Gali Janardhan Reddy| ಅಕ್ರಮ ಗಣಿಗಾರಿಕೆ ಪ್ರಕರಣ: ಗಾಲಿ ಜನಾರ್ದನ ರೆಡ್ಡಿ ಪರಪ್ಪನ ಅಗ್ರಹಾರಕ್ಕೆ ಸ್ಥಳಾಂತರ

ಪ್ರಕರಣವನ್ನು ವಿಚಾರಣೆ ನಡೆಸುತ್ತಿರುವ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜನಾರ್ದನ ರೆಡ್ಡಿಯವರನ್ನು ಚಂಚಲಗೂಡ ಜೈಲಿಂದ ಪರಪ್ಪನ ಅಗ್ರಹಾರಕ್ಕೆ ವರ್ಗಾಯಿಸಲು ಆದೇಶ ನೀಡಿದೆ.;

Update: 2025-05-27 10:08 GMT

ಜನಾರ್ಧನ ರೆಡ್ಡಿ 

ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ದೋಷಿ ಎಂದು ತೀರ್ಪು ಬಂದಿರುವ ಮಾಜಿ ಸಚಿವ, ಗಣಿ ಉದ್ಯಮಿ ಗಾಲಿ ಜನಾರ್ದನ ರೆಡ್ಡಿ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ವರ್ಗಾಯಿಸಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ. ಹೈದರಾಬಾದ್‌ನ ಚಂಚಲಗೂಡ ಜೈಲಿನಲ್ಲಿರುವ ರೆಡ್ಡಿಯವರನ್ನು ಮಂಗಳವಾರ ಬೆಂಗಳೂರಿಗೆ ಕರೆತರಲಾಗುತ್ತಿದ್ದು, ವಿಚಾರಣೆಯ ಬಳಿಕ ಈ ಆದೇಶ ನೀಡಲಾಗಿದೆ.

ಮೇ 6ರಂದು ಹೈದರಾಬಾದ್‌ನ ನಾಂಪಲ್ಲಿ ಸಿಬಿಐ ಕೋರ್ಟ್ ಓಬಳಾಪುರಂ ಮೈನಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ ಅಕ್ರಮ ಗಣಿಗಾರಿಕೆ ನಡೆಸಿದ್ದಾರೆ ಎಂದು ತೀರ್ಪು ನೀಡಿತ್ತು. ಈ ಪ್ರಕರಣದಲ್ಲಿ ಅವರಿಗೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಈ ಪ್ರಕರಣವನ್ನು ವಿಚಾರಣೆ ನಡೆಸುತ್ತಿರುವ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ನ್ಯಾ. ಸಂತೋಷ್ ಗಜಾನನ್ ಭಟ್ ಅವರ ಮುಂದೆ ಮಂಗಳವಾರ ವಿಚಾರಣೆಗೆ ಬಂದಿತ್ತು. ನ್ಯಾಯಾಲಯವು ರೆಡ್ಡಿಯವರನ್ನು ಚಂಚಲಗೂಡ ಜೈಲಿನಿಂದ ಪರಪ್ಪನ ಅಗ್ರಹಾರಕ್ಕೆ ವರ್ಗಾಯಿಸಲು ಆದೇಶಿಸಿ, ಮುಂದಿನ ವಿಚಾರಣೆಯನ್ನು ಜೂನ್ 2ಕ್ಕೆ ಮುಂದೂಡಿದೆ.

ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣವು ಬಳ್ಳಾರಿ ಜಿಲ್ಲೆಯ ಓಬಳಾಪುರಂನಲ್ಲಿ ನಡೆದ ಅಕ್ರಮ ಚಟುವಟಿಕೆಗಳಿಗೆ ಸಂಬಂಧಿಸಿದ್ದು, ರೆಡ್ಡಿ ಅವರ ವಿರುದ್ಧ ಭ್ರಷ್ಟಾಚಾರ ಮತ್ತು ಗಣಿಗಾರಿಕೆ ನಿಯಮಗಳ ಉಲ್ಲಂಘನೆಯ ಆರೋಪಗಳನ್ನು ಹೊರಿಸಲಾಗಿತ್ತು. ಅನಂತಪುರ ಜಿಲ್ಲೆಯ ಕರ್ನಾಟಕದ ಗಡಿಯಲ್ಲಿರುವ ಓಬಳಾಪುರಂನಲ್ಲಿ ನಡೆದ ಈ ಅಕ್ರಮ ಗಣಿಗಾರಿಕೆ ಪ್ರಕರಣವನ್ನು ಸಿಬಿಐ ತನಿಖೆ ನಡೆಸಿತ್ತು.

ಆರೋಪಿಗಳ ವಿವರ

ಈ ಪ್ರಕರಣದಲ್ಲಿ ಒಟ್ಟು ಒಂಬತ್ತು ಆರೋಪಿಗಳಿದ್ದರು. ಆರೋಪಿಯಾಗಿದ್ದ ಐಎಎಸ್ ಅಧಿಕಾರಿ ಶ್ರೀಲಕ್ಷ್ಮಿ ಅವರನ್ನು ಹೈಕೋರ್ಟ್ ಈಗಾಗಲೇ ಖುಲಾಸೆಗೊಳಿಸಿದೆ, ಮತ್ತೊಬ್ಬ ಆರೋಪಿ ಲಿಂಗಾರೆಡ್ಡಿ ಮೃತಪಟ್ಟಿದ್ದಾರೆ. ಉಳಿದ ಏಳು ಜನರಲ್ಲಿ ಇಬ್ಬರಿಗೆ ಸಿಬಿಐ ನ್ಯಾಯಾಲಯ ಇದೀಗ ಕ್ಲೀನ್ ಚಿಟ್ ನೀಡಿತ್ತು. ಉಳಿದ ಐದು ಜನರನ್ನು ದೋಷಿಗಳು ಎಂದು ತೀರ್ಪು ನೀಡಲಾಗಿದ್ದು, ಎಲ್ಲರಿಗೂ 7 ವರ್ಷ ಜೈಲು ಶಿಕ್ಷೆ ಪ್ರಕಟಿಸಿತ್ತು. ಈ ಐವರಲ್ಲಿ ಗಾಲಿ ಜನಾರ್ದನ ರೆಡ್ಡಿ ಕೂಡ ಒಬ್ಬರು.

ಸದ್ಯ, ಗಣಿ ಧಣಿ ಜನಾರ್ದನ ರೆಡ್ಡಿಯವರನ್ನು ಅಧಿಕಾರಿಗಳು ಚಂಚಲಗೂಡ ಜೈಲಿನಿಂದ ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೆ ಕರೆತರುತ್ತಿದ್ದಾರೆ. ಈ ಪ್ರಕರಣವು ಕರ್ನಾಟಕದ ರಾಜಕೀಯದ ಮೇಲೆ ದೊಡ್ಡ ಪರಿಣಾಮ ಬೀರಿತ್ತು.

Tags:    

Similar News