದ ಸ್ಥಳೀಯವಾಗಿ ನಿರ್ಮಿಸಲ್ಪಟ್ಟಿದ್ದೆದು, ಏಪ್ರಿಲ್ ತಿಂಗಳಿನಲ್ಲಿ ಕಾರ್ಯಾಚರಣೆ ಆರಂಭಿಸಿದೆ. 

ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ(ಐಐಎಸ್ಸಿ) ಈಗಾಗಲೇ ‘ಕ್ವಾಂಟಮ್‌ ರಿಸರ್ಚ್ ಪಾರ್ಕ್’ ಸ್ಥಾಪನೆಯಾಗಿದ್ದು, ಬೆಂಗಳೂರಿನ ಕ್ಯೂಪಿಎಐ ಸಂಸ್ಥೆ ದೇಶೀಯವಾಗಿ ನಿರ್ಮಿಸಿರುವ ಕ್ಯೂಬಿಕ್‌ ಕ್ವಾಂಟಮ್‌ ಸೇವೆ ನೀಡುತ್ತಿದೆ. ಕ್ವಾಂಟಮ್‌ ನಾವೀನ್ಯತೆಯಲ್ಲಿ ವಲಯದ ಉದ್ಯಮಗಳ ಆಕರ್ಷಣೆ, ಸಂಶೋಧನೆಗೆ ಒತ್ತು ನೀಡಲು ನೀಲನಕ್ಷೆಯನ್ನು ಕರ್ನಾಟಕ ಸರ್ಕಾರವು ಬಿಡುಗಡೆ ಮಾಡಿದೆ. ಕ್ವಾಂಟಮ್ ಕಂಪ್ಯೂಟಿಂಗ್, ಹಣಕಾಸು ಮತ್ತು ಎಐ, ಕ್ವಾಂಟಮ್ ಪೆರಿಫೆರಲ್ಸ್ ಮತ್ತು ಹಾರ್ಡ್‌ವೇರ್, ಆರೋಗ್ಯ ರಕ್ಷಣೆಯಲ್ಲಿ ಕ್ವಾಂಟಮ್, ಭದ್ರತೆ , ಸಮಾಜ ಮತ್ತು ಕಲೆ. ಶೃಂಗಸಭೆಯು ಹಲವಾರು ಅಧಿವೇಶನಗಳು ಮತ್ತು ತೊಡಗಿಸಿಕೊಳ್ಳುವಿಕೆಯನ್ನು ಒಳಗೊಂಡಿರುತ್ತದೆ.

ಆಂಧ್ರಪ್ರದೇಶದಿಂದಲೂ ಪೈಪೋಟಿ: 

ಬೆಂಗಳೂರು ಐಟಿ-ಐಟಿ ಕ್ಷೇತ್ರದಲ್ಲಿ ಖ್ಯಾತಿ ಪಡೆದುಕೊಳ್ಳುವ ಮುನ್ನ ಸರಿಸುಮಾರು ಮೂರು ದಶಕಗಳ ಹಿಂದೆ ಆಂಧ್ರ ಪ್ರದೇಶ ಮತ್ತು ಕರ್ನಾಟಕ ನಡುವೆ ಸ್ಪರ್ಧೆ ಉಂಟಾಗಿತ್ತು. ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಮತ್ತು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನಡುವೆ ಐಟಿ-ಬಿಟಿಯನ್ನು ತಮ್ಮ ರಾಜ್ಯಗಳ ತೆಕ್ಕೆಗೆ ಕೊಂಡೊಯ್ಯಲು ಪೈಪೋಟಿ ನಡೆದಿತ್ತು. ಅಂತಿಮವಾಗಿ ಅದು ಕರ್ನಾಟಕದ ಪಾಲಾಗಿ, ಇದೀಗ ವಿಶ್ವವಿಖ್ಯಾತಿ ಪಡೆದುಕೊಂಡಿದೆ. 

