ಕನ್ನಡ... ಕನ್ನಡ... ಹಾ.. ಸವಿಗನ್ನಡ ಎನ್ನುತ್ತಿವೆ ಫ್ರಾಂಚೈಸಿ ತಂಡಗಳು

ಆರ್‌ಸಿಬಿ, ಬೆಂಗಳೂರು ಬುಲ್ಸ್‌, ಬೆಂಗಳೂರು ಎಫ್‌ಸಿಯಲ್ಲಿ ಕನ್ನಡ ಕಲರವ! ಆರ್‌ಸಿಬಿ, ಬೆಂಗಳೂರು ಬುಲ್ಸ್ ಹಾಗೂ ಬೆಂಗಳೂರು ಎಫ್‌ಸಿ ಫುಟ್ಬಾಲ್‌ ತಂಡಗಳು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡವನ್ನು ಬಳಸುವ ಮೂಲಕ ಕನ್ನಡಿಗರ ಮನಸ್ಸು ಗೆಲ್ಲುತ್ತಿವೆ!!;

By :  Hitesh Y
Update: 2024-03-27 10:40 GMT
ಬೆಂಗಳೂರು ಬುಲ್ಸ್‌, ಆರ್‌ಸಿಬಿ & ಬೆಂಗಳೂರು ಎಫ್‌ಸಿ

ಕರ್ನಾಟಕದ ಕ್ರಿಕೆಟ್, ಫುಟ್ಬಾಲ್ ಹಾಗೂ ಕಬಡ್ಡಿ  ಫ್ರಾಂಚೈಸಿ ತಂಡಗಳು ತಮ್ಮ ಸಾಮಾಜಿಕ ಜಾಲತಾಣ ಹಾಗೂ ಕಾರ್ಯಕ್ರಮಗಳಲ್ಲಿ ಕನ್ನಡವನ್ನು ಹೆಚ್ಚುಹೆಚ್ಚು ಬಳಸುವ ಮೂಲಕ ಕನ್ನಡಿಗರಿಗೆ ಮತ್ತಷ್ಟು ಹತ್ತಿರವಾಗುತ್ತಿವೆ.

ಆರ್‌ಸಿಬಿ ತಂಡವು ಈ ಬಾರಿಯ ಐಪಿಎಲ್‌ ಋತುವಿನಲ್ಲಿ ಆರ್‌ಸಿಬಿಯ ಹೊಸ ಅಧ್ಯಾಯ ಪ್ರಾರಂಭಿಸಿರುವುದಾಗಿ ಹೇಳಿದೆ. ಆರ್‌ಸಿಬಿಯ ಹೊಸ ಅಧ್ಯಾಯ ಎಂದು ಆರ್‌ಸಿಬಿ ತಂಡದ ಮಾಜಿ ನಾಯಕ ಹಾಗೂ ಆಟಗಾರ ವಿರಾಟ್ ಕೊಹ್ಲಿ ಅವರು ಹೇಳಿದ್ದು ಆರ್‌ಸಿಬಿ ಅಭಿಮಾನಿಗಳು ಹಾಗೂ ಕನ್ನಡಿಗರಲ್ಲಿ ಪುಳಕ ಮೂಡಿಸಿತ್ತು. ಇದರೊಂದಿಗೆ ಸದ್ದಿಲ್ಲದೆ ಆರ್‌ಸಿಬಿ (Royal Challengers Bengaluru), ಬೆಂಗಳೂರು ಬುಲ್ಸ್ (Bengaluru Bulls) ಹಾಗೂ ಬೆಂಗಳೂರು ಎಫ್‌ಸಿ (Bengaluru FC) ಫುಟ್ಬಾಲ್‌ ತಂಡ (bengalurufootballclub)ಗಳು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡವನ್ನು ಬಳಸುವ ಮೂಲಕ ಕನ್ನಡಿಗರ ಮನಸ್ಸು ಗೆಲ್ಲುತ್ತಿವೆ.

