Farmerʼs Protest | ದೆಹಲಿ ರೈತರ ಹೋರಾಟ ಬೆಂಬಲಿಸಿ ಡಿ.31 ರಂದು ಪಂಜಿನ ಮೆರವಣಿಗೆ

ದೆಹಲಿ ಗಡಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಜಗಜಿತ್ ಸಿಂಗ್ ದಲೆವಾಲ ಹೋರಾಟ ಬೆಂಬಲಿಸಿ ರಾಜ್ಯಾದ್ಯಂತ ಡಿ.31 ರಂದು ಸಂಜೆ ಪಂಜಿನ ಮೆರವಣಿಗೆ ನಡೆಸಲಾಗುವುದು ಎಂದು ಕುರುಬೂರು ಶಾಂತಕುಮಾರ್‌ ಹೇಳಿದ್ದಾರೆ

Update: 2024-12-30 12:19 GMT
ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್
Click the Play button to listen to article

ದೆಹಲಿ ಗಡಿಯಲ್ಲಿ ದೇಶದ ರೈತರ ಒಳಿತಿಗಾಗಿ ಉಪವಾಸ ನಡೆಸುತ್ತಿರುವ ಜಗಜಿತ್ ಸಿಂಗ್ ದಲೆವಾಲ ಹೋರಾಟ ಬೆಂಬಲಿಸಿ ರಾಜ್ಯಾದ್ಯಂತ ಡಿ.31 ರಂದು ಸಂಜೆ 6 ಗಂಟೆಗೆ ಪಂಜಿನ ಮೆರವಣಿಗೆ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ತಿಳಿಸಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು ಕೇಂದ್ರ ಸರ್ಕಾರದ ಭಿಕ್ಷೆ ಕೇಳುತ್ತಿಲ್ಲ. ನಮ್ಮ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು ಜಾರಿ ಮಾಡಬೇಕೆಂದು ಹೋರಾಟ ಮಾಡುತ್ತಿದ್ದೇವೆ. ಈ ಬಗ್ಗೆ ಗಂಭೀರತೆ ತೋರದ ಕೇಂದ್ರ ಸರ್ಕಾರ,  ಯಾರು ಕೇಳದೆ ಇರುವ ಒಂದು ದೇಶ ಒಂದು ಚುನಾವಣೆ, ಒಂದು ದೇಶ ಒಂದು ಜಿಎಸ್‌ಟಿ, ಒಂದು ದೇಶ ಒಂದು ಪಡಿತರ ಕಾರ್ಡ್ ಜಾರಿಗೆ ತರುತ್ತಿದೆ. ದೇಶದ ಜನಸಂಖ್ಯೆಯಲ್ಲಿ ಶೇ. 80ರಷ್ಟು ಇರುವ ರೈತರು ಕೇಂದ್ರ ಸರ್ಕಾರಕ್ಕೆ ಮತ ನೀಡಿದ್ದಾರೆ. ರೈತರ ಬೇಡಿಕೆಗೆ ನಿರಾಶಕ್ತಿ ತೋರುತ್ತಿರುವ ಕೇಂದ್ರ ಸರ್ಕಾರ ಯಾಕೆ ಬೇಕು ಎಂಬುದನ್ನು ನಾವು ಆಯ್ಕೆ ಮಾಡಿದ ಲೋಕಸಭಾ ಸದಸ್ಯರು ಪ್ರಶ್ನಿಸಬೇಕು. ಆದರೆ ಅವರು ನಿದ್ರೆ ಮಾಡುತ್ತಿದ್ದಾರೆ. ಸಂಸದರು ಕೇಂದ್ರವನ್ನು ಪ್ರಶ್ನಿಸದಿದ್ದರೆ ಹಳ್ಳಿಗಳಿಗೆ ಬಂದರೆ ನಿಮ್ಮನ್ನು ಹೊರಗೆ ಇಡಬೇಕಾಗುತ್ತದೆ ಎಂದು ಎಂದು ಅವರು ಎಚ್ಚರಿಸಿದರು. 

ರೈತ ನಾಯಕ ದಲೈವಾಲಾ ಅವರು 33 ದಿನದಿಂದ ಉಪವಾಸ ಕುಳಿತಿದ್ದಾರೆ. ಅದು ನಿಮ್ಮ ಕಣ್ಣಿಗೆ ಕಾಣುತ್ತಿಲ್ಲವೇ?  ರೈತರ ಪಾಲಿಗೆ ಸರ್ಕಾರ ಸತ್ತು ಹೋಗಿದೆಯೇ ಎಂದು ಪ್ರಶ್ನೆ ಮಾಡುತ್ತಿದ್ದೇವೆ. ಈಗಾಗಲೇ ಹಳ್ಳಿ ಹಳ್ಳಿಗಳಲ್ಲಿ ಮೇಣದ ಬತ್ತಿ ಉರಿಸಿ ಪ್ರತಿಭಟನೆ ಮಾಡಿ ರೈತರ ಆಕ್ರೋಶ ವ್ಯಕ್ತಪಡಿಸಲಾಗಿದೆ. ವಿದೇಶಗಳಿಗೆ ಹೋಗಿ ಯಾವುದೇ ಸಮಸ್ಯೆಯನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಿ ಎಂದು ಹಿತವಚನ ಹೇಳುವ ಪ್ರಧಾನಿ ಮೋದಿ ಅವರಿಗೆ ದೇಶದ ರೈತರು ನ್ಯಾಯಕ್ಕಾಗಿ ತಿಂಗಳುಗಟ್ಟಲೆ ಉಪವಾಸ ಮಾಡುತ್ತಿದ್ದರು ಕಾಣುತ್ತಿಲ್ಲವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

33 ದಿನಗಳಿಂದ ಉಪವಾಸ ಸತ್ಯಾಗ್ರಹ ಮಾಡುತ್ತಿರುವ ಜಗಜಿತ್ ಸಿಂಗ್ ದಲೆವಾಲ ಅವರನ್ನ ಆಸ್ಪತ್ರೆಗೆ ರವಾನಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿದರೂ ಪಾಲಿಸಿಲ್ಲ ಎಂದು ನ್ಯಾಯಾಂಗ ಉಲ್ಲಂಘನೆ ಮೊಕದಮೆ ದಾಖಲಿಸುವುದಾಗಿ ಪಂಜಾಬ್ ಸರ್ಕಾರಕ್ಕೆ ಎಚ್ಚರಿಸಿದೆ. ಬೇರೆ ಬೇರೆ ರಾಜ್ಯಗಳ ರೈತರು ಕನೂರಿ ಬಾರ್ಡರ್ ಗೇ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಜಮಾವಣೆ ಆಗುತ್ತಿದ್ದಾರೆ. ಕರ್ನಾಟಕ ರೈತರ ತಂಡವು ಸದ್ಯದಲ್ಲಿಯೇ ದೆಹಲಿ ಕಡೆ ಹೋಗುತ್ತಿದೆ ಎಂದರು.

Tags:    

Similar News