Cabinet Meeting | ಎತ್ತಿನಹೊಳೆ ಯೋಜನೆಯಡಿ ಕುಡಿಯುವ ನೀರು ಒದಗಿಸಲು ಮೊದಲ ಆದ್ಯತೆ
ಎತ್ತಿನಹೊಳೆ ಯೋಜನೆಯಡಿ ಇಲ್ಲಿಯವರೆಗೂ 17,147 ಕೋಟಿ ರೂ. ಖರ್ಚಾಗಿದೆ. ಮೊದಲಿಗೆ ಕುಡಿಯುವ ನೀರಿನ ಅಗತ್ಯತೆ ಪೂರೈಸಲಾಗುವುದು. ಆ ಬಳಿಕ ಕೆರೆಗಳಿಗೆ ನೀರು ತುಂಬಿಸಲು ಆದ್ಯತೆ ನೀಡಲಾಗುವುದು ಎಂದು ಸಿಎಂ ಹೇಳಿದ್ದಾರೆ.;
ಬಯಲು ಸೀಮೆ ಜಿಲ್ಲೆಗಳಲ್ಲಿ ಎತ್ತಿನಹೊಳೆ ಯೋಜನೆಯ ಅನುಷ್ಠಾನ ಮತ್ತೆರಡು ವರ್ಷ ವಿಳಂಬವಾಗುವ ಜೊತೆಗೆ ಇನ್ನಷ್ಟು ದುಬಾರಿಯಾಗಿ ಪರಿಣಮಿಸಲಿದೆ.
ಚಿಕ್ಕಬಳ್ಳಾಪುರ ಜಿಲ್ಲೆ ನಂದಿಬೆಟ್ಟದಲ್ಲಿ ಬುಧವಾರ ನಡೆದ ವಿಶೇಷ ಸಂಪುಟ ಸಭೆಯಲ್ಲಿ ಮೊದಲಿಗೆ ಕುಡಿಯುವ ನೀರಿನ ಯೋಜನೆ ಪೂರ್ಣಗೊಳಿಸಲು ಸಂಪುಟ ಸಭೆ ನಿರ್ಣಯಿಸಿತು. ಇನ್ನು ಗುರುತ್ವಾ ನಾಲಾ ಯೋಜನೆಗೆ ಅಂದಾಜು ಎರಡು ಸಾವಿರ ಕೋಟಿ ಹೆಚ್ಚುವರಿ ಅನುದಾನ ಅಗತ್ಯವಿದೆ. ಎಲ್ಲಾ ಕಾಮಗಾರಿಗಳನ್ನು ಇನ್ನೆರಡು ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಎತ್ತಿನಹೊಳೆ ಯೋಜನೆಗೆ ಒಟ್ಟು 23,251 ಕೋಟಿ ರೂ. ಪರಿಷ್ಕೃತ ಅಂದಾಜು ವೆಚ್ಚ ನಿಗದಿಪಡಿಸಲಾಗಿದೆ. ಇಲ್ಲಿಯವರೆಗೂ 17,147 ಕೋಟಿ ರೂ. ಖರ್ಚಾಗಿದೆ. ಮೊದಲಿಗೆ ಕುಡಿಯುವ ನೀರಿನ ಅಗತ್ಯತೆ ಪೂರೈಸಲಾಗುವುದು. ಆ ಬಳಿಕ ಕೆರೆಗಳಿಗೆ ನೀರು ತುಂಬಿಸಲು ಆದ್ಯತೆ ನೀಡಲಾಗುವುದು. 24.1 TMC ನೀರಿನಲ್ಲಿ ಕುಡಿಯುವ ನೀರಿಗೆ 14 TMC ಬೇಕಾಗಿದೆ ಎಂದು ಹೇಳಿದ್ದಾರೆ.
ಎರಡು ವರ್ಷಗಳಲ್ಲಿ ನೀರು ಹರಿಸುತ್ತೇವೆ
ಎರಡು ವರ್ಷಗಳಲ್ಲಿ ಎತ್ತಿನಹೊಳೆ ಯೋಜನೆಯಡಿ ಉದ್ದೇಶಿತ ಜಿಲ್ಲೆ, ತಾಲ್ಲೂಕುಗಳಿಗೆ ನೀರು ಹರಿಸಲಾಗುವುದು. ಈಗಾಗಲೇ 9,807ಕೋಟಿ ರೂ. ಮೊತ್ತದ ಗ್ರಾವಿಟಿ ಮುಖ್ಯ ಕೆನಲ್ ಕೆಲಸ ಶೇ 85 ರಷ್ಟು ಮುಗಿದಿದೆ. ಹೆಚ್ಚುವರಿಯಾಗಿ ಇದಕ್ಕೆ 8000 ಕೋಟಿ ರೂ. ಬೇಕಾಗಿದೆ. 6,000 ಕೋಟಿ ರೂ. ಬಾಕಿ ಉಳಿದಿದೆ. ಒಟ್ಟು 9 ಜಿಲ್ಲೆಗಳ 75 ಲಕ್ಷ ಜನರಿಗೆ ಕುಡಿಯುವ ನೀರು ಕೊಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಅವರು ಸಂಪುಟ ಸಭೆಯ ಬಳಿಕ ಮಾಧ್ಯಮದವರಿಗೆ ತಿಳಿಸಿದ್ದಾರೆ.
