ಸಿಎಂ ಗಾದಿಗಾಗಿ ಕಾಂಗ್ರೆಸ್ಸಿನಲ್ಲಿ ಶಾಸಕರ ಕುದುರೆ ವ್ಯಾಪಾರ; ವಿಜಯೇಂದ್ರ ಆರೋಪ

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಪಡೆಯಲು ಭೂಮಿಕೆ ಸಿದ್ಧಪಡಿಸಲಾಗುತ್ತಿದೆ. ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅದಕ್ಕಾಗಿಯೇ ರಾಜ್ಯಕ್ಕೆ ಬಂದಿದ್ದಾರೆ ಎಂದು ವಿಜಯೇಂದ್ರ ಹೇಳಿದ್ದಾರೆ.;

Update: 2025-07-02 12:38 GMT

ವಿಜಯೇಂದ್ರ

ಕರ್ನಾಟಕದಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ. ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಹುದ್ದೆಗಾಗಿ ತೀವ್ರ ಪೈಪೋಟಿ ಆರಂಭವಾಗಿದ್ದು, ಶಾಸಕರ ಕುದುರೆ ವ್ಯಾಪಾರವೂ ನಡೆಯುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ.

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಆಡಳಿತ ನಿಷ್ಕ್ರಿಯವಾಗಿದೆ. ಆಡಳಿತ ಪಕ್ಷದ ಶಾಸಕರೇ ಸರ್ಕಾರದ ವಿರುದ್ಧ ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ. ಸತತ ಬೆಲೆ ಏರಿಕೆ, ರೈತರ ಕಡಗಣನೆಯಿಂದಾಗಿ ಆತ್ಮಹತ್ಯೆ ಪ್ರಕರಣಗಳು ಏರಿಕೆಯಾಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಬಿಐ ತನಿಖೆ; ಬಿಜೆಪಿಗೆ ದೊಡ್ದ ಜಯ

ವಾಲ್ಮೀಕಿ ನಿಗಮದಲ್ಲಿ ದೊಡ್ಡ ಹಗರಣ ನಡೆದಿದೆ. ಪರಿಶಿಷ್ಟ ಪಂಗಡಗಳ ಆರ್ಥಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ನೆರೆಯ ರಾಜ್ಯಕ್ಕೆ ಕೊಂಡೊಯ್ದು ಬಾರ್, ಜ್ಯುವೆಲ್ಲರಿ ಶಾಪ್‌ನಲ್ಲಿ ಹೂಡಿಕೆ ಮಾಡಲಾಗಿದೆ. ನಿಗಮದ ಹಣವನ್ನು ಚುನಾವಣೆಗೂ ಬಳಸಿಕೊಳ್ಳಲಾಗಿದೆ. ಹಗರಣ ಕುರಿತು ಬಿಜೆಪಿ ನಡೆಸಿದ ಹೋರಾಟದ ಫಲವಾಗಿ ಸಚಿವ ನಾಗೇಂದ್ರ ಅವರನ್ನು ಸಂಪುಟದಿಂದ ಕೈಬಿಡಲಾಯಿತು. ನಾಗೇಂದ್ರ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳಲು ಪ್ರಯತ್ನದ ನಡುವೆಯೇ ಹೈಕೋರ್ಟ್ ನ್ಯಾಯಪೀಠ ಪ್ರಕರಣವನ್ನು ಸಿಬಿಐ ತನಿಖೆಗೆ ಆದೇಶಿಸಿದೆ. ಇದು ಬಿಜೆಪಿ ಪಕ್ಷದ ಹೋರಾಟಕ್ಕೆ ಸಂದ ಜಯ ಎಂದು ವಿಜಯೇಂದ್ರ ಹೇಳಿದ್ದಾರೆ.

ಸಿಎಂ ರಾಜೀನಾಮೆ ಪಡೆಯಲು ಭೂಮಿಕೆ ಸಿದ್ಧ

ಸಿಎಂ ಸಿದ್ದರಾಮಯ್ಯ ಅವರಿಂದ ರಾಜೀನಾಮೆ ಪಡೆಯಲು ಭೂಮಿಕೆ ಸಿದ್ಧಪಡಿಸಲಾಗಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅದಕ್ಕಾಗಿಯೇ ಕರ್ನಾಟಕಕ್ಕೆ ಬಂದಿದ್ದಾರೆ ಎಂದು ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ.

ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಅವರು ಡಿಕೆಶಿಯವರಿಗೆ 100 ಜನ ಶಾಸಕರ ಬೆಂಬಲ ಇದೆ, ಅವರು ಮುಖ್ಯಮಂತ್ರಿ ಆಗಬೇಕು ಎಂದಿದ್ದಾರೆ. ಕಾಂಗ್ರೆಸ್ಸಿನ ಹಿರಿಯ ಶಾಸಕರಾದ ಬಿ.ಆರ್.ಪಾಟೀಲ್, ರಾಜು ಕಾಗೆ ಸೇರಿ ಬೇರೆ ಶಾಸಕರು ಮುಖ್ಯಮಂತ್ರಿಗಳ ವಿರುದ್ಧ ಹೇಳಿಕೆ ಕೊಡುತ್ತಿದ್ದಾರೆ. ಇದನ್ನು ಗಮನಿಸಿದರೆ ಮುಖ್ಯಮಂತ್ರಿಗಳು ಸ್ವಪಕ್ಷೀಯ ಶಾಸಕರ ವಿಶ್ವಾಸವನ್ನೂ ಕಳೆದುಕೊಂಡಿರುವುದು ತಿಳಿದುಬರಲಿದೆ. ಈ ಬಗ್ಗೆ ರಾಜ್ಯಪಾಲರು ಗಮನ ಹರಿಸಬೇಕು ಎಂದು ವಿನಂತಿಸಿದ್ದಾರೆ.