ಸುಮಾರು  ಮೂರು ದಶಕಗಳ ಬಳಿಕ ಕ್ವಾಂಟಮ್‌ ಕಂಪ್ಯೂಟರ್‌ ವಿಚಾರದಲ್ಲಿಯೂ ಕರ್ನಾಟಕದ ಜತೆಗೆ ಆಂಧ್ರಪ್ರದೇಶ ಪ್ರಬಲ ಸ್ಪರ್ಧೆಗಿಳಿದಿದೆ. ಕ್ವಾಂಟಮ್‌ ತಂತ್ರಜ್ಞಾನದಲ್ಲೂ ಆಂಧ್ರಪ್ರದೇಶ ಕಣ್ಣು ಹಾಕಿದೆ. ಕ್ವಾಂಟಮ್ ಕಂಪ್ಯೂಟರ್ ಅನ್ನು  ನವೆಂಬರ್‌ನಲ್ಲಿ ಅಮರಾವತಿಯಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ  ಚಂದ್ರಬಾಬು ನಾಯ್ಡು ಹೇಳಿಕೆ ನೀಡಿದ್ದಾರೆ.  ಅಲ್ಲದೇ, ರಾಷ್ಟ್ರೀಯ ಕ್ವಾಂಟಮ್ ಮಿಷನ್ ಬೆಂಬಲದೊಂದಿಗೆ ಕೃಷಿ, ನೀರು ನಿರ್ವಹಣೆ ಮತ್ತು ಆರೋಗ್ಯ ರಕ್ಷಣೆಯನ್ನು ಪರಿವರ್ತಿಸುವ ಗುರಿಯನ್ನು ಹೊಂದಿದೆ. ಕ್ಯೂಪಿಎಐ ಸಂಸ್ಥೆಯು ಆಂಧ್ರಪ್ರದೇಶವನ್ನು ಆಯ್ಕೆ ಮಾಡಿದೆ ಎಂದಿದ್ದರು. 

ಕರ್ನಾಟಕ ಸರ್ಕಾರ ತಿರುಗೇಟು: 

ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿಕೆಗೆ ಕರ್ನಾಟಕ ಸರ್ಕಾರ ತಿರುಗೇಟು ನೀಡಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಸ್‌.ಭೋಸರಾಜು, ದೇಶದ ಮೊದಲ ಕ್ವಾಂಟಮ್ ಕಂಪ್ಯೂಟರ್ ಈಗಾಗಲೇ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ‘ಆಂಧ್ರಪ್ರದೇಶದಲ್ಲಿ ನವೆಂಬರ್‌ಗೆ ಕ್ವಾಂಟಮ್‌ ಕಂಪ್ಯೂಟರ್‌ ಸಿದ್ಧವಾಗುವುದು ದೇಶದಲ್ಲೇ ಮೊದಲಲ್ಲ. ಬೆಂಗಳೂರಿನಲ್ಲಿಕ್ವಾಂಟಮ್‌ ಕಂಪ್ಯೂಟರ್‌ ಈಗಾಗಲೇ ಸೇವೆ ನೀಡುತ್ತಿದೆ. ಕ್ಯೂಪಿಎಐ ದೇಶೀಯವಾಗಿ ನಿರ್ಮಿಸಿದ ಕ್ವಾಂಟಮ್‌ ಕಂಪ್ಯೂಟರ್‌ ಕೆಲಸ ಮಾಡುತ್ತಿದೆ. ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ(ಐಐಎಸ್ಸಿ) ದೇಶದ ಪ್ರಪ್ರಥಮ ‘ಕ್ವಾಂಟಮ್‌ ಸಂಶೋಧನಾ ಪಾರ್ಕ್’ ಸ್ಥಾಪನೆಯಾಗಿದ್ದು, ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗಾಗಿ ಈಗಾಗಲೇ 48 ಕೋಟಿ ಅನುದಾನ ಒದಗಿಸಲಾಗಿದೆ ಎಂದು ಹೇಳಿದ್ದಾರೆ. 

ಕ್ವಾಂಟಮ್‌ ತಂತ್ರಜ್ಞಾನ ಎಂದರೇನು? 

