ಬೆಂಗಳೂರು ಗ್ರಾಮಾಂತರ ಜಿಲ್ಲೆ ಇನ್ನು ಮುಂದೆ ಬೆಂಗಳೂರು ಉತ್ತರ ತಾಲ್ಲೂಕು

' ಬ್ರಾಂಡ್ ಬೆಂಗಳೂರು' ಮೌಲ್ಯ ಮತ್ತು ಲಾಭವನ್ನು ಬೆಂಗಳೂರು ಸುತ್ತಮುತ್ತಲ ಜಿಲ್ಲೆಗಳಿಗೂ ವಿಸ್ತರಿಸಲು ಸರ್ಕಾರ ಈ ನಿರ್ಣಯ ಕೈಗೊಳ್ಳಲಾಗಿದೆ.;

Update: 2025-07-02 14:52 GMT

ಇತ್ತೀಚೆಗೆ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಿದ ರಾಜ್ಯ ಕಾಂಗ್ರೆಸ್‌ ಸರ್ಕಾರ ಇದೀಗ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಬೆಂಗಳೂರು ಉತ್ತರ ತಾಲ್ಲೂಕು ಎಂದು ಮರು ನಾಮಕರಣ ಮಾಡಿದೆ. 

ಈ ಬಗ್ಗೆ ನಂದಿಬೆಟ್ಟದಲ್ಲಿ ಬುಧವಾರ (ಜು.೨) ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟದ  ವಿಶೇಷ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದೆ. ಸಭೆಯಲ್ಲಿ ಈ ಕುರಿತು ಪ್ರಸ್ತಾಪ ಮಂಡಿಸಿ ಅನುಮೋದನೆ ಪಡೆದುಕೊಳ್ಳಲಾಯಿತು. ' ಬ್ರಾಂಡ್ ಬೆಂಗಳೂರು' ಮೌಲ್ಯ ಮತ್ತು ಲಾಭವನ್ನು ಬೆಂಗಳೂರು ಸುತ್ತಮುತ್ತಲ ಜಿಲ್ಲೆಗಳಿಗೂ ವಿಸ್ತರಿಸಲು ಈ ನಿರ್ಣಯ ಕೈಗೊಳ್ಳಲಾಗಿದೆ. 

ಬೆಂಗಳೂರು ಗ್ರಾಮಾಂತರ ಜಿಲ್ಲೆಯು ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ, ನೆಲಮಂಗಲ ಭಾಗವನ್ನು ಒಳಗೊಂಡಿದೆ. ಇದೀಗ ಬೆಂಗಳೂರು ಉತ್ತರ ತಾಲೂಕು ಎಂದು ಮರುನಾಮಕರಣ ಮಾಡಲಾಗಿದ್ದು, ಶೀಘ್ರದಲ್ಲಿಯೇ ಅಧಿಕೃತವಾಗಿ ಅಧಿಸೂಚನೆ ಹೊರಡಿಸಲಾಗುತ್ತದೆ. 1986ರಲ್ಲಿ ಬೆಂಗಳೂರು ನಗರ ಜಿಲ್ಲೆಯಿಂದ ಪ್ರತ್ಯೇಕಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ರಚಿಸಲಾಯಿತು. ಆ ಸಮಯದಲ್ಲಿ ರಾಮನಗರ ಜಿಲ್ಲೆಯ ತಾಲ್ಲೂಕುಗಳು ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಗೆ ಒಳಪಟ್ಟಿದ್ದವು. 2007ರ ಆಗಸ್ಟ್ 3ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಮತ್ತೇ ರಾಮನಗರ ಜಿಲ್ಲೆಯಾಗಿ ವಿಭಜಿಸಲಾಗಿತ್ತು. ರಾಮನಗರ,ಮಾಗಡಿ, ಕನಕಪುರ, ಚನ್ನಪಟ್ಟಣ ತಾಲ್ಲೂಕುಗಳನ್ನು ಈ ಜಿಲ್ಲೆ ಒಳಗೊಂಡಿದೆ. ಇದೀಗ ರಾಮನಗರ ಜಿಲ್ಲೆ ಬೆಂಗಳೂರು ದಕ್ಷಿಣ ಆಗಿದೆ. 

ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಇದುವರೆಗೂ ಯಾವುದೇ ಜಿಲ್ಲಾ ಕೇಂದ್ರ ಇಲ್ಲ. ಹಾಗಾಗಿ ಜಿಲ್ಲಾ ಕೇಂದ್ರವೇ ಇಲ್ಲದ ರಾಜ್ಯದ ಏಕೈಕ ಜಿಲ್ಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಆಗಿತ್ತು. ಈಗ ಬೆಂಗಳೂರು ಉತ್ತರ ತಾಲೂಕು ಮಾಡಿರುವುದರಿಂದ ಬೆಂಗಳೂರೇ ಜಿಲ್ಲಾ ಕೇಂದ್ರವಾಗಲಿದೆ. 

ಡಾ.ಮನಮೋಹನ್‌ ಸಿಂಗ್‌ ಹೆಸರು

ಬೆಂಗಳೂರು ನಗರ ವಿಶ್ವವಿದ್ಯಾಲಯಕ್ಕೆ ಮಾಜಿ ಪ್ರಧಾನಿ ದಿವಂಗತ ಡಾ.ಮನಮೋಹನ್ ಸಿಂಗ್ ಹೆಸರಿಟ್ಟು ಡಾ.ಮನಮೋಹನ್‌ ಸಿಂಗ್‌ ಬೆಂಗಳೂರು ಸಿಟಿ ವಿಶ್ವವಿದ್ಯಾಲಯ ಎಂದು ಹೆಸರಿಡಲು ತೀರ್ಮಾನ ಮಾಡಲಾಗಿದೆ. ಅಲ್ಲದೇ, ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಇದುವರೆಗೆ ಆಗಿರುವ ಪ್ರಗತಿ, ಆಗಬೇಕಾಗಿರುವ ಕ್ರಮಗಳು ಸೇರಿದಂತೆ ಹಲವು ವಿಷಯಗಳ ಕುರಿತು ಪರಿಶೀಲಿಸಲು ಕಾನೂನು ಸಚಿವ ಎಚ್ ಕೆ ಪಾಟೀಲ್ ಅಧ್ಯಕ್ಷತೆಯಲ್ಲಿ ಸಂಪುಟ ಉಪ ಸಮಿತಿಯನ್ನು ರಚಿಸಲು ತೀರ್ಮಾನಿಸಲಾಗಿದೆ. 

ನೀರಾವರಿ ಯೋಜನೆಗಳಿಗೆ 1154 ಕೋಟಿ ರೂಪಾಯಿ ನೀಡಲಾಗಿದೆ. ಇದರಲ್ಲಿ 237 ಕೋಟಿ ರೂಪಾಯಿಗಳನ್ನು ಬೆಂಗಳೂರಿನ ತ್ಯಾಜ್ಯ ನೀರನ್ನು ಶುದ್ಧೀಕರಣ ಮಾಡಿ ಶಿಡ್ಲಘಟ್ಟ ಮತ್ತು ಚಿಂತಾಮಣಿ ತಾಲ್ಲೂಕಿನ 164 ಕೆರೆಗಳಿಗೆ ತುಂಬಿಸುವ ಯೋಜನೆಗೆ ಅನುಮೋದನೆ ನೀಡಿದ್ದೇವೆ. ಈ ಭಾಗದಲ್ಲಿ ಅತಿ ಹೆಚ್ಚಾಗಿ ಗುಣಮಟ್ಟದ ಹೂ ಬೆಳೆಯುತ್ತಾರೆ. ಆದ್ದರಿಂದ ಅಂತಾರಾಷ್ಟ್ರೀಯ ಪುಷ್ಪ ಹರಾಜು ಕೇಂದ್ರವನ್ನು 10 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲು ಅನುಮೋದನೆ ನೀಡಲಾಗಿದೆ. ಇದರ ಜೊತೆಗೆ ಚಿಕ್ಕಬಳ್ಳಾಪುರದಲ್ಲಿ ಎಪಿಎಂಸಿ ವತಿಯಿಂದ 141.5 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ಹೂವಿನ ಮಾರುಕಟ್ಟೆ ಸ್ಥಾಪಿಸಲು ಅನುಮೋದನೆ ನೀಡಲಾಗಿದೆ. 

Tags:    

Similar News