ಹಾಸನದಲ್ಲಿ ಪೈಶಾಚಿಕ ಕೃತ್ಯ: ಕುಡಿದ ಮತ್ತಿನಲ್ಲಿ ಪತ್ನಿಯನ್ನೇ ಕೊಲ್ಲಲು ಯತ್ನಿಸಿದ ಪತಿ

ಕೃತ್ಯ ಎಸಗಿದ ನಂತರ ಆರೋಪಿ ಪತಿ ಶ್ರೀಮಂತ ಪರಾರಿಯಾಗಿದ್ದು, ಯಸಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.;

Update: 2025-08-03 06:20 GMT

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ಅಮಾನುಷ ಘಟನೆಯೊಂದು ನಡೆದಿದ್ದು, ಕುಡಿದ ಮತ್ತಿನಲ್ಲಿದ್ದ ಪತಿಯೊಬ್ಬ ತನ್ನ ಪತ್ನಿಯನ್ನೇ ಸೀಮೆಎಣ್ಣೆ ಸುರಿದು ಕೊಲೆ ಮಾಡಲು ಯತ್ನಿಸಿದ್ದಾನೆ.

ಯಸಳೂರು ಗ್ರಾಮದ ನಿವಾಸಿ ಶ್ರೀಮಂತ ಎಂಬಾತನೇ ಈ ಕೃತ್ಯ ಎಸಗಿದ ಆರೋಪಿ. ಮದುವೆಯಾಗಿ ಕೇವಲ ಏಳು ತಿಂಗಳಾಗಿದ್ದು, ಆತ ತನ್ನ ಪತ್ನಿ ಸುಶ್ಮಿತಾಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದನು. ಕುಡಿತದ ಚಟದ ಜೊತೆಗೆ ಶ್ರೀಮಂತನು ಅಕ್ರಮ ಸಂಬಂಧವನ್ನೂ ಹೊಂದಿದ್ದನೆಂದು ಆರೋಪಿಸಲಾಗಿದೆ. ಜುಲೈ 30ರ ರಾತ್ರಿ ಕುಡಿದು ಮನೆಗೆ ಬಂದ ಆತ, ಪತ್ನಿ ಸುಶ್ಮಿತಾಳ ಮೇಲೆ ಹಲ್ಲೆ ನಡೆಸಿ, ಬಲವಂತವಾಗಿ ಮಾತ್ರೆಗಳನ್ನು ತಿನ್ನಿಸಿದ್ದಾನೆ. ಬಳಿಕ ಆಕೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ್ದಾನೆ.

ಈ ಘಟನೆಯಿಂದ ತೀವ್ರವಾಗಿ ಅಸ್ವಸ್ಥಗೊಂಡಿರುವ ಸುಶ್ಮಿತಾ ಅವರನ್ನು ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೃತ್ಯ ಎಸಗಿದ ನಂತರ ಆರೋಪಿ ಪತಿ ಶ್ರೀಮಂತ ಪರಾರಿಯಾಗಿದ್ದು, ಯಸಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.

Tags:    

Similar News