Loksabha Election 2024 | ಮಂಡ್ಯ ಅತಂತ್ರ, ಬೆಂಗಳೂರು ಉತ್ತರದಲ್ಲಿ ಶೋಭಾ v/s ಸುಮಲತಾ?

ಮಂಡ್ಯದಲ್ಲಿ ಟಿಕೆಟ್‌ ವಂಚಿತರಾಗಿರುವ ಸುಮಲತಾ ಇದೀಗ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬೆಂಗಳೂರು ಉತ್ತರದ ಟಿಕೆಟ್‌ಗೆ ಪ್ರಯತ್ನ ನಡೆಸಿದ್ದು, ಬಿಜೆಪಿಯ ಶೋಭಾ ಕರಂದ್ಲಾಜೆ ವಿರುದ್ಧ ಅವರು ಕಣಕ್ಕಿಳಿಯುವ ಸಾಧ್ಯತೆ ಇದೆ;

Update: 2024-03-14 13:53 GMT

ಲೋಕಸಭಾ ಚುನಾವಣೆಗೆ ಜೆಡಿಎಸ್ ಗೆ ಮಂಡ್ಯ, ಕೋಲಾರ, ಹಾಸನ ಲೋಕಸಭಾ ಕ್ಷೇತ್ರಗಳನ್ನು ಬಿಜೆಪಿ ಬಿಟ್ಟುಕೊಡಲಿದೆ ಎಂಬುದು ಬಹುತೇಕ ಖಚಿತವಾಗಿದ್ದು, ಮಂಡ್ಯ ಸಂಸದೆ ಸುಮಲತಾ ಅಂಬರೀಷ್‌ ಅವರ ಸ್ಥಿತಿ ಇದೀಗ ಅತಂತ್ರವಾಗಿದೆ. ಕಳೆದ ಬಾರಿ ಪಕ್ಷೇತರರಾಗಿ ನಿಂತು ಬಿಜೆಪಿಯ ಬಹಿರಂಗ ಬೆಂಬಲ ಮತ್ತು ಕಾಂಗ್ರೆಸ್‌ನ ಹಿಂಬಾಗಿಲ ಬೆಂಬಲದ ಮೂಲಕ ಗೆಲುವು ಸಾಧಿಸಿದ್ದ ಸುಮಲತಾ ಅವರ ರಾಜಕೀಯ ಭವಿಷ್ಯ ಈಗ ಡೋಲಾಯಮಾನವಾಗಿದೆ.

ಜೆಡಿಎಸ್‌ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಅವರು ಸುಮಲತಾ ಅವರ ವಿರುದ್ಧ ಸೋತಿದ್ದರಿಂದ ದೇವೇಗೌಡ ಕುಟುಂಬಕ್ಕೆ ಮಂಡ್ಯ ಪ್ರತಿಷ್ಠೆಯ ಕಣವಾಗಿತ್ತು. ಬಿಜೆಪಿ ಜೊತೆ ಮೈತ್ರಿ ಘೋಷಿಸಿಕೊಂಡಾಗಿನಿಂದಲೂ ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಡಬೇಕೆಂದು ಎಚ್‌ ಡಿ ಕುಮಾರಸ್ವಾಮಿ ಅವರು ಬಲವಾಗಿ ಪಟ್ಟು ಹಿಡಿದಿದ್ದರು. ಕುಮಾರಸ್ವಾಮಿ ಒತ್ತಡಕ್ಕೆ ಮಣಿದ ಬಿಜೆಪಿ ಮಂಡ್ಯವನ್ನು ಕೊನೆಗೂ ಅವರಿಗೆ ಬಿಟ್ಟು ಕೊಡಲು ನಿರ್ಧರಿಸಿದೆ. ಆ ದೃಷ್ಟಿಯಿಂದ ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿಯ ಬಹುದೊಡ್ಡ ಸಂತ್ರಸ್ತೆಯಾಗಿ ಸಂಸದೆ ಸುಮಲತಾ ಈಗ ಹೊರಹೊಮ್ಮಿದ್ದಾರೆ.

ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ, ಅನುಕಂಪದ ಅಲೆ ಮತ್ತು ಪರಿಸ್ಥಿತಿಯ ಲಾಭ ಪಡೆದು ಸಂಸದೆಯಾಗಿದ್ದ ಸುಮಲತಾ ಅಂಬರೀಷ್‌, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ಮೇಲೆ ಕಣ್ಣಿಟ್ಟೇ ಸುಮಲತಾ, ಬಿಜೆಪಿಯೊಂದಿಗೆ ಬಾಂಧವ್ಯ ಬೆಳೆಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಅತಿಯಾಗಿ ಹೊಗಳಲು ಆರಂಭಿಸಿದ್ದ ಅವರು, ಸಂಸದೆಯಾಗಿ ಗುರುತಿಸಿಕೊಳ್ಳುವಂತಹ ಹೆಸರು ಮಾಡದೆ ಇದ್ದರೂ ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗಿ ಈ ಬಾರಿ ಕಣಕ್ಕಿಳಿಯಲು ಇನ್ನಿಲ್ಲದ ಪ್ರಯತ್ನ ನಡೆಸಿದ್ದರು.

