Bangalore Stampede | ನ್ಯಾ. ಕುನ್ಹಾ ವರದಿ ಜಾರಿ, ಇಲಾಖಾ ತನಿಖೆಗೆ ನಿರ್ಧಾರ: ಗೃಹ ಸಚಿವ ಡಾ.ಜಿ ಪರಮೇಶ್ವರ್
ಇಡೀ ದೇಶದಲ್ಲಿ ಮತ್ತು ಕರ್ನಾಟಕದಲ್ಲೂ ಲೋಕಸಭಾ ಚುನಾವಣೆಯಲ್ಲಿ ಅಕ್ರಮ ಆಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಅದನ್ನು ಸಾಬೀತು ಮಾಡುತ್ತೇನೆ ಎಂದಿದ್ದಾರೆ, ಕಾದು ನೋಡೋಣ," ಎಂದು ಪರಮೇಶ್ವರ್ ಹೇಳಿದ್ದಾರೆ.;
ಗೃಹ ಸಚಿವ ಡಾ.ಜಿ. ಪರಮೇಶ್ವರ್
ನ್ಯಾ. ಮೈಕೆಲ್ ಡಿ ಕುನ್ಹಾ ಅವರ ವರದಿಯನ್ನು ರಾಜ್ಯ ಸರ್ಕಾರ ಒಪ್ಪಿಕೊಂಡಿದ್ದು, ವರದಿಯಲ್ಲಿನ ಶಿಫಾರಸುಗಳ ಆಧಾರದ ಮೇಲೆ ಇಲಾಖಾ ತನಿಖೆ ನಡೆಸಲು ನಿರ್ಧರಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿಂದು ಮಾತನಾಡಿದ ಅವರು, ಜಾತಿಗಣತಿ, ಚುನಾವಣಾ ಅಕ್ರಮ, ಮಹದಾಯಿ ಯೋಜನೆ ಸೇರಿದಂತೆ ಹಲವು ಪ್ರಮುಖ ವಿಷಯಗಳ ಬಗ್ಗೆ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ಜಸ್ಟೀಸ್ ಮೈಕೆಲ್ ಡಿ ಕುನ್ಹಾ ವರದಿಯನ್ನು ಸರ್ಕಾರ ಸ್ವೀಕರಿಸಿದೆ. ಭವಿಷ್ಯದಲ್ಲಿ ಕಾರ್ಯಕ್ರಮಗಳಿಗೆ ಯಾವ ರೀತಿ ಅನುಮತಿಗಳನ್ನು ನೀಡಬೇಕು ಎಂಬುದರ ಕುರಿತು ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ವರದಿಯಲ್ಲಿ ಆರ್‌ಸಿಬಿ, ಡಿಎನ್ಎ, ಕೆಎಸ್‌ಸಿಎ ಮತ್ತು ಪೊಲೀಸರ ಹೆಸರು ಉಲ್ಲೇಖವಾಗಿದ್ದು, ಗೋವಿಂದರಾಜ್ ಅವರ ಹೆಸರು ಇಲ್ಲ. ಈ ವರದಿಯ ಅನ್ವಯ, ನಾವು ಇಲಾಖಾ ತನಿಖೆಯನ್ನು ನಡೆಸಲು ತೀರ್ಮಾನಿಸಿದ್ದೇವೆ ಎಂದು ಪರಮೇಶ್ವರ್ ಹೇಳಿದ್ದಾರೆ.
ಚುನಾವಣಾ ಅಕ್ರಮದ ಬಗ್ಗೆ ರಾಹುಲ್ ಗಾಂಧಿ ಹೇಳಿಕೆ
ಲೋಕಸಭಾ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ರಾಹುಲ್ ಗಾಂಧಿ ಅವರ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಇಡೀ ದೇಶದಲ್ಲಿ ಮತ್ತು ಕರ್ನಾಟಕದಲ್ಲೂ ಲೋಕಸಭಾ ಚುನಾವಣೆಯಲ್ಲಿ ಅಕ್ರಮ ಆಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಅದನ್ನು ಸಾಬೀತು ಮಾಡುತ್ತೇನೆ ಎಂದಿದ್ದಾರೆ, ಕಾದು ನೋಡೋಣ," ಎಂದು ತಿಳಿಸಿದ್ದಾರೆ.
