ಹನಿಟ್ರ್ಯಾಪ್ ಖೆಡ್ಡಾ | ಕಲಬುರಗಿಯ ಸರ್ಕಾರಿ ಅಧಿಕಾರಿಗಳು, ಉದ್ಯಮಿಗಳಿಗೆ ಲಕ್ಷ-ಲಕ್ಷ ದೋಖಾ
ಸರ್ಕಾರಿ ಅಧಿಕಾರಿಗಳು, ಉದ್ಯಮಿಗಳನ್ನು ಹನಿಟ್ರ್ಯಾಪ್ ಖೆಡ್ಡಾಗೆ ಬೀಳಿಸುತ್ತಿದ್ದ ಆರೋಪದಡಿ ದಲಿತ ಸೇನೆಯ ಹಣಮಂತ ಯಳಸಂಗಿ, ಪ್ರಭು ಹಿರೇಮಠ, ರಾಜು ಲೆಂಗಟಿ, ಶ್ರೀಕಾಂತ ರೆಡ್ಡಿ, ಮಂಜು ಭಂಡಾರಿ ಸೇರಿದಂತೆ 8 ಜನರ ವಿರುದ್ಧ ಕಲಬುರಗಿಯ ಸ್ಟೇಷನ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.;
ಹನಿಟ್ರ್ಯಾಪ್ ಖೆಡ್ಡಾ ತೋಡಿ ಪೊಲೀಸ್ ಪೇದೆ ಸೇರಿದಂತೆ ಹಲವು ಸರ್ಕಾರಿ ಅಧಿಕಾರಿಗಳು ಮತ್ತು ಉದ್ಯಮಿಗಳನ್ನು ಬ್ಲ್ಯಾಕ್ ಮೇಲೆ ಲಕ್ಷ ಲಕ್ಷ ವಸೂಲಿ ಮಾಡುತ್ತಿದ್ದ ಗ್ಯಾಂಗ್ ಒಂದನ್ನು ಕಲಬುರಗಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಆರೋಪಿಗಳು ಸಾಮಾಜಿಕ ಜಾಲತಾಣದ ಮೂಲಕ ಯುವತಿಯರನ್ನು ಪರಿಚಯ ಮಾಡಿಕೊಂಡು, ಬಳಿಕ ಅವರಿಗೆ ಹಣದ ಆಮಿಷ ತೋರಿಸಿ ಅವರನ್ನು ತಮ್ಮ ಹನಿಟ್ರ್ಯಾಪ್ ಕೃತ್ಯಕ್ಕೆ ಬಳಸಿಕೊಳ್ಳುತ್ತಿದ್ದರು. ಹತ್ತಕ್ಕೂ ಹೆಚ್ಚು ಮಂದಿ ಬಹುತೇಕ ಬಡ ಹೆಣ್ಣುಮಕ್ಕಳನ್ನೇ ಬಳಸಿಕೊಂಡು ಆರೋಪಿಗಳು ಹಲವು ಮಂದಿ ಅಧಿಕಾರಿಗಳು ಮತ್ತು ಉದ್ಯಮಿಗಳನ್ನು ಖೆಡ್ಡಾಕ್ಕೆ ಬೀಳಿಸಿ, ಲಕ್ಷಾಂತರ ರೂಪಾಯಿ ವಸೂಲಿ ಮಾಡಿದ್ದಾರೆ.
ದೊಡ್ಡ ದೊಡ್ಡ ಉದ್ಯಮಿಗಳು, ಸರ್ಕಾರಿ ಅಧಿಕಾರಿಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಗ್ಯಾಂಗ್, ತಾವು ಟಾರ್ಗೆಟ್ ಮಾಡಿದವರ ಜೊತೆ ಪಲ್ಲಂಗ ಹಂಚಿಕೊಳ್ಳುವಂತೆ ಯುವತಿಯರಿಗೆ ಹೇಳುತ್ತಿದ್ದರು. ಅಧಿಕಾರಿಗಳು ಅಥವಾ ಉದ್ಯಮಿಗಳು ಆ ಯುವತಿಯರೊಂದಿಗೆ ಕಳೆಯುವ ಖಾಸಗಿ ಕ್ಷಣಗಳನ್ನು ಫೋಟೋ ತೆಗೆದು, ವಿಡಿಯೋ ರೆಕಾರ್ಡ್ ಮಾಡಿಕೊಂಡು ಬಳಿಕ ಅವರಿಗೆ ಹಣಕ್ಕೆ ಬೇಡಿಕೆ ಇಡುತ್ತಿದ್ದರು. ಇಲ್ಲವಾದಲ್ಲೀ ಫೋಟೋ, ವಿಡಿಯೋಗಳನ್ನು ಜಾಲತಾಣಗಳ ಮೂಲಕ ಬಹಿರಂಗಪಡಿಸುವ ಬೆದರಿಕೆ ಒಡ್ಡುತ್ತಿದ್ದರು.
ಆರೋಪಿಗಳು, ಹನಿಟ್ರ್ಯಾಪ್ ಮೂಲಕ ಕಮಲಾಪುರ ಪೊಲೀಸ್ ಠಾಣೆ ಪೇದೆಯನ್ನು ತಮ್ಮ ಖೆಡ್ಡಾಕ್ಕೆ ಕೆಡವಿಕೊಂಡಿದ್ದಾರೆ. ಬಳಿಕ, ಪೊಲೀಸ್ ಪೇದೆಗೆ ಬೆದರಿಕೆ ಹಾಕಿ 7 ಲಕ್ಷ ರೂ. ವಸೂಲಿ ಮಾಡಿದ್ದಾರೆ. ಅಲ್ಲದೆ, ಉದ್ಯಮಿಯೊಬ್ಬರಿಂದಲೂ 40 ಲಕ್ಷ ರೂ. ವಸೂಲಿ ಮಾಡಿದ್ದಾರೆ. ಹಾಗೇ, ಆರೋಪಿಗಳು ಓರ್ವ ಯುವತಿಗೆ ಗರ್ಭಪಾತ ಮಾಡಿಸಿದ್ದರು ಎಂಬ ಸಂಗತಿ ಕೂಡ ಇದೀಗ ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ.
ದಲಿತ ಸೇನೆಯ ಹಣಮಂತ ಯಳಸಂಗಿ, ಪ್ರಭು ಹಿರೇಮಠ, ರಾಜು ಲೆಂಗಟಿ, ಶ್ರೀಕಾಂತ ರೆಡ್ಡಿ, ಮಂಜು ಭಂಡಾರಿ ಸೇರಿದಂತೆ 8 ಜನರ ಈ ಗ್ಯಾಂಗನ್ನು ಹೆಡೆಮುರಿ ಕಟ್ಟಿರುವ ಕಲಬುರಗಿಯ ಸ್ಟೇಷನ್ ಬಜಾರ್ ಠಾಣೆಯ ಪೊಲೀಸರು, ಎಲ್ಲರ ವಿರುದ್ಧ ಪ್ರಕರಣ ದಾಖಲಾಗಿದೆ.