ಮಿಂಚುತ್ತಿದೆ ಬೆಂಗಳೂರು ಬುಲ್ಸ್ (Bengaluru Bulls)

ಸಾಮಾಜಿಕ ಜಾಲತಾಣದಲ್ಲಿ ಕನ್ನಡವನ್ನು ಹೆಚ್ಚು ಬಳಸುವುದರಲ್ಲಿ ಬೆಂಗಳೂರು ಬುಲ್ಸ್ ಕಬಡ್ಡಿ ತಂಡ ಮುಂಚೂಣಿಯಲ್ಲಿದೆ ಎಂದೇ ಹೇಳಬಹುದು. ಬೆಂಗಳೂರು ಬುಲ್ಸ್ ತಂಡವು ಫೇಸ್‌ಬುಕ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣದಲ್ಲಿ ಕನ್ನಡವನ್ನೇ ಪ್ರಧಾನವಾಗಿ ಬಳಸುತ್ತಿದ್ದು, ಎರಡನೇ ಸಾಲಿನಲ್ಲಿ ಆಂಗ್ಲ ಭಾಷೆ ಬಳಸುತ್ತಿದೆ. ಫೇಸ್‌ಬುಕ್‌ನ ಇಂಟ್ರೋ ಸಹ ಕನ್ನಡದಲ್ಲೇ ಇದ್ದು, “ಕನ್ನಡ ಮಣ್ಣಿನ ಹೆಮ್ಮೆಯ ಗೂಳಿಗಳು, ಗರ್ವದಿಂದ ಹೇಳು ನಾನು #ಗೂಳಿಕಣೋ! Pro Kabaddi Champions 2018🏆” ಎಂದಿದೆ.


ಬುಲ್ಸ್ ತಂಡವು ಕರ್ನಾಟಕದ ಹಬ್ಬಗಳಿಗೆ ಕನ್ನಡದಲ್ಲೇ ಶುಭ ಕೋರುತ್ತಿದ್ದು, ರಾಜ್ಯದಲ್ಲಿ ನಡೆಯುವ ಟ್ರೋಲ್‌ಗಳಿಗೂ ಸ್ಪಂದಿಸಿ, ಬುಲ್ಸ್ ತಂಡದ ಆಟಗಾರರು ಕನ್ನಡದಲ್ಲಿ ಮಾತನಾಡುವ ವಿಡಿಯೋ ಸಂದೇಶಗಳನ್ನು ಹಂಚಿಕೊಳ್ಳುತ್ತಿದೆ. ಕನ್ನಡಿಗರು ಬುಲ್ಸ್ ತಂಡದ ಪೋಸ್ಟ್‌ಗಳಿಗೆ ಹಾಗೂ ಅಡ್ಮಿನ್ ಕ್ರಿಯೇಟಿವಿಟಿಗೆ ಖುಷಿಯಾಗಿರುವುದು ಕಮೆಂಟ್‌ಗಳಿಂದಲೇ ತಿಳಿಯುತ್ತದೆ. ಎಸ್.ಎಂ ಅಮರನಾಥ್ ಎನ್ನುವವರು “ನಮ್ ಗೂಳಿ ನಮ್ ಹೆಮ್ಮೆ, ಕನ್ನಡಿಗರ ಮೊದಲ ಅಧ್ಯಾಯ ಬೆಂಗಳೂರು ಬುಲ್ಸ್” ಎಂದು ಕಾಮೆಂಟ್ ಮಾಡಿದ್ದಾರೆ. ಸೋಮೇಶ್‌ ಕೆ.ಎನ್. ಪ್ರದಿ ಎನ್ನುವವರು “ನಿಮ್ಮ ಕನ್ನಡಾಭಿಮಾನಕ್ಕೆ ನಮ್ಮ ನಮನ” ಎಂದಿದ್ದಾರೆ. ಇದು ಬುಲ್ಸ್ ತಂಡದ ಕನ್ನಡಾಭಿಮಾನದ ಸಣ್ಣ ತುಣುಕಷ್ಟೇ. ಬುಲ್ಸ್ ತಂಡ ಹಲವು ವಿಷಯಗಳಿಂದ ಕನ್ನಡಿಗರಿಗೆ ಹತ್ತಿರವಾಗುತ್ತಲ್ಲೇ ಇದೆ.

