Jayalalithaa| ಜಯಲಲಿತಾ ಬಂಗಾರ ಸಂಬಂಧಿಕರಿಗೆ ನೀಡಲು ಸಾಧ್ಯವಿಲ್ಲ; ಹೈಕೋರ್ಟ್
Jayalalithaa| ಅಕ್ರಮ ಆಸ್ತಿ ಪ್ರಕರಣದಲ್ಲಿ ವಶಪಡಿಸಿಕೊಂಡರುವ ಜಯಲಲಿತಾ ಅವರ ಆಭರಣಗಳನ್ನು ಕರ್ನಾಟಕ ಸರ್ಕಾರದ ಖಜಾನೆಯಲ್ಲಿ ಸಂರಕ್ಷಿಸಲಾಗಿದೆ. ವಿಶೇಷ ನ್ಯಾಯಾಲಯವು ಕರ್ನಾಟಕ ಸರ್ಕಾರಕ್ಕೆ ಅದನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸುವಂತೆ ಆದೇಶಿಸಿತು.;
ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಂದ ಚಿನ್ನಾಭರಣ ಸೇರಿದಂತೆ ಮುಟ್ಟುಗೋಲು ಹಾಕಿಕೊಂಡ ಇತರ ಆಸ್ತಿಗಳನ್ನು ಅವರ ವಾರಸುದಾರರಿಗೆ ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಪ್ರತಿಪಾದಿಸಿದೆ.
ಜಯಲಲಿತಾ ಅವರ ಚಿನ್ನಾಭರಣ ಸೇರಿದಂತೆ ಎಲ್ಲ ವಸ್ತುಗಳನ್ನು ತಮ್ಮ ವಶಕ್ಕೆ ನೀಡಬೇಕು ಎಂದು ಕೋರಿ ಜಯಲಲಿತಾ ಅವರ ಸಂಬಂಧಿಕರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ನ್ಯಾ.ವಿ.ಶ್ರೀಶಾನಂದ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಸೋಮವಾರ ಆದೇಶ ಹೊರಡಿಸಿದೆ.
“ಅರ್ಜಿದಾರರು ವಾರಸುದಾರರಿರಬಹುದು. ಆದರೆ, ಈ ಹಿಂದೆ ಎಂದೂ ಅವರು ನ್ಯಾಯಾಲಯದ ಮುಂದೆ ಬಂದಿಲ್ಲ. ತೀರ್ಪಿನಲ್ಲಿ ವಶಪಡಿಸಿಕೊಳ್ಳದಿರುವ ವಸ್ತುಗಳನ್ನು ಮರಳಿಸುವಂತೆ ಕೋರಿದ್ದಾರೆ. ಆದರೆ, ಅವುಗಳಿಗೆ ಯಾವುದೇ ಆಧಾರವಿಲ್ಲ. ಹೀಗಾಗಿ, ಅರ್ಜಿಗಳನ್ನು ಪರಿಗಣಿಸಲಾಗದು” ಎಂದು ನ್ಯಾಯಾಲಯ ಹೇಳಿದೆ.
ಅಕ್ರಮ ಆಸ್ತಿ ಪ್ರಕರಣದಲ್ಲಿ ವಶಪಡಿಸಿಕೊಂಡರುವ ಜಯಲಲಿತಾ ಅವರ ಆಭರಣಗಳನ್ನು ಕರ್ನಾಟಕ ಸರ್ಕಾರದ ಖಜಾನೆಯಲ್ಲಿ ಸಂರಕ್ಷಿಸಲಾಗಿದೆ. ವಿಶೇಷ ನ್ಯಾಯಾಲಯವು ಕರ್ನಾಟಕ ಸರ್ಕಾರಕ್ಕೆ ಅದನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸುವಂತೆ ಆದೇಶಿಸಿತು. ಇದನ್ನು ವಿರೋಧಿಸಿ ಜಯಲಲಿತಾ ಅವರ ಸೊಸೆ ದೀಪಾ ಸಲ್ಲಿಸಿದ್ದ ಸಲ್ಲಿಸಿದ್ದ ಅರ್ಜಿ ಪ್ರಕರಣ 7 ದಿನಗಳ ಹಿಂದೆ ಕರ್ನಾಟಕ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬಂದಿತು. ಕಳೆದ ವರ್ಷ ಮಾರ್ಚ್ 6, 7ರಂದು ಒಡವೆ ಹಸ್ತಾಂತರಿಸಬೇಕಿತ್ತು. ಆದರೆ ವಿಶೇಷ ಕೋರ್ಟ್ ಆದೇಶದಿಂದ ತಮ್ಮ ಹಕ್ಕಿಗೆ ಧಕ್ಕೆ ಎಂದು ಜಯಲಲಿತಾ ವಾರಸುದಾರೆ ಜೆ.ದೀಪಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಸುಪ್ರೀಂಕೋರ್ಟ್ ಆದೇಶದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಜೆ.ದೀಪಾ ಅರ್ಜಿಗೆ ಎಸ್‌ಪಿಪಿ ಕಿರಣ್ ಜವಳಿ ಆಕ್ಷೇಪಣೆ ಸಲ್ಲಿಸಿದ್ದರು. ತಮಿಳುನಾಡು ಸರ್ಕಾರದ ಪರ ಹಿರಿಯ ವಕೀಲ ಸಂದೇಶ್ ಚೌಟ ವಾದಿಸಿದ್ದರು. ವಿಚಾರಣೆ ನಡೆಸಿ ಜೆ.ದೀಪಾ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಪ್ರಕರಣದ ಹಿನ್ನೆಲೆ