ಅತ್ಯಂತ ಸಣ್ಣ ಕಣಗಳ ಮಟ್ಟದಲ್ಲಿ ಕಲ್ಪಿಸಿಕೊಳ್ಳಲೂ ಕಷ್ಟವಾದ ಸಾಧ್ಯತೆಗಳನ್ನು ಸಾಕಾರಗೊಳಿಸುವುದು ಕ್ವಾಂಟಮ್‌ ತಂತ್ರಜ್ಞಾನದ ಗುರಿ. ನಮಗೆ ಪರಿಚಯವಿರುವ ಕಂಪ್ಯೂಟರುಗಳಿಗಿಂತ ಅಸಂಖ್ಯ ಪಟ್ಟು ಹೆಚ್ಚು ಸಮರ್ಥವಾದ, ಅತ್ಯಂತ ವಿಭಿನ್ನವಾಗಿ ಕಾರ್ಯನಿರ್ವಹಿಸುವ ಕ್ವಾಂಟಮ್‌ ಕಂಪ್ಯೂಟರುಗಳ ಸೃಷ್ಟಿಯನ್ನು ಇದು ಸಾಧ್ಯವಾಗಿಸಲಿದೆ. ಕ್ವಾಂಟಮ್‌ ಕಂಪ್ಯೂಟರುಗಳು ಪ್ರಾರಂಭಿಕ ಹಂತದಲ್ಲಿವೆ. ಆದರೆ ಮುಂದಿನ ದಿನದಲ್ಲಿ  ಸಂವಹನ, ವೈದ್ಯಕೀಯ, ವಸ್ತುವಿಜ್ಞಾನ, ಸುರಕ್ಷತೆ, ಎಐ ಸೇರಿದಂತೆ ಹಲವು ಕ್ಷೇತ್ರಗಳಲ್ಲಿಅಗಾಧ ಬದಲಾವಣೆ ತರುವ ನಿರೀಕ್ಷೆಯಿದೆ. ರಾಷ್ಟ್ರೀಯ ಕ್ವಾಂಟಮ್‌ ಮಿಷನ್‌  ಅಡಿಯಲ್ಲಿ ಕ್ಷೇತ್ರದಲ್ಲಿ ಬೆಳವಣಿಗೆ ಸಾಧಿಸುವ ಗುರಿ ಹಾಕಿಕೊಂಡಿದೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿರುವ ರಾಜ್ಯಗಳಲ್ಲಿ ಕರ್ನಾಟಕಕ್ಕೆ ಮುಂಚೂಣಿ ಸ್ಥಾನವಿದೆ. ನಮ್ಮದೇ ಬೆಂಗಳೂರಿನಲ್ಲಿಈ ಕುರಿತು ಸಾಕಷ್ಟು ಕೆಲಸ ನಡೆದಿದೆ. ಇದು ದೇಶದಲ್ಲಿಯೇ ಕರ್ನಾಟಕಕ್ಕೆ ಸಿಕ್ಕ ಮಹತ್ವದ ಸ್ಥಾನ ಎಂಬುದು ಹೆಮ್ಮೆಯ ಸಂಗತಿ. 

ಬೆಂಗಳೂರಿನಲ್ಲಿ ಈಗಾಗಲೇ ಸೌಲಭ್ಯ: 

ಕ್ವಾಂಟಮ್‌ ಕ್ಷೇತ್ರದ ಸ್ಥಾಪನೆಗೆ ಆಂಧ್ರಪ್ರದೇಶ ಮತ್ತು ಕರ್ನಾಟಕ ನಡುವೆ ಪೈಪೋಟಿ ಇರುವ ಕುರಿತು ದ ಫೆಡರಲ್‌ ಕರ್ನಾಟಕ ಜತೆ ಮಾತನಾಡಿದ ಟಕ್ಯೂಬಿಟ್‌ ಸಂಸ್ಥೆಯ ಸಹ ಸ್ಥಾಪಕ ಬಿಲೇಶ್‌ ಪ್ರಸಾದ್‌, ಆಂಧ್ರಪ್ರದೇಶವು ಕ್ವಾಂಟಮ್‌ ಕಂಪ್ಯೂಟರ್‌ ಕ್ಷೇತ್ರವನ್ನು ಅಭಿವೃದ್ಧಿಗೊಳಿಸುವ ಬಗ್ಗೆ ಆಸಕ್ತಿ ತೋರಿದೆ. ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಆದರೆ, ಬೆಂಗಳೂರಿನಲ್ಲಿ ಈಗಾಗಲೇ ಈ ಕ್ಷೇತ್ರ ಆರಂಭಗೊಂಡಿದೆ. ಮುಂದಿನ ದಿನದಲ್ಲಿ ಇದು ದೊಡ್ಡ ಮಟ್ಟದಲ್ಲಿ ಬೆಳೆಯಲಿದೆ. ಬೆಂಗಳೂರಲ್ಲಿ ಮೂಲಸೌಕರ್ಯಗಳು ಲಭ್ಯ ಇವೆ. ಅಲ್ಲದೇ, ಕ್ಷೇತ್ರಕ್ಕೆ ಬೇಕಾದ ತಂತ್ರಜ್ಞಾನವು ಸಹ ಬೆಂಗಳೂರಿನಲ್ಲಿದೆ. ಆದರೆ,  ಅಮರಾವತಿಯಲ್ಲಿ ಮೂಲಸೌಕರ್ಯದ ಜತೆಗೆ ಅವಕಾಶಗಳು ಹೇಳಿಕೊಳ್ಳುವಷ್ಟು ಇಲ್ಲ. ಬೆಂಗಳೂರಿನ ವಾತಾವರಣ ಆ ರೀತಿಯಲ್ಲಿಲ್ಲ. ಇಲ್ಲಿ ವಿಫುಲ ಅವಕಾಶಗಳಿವೆ. ಹೀಗಾಗಿ ಸದ್ಯದ ಮಟ್ಟಿಗೆ ಕ್ಷೇತ್ರದ ಉದ್ಯಮಿಗಳು ಬೆಂಗಳೂರಿನತ್ತ ಹೆಚ್ಚು ಒಲವು ತೋರಿದ್ದಾರೆ. ಮುಂದಿನ ದಿನದಲ್ಲಿ ಆಂಧ್ರಪ್ರದೇಶದತ್ತ ಗಮನಹರಿಸಬಹುದು ಎಂದು ಹೇಳಿದರು. 

