RCB ಅನ್‌ಬಾಕ್ಸ್‌ ಈವೆಂಟ್ ಇಂದು: ಸಂಪೂರ್ಣ ಮಾಹಿತಿ ಇಲ್ಲಿದೆ
x
ಆರ್‌ಸಿಬಿ

RCB ಅನ್‌ಬಾಕ್ಸ್‌ ಈವೆಂಟ್ ಇಂದು: ಸಂಪೂರ್ಣ ಮಾಹಿತಿ ಇಲ್ಲಿದೆ

ಏನಿದು RCB ಅನ್‌ಬಾಕ್ಸ್‌ ಈವೆಂಟ್ ?


ಪ್ರಸಕ್ತ ಸಾಲಿನ (Indian Premier League ) ಐಪಿಎಲ್‌ಗೆ ಕ್ಷಣಗಣನೆ ಪ್ರಾರಂಭವಾಗಿದೆ. ಇದೇ ಸಂದರ್ಭದಲ್ಲಿ ಐಪಿಎಲ್‌ನ ಕೇಂದ್ರ ಬಿಂದು ಹಾಗೂ ಜನಪ್ರಿಯ ಟೀಮ್‌ಗಳಲ್ಲಿ ಒಂದಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore)ನ ಆರ್‌ಸಿಬಿ (RCB) ಅನ್‌ಬಾಕ್ಸ್‌ ಈವೆಂಟ್ ಮಂಗಳವಾರ ನಡೆಯಲಿದೆ.

ಆರ್‌ಸಿಬಿಯ ಅನ್‌ಬಾಕ್ಸಿಂಗ್ ಈವೆಂಟ್ ಮಾರ್ಚ್ 19ರ ಸಂಜೆ ನಡೆಯಲಿದ್ದು, ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಮಹತ್ವದ ಘೋಷಣೆಯೂ ಆಗುವ ಸಾಧ್ಯತೆ ಇರುವುದರಿಂದ ಕಾರ್ಯಕ್ರಮ ಮಹತ್ವ ಪಡೆದುಕೊಂಡಿದೆ. ಈಚೆಗೆ ಅಂದರೆ ಮಾರ್ಚ್ 17ರಂದು ಆರ್‌ಸಿಬಿ ಮಹಿಳಾ ತಂಡವು ಮೊದಲ ಬಾರಿ ಮಹಿಳಾ ಪ್ರೀಮಿಯರ್ ಲೀಗ್ (Women's Premier League)ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದು, ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಅವರನ್ನೂ ಈ ಕಾರ್ಯಕ್ರಮದಲ್ಲಿ ಸನ್ಮಾನಿಸುವ ಸಾಧ್ಯತೆ ಇದೆ.

ಏನಿದು RCB ಅನ್‌ಬಾಕ್ಸ್‌ ಈವೆಂಟ್ ?

ಐಪಿಎಲ್ 2024ರ ಭಾಗವಾಗಿ ಮಾರ್ಚ್ 19ರ ಸಂಜೆ ಆರ್‌ಸಿಬಿ ಅನ್‌ಬಾಕ್ಸ್‌ ನಡೆಯಲಿದೆ. ಪ್ರತಿ ವರ್ಷವೂ ಐಪಿಎಲ್ ಪ್ರಾರಂಭವಾಗುವುದಕ್ಕೆ ಕೆಲವು ದಿನಗಳಿರುವಂತೆ ಆರ್‌ಸಿಬಿ ಅನ್‌ಬಾಕ್ಸಿಂಗ್‌ ಆಯೋಜಿಸುತ್ತದೆ. ಸಾಮಾನ್ಯವಾಗಿ ಈ ಕಾರ್ಯಕ್ರಮದಲ್ಲಿ ಆರ್‌ಸಿಬಿಯ ಜರ್ಸಿ (Jersey) ಬಿಡುಗಡೆ ಮಾಡಲಾಗುತ್ತದೆ. ಆರ್‌ಸಿಬಿಯ ತಂಡದ ಆಟಗಾರರನ್ನು ಪರಿಚಯಿಸುತ್ತದೆ. 2022ರಲ್ಲಿ ನಡೆದ ಮೊದಲ ಈವೆಂಟ್‌ನಲ್ಲಿ ಆರ್‌ಸಿಬಿ ತಂಡದ ನೂತನ ನಾಯಕ ಫಾಫ್ ಡು ಪ್ಲೆಸಿಸ್ ಅವರನ್ನು ಪರಿಚಯಿಸಲಾಗಿತ್ತು. ಅಲ್ಲದೇ ಆರ್‌ಸಿಬಿ ಫ್ರಾಂಚೈಸಿಗೆ ನೀಡಿದ ಕೊಡುಗೆಗಾಗಿ ಕ್ರಿಸ್ ಗೇಲ್ ಮತ್ತು ಎಬಿ ಡಿವಿಲಿಯರ್ಸ್ ಅವರನ್ನು ಗೌರವಿಸಲಾಗಿತ್ತು.

