ಕನ್ನಡಿಗರಿಗೆ ಉದ್ಯೋಗ ಮೀಸಲು: ಜೀವ ಪಡೆದ ವಿವಾದ, ಸರ್ಕಾರದ ಮುಂದಿದೆ ಜಟಿಲ ಸವಾಲು

ಉದ್ಯೋಗ ಮೀಸಲಾತಿ ಕಾನೂನಾತ್ಮಕವಾಗಿ, ಶಾಶ್ವತವಾಗಿ ಸಿಗುವಂತಿರಬೇಕು. ನ್ಯಾಯಾಲಯಗಳಲ್ಲೂ ಯಾವುದೇ ಹಿನ್ನಡೆಯಾಗದಂತೆ ಕಾನೂನು ರೂಪಿಸಲಾಗುವುದು. ವರದಿ ತಯಾರಿಕೆಗಾಗಿ ಈಗಾಗಲೇ ಪೂರ್ವತಯಾರಿ ನಡೆಯುತ್ತಿದೆ.

Update: 2025-10-11 02:30 GMT

ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ವಿಚಾರ ಮತ್ತೊಮ್ಮೆ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಈ ಹಿಂದೆ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿ, ಕೈಗಾರಿಕಾ ವಲಯದ ತೀವ್ರ ವಿರೋಧದಿಂದಾಗಿ ತಾತ್ಕಾಲಿಕವಾಗಿ ಹಿಂಪಡೆಯಲಾಗಿದ್ದ ಈ ಸೂಕ್ಷ್ಮ ವಿಷಯ, ಇದೀಗ ಮತ್ತೆ ಚಿಗುರೊಡೆದಿದೆ. ಕನ್ನಡಪರ ಸಂಘಟನೆಗಳ ನಿರಂತರ ಒತ್ತಡ ಮತ್ತು ಸರೋಜಿನಿ ಮಹಿಷಿ ವರದಿ ಜಾರಿಯ ಕೂಗಿನ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಈ ನಿಟ್ಟಿನಲ್ಲಿ ಗಂಭೀರ ಹೆಜ್ಜೆ ಇಡಲು ಸಿದ್ಧತೆ ನಡೆಸುತ್ತಿದ್ದು, ಕಾರ್ಮಿಕ ಇಲಾಖೆ ಈಗಾಗಲೇ ಪ್ರಕ್ರಿಯೆ ಆರಂಭಿಸಿದೆ.

ಕಳೆದ ವರ್ಷ, "ಕೈಗಾರಿಕೆ, ಕಾರ್ಖಾನೆ ಮತ್ತು ಇತರ ಸಂಸ್ಥೆಗಳಲ್ಲಿ ಸ್ಥಳೀಯ ಅಭ್ಯರ್ಥಿಗಳ ಕರ್ನಾಟಕ ರಾಜ್ಯ ಉದ್ಯೋಗ ಮಸೂದೆ- 2024" ಜಾರಿಗೆ ಸರ್ಕಾರ ಮುಂದಾಗಿತ್ತು. ಆದರೆ, ಐಟಿ-ಬಿಟಿ ಸೇರಿದಂತೆ ಖಾಸಗಿ ವಲಯದ ಉದ್ಯಮಿಗಳಿಂದ ವ್ಯಕ್ತವಾದ ತೀವ್ರ ಪ್ರತಿರೋಧಕ್ಕೆ ಮಣಿದು, ವ್ಯಾಪಕ ಸಮಾಲೋಚನೆ ನಡೆಸುವ ಭರವಸೆಯೊಂದಿಗೆ ಮಸೂದೆಯನ್ನು ಸರ್ಕಾರ ತಡೆಹಿಡಿದಿತ್ತು. ಇದೀಗ, ರಾಜ್ಯದಲ್ಲಿರುವ ಕಾರ್ಖಾನೆಗಳಲ್ಲಿ ಒಟ್ಟು ಉದ್ಯೋಗಿಗಳ ಸಂಖ್ಯೆ, ಅದರಲ್ಲಿರುವ ಕನ್ನಡಿಗರ ಪ್ರಮಾಣದಂತಹ ಜಿಲ್ಲಾವಾರು ಅಂಕಿ-ಅಂಶಗಳನ್ನು ಸಂಗ್ರಹಿಸುವ ಮೂಲಕ, ಸರ್ಕಾರ ತಳಮಟ್ಟದಿಂದ ಮಾಹಿತಿ ಕಲೆಹಾಕುತ್ತಿದೆ. "ಇನ್ನೆರಡು ತಿಂಗಳಲ್ಲಿ ಈ ವರದಿ ಕೈಸೇರಲಿದ್ದು, ನಂತರ ಮಸೂದೆಯ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ, ಕಾನೂನಾತ್ಮಕವಾಗಿ ಯಾವುದೇ ತೊಡಕಾಗದಂತೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು," ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ 'ದ ಫೆಡರಲ್ ಕರ್ನಾಟಕ'ಕ್ಕೆ ತಿಳಿಸಿದ್ದಾರೆ.

