ಗೋಂಕುರು ಕಪ್ಪೆ ಕಬಾಬ್‌| ಕಾರವಾರದಲ್ಲಿ ಇಬ್ಬರು ಅಂದರ್‌

ಗೋವಾದಲ್ಲಿ ಕಪ್ಪೆ ಪ್ರಿಯ ಮಾಂಸಾಹಾರಿಗಳಿಂದಾಗಿ ಕಪ್ಪೆಗಳಿಗಾಗಿ ಬೇಡಿಕೆ ಹೆಚ್ಚಿದೆ. ಆದರೆ, ಕಾನೂನು ಪ್ರಕಾರ ಇದು ಶಿಕ್ಷಾರ್ಹ ಅಪರಾಧ! ಮಳೆಗಾಲ ಆರಂಭದಲ್ಲಿ ಮಲೆನಾಡು ಮತ್ತು ಕರಾವಳಿಯಲ್ಲಿ ಕಾಣಸಿಗುವ ಬುಲ್‌ ಫ್ರಾಗ್‌ (ಗೋಂಕರು ಕಪ್ಪೆ) ಕಪ್ಪೆಗಳಿಗೆ ಬೇಡಿಕೆ ಇದೆಯಂತೆ!

Update: 2024-06-18 11:51 GMT

ಮನುಷ್ಯನಿಂದ ಕಪ್ಪೆಗಳಿಗೂ ಉಳಿಗಾಲವಿಲ್ಲ. ಗೋವಾದಲ್ಲಿ ಕಪ್ಪೆಗಳ ಕಬಾಬ್‌ ಮಾಡಲು ಕರ್ನಾಟಕದಿಂದ ಕಪ್ಪೆಗಳನ್ನು ಕಳ್ಳಸಾಗಾಣಿಕೆ ಮಾಡಲಾಗುತ್ತಿದೆ! ಕೋಳಿಯಂತೆಯೇ ಕಬಾಬ್‌ಗೆ ಬೇಡಿಕೆ ಇರುವ ಕಪ್ಪೆಗಳನ್ನು ಗೋವಾದಲ್ಲಿ ಜಂಪಿಂಗ್‌ ಚಿಕನ್‌ (ಕುಪ್ಪಳಿಸುವ ಕೋಳಿಗಳು) ಎಂದೇ ಕರೆಯುತ್ತಾರೆ.

ಹೌದು. ಗೋವಾದಲ್ಲಿ ಕಪ್ಪೆ ಪ್ರಿಯ ಮಾಂಸಾಹಾರಿಗಳಿಂದಾಗಿ ಕಪ್ಪೆಗಳಿಗೆ ಬೇಡಿಕೆ ಹೆಚ್ಚಿದೆ. ಆದರೆ, ಕಾನೂನು ಪ್ರಕಾರ ಕಪ್ಪೆ ಕೊಲ್ಲುವುದು ಶಿಕ್ಷಾರ್ಹ ಅಪರಾಧ! ಮಳೆಗಾಲ ಆರಂಭದಲ್ಲಿ ಮಲೆನಾಡು ಮತ್ತು ಕರಾವಳಿಯಲ್ಲಿ ಕಾಣಸಿಗುವ ಬುಲ್‌ ಫ್ರಾಗ್‌ (ಗೋಂಕರು ಕಪ್ಪೆ) ಎಂದು ಕರೆಯಲ್ಪಡುವ ಕಪ್ಪೆಗಳಿಗೆ ಹೆಚ್ಚಿನ ಬೇಡಿಕೆ ಇದೆಯಂತೆ! ಗೋವಾಕ್ಕೆ ಸರಬರಾಜು ಮಾಡಲು ಕಪ್ಪೆಗಳನ್ನು ಹಿಡಿದು ಬಸ್‌ನಲ್ಲಿ (ಹಳೆಯ ಟಯರ್‌ನ ರಿಮ್‌ಗೆ ನೀರು ಹಾಕಿ ಅದರಲ್ಲಿ ಕಪ್ಪೆಗಳನ್ನಿಟ್ಟು) ಸರಬರಾಜು ಮಾಡಿದ ಇಬ್ಬರು ಇದೀಗ ಆರಣ್ಯಾಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಕರ್ನಾಟಕದ ಕಾರವಾರದಿಂದ ಗೋವಾಗೆ ತೆರಳುವ ಖಾಸಗಿ ಬಸ್‌ನಲ್ಲಿ ಈ ಕಪ್ಪೆಗಳನ್ನು ಆಹಾರಕ್ಕಾಗಿ ಸಾಗಿಸುತ್ತಿದ್ದ ಮಾಹಿತಿ ಅರಣ್ಯ ಇಲಾಖೆಗೆ ಸಿಕ್ಕಿದ ಬಳಿಕ ಮಂಗಳವಾರ ಕಾರ್ಯಾಚರಣೆ ನಡೆದಿದೆ. ಕಾರವಾರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಳಿ ನದಿಗೆ ಅಡ್ಡಲಾಗಿರುವ ಸೇತುವೆ ಬಳಿ ಬಸ್‌ ತಡೆದ ಅರಣ್ಯಾಧಿಕಾರಿಗಳು ಒಟ್ಟು 41 ಕಪ್ಪೆಗಳನ್ನು ವಶಪಡಿಸಿಕೊಂಡಿದ್ದಾರೆ. ಬಸ್‌ನ ಸಿಬ್ಬಂದಿ ಗೋವಾ ಮೂಲದ ಸಿದ್ದೇಶ್‌ ದೇಸಾಯಿ (ಚಾಲಕ) ಮತ್ತು ಜಾನು ಲೋಲಿಮ್‌ (ನಿರ್ವಾಹಕ)ನನ್ನು ಬಂಧಿಸಲಾಗಿದೆ.