ಆರ್‌ಸಿಬಿ ತಂಡದ ಅನ್‌ಬಾಕ್ಸಿಂಗ್‌ ಈವೆಂಟ್‌ ಸಂದರ್ಭದಲ್ಲಿ ಬುಲ್ಸ್ ತಂಡವು “Unbox – ginbox ಅನ್ಕೊಂಡು ನಮ್ಮನ್ನ ಮರೀಬೇಡ್ರಯ್ಯ ಆಮೇಲೆ ಹುಡುಗ್ರ” ಎನ್ನುವ ಪೋಸ್ಟ್ ಮಾಡಿತ್ತು. ಇದಕ್ಕೆ ಚೇತನ್ ಎಸ್.ಎಮ್ ಎನ್ನುವವರು ಬುಟ್ ಬುಡ್ತಿವಾ!! ಎಂದಿದ್ರು. ಈ ರೀತಿ ಕನ್ನಡದಲ್ಲೇ ಪೋಸ್ಟ್ ಮಾಡುವ ಮೂಲಕ ಬುಲ್ಸ್ ತಂಡ ಕನ್ನಡಿಗರೊಂದಿಗೆ ಹೊಸ ಬಾಂಧವ್ಯ ಬೆಸೆದುಕೊಳ್ಳುತ್ತಿದೆ.

ಸಂತೋಷಕ್ಕೆ ಎನ್ನುತ್ತಿದೆ ಬೆಂಗಳೂರು ಎಫ್‌ಸಿ (Bengaluru FC)

ಬೆಂಗಳೂರು ಎಫ್‌ಸಿ (Bengaluru FC) ಫುಟ್ಬಾಲ್ ತಂಡವು ತನ್ನ ಸಾಮಾಜಿಕ ಜಾಲತಾಣದಲ್ಲಿ ಕನ್ನಡಕ್ಕೆ ಆದ್ಯತೆ ನೀಡುತ್ತಿದೆ. ʼಸಂತೋಷಕ್ಕೆ..ʼ ಎನ್ನುವ ಹ್ಯಾಷ್ ಟ್ಯಾಗ್ ಬಳಸುವುದು ಕಾಣಬಹುದು. “ಮನೆಯಂತೆ ಎಲ್ಲೂ ಇಲ್ಲ” ಎಂದು ಈಚೆಗೆ ಪೋಸ್ಟ್ ಮಾಡಿದ್ದು, ಈ  ಪೋಸ್ಟ್‌ಗೆ ಕನ್ನಡಿಗರು ಲೈಕ್‌ಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅವರ ಜನ್ಮ ದಿನಕ್ಕೆ ಎಫ್‌ಸಿ ತಂಡವು “ಯೋಗವು ಒಮ್ಮೆ ಬರುವುದು ನಮಗೆ, ಯೋಗ್ಯತೆ ಒಂದೇ ಉಳಿವುದು ಕೊನೆಗೆ.. ನೀನೆ ರಾಜಕುಮಾರ! 👑” ಎಂದು ಪುನೀತ್ ರಾಜ್‌ಕುಮಾರ್ ಅವರಿಗೆ ನುಡಿ ನಮನ ಸಲ್ಲಿಸಿತ್ತು.


ಮ್ಯಾಚ್ ದಿನ “ಯುದ್ಧಕ್ಕೆ ಬದ್ಧವಾಗಿದ್ದೇವೆ” ಎನ್ನುವ ಪೋಸ್ಟ್ ಸಹ ಗಮನ ಸೆಳೆದಿತ್ತು. ಮಹಾಶಿವರಾತ್ರಿ ನಿಮ್ಮ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಲಿ. ಸುಖ ನೆಮ್ಮದಿಯ ಬಾಳು ನಿಮ್ಮದಾಗಲಿ. ಎಂದು ಶುಭ ಕೋರಿತ್ತು.

