Devanahalli Farmers| 1200 ದಿನಗಳ ಪ್ರತಿಭಟನೆಗೆ ಸೋತ ಸರ್ಕಾರದಿಂದ "ಹಸಿರು ವಲಯ" ಅಸ್ತ್ರ ಪ್ರಯೋಗ?

ಸಚಿವ ಸಂಪುಟ ಸಭೆಯ ಮುಂದೆ ಈ ಬಗ್ಗೆ ಪ್ರಸ್ತಾಪ ಇಡುವ ಸಾಧ್ಯತೆ ಇದೆ. ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಭೂಸ್ವಾಧೀನ ಪ್ರಕ್ರಿಯೆ ಕೈಬಿಟ್ಟಿರುವ ಬಗ್ಗೆ ಚರ್ಚಿಸಿ ಅಧಿಕೃತ ತೀರ್ಮಾನ ಕೈಗೊಳ್ಳಲಾಗುತ್ತದೆ.;

Update: 2025-07-17 03:23 GMT

ರೈತರ 1200 ದಿನಗಳ ಪ್ರತಿಭಟನೆ ಬಳಿಕ ರೈತರ ಕೈಗಾರಿಕಾಭಿವೃದ್ಧಿಗಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಮತ್ತು ಆ ಪ್ರದೇಶದ ಸುತ್ತಮುತ್ತ ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಸರ್ಕಾರ ಕೈಬಿಡುವ ಮಹತ್ವದ ತೀರ್ಮಾನ ಕೈಗೊಂಡಿದೆ. ಆದರೆ, ಕೈಬಿಟ್ಟ ಜಮೀನು ಪ್ರದೇಶವನ್ನು ಹಸಿರು ವಲಯ ಎಂದು ಘೋಷಣೆ ಮಾಡುವ ಸಾಧ್ಯತೆ ಇದ್ದು, ಒಂದು ವೇಳೆ ಹೀಗೆ ಘೋಷಣೆ ಮಾಡಿದರೆ ರೈತರಿಗೆ ಮತ್ತೊಂದು ಸಂಕಷ್ಟ ಎದುರಾಗುವ ನಿರೀಕ್ಷೆ ಇದೆ. 

ಏರೋಸ್ಪೆಸ್‌ ಕೈಗಾರಿಕಾ ವಲಯ ಸ್ಥಾಪನೆಗಾಗಿ 1777 ಎಕರೆ ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಸರ್ಕಾರದ ನಡೆಯನ್ನು ವಿರೋಧಿಸಿ ಅಲ್ಲಿನ ಸಾವಿರಾರು ರೈತರು ಸರಿ ಸುಮಾರು ಮೂರು ವರ್ಷಗಳಿಂದ ನಿರಂತರ ಹೋರಾಟ ನಡೆಸಿದರು. ಇದರ ಫಲವಾಗಿ ಸರ್ಕಾರ ರೈತರ ಒತ್ತಡಕ್ಕೆ ಮಣಿದಿದ್ದು, ಭೂಸ್ವಾಧೀನ ಪ್ರಕ್ರಿಯೆಯನ್ನು ಕೈ ಬಿಟ್ಟಿದೆ. ಈ ಬಗ್ಗೆ ಸರ್ಕಾರ ಅಧಿಕೃತ ಅಧಿಸೂಚನೆ ಹೊರಡಿಸಲಿದೆ. ಈ ವೇಳೆ ಕೆಲವೊಂದು ಷರತ್ತುಗಳನ್ನು ವಿಧಿಸಲಿದೆ ಎಂದು ಮೂಲಗಳು ಹೇಳಿವೆ. 