ಏನಿದು ಮೀಸಲಾತಿ ಮಸೂದೆ?

2024ರ ಕರಡು ಮಸೂದೆಯ ಪ್ರಕಾರ, ಖಾಸಗಿ ಸಂಸ್ಥೆಗಳಲ್ಲಿ ನಿರ್ವಹಣಾ (Management) ಹುದ್ದೆಗಳಲ್ಲಿ ಶೇ. 50 ಮತ್ತು ನಿರ್ವಹಣೇತರ (Non-management) ಹುದ್ದೆಗಳಲ್ಲಿ ಶೇ. 75 ರಷ್ಟು ಉದ್ಯೋಗಗಳನ್ನು ಸ್ಥಳೀಯರಿಗೆ ಕಾಯ್ದಿರಿಸಬೇಕು ಎಂದು ಪ್ರಸ್ತಾಪಿಸಲಾಗಿತ್ತು. 'ಕನ್ನಡಿಗ' ಎಂದರೆ, ಕನಿಷ್ಠ 15 ವರ್ಷ ರಾಜ್ಯದಲ್ಲಿ ವಾಸಿಸಿರಬೇಕು ಮತ್ತು ಕನ್ನಡ ಭಾಷಾ ಜ್ಞಾನವನ್ನು ಹೊಂದಿರಬೇಕು ಎಂಬ ಅರ್ಹತೆಯನ್ನು ನಿಗದಿಪಡಿಸಲಾಗಿತ್ತು. ಅರ್ಹ ಸ್ಥಳೀಯ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದರೆ, ಕಂಪನಿಗಳು ಮೂರು ವರ್ಷಗಳೊಳಗೆ ತರಬೇತಿ ನೀಡಿ ನೇಮಿಸಿಕೊಳ್ಳಬೇಕು, ಇಲ್ಲವೇ ವಿನಾಯಿತಿಗಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಬಹುದು ಎಂಬ ನಿಯಮವೂ ಇತ್ತು.

ಉದ್ಯಮ ವಲಯದ ಆತಂಕವೇನು?

ಈ ಮೀಸಲಾತಿ ನೀತಿಯು ಸ್ಪರ್ಧಾತ್ಮಕತೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂಬುದು ಉದ್ಯಮಿಗಳ ಪ್ರಮುಖ ಆತಂಕ. "ಖಾಸಗಿ ವಲಯವು ಅರ್ಹತೆ ಮತ್ತು ಪ್ರತಿಭೆಯನ್ನು ಆಧರಿಸಿ ನೇಮಕಾತಿ ಮಾಡುತ್ತದೆ. ಮೀಸಲಾತಿ ಹೇರಿದರೆ, ಕೌಶಲಯುಕ್ತ ಮಾನವ ಸಂಪನ್ಮೂಲದ ಕೊರತೆ ಎದುರಾಗಿ, ಕಂಪನಿಗಳು ನೆರೆಯ ರಾಜ್ಯಗಳಾದ ಹೈದರಾಬಾದ್ ಅಥವಾ ತಮಿಳುನಾಡಿನತ್ತ ಮುಖ ಮಾಡಬಹುದು," ಎಂದು ಐಟಿ ಉದ್ಯಮಿ ಟಿ.ವಿ. ಮೋಹನ್‌ದಾಸ್ ಪೈ ಈ ಹಿಂದೆಯೇ ಎಚ್ಚರಿಸಿದ್ದರು. ಸ್ಥಳೀಯರಿಗೆ ಉದ್ಯೋಗ ನೀಡಲು ಮೊದಲು ಸರ್ಕಾರವೇ ಉನ್ನತ ಶಿಕ್ಷಣ ಮತ್ತು ಕೌಶಲ ತರಬೇತಿಯನ್ನು ನೀಡಬೇಕು ಎಂಬುದು ಅವರ ಆಗ್ರಹವಾಗಿತ್ತು. ಈ ನೀತಿಯು ಹೂಡಿಕೆದಾರರನ್ನು ಹಿಮ್ಮೆಟ್ಟಿಸಬಹುದು ಮತ್ತು ರಾಜ್ಯದ ಆರ್ಥಿಕ ಬೆಳವಣಿಗೆಗೆ ಅಡ್ಡಿಯಾಗಬಹುದು ಎಂಬ ಆತಂಕವೂ ಇದೆ.