ಯಾವಾಗ, ಎಲ್ಲಿ ನಡೆಯಲಿದೆ ಈ ಈವೆಂಟ್

ಬಹು ನಿರೀಕ್ಷಿತ RCB ಅನ್‌ಬಾಕ್ಸ್‌ ಈವೆಂಟ್ ಮಂಗಳವಾರ ( ಮಾರ್ಚ್ 19ರಂದು) ಸಂಜೆ 4 ಗಂಟೆಯಿಂದ ಪ್ರಾರಂಭವಾಗಲಿದ್ದು, ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಆಸಕ್ತ ಅಭಿಮಾನಿಗಳು RCB ವೆಬ್‌ಸೈಟ್‌ನಿಂದ ಟಿಕೆಟ್ ಖರೀದಿಸಬಹುದಾಗಿದೆ.

ಮನೆಯಲ್ಲೇ ಕುಳಿತು ನೋಡಬಹುದು

RCB ಅನ್‌ಬಾಕ್ಸ್‌ ಕಾರ್ಯಕ್ರಮವನ್ನು ನೀವು ಮನೆಯಲ್ಲೇ ಕುಳಿತು ಸಹ ನೋಡಬಹುದಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಕಾರ್ಯಕ್ರಮ ಪ್ರಸಾರವಾಗಲಿದೆ.


ಆರ್‌ಸಿಬಿ ಹೆಸರು ಬದಲಾವಣೆ ಸಾಧ್ಯತೆ

ಕಳೆದ 16 ವರ್ಷಗಳಿಂದಲೂ ಆರ್‌ಸಿಬಿಗೆ ಟ್ರೋಫಿಯ ಬರವಿತ್ತು. ಅದನ್ನು ಈ ಬಾರಿ ಮಹಿಳಾ ತಂಡ ನೀಗಿಸಿದೆ. ಇನ್ನು Royal Challengers Bangalore ಎಂದಿರುವ ಹೆಸರನ್ನು Royal Challengers “Bengaluru” ಎಂದು ಬದಲಾಯಿಸುವ ಬಗ್ಗೆಯೂ ತೀವ್ರವಾದ ಚರ್ಚೆ ನಡೆದಿದೆ. ಈಗಾಗಲೇ ಜಾಹೀರಾತುಗಳಲ್ಲಿ ನಟ ಸುದೀಪ್, ಶಿವರಾಜ್ ಕುಮಾರ್, ರಿಷಬ್ ಶೆಟ್ಟಿ ಹಾಗೂ ನಟಿ ರಶ್ಮಿಕಾ ಮಂದಣ್ಣ ಅವರು Bangalore ಬದಲಿಗೆ Bengaluru ಎನ್ನುವ ಪದ ಬಳಸುವ ಬಗ್ಗೆ ಸುಳಿವು ನೀಡಿದ್ದಾರೆ. ಹೆಸರು ಬದಲಾವಣೆ ಮಾಡುವ ಬಗ್ಗೆ ಆರ್‌ಸಿಬಿ ಅಭಿಮಾನಿಗಳಲ್ಲೂ ತೀವ್ರ ಕುತೂಹಲವಿದೆ. ಆರ್‌ಸಿಬಿ ಆಡಳಿತ ಮಂಡಳಿ ಯಾವ ಬದಲಾವಣೆ ಮಾಡಲಿದೆ ಎನ್ನುವ ಪ್ರಶ್ನೆಗೆ ಮಂಗಳವಾರ ಸಂಜೆ ಉತ್ತರ ಸಿಗಲಿದೆ.

Read More
Next Story