
ಸಮ್ಮೇಳನದಲ್ಲಿ ಸಿಎಂ ಸಿದ್ದರಾಮಯ್ಯ ಭಾಗವಹಿಸಿದ್ದರು.
ಸ್ವದೇಶಿ ಕ್ವಾಂಟಮ್ ತಂತ್ರಜ್ಞಾನ ಅಭಿವೃದ್ಧಿಗೆ ಒತ್ತು: ಸಚಿವ ಎನ್. ಎಸ್.ಭೋಸರಾಜು
ಸ್ಟಾರ್ಟ್‌ಅಪ್ ಮತ್ತು ಹಲವಾರು ತಾಂತ್ರಿಕ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸುವ ಮೂಲಕ ವಿಶ್ವಕ್ಕೆ ಈ ತಂತ್ರಜ್ಞಾನ ಪರಿಚಯಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.
ವಿನೂತನ ಕ್ವಾಂಟಮ್ ತಂತ್ರಜ್ಞಾನವನ್ನು ಸ್ವದೇಶಿಯವಾಗಿ ಅಭಿವೃದ್ದಿಪಡಿಸಿ, ಯಾವುದೇ ವಿದೇಶಿ ಖಾಸಗಿ ಸಂಸ್ಥೆಗಳ ಮೇಲೆ ಅವಲಂಬಿತರಾಗದೇ ಸರ್ಕಾರಿ ಮತ್ತು ಖಾಸಗಿ ವಲಯಗಳ ಮೂಲಕ ಸೇವಾ, ಆರೋಗ್ಯ, ಶಿಕ್ಷಣ, ಮೂಲಭೂತ ಸೌಲಭ್ಯ ಯೋಜನೆಗಳನ್ನು ಹಮ್ಮಿಕೊಳ್ಳುವುದು ಕ್ವಾಂಟಮ್ ಇಂಡಿಯಾ ಬೆಂಗಳೂರು ಸಮ್ಮೇಳನದ ಉದ್ದೇಶವಾಗಿದೆ ಎಂದು ಸಚಿವ ಎನ್. ಎಸ್ ಭೋಸರಾಜು ತಿಳಿಸಿದ್ದಾರೆ.
ದೇಶದ ಮೊದಲ ಕ್ವಾಂಟಮ್ ಸಮ್ಮೇಳನ "ಕ್ವಾಂಟಮ್ ಇಂಡಿಯಾ ಬೆಂಗಳೂರು - 2025" ಕಾರ್ಯಕ್ರಮದ ಅಂಗವಾಗಿ ಮಾಧ್ಯಮದವರೊಂದಿಗೆ ಮಾತನಾಡಿದರು. ಅತ್ಯಾಧುನಿಕ ತಂತ್ರಜ್ಞಾನವೆಂದೇ ಬಿಂಬಿಸಲಾಗಿರುವ ಕ್ವಾಂಟಮ್ ತಂತ್ರಜ್ಞಾನವನ್ನು ಇಡೀ ದೇಶಕ್ಕೆ ಪರಿಚಯಿಸುವ ಹಾಗೂ ಅದನ್ನು ಅಳವಡಿಸಿಕೊಳ್ಳಲು ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಜ್ಜಾಗಿದೆ ಎಂದು ಹೇಳಿದರು.
ಗುರುವಾರದಿಂದ(ಜು.31) ಎರಡು ದಿನಗಳ ಕಾಲ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸಮ್ಮೇಳನ ನಡೆಯುತ್ತಿದೆ. ಸರ್ಕಾರ ಕ್ವಾಂಟಮ್ ತಂತ್ರಜ್ಞಾನವನ್ನು ಅಭಿವೃದ್ದಿಪಡಿಸಲು ಖಾಸಗಿ ತಂತ್ರಜ್ಞಾನ ಸಂಸ್ಥೆಗಳು, ಸ್ಟಾರ್ಟ್‌ಅಪ್ ಮತ್ತು ಹಲವಾರು ತಾಂತ್ರಿಕ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಎರಡು ದಿನಗಳ ಕಾಲ ನಡೆಯಲಿರುವ ಈ ಕ್ವಾಂಟಮ್ ಸಮ್ಮೇಳನದ ಮುಖಾಂತರ ವಿಶ್ವಕ್ಕೆ ಈ ತಂತ್ರಜ್ಞಾನವನ್ನು ಪರಿಚಯಿಸಲಾಗುವುದು ಎಂದು ತಿಳಿಸಿದ್ದಾರೆ.
