Karnataka Budget 2025: ತೆರಿಗೆ ಬರೆ ಹಾಕದೇ ಜನಪರ ಯೋಜನೆಗಳನ್ನು ಮುಂದುವರಿಸುವರೇ ಸಿಎಂ ಸಿದ್ದರಾಮಯ್ಯ
ಈ ಬಾರಿಯ ಬಜೆಟ್ ಗಾತ್ರ ಅಂದಾಜು 4 ಲಕ್ಷ ಕೋಟಿ ರೂಗಳನ್ನು ದಾಟಲಿದೆ ಎಂದು ಅಂದಾಜು ಮಾಡಲಾಗಿದ್ದು, ರಾಜ್ಯದ ಜನತೆಗೆ ಎಷ್ಟು ಕೊಡಲಿದೆ ಎಂಬ ಲೆಕ್ಕಾಚಾರವೂ ಆರಂಭಗೊಂಡಿದೆ.;
2025-26ನೇ ಸಾಲಿನ ರಾಜ್ಯ ಸರ್ಕಾರದ (Karnataka Budget 2025) ಬಜೆಟ್ ಮಂಡನೆ ಶುಕ್ರವಾರ (ಮಾರ್ಚ್7ರಂದು) ನಡೆಯಲಿದ್ದು ದಾಖಲೆಯ 16ನೇ ಬಜೆಟ್ ಮಂಡಿಸುವ ಸಿಎಂ ಸಿದ್ದರಾಮಯ್ಯ ಅವರತ್ತ ರಾಜ್ಯದ ಜನತೆಯ ನೋಟ ನೆಟ್ಟಿದೆ.
ಸಿಎಂ ಸಿದ್ದರಾಮಯ್ಯ ಅವರಿಗೆ ಈ ಬಾರಿ ದಾಖಲೆ ಸಂಖ್ಯೆಯ (16 ಬಾರಿ) ಬಜೆಟ್ ಮಂಡಿಸಿದ ಖ್ಯಾತಿ ಸಿಗಲಿದೆ ಎಂಬುದು ಒಂದು ಕಡೆಯಾದರೆ, ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಿಕೊಂಡು ರಾಜ್ಯದ ಆರ್ಥಿಕತೆಯನ್ನು ಸರಿಯಾದ ಹಳಿಯಲ್ಲಿ ಸಾಗಿಸುವ ದೊಡ್ಡಸವಾಲು ಕೂಡ ಎದುರಾಗಿದೆ.
ಸಿಎಂ ಸಿದ್ದರಾಮಯ್ಯ ಕರ್ನಾಟಕದ ಹಣಕಾಸು ಸಚಿವರಾಗಿ 1994ರಲ್ಲಿ ಮೊದಲ ಬಾರಿ ಬಜೆಟ್ ಮಂಡಿಸಿದ್ದರು.ಅನಂತರ ಎರಡು ಬಾರಿ ಡಿಸಿಎಂ, ಎರಡು ಬಾರಿ ಸಿಎಂ ಆಗಿ ಪ್ರತಿವರ್ಷ ಬಜೆಟ್ ಮಂಡನೆ ಮಾಡಿದ್ದಾರೆ. ಹೀಗಾಗಿ ರಾಜ್ಯದ ಆರ್ಥಿಕತೆಯ ನರ-ನಾಡಿಯನ್ನು ಅರಿತಿರುವ ಸಿಎಂ, ಪ್ರಸಕ್ತ ಸಾಲಿನ ಬಜೆಟ್ ಬಗ್ಗೆ ಜನಸಾಮಾನ್ಯರು ನಿರೀಕ್ಷೆಗಳ ಹೊರೆಯನ್ನೇ ಇಟ್ಟುಕೊಂಡಿದ್ದಾರೆ. ಈ ಬಾರಿಯ ಬಜೆಟ್ ಗಾತ್ರ ಅಂದಾಜು 4 ಲಕ್ಷ ಕೋಟಿ ರೂಗಳನ್ನು ದಾಟಲಿದೆ ಎಂದು ಅಂದಾಜು ಮಾಡಲಾಗಿದ್ದು, ರಾಜ್ಯದ ಜನತೆಗೆ ಎಷ್ಟು ಕೊಡಲಿದೆ ಎಂಬ ಲೆಕ್ಕಾಚಾರವೂ ಆರಂಭಗೊಂಡಿದೆ.
