ಒಳ ಮೀಸಲಾತಿ: ಆ.4ರಂದು ನಾಗಮೋಹನ್ ದಾಸ್ ವರದಿ ಸಲ್ಲಿಕೆ, 20 ದಿನಗಳಲ್ಲಿ ಅನುಷ್ಠಾನದ ಭರವಸೆ

ಸುಪ್ರೀಂ ಕೋರ್ಟ್​​ನ ತೀರ್ಪಿನಂತೆ ಒಳ ಮೀಸಲಾತಿ ನೀಡಲು ರಾಜ್ಯ ಸರ್ಕಾರಗಳಿಗೆ ಸಂಪೂರ್ಣ ಅಧಿಕಾರವಿದೆ ಎಂದು ಮಾಜಿ ಸಚಿವ ಎಚ್. ಆಂಜನೇಯ ಸ್ಪಷ್ಟಪಡಿಸಿದ್ದಾರೆ.;

Update: 2025-08-03 06:31 GMT


ರಾಜ್ಯದಲ್ಲಿ ದಶಕಗಳಿಂದ ಚರ್ಚೆಯಲ್ಲಿರುವ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿಗೆ ತರುವ ಪ್ರಕ್ರಿಯೆಯು ಅಂತಿಮ ಹಂತಕ್ಕೆ ತಲುಪಿದೆ. ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಆಯೋಗವು ತನ್ನ ವರದಿಯನ್ನು ಆಗಸ್ಟ್ 4ರಂದು ಮುಖ್ಯಮಂತ್ರಿಗಳಿಗೆ ಸಲ್ಲಿಸಲಿದೆ. ವರದಿ ಸಲ್ಲಿಕೆಯಾದ 20 ದಿನಗಳೊಳಗೆ ಒಳ ಮೀಸಲಾತಿಯನ್ನು ಅನುಷ್ಠಾನಗೊಳಿಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವರು ಭರವಸೆ ನೀಡಿದ್ದಾರೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಎಚ್. ಆಂಜನೇಯ ತಿಳಿಸಿದ್ದಾರೆ.

ಈ ಮಹತ್ವದ ಬೆಳವಣಿಗೆಯ ಹಿನ್ನೆಲೆಯಲ್ಲಿ, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ನಿವಾಸದಲ್ಲಿ ಶನಿವಾರ ದಲಿತ ಸಚಿವರು ಮತ್ತು ಶಾಸಕರ ಸಭೆ ನಡೆಯಿತು. ವರದಿ ಜಾರಿಯಾದ ನಂತರ ಯಾವುದೇ ಗೊಂದಲಕ್ಕೆ ಅವಕಾಶ ನೀಡದೆ, ಒಗ್ಗಟ್ಟಿನಿಂದ ಮುಂದುವರಿಯಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಸಮುದಾಯದ 101 ಒಳಜಾತಿಗಳಿಗೂ ಸಾಮಾಜಿಕ ನ್ಯಾಯ ಸಿಗಬೇಕಿದ್ದು, ವರದಿ ಜಾರಿಯು ಮತ್ತಷ್ಟು ವಿಳಂಬವಾಗಬಾರದು ಎಂದು ಗೃಹ ಸಚಿವರು ಸಭೆಯಲ್ಲಿ ತಿಳಿಸಿದರು.

ಈ ವರದಿಯನ್ನು ದೇಶದಲ್ಲೇ ಮೊದಲ ಬಾರಿಗೆ ಮೊಬೈಲ್ ಆ್ಯಪ್ ಬಳಸಿ ವೈಜ್ಞಾನಿಕವಾಗಿ ದತ್ತಾಂಶ ಸಂಗ್ರಹಿಸಿ ಸಿದ್ಧಪಡಿಸಲಾಗಿದೆ. ಅಲ್ಲದೆ, ಸುಪ್ರೀಂ ಕೋರ್ಟ್​​ನ ತೀರ್ಪಿನಂತೆ ಒಳ ಮೀಸಲಾತಿ ನೀಡಲು ರಾಜ್ಯ ಸರ್ಕಾರಗಳಿಗೆ ಸಂಪೂರ್ಣ ಅಧಿಕಾರವಿದೆ ಎಂದು ಎಚ್. ಆಂಜನೇಯ ಸ್ಪಷ್ಟಪಡಿಸಿದ್ದಾರೆ. ಸಚಿವ ಎಚ್.ಸಿ. ಮಹದೇವಪ್ಪ ಸಹ ವರದಿ ಸಲ್ಲಿಕೆ ದಿನಾಂಕವನ್ನು ಖಚಿತಪಡಿಸಿದ್ದು, ವರದಿ ಬಂದ ನಂತರ ಎಲ್ಲಾ ನಾಯಕರು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲಿದ್ದಾರೆ ಎಂದು ಹೇಳಿದ್ದಾರೆ. 

Tags:    

Similar News