ಜಂಪಿಂಗ್‌ ಚಿಕನ್‌ ಎಂಬ ಪ್ರತೀತಿಯ ಈ ಬುಲ್‌ಫ್ರಾಗ್‌ ತಳಿಯ ಕಪ್ಪೆಗಳ ಕಾಲುಗಳನ್ನು ಕಬಾಬ್‌ ಮಾಡಿ ಕಪ್ಪೆ ಪ್ರಿಯರಿಗೆ ಆಹಾರವಾಗಿ ಬಡಿಸಲಾಗುತ್ತದೆ. ಅದರ ಮಾಂಸವನ್ನು ಫ್ರೈ ಮಾಡಿ ಕೆಲವರು ತಿನ್ನುತ್ತಾರೆ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.

ಕಪ್ಪೆಗಳ ಕಳ್ಳ ಸಾಗಾಣಿಕೆ

ಗೋವಾದಲ್ಲಿ ವಿದೇಶೀಯರೂ ಕಪ್ಪೆ ಮಾಂಸಕ್ಕಾಗಿ ಹಾತೊರೆಯುತ್ತಾರೆ. ಒಂದು ಕಪ್ಪೆಯ ಖಾದ್ಯಕ್ಕೆ ಒಂದು ಸಾವಿರಕ್ಕೂ ಹೆಚ್ಚು ಹಣ ತೆರುತ್ತಾರೆ. ಆದರೆ ಗೋವಾದ ಕಪ್ಪೆ ಪ್ರಿಯರಿಗಾಗಿ ಕಪ್ಪೆಗಳನ್ನು ಪಶ್ಚಿಮ ಘಟ್ಟ ಅಥವಾ ಕರಾವಳಿ ಪ್ರದೇಶಗಳಿಂದ ಸರಬರಾಜು ಮಾಡಲಾಗುತ್ತದೆ. ಒಂದೊಂದು ಕಪ್ಪೆಗೂ ಸುಮಾರು 300 ರೂವರೆಗೆ ದರ ಇದ್ದು, ಆ ಕಾರಣಕ್ಕೇ ಇದರ ಕಳ್ಳಸಾಗಾಣಿಕೆ ಹೆಚ್ಚುತ್ತಿದೆ ಎನ್ನಲಾಗಿದೆ.

