ಭ್ರಷ್ಟಾಚಾರಿಗಳೇ ಭ್ರಷ್ಟಾಚಾರದ ವಿರುದ್ಧ ಮಾಡುತ್ತಿರುವ ಹೋರಾಟ; ಬೆಂಬಲ ಇಲ್ಲ: ಪಾದಯಾತ್ರೆಗೆ ಯತ್ನಾಳ್ ಟಾಂಗ್
ʻಕೊರೊನಾ ಸಂದರ್ಭದಲ್ಲಿ ವಿಜಯೇಂದ್ರ ಮಾಡಿದ ಭ್ರಷ್ಟಾಚಾರ ಹೊರಗೆ ಬರಲಿ. ಭ್ರಷ್ಟಾಚಾರ ಮಾಡಿದವರು ಭ್ರಷ್ಟಾಚಾರದ ವಿರುದ್ಧ ಮಾಡುತ್ತಿರುವ ಹೋರಾಟಕ್ಕೆ ಬೆಂಬಲ ಇಲ್ಲʼʼ ಎಂದು ಬಿಜೆಪಿ-ಜೆಡಿಎಸ್ ಮಿತ್ರ ಪಕ್ಷಗಳ ಪಾದಯಾತ್ರೆಗೆ ಬಿಜೆಪಿ ಹಿರಿಯ ನಾಯಕ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟಾಂಗ್ ಕೊಟ್ಟಿದ್ದಾರೆ.
ಶನಿವಾರ ವಿಜಯಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ʻʻಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ಗೆ ಧಮ್, ತಾಕತ್ ಇದ್ದರೆ ವಿಜಯೇಂದ್ರನ ಭ್ರಷ್ಟಾಚಾರ ಹೊರಗೆ ತರಲಿʼʼ ಎಂದು ಸವಾಲು ಹಾಕಿದರು.
ʻʻಡಿಕೆಶಿ-ವಿಜಯೇಂದ್ರ ನಡುವೆ ಅಡ್ಜೆಸ್ಟ್‌ಮೆಂಟ್ ಇದೆ. ಅಡ್ಜೆಸ್ಟ್‌ಮೆಂಟ್ ಇದೆ ಎನ್ನುವುದು 100% ನಿಜ. ಭೋವಿ, ತಾಂಡಾ ನಿಗಮಗಳಲ್ಲಿ ನಡೆದ ಅಕ್ರಮದ ಬಗ್ಗೆ ತನಿಖೆ ಆಗಲಿ. ಭ್ರಷ್ಟ ಕುಟುಂಬವನ್ನು ಬಿಜೆಪಿ ಅಧ್ಯಕ್ಷರನ್ನಾಗಿ ಮುಂದುವರಿಸಬಾರು. ಸಿದ್ದರಾಮಯ್ಯ, ಡಿಕೆಶಿಗೆ ಧಮ್, ತಾಕತ್ ಇದ್ದರೆ ವಿಜಯೇಂದ್ರ ಭ್ರಷ್ಟಾಚಾರ ಹೊರಗೆ ತರಲಿʼʼ ಎಂದು ಸವಾಲೆಸೆದರು.
ಯಡಿಯೂರಪ್ಪ ವೇದಿಕೆಗೆ ಬರಲೇಬಾರದು
ʻʻವಿಜಯೇಂದ್ರ ಹಾಗೂ ಡಿಕೆಶಿ ಇಬ್ಬರೂ ಭ್ರಷ್ಟರು. ಇಬ್ಬರು ಸೇರಿಯೇ ಬಿಜಿನೆಸ್ ಮಾಡುತ್ತಿದ್ದಾರೆ. ಯಡಿಯೂರಪ್ಪ ಸಹ ಪಕ್ಷದ ಯಾವುದೇ ವೇದಿಕೆಗೆ ಬರಬಾರದು. ಯಡಿಯೂರಪ್ಪ ಮೇಲೆ ಗಂಭೀರ ಆರೋಪಗಳಿವೆ. ಅವರು ವೇದಿಕೆಗೆ ಬರಲೇಬಾರದುʼʼ ಎಂದು ಕಿಡಿಕಾರಿದರು.
ʻʻವಾಲ್ಮೀಕಿ ಹಗರಣದ ವಿಚಾರದಲ್ಲಿ ಬಿಜೆಪಿ ಯಾಕೆ ಮೌನವಾಗಿದೆ? ವಾಲ್ಮೀಕಿಯಲ್ಲಿ ಡಿಕೆಶಿ ಇದ್ದಾರೆ. ರಾಹುಲ್ ಗಾಂಧಿ ಡೈರೆಕ್ಷನ್ ಇದೆ. ಇದೇ ಕಾರಣಕ್ಕೆ ವಾಲ್ಮೀಕಿ ಹಗರಣ ಮುಚ್ಚಿಡಲಾಗುತ್ತಿದೆ. ಯಡಿಯೂರಪ್ಪ ಶಿಷ್ಯ ರಾಜು ಪ್ರಕರಣದಲ್ಲಿದ್ದಾನೆ. ಇದನ್ನು ಬಿಟ್ಟು ಮೈಸೂರು ಹಗರಣದ ಬೆನ್ನು ಹತ್ತಿದ್ದಾರೆʼʼ ಎಂದು ಬಿಎಸ್‌ವೈ ಕುಟುಂಬದ ವಿರುದ್ಧ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದರು.
ʻʻಸಿಎಂ ಮಾತ್ರ ರಾಜೀನಾಮೆ ನೀಡಿದರೆ ಸಾಲದು, ಕಾಂಗ್ರೆಸ್ ಸರ್ಕಾರವೇ ರಾಜೀನಾಮೆ ನೀಡಬೇಕು. ಸಿಎಂ ರಾಜೀನಾಮೆ ಕೊಟ್ಟರೆ, ಡಿಕೆ ಶಿವಕುಮಾರ್ ಸಿಎಂ ಆಗಲು ಅನುಕೂಲವಾಗುತ್ತದೆ. ಹಾಗಾಗಿ ಇಡೀ ಸರ್ಕಾರವೇ ಅಧಿಕಾರದಿಂದ ಹಿಂದೆ ಸರಿದು ರಾಜೀನಾಮೆ ನೀಡಬೇಕು. ಮತ್ತೆ ಚುನಾವಣೆಗೆ ಹೋಗೋಣ. ನಾವೂ ನಮ್ಮ ಭ್ರಷ್ಟ ರಾಜ್ಯಾಧ್ಯಕ್ಷರು ಬೇಡಾ ಎಂದು ಹೇಳುತ್ತೇವೆʼʼ ಎಂದು ವಿಜಯೇಂದ್ರ ವಿರುದ್ಧವೂ ಕಿಡಿಕಾರಿದರು.