ಬೆಂಗಳೂರಿನಲ್ಲಿ ಪ್ರಧಾನ ಕಚೇರಿ: 

ಕ್ವಾಂಟಮ್‌ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ಯೂಪಿಎಐ ಸಂಸ್ಥೆಯು ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿಯಿಂದ (ಕೆಐಎಡಿಬಿ)10 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿದೆ. ಅಲ್ಲದೇ, ಬೆಂಗಳೂರಿನಲ್ಲಿ ವಿಶ್ವ ದರ್ಜೆಯ ಕ್ವಾಂಟಮ್ ಮತ್ತು ಎಐ ಸಂಶೋಧನಾ ಸೌಲಭ್ಯ ಎಂದು ಹೇಳಿಕೊಳ್ಳುವ ಕಟ್ಟಡವನ್ನು ನಿರ್ಮಿಸಲು ಐದರಿಂದ ಏಳು ವರ್ಷಗಳಲ್ಲಿ 500 ಕೋಟಿ ರೂಪಾಯಿ ಹೂಡಿಕೆ ಮಾಡಲು ಯೋಜಿಸಿದೆ. ಭಾರತದ ಕ್ವಾಂಟಮ್ ಕಂಪ್ಯೂಟರ್‌ ಕನಸನ್ನು ನನಸಾಗಿಸಲು ಆಂಧ್ರಪ್ರದೇಶಕ್ಕೆ ಸ್ಥಳೀಯ ಕ್ವಾಂಟಮ್ ಕಂಪ್ಯೂಟರ್  ಒದಗಿಸುತ್ತಿದ್ದೇವೆ. ಆದರೆ, ಕಂಪನಿಯ ಪ್ರಧಾನ ಕಛೇರಿ ಬೆಂಗಳೂರಿನಲ್ಲಿಯೇ ಉಳಿಯಲಿದೆ ಎಂದು ತಿಳಿಸಿದೆ. 

48 ಕೋಟಿ ರೂ.ಹೂಡಿಕೆ

ಕರ್ನಾಟಕವು ಬೆಂಗಳೂರಿನ ಐಐಎಸ್‌ಸಿಯಲ್ಲಿ ತನ್ನ ಕ್ವಾಂಟಮ್ ಸಂಶೋಧನಾ ಉದ್ಯಾನವನವನ್ನು ಅಭಿವೃದ್ಧಿಪಡಿಸಲು 48 ಕೋಟಿ  ರೂ. ಹೂಡಿಕೆ ಮಾಡುತ್ತಿದೆ. ಇದು ಕ್ವಾಂಟಮ್ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರಿಂದ ೫೫ ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆಗಳು, 13 ಸ್ಟಾರ್ಟ್‌ಅಪ್‌ಗಳು ಮತ್ತು 15 ಅಧ್ಯಾಪಕರ ನೇತೃತ್ವದ ಸಂಶೋಧನಾ ಪ್ರಯತ್ನಗಳಿಗೆ ಸಹಕಾರಿಯಾಗಲಿದೆ. ಅಲ್ಲದೇ, ಶೈಕ್ಷಣಿಕ, ಉದ್ಯಮ ಮತ್ತು ಉದಯೋನ್ಮುಖ ಕಂಪನಿಗಳ ನಡುವೆ ಸಹಯೋಗವನ್ನು ಬೆಳೆಸುತ್ತದೆ. ಕ್ವಾಂಟಮ್ ಕಂಪ್ಯೂಟಿಂಗ್ ಸವಾಲುಗಳನ್ನು ಎದುರಿಸಲು ಸಿದ್ಧವಾಗಿರುವ ಕೌಶಲ್ಯಪೂರ್ಣ ಕಾರ್ಯಪಡೆಯನ್ನು ನಿರ್ಮಿಸುವ ಗುರಿಯನ್ನು ಹೊಂದಿರುವ ನಿರ್ಣಾಯಕ ಮೂಲಸೌಕರ್ಯ ಮತ್ತು ತರಬೇತಿ ಕಾರ್ಯಕ್ರಮಗಳನ್ನು ಒದಗಿಸುತ್ತದೆ ಎಂದು ತಿಳಿದುಬಂದಿದೆ. 


Tags:    

Similar News