ತಜ್ಞರ ಪ್ರಕಾರ ಕಪ್ಪೆಗಳ ಸಂತಾನೋತ್ಪತ್ತಿ ಕಾರ್ಯ ಮುಂಗಾರು ಮಳೆ ಆರಂಭದಲ್ಲಿ ಚುರುಕಾಗುತ್ತದೆ. ನೀರು ಇರುವ ಗುಡ್ಡಪ್ರದೇಶಗಳು, ಹೊಲಗಳು ಅಥವಾ ಕೊಳಗಳ ಬಳಿ ಕುಪ್ಪಳಿಸುವ ಕಪ್ಪೆಗಳನ್ನು ಹಿಡಿಯುವುದು ಕಪ್ಪೆಗಳ ಕಳ್ಳಸಾಗಣಿಕೆ ದಾರರಿಗೆ ಸುಲಭ! ಭಾರತೀಯ ಬುಲ್‌ಫ್ರಾಗ್‌ ತಳಿಯ ದೊಡ್ಡ ಕಪ್ಪೆಗಳು ಕಡುಹಸಿರು-ಕಂದು ಮಿಶ್ರಣದ ಒಂದು ರೀತಿ ಬಂಗಾರದ ಬಣ್ಣ ಹೊಂದಿದ್ದು, ನೆಲದ ಕೆಸರಿನ ಬಣ್ಣದಂತೆ ಇರುತ್ತದೆ. ಸಂತಾನೋತ್ಪತ್ತಿ ಸಮಯದಲ್ಲಿ ಗಂಡು ಜಾತಿಯ ಕಪ್ಪೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ.



 


ಕಪ್ಪೆ ಹಿಡಿದರೆ ಮೂರು ವರ್ಷ ಜೈಲು!

ಇಂತಹ ಕಪ್ಪೆಗಳನ್ನು ಹಿಡಿದು ತಿನ್ನುವುದು ಗೋವಾದಲ್ಲಿ ಸಾಮಾನ್ಯವಾಗಿದೆ. ಆದರೆ, ಇಂತಹ ಕಪ್ಪೆಗಳನ್ನು ಬೇಟೆಯಾಡುವುದು ಕಾನೂನು ಪ್ರಕಾರ ತಪ್ಪು. ವನ್ಯಜೀವಿ ಸಂರಕ್ಷಣಾ ಕಾಯಿದೆ, 1972 ರ ಶೆಡ್ಯೂಲ್ IV ರ ಅಡಿಯಲ್ಲಿ ಈ ಕಪ್ಪೆಗಳನ್ನು ಸೇರಿಸಲಾಗಿದ್ದು, ಕಪ್ಪೆ ಬೇಟೆ ಮಾಡಿದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ರೂ. 25,000 ದಂಡ ವಿಧಿಸಲಾಗುವುದು. ಭಾರತೀಯ ಬುಲ್‌ಫ್ರಾಗ್ ಮತ್ತು ಜೆರ್ಡನ್ಸ್ ಬುಲ್‌ಫ್ರಾಗ್‌ಗಳನ್ನು ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್‌ನ (IUCN) ಪಟ್ಟಿಯ ಅಳಿವಿನಂಚಿನ ಪ್ರಾಣಿಗಳ ಪಟ್ಟಿಯುಲ್ಲಿ ಹೆಸರಿಸಲಾಗಿದೆ.

ಅಂದರೆ ಈ ಕಪ್ಪೆಗಳನ್ನು ಹಿಡಿದು ಮಾರಾಟ ಮಾಡುವುದು ಮಾತ್ರವಲ್ಲ, ಖಾದ್ಯ ಮಾಡಿ ಮಾರುವುದೂ ಕಾನೂನು ಪ್ರಕಾರ ತಪ್ಪು. ಹಾಗಾಗಿ ಗೋವಾದ ಕೆಲವು ಹೋಟೆಲುಗಳಲ್ಲಿ ವಿಶ್ವಾಸಾರ್ಹ ಗ್ರಾಹಕರಿಗಷ್ಟೇ ಅಂತಹ ಕಪ್ಪೆ ಆಹಾರವನ್ನು ನೀಡಲಾಗುತ್ತದೆ. ಕಪ್ಪೆಗಳಿಂದ ತಯಾರಾಗುವ ಚಿಲ್ಲಿ ಫ್ರೈ, ಸೂಪ್‌, ಕ್ಸಾಕುಟಿ, ಕಬಾಬ್‌ ಮತ್ತಿತರ ಹೆಸರುಗಳ ಖಾದ್ಯಗಳನ್ನು ಗೋವಾದಲ್ಲಿ ಮಾರಾಟ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದು, ಈ ಬಗ್ಗೆ ಅರಣ್ಯ ಇಲಾಖೆ ಹದ್ದಿನ ಕಣ್ಣಿಟ್ಟಿದೆ ಎನ್ನಲಾಗಿದೆ.

Tags:    

Similar News