ಇತ್ತೀಚೆಗೆ ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ಎತ್ತಿನಹೊಳೆ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದ ಸಿಎಂ ಅವರು, ಎತ್ತಿನ ಹೊಳೆಯು ನೀರಾವರಿ ಯೋಜನೆಯಲ್ಲ. ಕುಡಿಯುವ ನೀರು ಮತ್ತು ಕೆರೆ ತುಂಬಿಸುವ ಯೋಜನೆ. ಯೋಜನಾ ವ್ಯಾಪ್ತಿಯ ಎಲ್ಲ 7 ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸಲು ಮೊದಲ ಆದ್ಯತೆ ನೀಡಲಾಗುವುದು. ಕುಡಿಯುವ ನೀರಿನ ಪೂರೈಕೆಗೆ ಬೇಕಾದಷ್ಟು ನೀರು ಲಭ್ಯವಿದೆ. ಪ್ರಾರಂಭಿಕ ಹಂತದಲ್ಲಿ ಕುಡಿಯುವ ನೀರಿನ ಕಾಮಗಾರಿಗಳನ್ನು ಪೂರ್ಣಗೊಳಿಸಿ ಬಳಿಕ ಕೆರೆಗಳನ್ನು ತುಂಬಿಸುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು. ಕುಡಿಯುವ ನೀರು ಕಾಮಗಾರಿ ಪೂರ್ಣಗೊಳಿಸಲು ಇರುವ ತಾಂತ್ರಿಕ ಅಡಚಣೆಗಳನ್ನು ನಿವಾರಣೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದರು.
ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯಡಿ 14.056 ಟಿಎಂಸಿ ಕುಡಿಯುವ ನೀರು, 9.953 ಟಿಎಂಸಿ ನೀರು ಕೆರೆ ತುಂಬಿಸಲು ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲಾಗಿದೆ. ಯೋಜನೆಗೆ 23,251.66 ಕೋಟಿ ರೂ. ಪರಿಷ್ಕೃತ ಅಂದಾಜು ಮಾಡಲಾಗಿದ್ದು, ಇದುವರೆಗೆ ರೂ.17,147 ಕೋಟಿ ವೆಚ್ಚವಾಗಿದೆ. ಒಂದನೇ ಹಂತದಲ್ಲಿ ನದಿ ಪಾತ್ರದ ಏತ ನೀರಾವರಿ ಯೋಜನೆಗಳಲ್ಲಿ 7ಪ್ಯಾಕೇಜ್ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಹಂತ -2ರಲ್ಲಿ ಮುಖ್ಯ ಕಾಲುವೆ ಕಾಮಗಾರಿಗಳಲ್ಲಿ 33 ಪ್ಯಾಕೇಜ್‌ಗಳ ಪೈಕಿ 11 ಪ್ಯಾಕೇಜ್ ಪೂರ್ಣಗೊಳಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು.
16 ಕಿ.ಮೀ ವ್ಯಾಪ್ತಿಯ ಕಾಮಗಾರಿ ಪ್ರಾರಂಭಿಸಬೇಕಿದ್ದು, ಇದರಲ್ಲಿ 6 ಎಕರೆ ಅರಣ್ಯ ಪ್ರದೇಶ ಹಾಗೂ 10ಕಿ.ಮೀ ಭೂಸ್ವಾಧೀನ ಪ್ರಕ್ರಿಯೆ ಕೈಗೊಳ್ಳಬೇಕಾಗಿದೆ. ಯೋಜನೆಯನ್ನು 2027ರ ಮಾರ್ಚ್ ಒಳಗೆ ಪೂರ್ಣಗೊಳಿಸಲು ಕಾಲಾವಧಿ ನಿಗದಿಪಡಿಸಲಾಗಿದೆ. ಕಳೆದ ಏಳು ವರ್ಷಗಳಲ್ಲಿ ಸರಾಸರಿ 18.08 ಟಿಎಂಸಿ ನೀರು ಯೋಜನೆಗೆ ಲಭ್ಯವಿದ್ದು, ಉಳಿದ 6 ಟಿಎಂಸಿ ನೀರಿನ ಕೊರತೆ ನೀಗಿಸಲು ಹೆಚ್ಚುವರಿ ನೀರನ್ನು ತಿರುವುಗೊಳಿಸುವ ಕುರಿತು ಕಾರ್ಯಸಾಧ್ಯತಾ ವರದಿ ತಯಾರಿಸಲು ಸಮಾಲೋಚಕರನ್ನು ನೇಮಕ ಮಾಡಲಾಗಿದೆ ಎಂದು ಸಿಎಂ ತಿಳಿಸಿದ್ದರು.