ಮುಂಬರುವ ಸಚಿವ ಸಂಪುಟ ಸಭೆಯ ಮುಂದೆ ಈ ಬಗ್ಗೆ ಪ್ರಸ್ತಾಪ ಇಡಲಾಗುತ್ತದೆ. ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟದ ಸಹೋದ್ಯೋಗಿಗಳೊಂದಿಗೆ ಭೂಸ್ವಾಧೀನ ಪ್ರಕ್ರಿಯೆ ಕೈಬಿಟ್ಟಿರುವ ಬಗ್ಗೆ ಚರ್ಚಿಸಿ ಅಧಿಕೃತ ತೀರ್ಮಾನ ಕೈಗೊಳ್ಳಲಾಗುತ್ತದೆ. ಈ ಸಂದರ್ಭದಲ್ಲಿ ಕೆಲವೊಂದು ಷರತ್ತುಗಳನ್ನು ರೈತರಿಗೆ ವಿಧಿಸಲಾಗುತ್ತದೆ. ಇವುಗಳಲ್ಲಿ ಕೃಷಿಗೆ ಹೊರತುಪಡಿಸಿ ಮತ್ತಾವುದೇ ಉದ್ದೇಶಕ್ಕೆ ಭೂಮಿಯನ್ನು ಬಳಕೆ ಮಾಡುವಂತಿಲ್ಲ ಎಂಬ ಷರತ್ತನ್ನು ಪ್ರಮುಖವಾಗಿ ವಿಧಿಸುವ ನಿರೀಕ್ಷೆ ಇದೆ. ಕೈಬಿಟ್ಟಿರುವ ಜಮೀನನ್ನು ಹಸಿರು ವಲಯ ಎಂದು ಘೋಷಣೆ ಮಾಡುವ ಸಾಧ್ಯತೆ ಇದೆ. ಒಂದು ವೇಳೆ ಸರ್ಕಾರ ಇಂತಹ ಷರತ್ತನ್ನು ವಿಧಿಸಿದರೆ ರೈತರು ಮತ್ತೊಂದು ರೀತಿಯ ಸಂಕಷ್ಟಕ್ಕೀಡಾಗುವ ಸಾಧ್ಯತೆ ಇದೆ. 

ಮುಂದಿನ ದಿನದಲ್ಲಿ ರೈತರು ಒಂದು ವೇಳೆ ಭೂಮಿಯನ್ನು ಮಾರಾಟ ಮಾಡಬೇಕು ಎಂಬ ಉದ್ದೇಶ ಹೊಂದಿದ್ದರೆ ಮಾರಾಟ ಮಾಡಲು ಬರುವುದಿಲ್ಲ. ಹಸಿರು ವಲಯ ಪ್ರದೇಶ ಎಂದು ಹೇಳಿದರೆ ಅಲ್ಲಿ ಕೃಷಿ ಚಟುವಟಿಕೆ ಮಾತ್ರ ಕೈಗೊಳ್ಳಬೇಕಾಗುತ್ತದೆ. ಇದನ್ನು ಹೊರತುಪಡಿಸಿ ಬೇರಾವುದೇ ಚಟುವಟಿಕೆಗಳನ್ನು ಮಾಡಲು ಬರುವುದಿಲ್ಲ. ಇದು ಪರೋಕ್ಷವಾಗಿ ಸರ್ಕಾರ ನಡೆಸಿರುವ ಜಾಣೆ ನಡೆ ಎಂದೇ ಹೇಳಬಹುದಾಗಿದೆ. ಭೂಮಿಗೆ ಎಷ್ಟೇ ಬೆಲೆ ಬಂದರೂ ಮಾರಾಟ ಮಾಡಲು ಸಾಧ್ಯವಾಗದಿದ್ದಾಗ ಭವಿಷ್ಯದಲ್ಲಿ ಮತ್ತೆ ಸರ್ಕಾರಕ್ಕೆ ಭೂಮಿ ನೀಡುವ ಪ್ರಮೇಯ ಬಂದರೂ ಬರಬಹುದು ಎಂಬುದು ಸರ್ಕಾರದ ಲೆಕ್ಕಾಚಾರವಾಗಿದೆ ಎಂದು ಹೇಳಲಾಗಿದೆ. 

ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಹಿಂತಿರುಗಿಸಿದರೂ ಸರ್ಕಾರ ಮುಂದೆ ಕೈಗೊಳ್ಳಬಹುದಾದ ತೀರ್ಮಾನವು ರೈತರಲ್ಲಿ ಆತಂಕ ಮೂಡಿಸಿದೆ. ಕೃಷಿಗಾಗಿ ಜಮೀನನನ್ನು ಎಷ್ಟು ವರ್ಷಗಳ ಕಾಲ ಬಳಕೆ ಮಾಡಬಹುದು. ಭವಿಷ್ಯದಲ್ಲಿ ಕೃಷಿ ಚಟುವಟಿಕೆ ನಿಲ್ಲಿಸುವಂತಹ ಪರಿಸ್ಥಿತಿ ಎದುರಾದರೆ ಮುಂದೇನು ಎಂಬಂತಹ ಪ್ರಶ್ನೆಗಳು ಎದುರಾಗಲಿವೆ. ಇಂತಹ ಸ್ಥಿತಿಯಲ್ಲಿ ರೈತರು ಯಾವ ನಿರ್ಧಾರ ಕೈಗೊಳ್ಳಬೇಕು ಎಂಬುದು ಯಕ್ಷಪ್ರಶ್ನೆಯಾಗಲಿದೆ ಎನ್ನಲಾಗಿದೆ. 

ಕೈಗಾರಿಕೆ ಹೊರತು ಪಡಿಸಿ ಬೇರೆ ಉದ್ದೇಶಕ್ಕೆ ಬಳಸಬಹುದೇ? 

ಸಾಮಾನ್ಯವಾಗಿ ಎಲ್ಲಾ ಭೂಮಿಯನ್ನು ಕೃಷಿ ಭೂಮಿ ಎಂದು ಕರೆಯಲಾಗುತ್ತದೆ. ಒಂದು ನಿರ್ದಿಷ್ಟ ಭೂಮಿ ಕೃಷಿಯೇತರ ವರ್ಗಕ್ಕೆ ಬರದಿದ್ದರೆ, ಅದನ್ನು ಕೃಷಿ ಉದ್ದೇಶಕ್ಕಾಗಿ ಬಳಸಲಾಗಿದೆಯೋ ಇಲ್ಲವೋ ಎಂಬುದನ್ನು ಲೆಕ್ಕಿಸದೆ ಅದನ್ನು ಕೃಷಿ ಭೂಮಿ ಎನ್ನಲಾಗುತ್ತದೆ. ಒಂದು ಜಮೀನು ಅಥವಾ ಪ್ರದೇಶವನ್ನು ಮುಖ್ಯವಾಗಿ ಕೃಷಿ ಉದ್ದೇಶಗಳಿಗಾಗಿ ಬಳಸಿದಾಗ, ಪ್ರಾದೇಶಿಕ ಯೋಜನೆಯು ಅದನ್ನು ಹಸಿರು ವಲಯದ ಅಡಿಯಲ್ಲಿ ಇರಿಸಲಾಗುತ್ತದೆ. ಕೃಷಿ ಪದ್ಧತಿಗಳನ್ನು ಉತ್ತೇಜಿಸಲು ಮತ್ತು ರಕ್ಷಿಸಲು ಇದನ್ನು ಮಾಡಲಾಗುತ್ತದೆ. ಆದರೂ  ಹಸಿರು ವಲಯವನ್ನು ಸಂಪೂರ್ಣವಾಗಿ ಕೃಷಿಗೆ ಬಳಸಲಾಗುವುದಿಲ್ಲ. ಯಾಕೆಂದರೆ, ಕೃಷಿ ಭೂಮಿಯನ್ನು ಕೃಷಿ ಆಧಾರಿತ ಕೈಗಾರಿಕೆಗಳಂತಹ ವಿವಿಧ ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳಬಹುದು.  ಒಂದು ಹಳ್ಳಿಯ ಪ್ರದೇಶಕ್ಕೆ ಉತ್ತಮ ಸಂಪರ್ಕಕ್ಕಾಗಿ ನಿರ್ಮಿಸಲಾದ ರಸ್ತೆ, ಆಸ್ಪತ್ರೆಗಳು ಮತ್ತು ಶಾಲೆಗಳಂತಹ ಸೌಲಭ್ಯಗಳಿಗೆ ಬಳಸಬಹುದು ಎಂದು ಹೇಳಲಾಗಿದೆ. 

ರೈತರ ದಣಿವರಿಯದ ಪ್ರತಿಭಟನೆ

ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯಲ್ಲಿ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಹೋರಾಟಕ್ಕೆ ಮಣಿದಿರುವ ರಾಜ್ಯ ಸರ್ಕಾರ ಕೊನೆಗೂ ಭೂಸ್ವಾಧೀನ ಪ್ರಕ್ರಿಯೆ ಕೈ ಬಿಡಲು ನಿರ್ಧರಿಸಿತ್ತು.