2024-25ನೇ ಸಾಲಿನ ರಾಜ್ಯ ಬಜೆಟ್‌ನ ಒಟ್ಟು ಗಾತ್ರ 3,71,383 ಕೋಟಿ ರೂಪಾಯಿಗಳಾಗಿತ್ತು. ಅಂತೆಯೇ 27,353 ಕೋಟಿ ರೂ. ರಾಜಸ್ವ ಕೊರತೆಯನ್ನು ಪಟ್ಟಿ ಮಾಡಲಾಗಿತ್ತು. ಈ ಬಾರಿಯ ಬಜೆಟ್‌ನಲ್ಲಿಯೂ ಕೊರತೆ ಬಜೆಟ್ ಮಂಡಿಸುವುದು ಬಹುತೇಕ ಖಚಿತವಾಗಿದೆ. 21,900 ಕೋಟಿ ರೂ. ರಾಜಸ್ವ ಕೊರತೆ ಆಗುವ ಸಾಧ್ಯತೆ ಇದೆ. ಇದು ಉಚಿತ ಗ್ಯಾರಂಟಿ ಯೋಜನೆಗಳ ಪಾಲಾಗಲಿದೆ ಎಂದು ಅಂದಾಜಿಸಲಾಗಿದೆ.
2024-25ನೇ ಸಾಲಿನ ಬಜೆಟ್ನಲ್ಲಿ ರಾಜಸ್ವ ವೆಚ್ಚ 2,90,531 ಕೋಟಿ ರೂ. ಎಂದು ಅಂದಾಜು ಮಾಡಲಾಗಿತ್ತು. ಆದರೆ, ವೇತನ ಪರಿಷ್ಕರಣೆ, ಬಡ್ಡಿ ಪಾವತಿ ಹೆಚ್ಚಳ, ಪಿಂಚಣಿ ಹೊರೆ, ಆಡಳಿತಾತ್ಮಕ ವೆಚ್ಚಗಳು ಹೆಚ್ಚಾಗುವ ಹಿನ್ನೆಲೆ ವೆಚ್ಚ 3.20 ಲಕ್ಷ ಕೋಟಿ ರೂ. ದಾಟುವ ಅಂದಾಜು ಇದೆ.
2025-26ನೇ ಸಾಲಿನಲ್ಲಿ ಬಡ್ಡಿ ಪಾವತಿ ಅಂದಾಜು 45,000 ಕೋಟಿ ರೂ. ಏರಿಕೆಯಾಗುವ ನಿರೀಕ್ಷೆಯಿದೆ. ಕಳೆದ ವರ್ಷದ ಬಜೆಟ್ನಲ್ಲಿ ಸುಮಾರು 1,05,246 ಕೋಟಿ ರೂ. ಸಾಲ ಅಂದಾಜಿಸಲಾಗಿತ್ತು. 2025-26ನೇ ಸಾಲಿನಲ್ಲಿ ಸುಮಾರು 1.25 ಲಕ್ಷ ಕೋಟಿ ರೂ.ಸಾಲ ಮಾಡಬೇಕಾಗಬಹುದು.