ಸುಮಲತಾ ಮುಂದಿನ ಆಯ್ಕೆಗಳು ಅಲ್ಪ

ಆದರೆ, ಕೋಲಾರ, ಮಂಡ್ಯ ಮತ್ತು ಹಾಸನ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದು ಜೆಡಿಎಸ್‌ ನಾಯಕ, ಮಾಜಿ ಸಿಎಂ ಹೆಚ್‌.ಡಿ. ಕುಮಾರಸ್ವಾಮಿ ಹೇಳಿದ್ದು, ಆ ಮೂಲಕ ಸುಮಲತಾ ಅವರಿಗೆ ಮಂಡ್ಯದಿಂದ ಬಿಜೆಪಿ ಟಿಕೆಟ್‌ ನೀಡುವುದಿಲ್ಲ ಎಂಬುದು ಖಚಿತವಾಗಿದೆ. ಸುಮಲತಾ ಅವರಿಗೆ ಮಂಡ್ಯದಿಂದ ಟಿಕೆಟ್ ಸಿಗದೇ ಇದ್ದರೆ ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎನ್ನುವ ವದಂತಿಗಳು ಇತ್ತಾದರೂ, ಮಂಡ್ಯ ಹೊರತು ಪಡಿಸಿ ಬೇರೆಲ್ಲೂ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಸುಮಲತಾ ಅವರು ಈ ಹಿಂದೆಯೇ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಇದೀಗ ಬೆಂಗಳೂರು ಉತ್ತರ ಕ್ಷೇತ್ರದಿಂದ ಬಿಜೆಪಿ ತನ್ನ ಅಭ್ಯರ್ಥಿಯನ್ನಾಗಿ ಶೋಭಾ ಕರಂದ್ಲಾಜೆ ಅವರನ್ನು ಘೋಷಿಸಿದೆ. ಮಂಡ್ಯದಲ್ಲಿ ಕಾಂಗ್ರೆಸ್‌ ಕೂಡಾ ತನ್ನ ಅಭ್ಯರ್ಥಿಯನ್ನು ಘೋಷಿಸಿಯಾಗಿದೆ.

ಹಾಗಾಗಿ, ಸುಮಲತಾ ಅವರ ಮುಂದಿನ ನಡೆಯೇನು ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಇದೀಗ ಅವರ ಮುಂದೆ ಇರುವ ಆಯ್ಕೆಗಳು ಅಲ್ಪ. ಒಂದೋ, ಪಕ್ಷೇತರ ಅಭ್ಯರ್ಥಿಯಾಗಿ ಈ ಬಾರಿ ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿಯುವುದು, ಇಲ್ಲವೇ ಬೆಂಗಳೂರು ಉತ್ತರ ಕ್ಷೇತ್ರ ಸೇರಿದಂತೆ ಬೆಂಗಳೂರಿನ ಇನ್ನಾವುದಾದರೂ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ ಗೆ ಪ್ರಯತ್ನಿಸುವುದು.

ಈ ಅಲ್ಪ ಆಯ್ಕೆಗಳ ಮಿತಿ ಅರಿತಿರುವ ಸುಮಲತಾ ಅವರು ಇದೀಗ ಬೆಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ಗಾಗಿ ಪ್ರಯತ್ನ ನಡೆಸಿದ್ದು, ಒಂದು ವೇಳೆ ʼಕೈʼ ಹಿಡಿದರೆ ಈ ಬಾರಿ ಬೆಂಗಳೂರು ಉತ್ತರ ಶೋಭಾ ವರ್ಸಸ್‌ ಸುಮಲತಾ ನಡುವಿನ ಬಿಗ್‌ ಫೈಟ್‌ ಮೂಲಕ ಪ್ರಮೀಳಾ ಫೈಟ್‌ ಗೆ ಸಾಕ್ಷಿಯಾಗಲಿದೆ. ಅಲ್ಲದೆ, ಬೆಂಗಳೂರು ಉತ್ತರದಲ್ಲಿ ಎಸ್‌ ಟಿ ಸೋಮಶೇಖರ್‌ ಸೇರಿದಂತೆ ಹಲವು ಬಿಜೆಪಿ ನಾಯಕರು ಈಗಾಗಲೇ ಬಿಜೆಪಿಯಿಂದ ಒಂದು ಹೆಜ್ಜೆ ಹೊರಗಿಟ್ಟಿದ್ದು, ಟಿಕೆಟ್‌ ಘೋಷಣೆ ಬಳಿಕ ಗೋ ಬ್ಯಾಕ್‌ ಶೋಭಾ ಅಭಿಯಾನ ಕೂಡ ಆರಂಭವಾಗಿದೆ. ಈ ಎಲ್ಲಾ ಅಂಶಗಳು ಸುಮಲತಾ ಅವರಿಗೆ ಪೂರಕವಾಗಿ ಒದಗಿಬರಲೂ ಬಹುದು!

ಅಂತಿಮವಾಗಿ ಕಾಂಗ್ರೆಸ್‌ ನಿರ್ಧಾರದ ಮೇಲೆ ಎಲ್ಲವೂ ನಿಂತಿದೆ. 

Tags:    

Similar News