ಮಂಗಳವಾರ(ಜು.15) ಸಿಎಂ ಸಿದ್ದರಾಮಯ್ಯ ಅವರು ನೇತೃತ್ವದಲ್ಲಿ ನಡೆದ ಅಧಿಕಾರಿಗಳು ಹಾಗೂ ರೈತರ ಜತೆಗಿನ ಸಭೆಯಲ್ಲಿ ಈ ತೀರ್ಮಾನ ಮಾಡಲಾಗಿತ್ತು. ಆದರೆ, ರೈತರು ಸ್ವಯಂ ಪ್ರೇರಿತರಾಗಿ ಭೂಮಿ ಮಾರಾಟ ಮಾಡಲು ಮುಂದೆ ಬಂದರೆ ಒಪ್ಪಂದದ ಮೇಲೆ ಖರೀದಿಸಲಾಗುವುದು. ಅದನ್ನು ಯಾರು ತಡೆಯಲು ಆಗುವುದಿಲ್ಲ, ನಮಗೆ ಕೈಗಾರಿಕೆಗಳೂ ಅಭಿವೃದ್ಧಿಯಾಗಬೇಕು. ಜಮೀನು ಕೊಡುವ ರೈತರಿಗೆ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು.

ದೇವನಹಳ್ಳಿ ತಾಲೂಕು ಬೆಂಗಳೂರಿಗೆ ಹತ್ತಿರದಲ್ಲಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೂ ಇದೆ. ರಾಜ್ಯದ ಪ್ರತಿಯೊಬ್ಬರ ವರಮಾನ ಹೆಚ್ಚಳವಾಗಬೇಕಿದ್ದರೆ ಅಭಿವೃದ್ದಿ ಕಾರ್ಯ ನಡೆಯಬೇಕಾಗಿದೆ. ಹೊಸ ಕೈಗಾರಿಕೆಗಳ ಪ್ರಾರಂಭ, ಬಂಡವಾಳ ಹೂಡಿಕೆಗೆ ಜಮೀನಿನ ಅಗತ್ಯವಿದೆ. ಕೈಗಾರಿಕೆಗಳನ್ನು ಪ್ರಾರಂಭಿಸಲು ಸರ್ಕಾರ ಜಮೀನು ಸ್ವಾಧೀನಪಡಿಸಿಕೊಳ್ಳಬೇಕಾಗುತ್ತದೆ.

ರಾಜ್ಯದಲ್ಲಿ ಭೂಸ್ವಾಧೀನ ವಿರುದ್ಧ ಈ ಮಟ್ಟದ ದೊಡ್ಡ ಪ್ರತಿಭಟನೆ ನಡೆದಿರಲಿಲ್ಲ. ಅದು ಫಲವತ್ತಾದ ವ್ಯವಸಾಯಕ್ಕೆ ಯೋಗ್ಯವಾದ ಭೂಮಿ. ಅಲ್ಲಿನ ರೈತರು ಆ ಜಮೀನಿನ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಆದ್ದರಿಂದ ಭೂಸ್ವಾಧೀನ ಪ್ರಕ್ರಿಯೆ ಕೈಬಿಡಬೇಕೆಂದು ಹೋರಾಟಗಾರರು ಸ್ಪಷ್ಟಪಡಿಸಿದ್ದಾರೆ. ಸರ್ಕಾರ ರೈತರು, ಜಮೀನುದಾರರು ಸೇರಿದಂತೆ ಎಲ್ಲರ ಅಹವಾಲುಗಳನ್ನು ಆಲಿಸಿದೆ. ರಾಜ್ಯದ ಅಭಿವೃದ್ದಿಗೆ, ಬೆಳವಣಿಗೆಗೆ ಕೈಗಾರಿಕೆ ಉತ್ತೇಜನ ನೀಡುವುದು ಅಗತ್ಯವಿದೆ ಎಂದು  ಸಿದ್ದರಾಮಯ್ಯ ಹೇಳಿದ್ದರು.

Tags:    

Similar News