ಹಾಸನಕ್ಕೆ ಮಾತ್ರ ಲಸಿಕೆ ಕೊಡಲಾಗಿದೆಯೇ?

ಹೃದಯಾಘಾತದಿಂದ ಹಾಸನ ಜಿಲ್ಲೆಯಲ್ಲಿ 35- 40 ಜನರು ಸತ್ತಿದ್ದು, ಕೋವಿಡ್ ಲಸಿಕೆ ಕಾರಣ ಎಂಬ ಮುಖ್ಯಮಂತ್ರಿ ಆರೋಪಕ್ಕೆ ಉತ್ತರಿಸಿದ ಅವರು, ಹಾಸನ ಜಿಲ್ಲೆಗೆ ಮಾತ್ರ ಕೋವಿಡ್ ಲಸಿಕೆ ಕೊಡಲಾಗಿದೆಯೇ?, ದೇಶದ ಕೋಟ್ಯಂತರ ಜನರು, ಜಗತ್ತಿನ ಬೇರೆ ಬೇರೆ ರಾಷ್ಟ್ರಗಳ ಜನರು ಕೂಡ ಕೋವಿಡ್ ಲಸಿಕೆ ಪಡೆದಿದ್ದಾರೆ. ಹಾಸನದ ಸಾವುಗಳ ಸಂಬಂಧ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಸಮರ್ಪಕ ತನಿಖೆ ನಡೆಸಬೇಕಿದೆ ಎಂದು ವಿಜಯೇಂದ್ರ ಆಗ್ರಹಿಸಿದ್ದಾರೆ.

ಕೇಂದ್ರದಲ್ಲಿ ಅಧಿಕಾರ, ಆರೆಸ್ಸೆಸ್ ನಿಷೇಧ- ತಿರುಕನ ಕನಸು

ಆರೆಸ್ಸೆಸ್ ನಿಷೇಧ ಕುರಿತ ಪ್ರಿಯಾಂಕ್ ಖರ್ಗೆ ಹೇಳಿಕೆ ಪ್ರಸ್ತಾಪಿಸಿದ ಅವರು, ಇದು ತಿರುಕನ ಕನಸು ಎಂದು ವ್ಯಂಗ್ಯವಾಡಿದ್ದಾರೆ.

ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂಬುದನ್ನು ಸ್ವತಃ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರೇ ನಂಬಲು ಸಿದ್ಧರಿಲ್ಲ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂಬ ಕನಸು ಪ್ರಿಯಾಂಕ್ ಖರ್ಗೆಯವರಿಗೆ ಯಾಕೆ ಬಿತ್ತೋ ಗೊತ್ತಾಗುತ್ತಿಲ್ಲ. ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಒಂದು ರಾಷ್ಟ್ರಭಕ್ತ ಸಂಘಟನೆ. ಭಾರತ- ಚೀನಾ ಯುದ್ಧದ ವೇಳೆ ಆರೆಸ್ಸೆಸ್ ಪಾತ್ರವನ್ನು ಕಾಂಗ್ರೆಸ್ ಪಕ್ಷದವರೇ ಆಗಿದ್ದ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಸ್ವಾಗತಿಸಿದ್ದರು. ಅದರ ಬಳಿಕ ರಿಪಬ್ಲಿಕ್ ಪರೇಡ್ನಲ್ಲಿ ಅವಕಾಶ ಕೊಡಲಾಗಿತ್ತು ಎಂದು ಪ್ರಿಯಾಂಕ್ ಖರ್ಗೆಗೆ ತಿರುಗೇಟು ನೀಡಿದ್ದಾರೆ.

ಹಿಂದೂಗಳ ಮೇಲೆ ದೌರ್ಜನ್ಯ

ಸಿಂಧನೂರಿನಲ್ಲಿ ಹಿಂದೂ ಕಾರ್ಯಕರ್ತರು, ಸಂಕೇಶ್ವರದಲ್ಲಿ ಶ್ರೀರಾಮಸೇನೆ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿದೆ. ಪದೇ ಪದೇ ರಾಜ್ಯದಲ್ಲಿ ಗೋವುಗಳ ಕೆಚ್ಚಲು ಕೊಯ್ದು ವಿಕೃತಿ ಮೆರಯುತ್ತಿರುವ ಪ್ರಕರಣಗಳು ವರದಿಯಾಗಿವೆ. ಇದರ ಬಗ್ಗೆ ರಾಜ್ಯ ಸರ್ಕಾರ ಚಕಾರ ಎತ್ತುತ್ತಿಲ್ಲ ಎಂದು ವಿಜಯೇಂದ್ರ ಟೀಕಿಸಿದ್ದಾರೆ.

ಸರ್ಕಾರದ ಪಾಪದ ಕೊಡ ತುಂಬಿದೆ, ಜನರು ಶಾಪ ಹಾಕುತ್ತಿದ್ದಾರೆ. ಹಸುವಿನ ಕೆಚ್ಚಲು ಕೊಯ್ದ ಘಟನೆಗಳು ಮರುಕಳುಹಿಸುತ್ತಿದ್ದರೂ ಸುಮ್ಮನಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಒಳ್ಳೆಯದಾಗುವುದಿಲ್ಲ ಎಂದು ಶಪಿಸಿದ್ದಾರೆ.

Tags:    

Similar News