ಗ್ಯಾರಂಟಿ ಯೋಜನೆಗಳಿಗೆ ವೆಚ್ಚ
ಕರ್ನಾಟಕ ಸರ್ಕಾರವು ಪಂಚ ಗ್ಯಾರಂಟಿ ಯೋಜನೆಗಳಿಗೆ ಸುಮಾರು 52 ಸಾವಿರ ಕೋಟಿ ರೂ. ನಿಧಿ ಮೀಸಲಿಡುತ್ತಿದೆ. ಆದರೆ ಈ ವರ್ಷ ಗೃಹ ಲಕ್ಷ್ಮಿ ಯೋಜನೆ, ಅನ್ನ ಭಾಗ್ಯ ಯೋಜನೆಗಳಿಗೆ ಆರ್ಥಿಕ ಅಡೆತಡೆಯಾಗಿದೆ. ಆ ಬಾಕಿ ಬಿಡುಗಡೆಯಾಗಬೇಕಾಗಿದೆ. ಹೀಗಾಗಿ ವರ್ಷದ ಬಜೆಟ್‌ನಲ್ಲಿ ಈ ಯೋಜನೆಗಳನ್ನು ಮುಂದುವರಿಸುತ್ತದೆಯೋ ಅಥವಾ ಬದಲಾಯಿಸಲು ಹೊಸ ನೀತಿಗಳನ್ನು ಜಾರಿಗೊಳಿಸುತ್ತಾರೋ ಎಂಬ ಚರ್ಚೆಗಳು ಆರಂಭ ಗೊಂಡಿದೆ.
ತೆರಿಗೆ ಏರಿಕೆ?
ತೆರಿಗೆ ಏರಿಸುವ ಪ್ರಯತ್ನವೂ ಈ ಬಾರಿ ಬಜೆಟ್‌ನ ಪ್ರಮುಖ ಅಂಶ. ಅಬಕಾರಿ ಸೇರಿದಂತೆ ಅಗತ್ಯ ವಸ್ತುಗಳ ತೆರಿಗೆಯಲ್ಲಿ ಏರಿಕೆ ಮಾಡುವ ಸಾಧ್ಯತೆಗಳಿವೆ. ಬಜೆಟ್‌ಗೆ ಸಂಬಂಧಿಸಿದಂತೆ ಸಾರ್ವಜನಿಕ ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಆಹಾರ ಮತ್ತು ನಾಗರಿಕ ಸರಬರಾಜು, ಸಮಾಜ ಕಲ್ಯಾಣ ಇಲಾಖೆ, ಕೃಷಿ, ತೋಟಗಾರಿಕೆ, ವಸತಿ, ಉನ್ನತ ಶಿಕ್ಷಣ, ವೈದ್ಯಕೀಯ ಶಿಕ್ಷಣ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸೇರಿದಂತೆ ಪ್ರಮುಖ ಇಲಾಖೆಗಳ ಅಧಿಕಾರಿಗಳ ಜತೆ ಸಭೆ ನಡೆಸಿರುವ ಸಿಎಂ, ಶಿಕ್ಷಣ, ಆರೋಗ್ಯ, ಕೃಷಿ ಇಲಾಖೆಗಳಿಗೆ ಹೆಚ್ಚಿನ ನೆರವು ನೀಡಲು ಮುಂದಾಗಿದ್ದಾರೆ.
ಸಾಂಸ್ಕೃತಿಕ ನಗರಿಯಾಗಿರುವ ಮೈಸೂರು, ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ ವ್ಯಾಪ್ತಿ ಅಭಿವೃದ್ದಿ ಬಗ್ಗೆಯೂ ಬಜೆಟ್ನಲ್ಲಿ ಘೋಷಣೆಯಾಗುವ ಸಾಧ್ಯತೆಗಳಿವೆ. ಸರ್ಕಾರ ರೈತರ ಹಿತ ಕಾಪಾಡುವಲ್ಲಿ ಹಿಂದೆ ಬಿದ್ದಿಲ್ಲ ಎಂಬುದನ್ನು ತೋರಿಸಲು ಸಿಎಂ ಕ್ರಮ ಕೈಗೊಳ್ಳುವ ಸಾಧ್ಯತೆಗಳಿವೆ.