1,000 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗಿ
ವಿಶ್ವದ ಎಂಟು ರಾಷ್ಟ್ರಗಳ ಕ್ವಾಂಟಮ್ ತಂತ್ರಜ್ಞರು ಸೇರಿದಂತೆ ದೇಶದ 1,000 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದ ಕ್ವಾಂಟಮ್ ಇಂಡಿಯಾ ಬೆಂಗಳೂರು 2025 ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಕರ್ನಾಟಕ ಕ್ವಾಂಟಮ್ ರೋಡ್ ಮ್ಯಾಪ್ ಬಿಡುಗಡೆ ಮಾಡಿದರು.
ನಮ್ಮ ಸರ್ಕಾರವು ಕ್ವಾಂಟಮ್ ತಂತ್ರಜ್ಞಾನದಲ್ಲಿ ಕರ್ನಾಟಕವನ್ನು ಜಾಗತಿಕ ಕೇಂದ್ರವನ್ನಾಗಿ ರಾಜ್ಯವನ್ನಾಗಿ ರೂಪಿಸುವಲ್ಲಿ ಬದ್ಧವಾಗಿದೆ. ಈ ಸಂಬಂಧ ಕರ್ನಾಟಕವನ್ನು ಕ್ವಾಂಟಮ್ ರಾಜಧಾನಿಯನ್ನಾಗಿಸುವ ನಿಟ್ಟಿನಲ್ಲಿ ಅಗತ್ಯವಿರುವ ರೂಪುರೇಷಗಳನ್ನು ಸಿದ್ದಪಡಿಸಲು ನಮ್ಮ ಸರ್ಕಾರ ಮುಂದಡಿ ಇಟ್ಟಿದೆ. ಈಗಾಗಲೇ ಇದಕ್ಕಾಗಿ ರೋಡ್ ಮ್ಯಾಪ್ ಸಿದ್ದಪಡಿಸಲಾಗಿದ್ದು, ಈ ಕ್ಷೇತ್ರದಲ್ಲಿನ ಸಾಧಕರು ನೀಡುವ ಸಲಹೆಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದರು.
ರಾಜ್ಯದ ಆಸಕ್ತಿಯನ್ನು ಶ್ಲಾಘಿಸಿದ ನೊಬೆಲ್ ಪುರಸ್ಕೃತರು
ವಿಶ್ವದ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಅಲೆಯನ್ನು ಕ್ವಾಂಟಮ್ ಹುಟ್ಟುಹಾಕುತ್ತಿದೆ. ಈ ಕ್ಷೇತ್ರದ ಅಭಿವೃದ್ದಿಯಲ್ಲಿ ಕರ್ನಾಟಕ ರಾಜ್ಯ ತೋರಿಸುತ್ತಿರುವ ಆಸಕ್ತಿಯನ್ನು ನೊಬೆಲ್ ಪುರಸ್ಕೃತರು ಶ್ಲಾಘಿಸಿದ್ದಾರೆ.
ಕ್ವಾಂಟಮ್ ತಂತ್ರಜ್ಞಾನವು ಭವಿಷ್ಯದ ಹಲವು ಕ್ಷೇತ್ರಗಳನ್ನು ಸಂಪೂರ್ಣವಾಗಿ ಬದಲಾಯಿಸಬಲ್ಲ ಶಕ್ತಿಯನ್ನು ಹೊಂದಿದೆ. ಈ ಕ್ಷೇತ್ರದಲ್ಲಿ ಸಾಧನೆ ಮಾಡಲು ವಿದ್ಯಾರ್ಥಿಗಳಿಗೆ ಇದು ಒಂದು ಉತ್ತಮ ಅವಕಾಶವಾಗಿದೆ. ಈ ವಸ್ತುಸ್ಥಿತಿಯನ್ನು ಮನಗೊಂಡಿರುವ ಯುನೈಟೆಡ್ ನೇಷನ್ಸ್ ಇಂಟರ್‌ನ್ಯಾಷನಲ್ ಇಯರ್ ಆಫ್ ಕ್ವಾಂಟಮ್ ಎಂದು ಘೋಷಿಸಿದೆ. ಈ ಕ್ಷೇತ್ರ ಬೆಳವಣಿಗೆಯ ಹಂತದಲ್ಲಿರುವ ಸಂದರ್ಭದಲ್ಲಿ ಕರ್ನಾಟಕ ರಾಜ್ಯ, ಅದರಲ್ಲೂ ಭಾರತದ ಸಿಲಿಕಾನ್ ವ್ಯಾಲಿ ಎಂದೇ ಪ್ರಸಿದ್ದಿಯಾಗಿರುವ ಬೆಂಗಳೂರು ನಗರದಲ್ಲಿ ದೇಶದಲ್ಲೇ ಮೊದಲ ಬಾರಿಗೆ ಸಮ್ಮೇಳನ ಆಯೋಜಿಸಿರುವುದು ಸಂತಸದ ಸಂಗತಿಯಾಗಿದೆ ಎಂದು ಶ್ಲಾಘಿಸಿದರು.