1996ರಲ್ಲಿ ತಮಿಳುನಾಡು ಸರ್ಕಾರವು ಜಯಲಲಿತಾ, ಅವರ ಸ್ನೇಹಿತೆ ವಿ ಕೆ ಶಶಿಕಲಾ ನಟರಾಜನ್, ಸುಧಾಕರನ್ ಮತ್ತು ಜೆ ಇಳವರಸಿ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಪ್ರಕರಣ ದಾಖಲಿಸಿತ್ತು. ಬೆಂಗಳೂರಿನ ವಿಶೇಷ ನ್ಯಾಯಾಲಯದಲ್ಲಿ ಎರಡು ದಶಕಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆದು, 2014ರ ಸೆಪ್ಟೆಂಬರ್ 27ರಂದು ಭ್ರಷ್ಟಾಚಾರ ನಿಷೇಧ ಕಾಯಿದೆ ಸೆಕ್ಷನ್‌ಗಳಾದ 13(1) (ಇ) ಜೊತೆಗೆ ಸೆಕ್ಷನ್ 13(2) ಅಡಿ ಜಯಲಲಿತಾ ಅವರಿಗೆ ನಾಲ್ಕು ವರ್ಷ ಸಜೆ ಮತ್ತು 100 ಕೋಟಿ ರೂಪಾಯಿ ದಂಡ ವಿಧಿಸಿತ್ತು. ಎರಡನೇ ಆರೋಪಿ ಶಶಿಕಲಾ, ಸುಧಾಕರನ್ ಮತ್ತು ನಾಲ್ಕನೇ ಆರೋಪಿ ಜೆ ಇಳವರಸಿಗೆ ತಲಾ ನಾಲ್ಕು ವರ್ಷ ಶಿಕ್ಷೆ ಹಾಗೂ ತಲಾ 10 ಕೋಟಿ ರೂಪಾಯಿ ದಂಡ ವಿಧಿಸಲಾಗಿತ್ತು.
ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಜಯಲಲಿತಾ ಮತ್ತು ಇತರರು ಸಲ್ಲಿಸಿದ್ದ ಅರ್ಜಿಗಳನ್ನು 2015ರ ಮೇ 11ರಂದು ಕರ್ನಾಟಕ ಹೈಕೋರ್ಟ್ ಪುರಸ್ಕರಿಸಿ, ಶಿಕ್ಷೆಯನ್ನು ಬದಿಗೆ ಸರಿಸಿತ್ತು. ಹೈಕೋರ್ಟ್‌ನ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಸರ್ವೋಚ್ಚ ನ್ಯಾಯಾಲಯವು 2017ರ ಫೆಬ್ರವರಿ 14ರಂದು ಹೈಕೋರ್ಟ್ ಆದೇಶವನ್ನು ಬದಿಗೆ ಸರಿಸಿ, ವಿಚಾರಣಾಧೀನ ನ್ಯಾಯಾಲಯವು ಎರಡರಿಂದ ನಾಲ್ಕನೇ ಆರೋಪಿಗಳಿಗೆ ವಿಧಿಸಿದ್ದ ಶಿಕ್ಷೆಯನ್ನು ಎತ್ತಿ ಹಿಡಿದಿತ್ತು. 2016ರ ಡಿಸೆಂಬರ್ 5ರ ವೇಳೆಗೆ ಜಯಲಲಿತಾ ಅವರು ಸಾವನ್ನಪ್ಪಿದ್ದರ ಹಿನ್ನೆಲೆಯಲ್ಲಿ ಅವರ ವಿರುದ್ಧದ ಪ್ರಕರಣವನ್ನು ಸುಪ್ರೀಂ ಕೋರ್ಟ್ ಕೈಬಿಟ್ಟಿತ್ತು.
ಏನೆಲ್ಲಾ ವಸ್ತುಗಳಿವೆ?
7,040 ಗ್ರಾಂ ತೂಕದ 468 ಬಗೆಯ ಚಿನ್ನ ಹಾಗೂ ವಜ್ರ ಖಚಿತ ಆಭರಣಗಳು, 700 ಕೆಜಿ ತೂಕದ ಬೆಳ್ಳಿ ಆಭರಣಗಳು, 740 ದುಬಾರಿ ಚಪ್ಪಲಿಗಳು, 11,344 ರೇಷ್ಮೆ ಸೀರೆಗಳು, 250 ಶಾಲು, 12 ರೆಫ್ರಿಜರೇಟರ್, 10 ಟಿವಿ ಸೆಟ್, 8 ವಿಸಿಆರ್, 1 ವಿಡಿಯೋ ಕ್ಯಾಮೆರಾ, 4 ಸಿಡಿ ಪ್ಲೇಯರ್, 2 ಆಡಿಯೋ ಡೆಕ್, 24 ಟೂ-ಇನ್ ಒನ್ ಟೇಪ್ ರೆಕಾರ್ಡರ್, 1040 ವಿಡಿಯೋ ಕ್ಯಾಸೆಟ್, 3 ಐರನ್ ಲಾಕರ್, 1,93,202 ರೂ. ನಗದು ಸೇರಿದಂತೆ ಹಲವು ವಸ್ತುಗಳನ್ನು ಜಯಲಲಿತಾ ಅವರಿಂದ ಜಪ್ತಿ ಮಾಡಲಾಗಿತ್ತು.