ತೆರಿಗೆ ಹೆಚ್ಚಿಸಬೇಡಿ, ಉದ್ಯೋಗ ಸೃಷ್ಟಿಸಿ; ತಜ್ಞರ ಒತ್ತಾಯ
ಕೈಗಾರಿಕಾ ಪ್ರದೇಶಗಳಲ್ಲಿ ಸಣ್ಣ ಕೈಗಾರಿಕೆಗಳಿಗೆ ಶೇಕಡಾ 20 ರಷ್ಟು ರಿಯಾಯಿತಿ ದರದಲ್ಲಿ ಕೈಗಾರಿಕಾ ನಿವೇಶನ ಹಂಚಿಕೆ ಮಾಡುವಂತೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ(ಎಫ್‌ಕೆಸಿಸಿಐ) ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ಸಣ್ಣ ಕೈಗಾರಿಕೆಗಳಿಗೆ ರಿಯಾಯ್ತಿ ದರದಲ್ಲಿ ಸೌಲಭ್ಯ ಕಲ್ಪಿಸುವುದರಿಂದ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿವೆ. ತೆರಿಗೆ ಸಂಗ್ರಹವೂ ಹೆಚ್ಚಲಿದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವರಿಗೆ ಮಾಡಿಕೊಟ್ಟಿದ್ದು, ಬಜೆಟ್ನಲ್ಲಿ ಘೋಷಣೆಯಾಗುವ ನಿರೀಕ್ಷೆ ಇದೆ ಎಫ್ಕೆಸಿಸಿಐ ಮಾಜಿ ಅಧ್ಯಕ್ಷ ಸಿ.ಆರ್.ಜನಾರ್ಧನ ಅವರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಅದೇ ರೀತಿ ವೃತ್ತಿಪರ ತೆರಿಗೆ ಶುಲ್ಕವನ್ನು 200 ರೂ.ಗಳಿಂದ 300 ರೂ.ಗಳಿಗೆ ಹೆಚ್ಚಿಸಲು ಸಂಪುಟ ಸಭೆಯಲ್ಲಿ ನಿರ್ಣಯಿಸಲಾಗಿದೆ. ಇದು ಸಾಮಾನ್ಯ ನೌಕರರಿಗೆ ಅನಗತ್ಯ ಹೊರೆಯಾಗಲಿದೆ. ಸರ್ಕಾರ ವೈದ್ಯರು, ವಕೀಲರ ಬಳಿ ವೃತ್ತಿಪರ ತೆರಿಗೆ ಹೆಚ್ಚು ಸಂಗ್ರಹಿಸಲಿ. ಆದರೆ, ಬಡ ಹಾಗೂ ಮಧ್ಯಮ ವರ್ಗದ ನೌಕರರಿಂದ ಹೆಚ್ಚುವರಿ ವೃತ್ತಿಪರ ತೆರಿಗೆ ಸಂಗ್ರಹಿಸುವುದಕ್ಕೆ ನಮ್ಮ ವಿರೋಧವಿದೆ. ಇದರ ಬಗ್ಗೆಯೂ ಪರಿಶೀಲನೆ ನಡೆಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಹೇಳಿದರು.
ಕೈಗಾರಿಕಾ ಭೂಮಿಗೆ ತ್ವರಿತವಾಗಿ ಎ-ಖಾತೆ ಮಾಡಿಕೊಡಬೇಕು. ಇಲ್ಲದಿದ್ದರೆ ಸಣ್ಣ ಕೈಗಾರಿಕೆಗಳು ಹಾಗೂ ಉದ್ಯಮಿಗಳಿಗೆ ಅಡಮಾನ ಸಾಲ ಸಿಗುತ್ತಿಲ್ಲ. ಈ ಸಮಸ್ಯೆಗಳಿಂದ ಸಣ್ಣ ಉದ್ಯಮಿಗಳನ್ನು ರಕ್ಷಿಸಲು ಶೀಘ್ರ ಎ-ಖಾತಾ ಮಾಡಿಕೊಡಬೇಕು ಎಂದು ಜನಾರ್ಧನ ಆಗ್ರಹಿಸಿದರು.