ಮರು ಜಾತಿಗಣತಿಗೆ ಬಿಜೆಪಿ ಟೀಕೆ
ಮರು ಜಾತಿಗಣತಿ ನಡೆಸುವ ಸರ್ಕಾರದ ನಿರ್ಧಾರಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ ಮಾತನಾಡಿದ ಅವರು, "ಪ್ರತಿಪಕ್ಷಗಳು ಆಡಳಿತ ಪಕ್ಷದ ಮೇಲೆ ಟೀಕೆ ಮಾಡುವುದು ಸಹಜ. ನಾವೂ ವಿಪಕ್ಷದಲ್ಲಿದ್ದಾಗ ಟೀಕೆ ಮಾಡಿದ್ದೇವೆ. ಬಿಜೆಪಿಯವರು ಸಕಾರಾತ್ಮಕವಾಗಿ ಸಲಹೆಗಳನ್ನು ನೀಡಿ ಟೀಕೆ ಮಾಡಲಿ, ನಾವು ಅದನ್ನು ಖಂಡಿತವಾಗಿ ಪರಿಗಣಿಸುತ್ತೇವೆ," ಎಂದು ಹೇಳಿದ್ದಾರೆ.
ನೀರಾವರಿ ಯೋಜನೆಗಳು ಮತ್ತು ಬಿಕ್ಲು ಶಿವು ಹತ್ಯೆ ಪ್ರಕರಣ
ಮಹದಾಯಿ ಮತ್ತು ಮೇಕೆದಾಟು ಯೋಜನೆಗಳ ಬಗ್ಗೆ ಮಾತನಾಡಿದ ಅವರು, "ಮಹದಾಯಿ ಕುಡಿಯುವ ನೀರಿನ ಯೋಜನೆಯಾಗಿದ್ದು, ಇದಕ್ಕೆ ಯಾವುದೇ ನಿರ್ಬಂಧಗಳು ಇರಬಾರದು. 2022ರಲ್ಲಿ ಕೇಂದ್ರ ಸರ್ಕಾರವು ಒಂದು ರೀತಿಯ ಅನುಮತಿ ನೀಡಿತ್ತು, ಆದರೆ ನಂತರ ಸಂಘರ್ಷ ಪ್ರಾರಂಭವಾಯಿತು. ಕೇಂದ್ರ ಸರ್ಕಾರವು ಇದನ್ನು ಬಗೆಹರಿಸಬೇಕು. ಹಾಗೆಯೇ, ಬೆಂಗಳೂರಿನ ಕುಡಿಯುವ ನೀರಿನ ಯೋಜನೆಯಾದ ಮೇಕೆದಾಟು ಯೋಜನೆಗೂ ಕೇಂದ್ರ ಅನುಮತಿ ನೀಡಬೇಕು," ಎಂದು ಆಗ್ರಹಿಸಿದ್ದಾರೆ.
ನೀರಾವರಿ ಯೋಜನೆಗಳ ಕುರಿತು ಸರ್ವಪಕ್ಷ ಸಭೆ ಕರೆಯುವ ವಿಚಾರವನ್ನು ಮುಖ್ಯಮಂತ್ರಿಗಳು ಮತ್ತು ನೀರಾವರಿ ಸಚಿವರು ತೀರ್ಮಾನಿಸುತ್ತಾರೆ ಎಂದು ಹೇಳಿದ್ದಾರೆ.
ಇದೇ ವೇಳೆ, ಬಿಕ್ಲು ಶಿವು ಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ ಎಂದು ಅವರು ಖಚಿತಪಡಿಸಿದರು. "ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದರು, ಆದರೆ ಇದರ ನಡುವೆ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸುವ ತೀರ್ಮಾನ ಕೈಗೊಳ್ಳಲಾಗಿದೆ," ಎಂದು ತಿಳಿಸಿದ್ದಾರೆ.