ಆರ್‌ಸಿಬಿ ಹೊಸ ಅಧ್ಯಾಯ  

ಐಪಿಎಲ್‌ನ ಪ್ರಮುಖ ತಂಡಗಳಲ್ಲಿ ಒಂದಾಗಿರುವ ಹಾಗೂ ಕನ್ನಡಿಗರ ಅಚ್ಚುಮೆಚ್ಚಿನ ಆರ್‌ಸಿಬಿ (Royal Challengers Bengaluru) ತಂಡವು ಸಾಮಾಜಿಕ ಜಾಲತಾಣದ ತನ್ನ ಖಾತೆಗಳಲ್ಲಿ ಕನ್ನಡ ಬಳಸಲು ಪ್ರಾರಂಭಿಸಿದ್ದು, ಅಭಿಮಾನಗಳಲ್ಲಿ ಸಂತೋಷವನ್ನುಂಟು ಮಾಡಿದೆ. ಆರ್‌ಸಿಬಿ ತಂಡವು Royal Challengers Bengaluru (ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು) ಎಂದು ಹೆಸರು ಬದಲಾಯಿಸಿಕೊಂಡಿದೆ. ತಂಡದ ಹೆಸರಿನಲ್ಲಿದ್ದ Bangalore ಎನ್ನುವ ಪದವನ್ನು ಕೈಬಿಟ್ಟು, ಬೆಂಗಳೂರು (Bengaluru) ಎನ್ನುವ ಪದವನ್ನು ಅಳವಡಿಸಿಕೊಂಡಿದೆ. “ಇದು ಆರ್‌ಸಿಬಿಯ ಹೊಸ ಅಧ್ಯಾಯ” ಎಂದು ಕನ್ನಡದಲ್ಲೇ ಪೋಸ್ಟ್‌ ಮಾಡಿರುವುದು ಆರ್‌ಸಿಬಿ ಅಭಿಮಾನಿಗಳು ಹಾಗೂ ಕನ್ನಡಿಗರ ಹರ್ಷೋದ್ಗಾರಕ್ಕೆ ಕಾರಣವಾಗಿದೆ.

ಇನ್ನು ಆರ್‌ಸಿಬಿ ತಂಡದ ಎಫ್‌ಬಿ ಖಾತೆಯಲ್ಲಿ ಹೋಳಿ ಹಬ್ಬಕ್ಕೆ ಕನ್ನಡದಲ್ಲೇ ಶುಭ ಕೋರಿದೆ. 


ಈ ಸಲ ಕಪ್ ನಮ್ದು; ಸ್ಮೃತಿ ಮಂಧಾನ

ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಮೊದಲ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡವು ಚೊಚ್ಚಲ ಟ್ರೋಫಿ ಗೆದ್ದು, ಕನ್ನಡಿಗರ ಸಂಭ್ರಮ ಹೆಚ್ಚಿಸಿತ್ತು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ್ದ ಆರ್‌ಸಿಬಿ ಮಹಿಳಾ ತಂಡದ ನಾಯಕಿ ಸ್ಮೃತಿ ಮಂಧಾನ ಅವರು, “ ಈ ಸಲ ಕಪ್ ನಮ್ದೇ ಅಲ್ಲ… ಈ ಸಲ ಕಪ್ ನಮ್ದು” ಎಂದು ಹೇಳುವ ಮೂಲಕ ಗೆಲುವಿನ ಖುಷಿ ಹೆಚ್ಚಿಸಿದ್ದರು. “ನನ್ನ ಪ್ರಥಮ ಭಾಷೆ ಕನ್ನಡ ಅಲ್ಲ, ಆದರೆ ಈ ಸಾಲುಗಳನ್ನು ನಮ್ಮ ತಂಡವನ್ನು ಬೆಂಬಲಿಸಿದ ನಿಷ್ಠಾವಂತ ಅಭಿಮಾನಿಗಳಿಗಾಗಿ ಕಲಿತೆ” ಎಂದು ಹೇಳಿದ್ದರು.

ಉತ್ತಮ ಬೆಳವಣಿಗೆ: ನಾರಾಯಣ ಗೌಡ

ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ. ವಿವಿಧ ತಂಡಗಳು ಕನ್ನಡಕ್ಕೆ ಆದ್ಯತೆ ನೀಡುತ್ತಿರುವುದನ್ನು ನೋಡುವುದಕ್ಕೆ ಖುಷಿಯಾಗುತ್ತದೆ. ಇದೊಂದು ಉತ್ತಮ ಬೆಳವಣಿಗೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ತಿಳಿಸಿದರು. 

ದ ಫೆಡರಲ್ ಕರ್ನಾಟಕದೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಕನ್ನಡಕ್ಕೆ ಆದ್ಯತೆ ನೀಡಬೇಕು ಎನ್ನುವುದು ನಮ್ಮ ಆಶಯ. ಈ ನಿಟ್ಟಿನಲ್ಲಿ ನಿಜಕ್ಕೂ ಹೊಸ ಅಧ್ಯಾಯ ಪ್ರಾರಂಭವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. 

(ಚಿತ್ರ ಕೃಪೆ: @RoyalChallengersBangalore @BengaluruBulls @bengalurufootballclub ) 

Tags:    

Similar News