ಬೆಂಗಳೂರಿನ ಮೂಲ ಸೌಕರ್ಯ ಅಭಿವೃದ್ಧಿಗೆ 15 ಸಾವಿರ ಕೋಟಿ ಮೀಸಲಿಡುವಂತೆ ಕೋರಲಾಗಿದೆ. ಬೆಂಗಳೂರಿನಿಂದಲೇ ಶೇ60 ರಷ್ಟು ಆದಾಯ ಬರುತ್ತಿದೆ. ಇಷ್ಟು ಆದಾಯ ಬರುವ ಬೆಂಗಳೂರನ್ನು ಕಡೆಗಣಿಸಿದರೆ ಲಾಭವಿಲ್ಲ. ಜೊತೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಯಾವುದೇ ರೂಪುರೇಷಗಳಿಲ್ಲ. ಕಳೆದ ಐದು ವರ್ಷದಿಂದ ಚುನಾವಣೆ ನಡೆದಿಲ್ಲ. ಪಾಲಿಕೆ ಸದಸ್ಯರಿಲ್ಲದೇ ಯಾವುದೇ ಕೆಲಸಗಳು ನಡೆಯುತ್ತಿಲ್ಲ. ಚುನಾವಣೆ ನಡೆಸಲು ಆಗದಿದ್ದರೆ ನಿವೃತ್ತಿಯಾಗಿರುವ ಪಾಲಿಕೆ ಸದಸ್ಯರನ್ನೇ ಮುಂದುವರಿದಬೇಕು. ಡಿ-ಲಿಮಿಟೇಷನ್ ಕಾರಣ ನೀಡುವುದು ಸರಿಯಲ್ಲ ಎಂದು ಹೇಳಿದರು.
ನಮ್ಮ ಮೆಟ್ರೋ ಪ್ರಯಾಣ ದರ ಇಳಿಕೆ ಮಾಡಬೇಕು. ಆ ಮೂಲಕ ಸಮೂಹಸಾರಿಗೆಯನ್ನು ಉತ್ತೇಜಿಸಬೇಕು ಎಂಬ ಒತ್ತಾಯಿಸಲಾಗಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ ಎಂದರು.
ನಿರೀಕ್ಷೆಯ ಆದಾಯಕ್ಕಿಂತ ಖರ್ಚು ಹೆಚ್ಚುತ್ತಿದೆ. ಗ್ಯಾರೆಂಟಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡಬೇಕು ಎಂದು ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ.
ಅಭಿವೃದ್ಧಿ ಯೋಜನೆಗಳಿಗೆ ಮಹತ್ವ ಕೊಡಿ
ದಿನ ಬೆಳಗೆದ್ದರೆ ನಾಯಕತ್ವ ಬದಲಾವಣೆ ಹಾಗೂ ಗ್ಯಾರಂಟಿ ಯೋಜನೆಗಳ ಕುರಿತು ಮಾತ್ರ ರಾಜ್ಯ ಕಾಂಗ್ರೆಸ್ ಪಕ್ಷ ಮಹತ್ವ ಕೊಡುತ್ತಿದೆ. ಅಭಿವೃದ್ಧಿ ಯೋಜನೆಗಳ ಕುರಿತು ಸ್ವಲ್ಪವೂ ಮಹತ್ವ ಕೊಡುತ್ತಿಲ್ಲ ಎಂದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೊಕ ಚಂದರಗಿ ಹೇಳಿದ್ದಾರೆ. ಬಜೆಟ್ ನಿರೀಕ್ಷೆಗಳ ಕುರಿತು 'ದ ಫೆಡರಲ್ ಕರ್ನಾಟಕ'ದೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ಬಜೆಟ್ನಲ್ಲಿ ಕೊಡುವ ಭರವಸೆಗಳು ಕನ್ನಡಿಯೊಳಗಿನ ಗಂಟಿನಂತೆ. ರಾಜ್ಯ ಬಜೆಟ್ನಲ್ಲಿ ಈಗ ಅಂಕಿ-ಸಂಖ್ಯೆಗಳ ಸರ್ಕಸ್ ಮಾಡುತ್ತಾರೆ ಅಷ್ಟೇ. ಯೋಜನೆಗಳಿಗೆ ಕೊಡಲಿಕ್ಕೆ ಹಣವೆಲ್ಲಿದೆ? ಗ್ಯಾರಂಟಿ ಯೋಜನೆಗಳಿಗೆ 52 ಸಾವಿರ ಕೋಟಿ ರೂಪಾಯಿಗಳನ್ನು ಕೊಡಬೇಕು. ಕೊನೆಪಕ್ಷ ಗ್ಯಾರಂಟಿ ಯೋಜನೆಗಳನ್ನಾದರೂ ಸುಧಾರಿಸಬೇಕು. ನಿಜವಾದ ಬಡವರಿಗೆ ಗ್ಯಾರಂಟಿ ಯೋಜನೆಗಳನ್ನು ಕೊಡಿ. ಉಳಿದವರನ್ನು ಯೋಜನೆಯಿಂದ ಕೈಬಿಡಿ. ಕ್ರೀಮಿ ಲೇಯರ್ ಅನ್ನು ತೆಗೆದುಹಾಕಿ ಎಂದವರು ಆಗ್ರಹಿಸಿದ್ದಾರೆ.
