ಹೂಲಿಕಟ್ಟಿ ಶಾಲಾ ಮಕ್ಕಳಿಗೆ ವಿಷಪ್ರಾಶನ: ಬಿಜೆಪಿ ನಾಯಕರ ಹೊಣೆಗಾರಿಕೆ ಪ್ರಶ್ನಿಸಿದ ಸಿಎಂ
"ಈ ಘಟನೆಯ ಹೊಣೆಯನ್ನು ಪ್ರಮೋದ್ ಮುತಾಲಿಕ್, ಬಿ.ವೈ. ವಿಜಯೇಂದ್ರ, ಆರ್. ಅಶೋಕ್ ಅವರು ಹೊರುವರೇ ಎಂದು ಪ್ರಶ್ನಿಸಿದ ಸಿಎಂ ಸಮಾಜಘಾತುಕ ಕೃತ್ಯಗಳಿಗೆ ಬೆಂಬಲವಾಗಿ ನಿಲ್ಲುವ ನಾಯಕರ ನೈತಿಕತೆ ಪ್ರಶ್ನಿಸಿದ್ದಾರೆ.;
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದ ಶಾಲೆಯ ನೀರಿನ ಟ್ಯಾಂಕ್‌ಗೆ ವಿಷ ಬೆರೆಸಿದ ಘಟನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು "ಧಾರ್ಮಿಕ ಮೂಲಭೂತವಾದ ಮತ್ತು ಕೋಮುವೈಷಮ್ಯದ ಹೀನ ಕೃತ್ಯ" ಎಂದು ತೀವ್ರವಾಗಿ ಖಂಡಿಸಿದ್ದಾರೆ. ಈ ಘಟನೆಯ ನೈತಿಕ ಹೊಣೆಯನ್ನು ಬಿಜೆಪಿ ಮತ್ತು ಶ್ರೀರಾಮ ಸೇನೆಯ ನಾಯಕರು ಹೊರಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಮುಖ್ಯ ಶಿಕ್ಷಕರು ಮುಸ್ಲಿಂ ಸಮುದಾಯಕ್ಕೆ ಸೇರಿದವರು ಎಂಬ ಒಂದೇ ಕಾರಣಕ್ಕೆ ಅವರನ್ನು ವರ್ಗಾವಣೆ ಮಾಡಿಸುವ ದುರುದ್ದೇಶದಿಂದ ಶ್ರೀರಾಮ ಸೇನೆಯ ಮುಖಂಡರು ಮಕ್ಕಳ ಜೀವದೊಂದಿಗೆ ಚೆಲ್ಲಾಟವಾಡಿರುವುದು ಆಘಾತಕಾರಿ ಎಂದು ಸಿಎಂ ವಿಷಾದ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ
"ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ದ್ವೇಷ ಬಿತ್ತಿ ರಾಜಕೀಯ ಲಾಭ ಪಡೆಯುವ ಬಿಜೆಪಿ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕು," ಎಂದು ಹೇಳಿರುವ ಸಿದ್ದರಾಮಯ್ಯ, "ಈ ಘಟನೆಯ ಹೊಣೆಯನ್ನು ಪ್ರಮೋದ್ ಮುತಾಲಿಕ್, ಬಿ.ವೈ. ವಿಜಯೇಂದ್ರ, ಆರ್. ಅಶೋಕ್ ಅವರು ಹೊರುವರೇ? ಸಮಾಜಘಾತುಕ ಕೃತ್ಯಗಳಿಗೆ ಬೆಂಬಲವಾಗಿ ನಿಲ್ಲುವ ನಾಯಕರು ಈಗ ತಮ್ಮ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು," ಎಂದು ಪ್ರಶ್ನಿಸಿದ್ದಾರೆ.
ದ್ವೇಷದ ವಿರುದ್ಧ ಸರ್ಕಾರದ ಕ್ರಮ
ಎಲ್ಲ ರೀತಿಯ ಮತೀಯವಾದ ಮತ್ತು ಮೂಲಭೂತವಾದ ಸಮಾಜಕ್ಕೆ ಅಪಾಯಕಾರಿ ಎಂದು ಪ್ರತಿಪಾದಿಸಿದ ಮುಖ್ಯಮಂತ್ರಿಗಳು, ದ್ವೇಷ ಭಾಷಣಗಳು ಮತ್ತು ಕೋಮು ಗಲಭೆಗಳನ್ನು ತಡೆಗಟ್ಟಲು ತಮ್ಮ ಸರ್ಕಾರ ವಿಶೇಷ ಟಾಸ್ಕ್ ಫೋರ್ಸ್ ರಚಿಸಿದೆ ಎಂದು ತಿಳಿಸಿದ್ದಾರೆ. ಕಾನೂನಿನ ಚೌಕಟ್ಟಿನಲ್ಲಿ ಇಂತಹ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಸಮಾಜದಲ್ಲಿ ಸೌಹಾರ್ದತೆ ಕಾಪಾಡಲು ಸಾರ್ವಜನಿಕರ ಸಹಭಾಗಿತ್ವ ಅತ್ಯಗತ್ಯ ಎಂದ ಅವರು, "ಕೋಮುವಾದಿ ಶಕ್ತಿಗಳ ವಿರುದ್ಧ ಜನರು ಧ್ವನಿಯೆತ್ತಬೇಕು, ಪ್ರತಿರೋಧ ಒಡ್ಡಬೇಕು ಮತ್ತು ದೂರು ದಾಖಲಿಸಬೇಕು," ಎಂದು ಕರೆ ನೀಡಿದ್ದಾರೆ. ದ್ವೇಷ ಬಿತ್ತುವವರಿಗಿಂತ ಕೂಡಿ ಬಾಳಲು ಬಯಸುವವರ ಸಂಖ್ಯೆಯೇ ಈ ನಾಡಿನಲ್ಲಿ ಹೆಚ್ಚಿದೆ ಎಂಬ ಸಂಪೂರ್ಣ ನಂಬಿಕೆ ತಮಗಿದೆ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.