ಕಾನೂನು ಮತ್ತು ಸಂವಿಧಾನದ ಸವಾಲುಗಳು

ಸ್ಥಳೀಯರಿಗೆ ಉದ್ಯೋಗ ಮೀಸಲಾತಿ ನೀಡುವುದು ಸಂವಿಧಾನದ ಸಮಾನ ಅವಕಾಶದ ತತ್ವಕ್ಕೆ ವಿರುದ್ಧವಾಗಿದೆ ಎಂಬ ವಾದವೂ ಇದೆ. ಈ ಹಿಂದೆ ಆಂಧ್ರಪ್ರದೇಶ ಮತ್ತು ಹರಿಯಾಣ ಸರ್ಕಾರಗಳು ಜಾರಿಗೆ ತಂದಿದ್ದ ಇದೇ ರೀತಿಯ ಕಾನೂನುಗಳನ್ನು ಅಲ್ಲಿನ ಹೈಕೋರ್ಟ್‌ಗಳು "ಅಸಾಂವಿಧಾನಿಕ" ಎಂದು ರದ್ದುಪಡಿಸಿವೆ. ಡಾ. ಪ್ರದೀಪ್ ಜೈನ್ ಪ್ರಕರಣದಲ್ಲಿ, ಸುಪ್ರೀಂ ಕೋರ್ಟ್ ಕೂಡ ಸ್ಥಳೀಯರಿಗೆ ಆದ್ಯತೆ ನೀಡಬಹುದೇ ಹೊರತು, ಪೂರ್ಣ ಪ್ರಮಾಣದ ಮೀಸಲಾತಿ ನೀಡಬಾರದು ಎಂದು ಅಭಿಪ್ರಾಯಪಟ್ಟಿತ್ತು. ಈ ಎಲ್ಲಾ ಕಾನೂನಾತ್ಮಕ ಸವಾಲುಗಳನ್ನು ಮೀರಿ, ನ್ಯಾಯಾಲಯದಲ್ಲಿಯೂ ಮಾನ್ಯವಾಗುವಂತಹ ಬಲಿಷ್ಠ ಕಾನೂನು ರೂಪಿಸುವುದು ಸರ್ಕಾರದ ಮುಂದಿರುವ ದೊಡ್ಡ ಸವಾಲಾಗಿದೆ.

ಸರೋಜಿನಿ ಮಹಿಷಿ ವರದಿಯಿಂದ ಇಂದಿನವರೆಗೂ

1984ರಲ್ಲಿ ಸರೋಜಿನಿ ಮಹಿಷಿ ನೇತೃತ್ವದ ಸಮಿತಿಯು ಖಾಸಗಿ ವಲಯದಲ್ಲಿ 'ಸಿ' ಮತ್ತು 'ಡಿ' ದರ್ಜೆಯ ಉದ್ಯೋಗಗಳಲ್ಲಿ ಶೇ. 100ರಷ್ಟು ಸ್ಥಳೀಯರಿಗೆ ಮೀಸಲಿಡಬೇಕು ಎಂದು ಶಿಫಾರಸು ಮಾಡಿತ್ತು. ದಶಕಗಳಿಂದ ಈ ವರದಿ ಜಾರಿಗೆ ಹೋರಾಟ ನಡೆಯುತ್ತಿದ್ದರೂ, ಯಾವುದೇ ಸರ್ಕಾರ ಅದನ್ನು ಸಂಪೂರ್ಣವಾಗಿ ಜಾರಿಗೊಳಿಸಲು ಸಾಧ್ಯವಾಗಿಲ್ಲ. ಇದೀಗ ಮತ್ತೊಮ್ಮೆ ಈ ಚರ್ಚೆ ಮುನ್ನೆಲೆಗೆ ಬಂದಿದ್ದು, ರಾಜ್ಯದ ಆರ್ಥಿಕ ಪ್ರಗತಿ ಮತ್ತು ಕನ್ನಡಿಗರ ಉದ್ಯೋಗದ ಹಿತಾಸಕ್ತಿಗಳ ನಡುವೆ ಸಮತೋಲನ ಸಾಧಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. 

Tags:    

Similar News