ಜೊತೆಗೆ, ನೀರಾವರಿ ಯೋಜನೆಗಳಿಗೆ ಎರಡೂ ರಾಜಕೀಯ ಪಕ್ಷಗಳು ಮಹತ್ವ ಕೊಡುತ್ತಿಲ್ಲ. ಕಳಸಾ ಬಂಡೂರಿ (ಮಹದಾಯಿ ತಿರುವು) ಯೋಜನೆಗೆ ಈಗಾಗಲೇ ಪರಿಸರ, ಅರಣ್ಯ ಸೇರಿದಂತೆ ಎಲ್ಲ ಇಲಾಖೆಗಳಿಂದ ಅನುಮತಿ ಸಿಕ್ಕಿದೆ. ಈಗ ಈ ಪ್ರಕರಣ ಕೇಂದ್ರದ ಅಂಗಳದಲ್ಲಿದೆ. ಸಣ್ಣ ರಾಜ್ಯವಾಗಿರುವ ಗೋವಾ ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗಿ ಅಅಡ್ಡಗಾಲು ಹಾಕುತ್ತಿದೆ. ಆದರೆ ನಮ್ಮ ರಾಜ್ಯದಲ್ಲಿ ಅಂತಹ ಬೆಳವಣಿಗೆ ಆಗಿಲ್ಲ ಎಂದು ಅವರು ಆರೋಪಿಸಿದರು.
ಕೃಷ್ಣಾ ಮೇಲ್ದಂಡೆ 3ನೇ ಹಂತದ ಯೋಜನೆಗೆ ಟ್ರಿಬ್ಯೂನಲ್ 2013ರಲ್ಲಿಯೇ ತೀರ್ಪು ಕೊಟ್ಟಿದೆ. ಆದರೆ ಕಳೆದ 12 ವರ್ಷಗಳಿಂದ ನಮ್ಮ ಪಾಲಿನ ನೀರನ್ನು ಬಳಸಿಕೊಳ್ಳಲು ಮನಸ್ಸು ಮಾಡಿಲ್ಲ. ಭದ್ರಾ ಮೇಲ್ದಂಡೆ ಯೋಜನೆಯಲ್ಲಿಯೂ ಹೀಗೆ ಆಗಿದೆ. ಒಟ್ಟು 21 ಸಾವಿರ ಕೋಟಿ ರೂಪಾಯಿಗಳ ಯೋಜನೆ ಅದು. ಅದರಲ್ಲಿ ಕೇಂದ್ರ ಸರ್ಕಾರ ತನ್ನ ಬಜೆಟ್ನಲ್ಲಿ 5,300 ಕೋಟಿ ರೂ. ಕೊಡುವುದಾಗಿ ಹೇಳಿತ್ತು. ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಪರಿಗಣಿಸಿಲ್ಲ ಎಂದು ಈಗ ಕೇಂದ್ರ ಸರ್ಕಾರ ಹೇಳಿದೆ. ಹೀಗಾಗಿ ಬಜೆಟ್ ಮೇಲೆ ಹೆಚ್ಚಿನ ನಿರೀಕ್ಷೆಗಳಿಲ್ಲ ಎಂದಿದ್ದಾರೆ.