ಮಳೆ ಬಂತೂ ಮಳೆ | ಬಿರುಬಿಸಿಲಿಗೆ ಹೈರಾಣಾಗಿದ್ದ ಸಿಲಿಕಾನ್ ಸಿಟಿಗೆ ತಂಪೆರೆದ ವರುಣ
ರಾಜ್ಯದಲ್ಲಿ ಇನ್ನೂ ಕೆಲವು ದಿನಗಳ ಕಾಲ ಬಿಸಿಗಾಳಿ ಮುಂದುವರಿಯಲಿದ್ದು, ಈ ಮಧ್ಯೆ ಏ.30 ರಿಂದ ಮೇ 3ರ ನಡುವೆ ಬೆಂಗಳೂರಿನಲ್ಲಿ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ಹೇಳಿತ್ತು. ಅದರಂತೆ ಗುರುವಾರ(ಮೇ 2) ತುಂತುರು ಮಳೆ ಆರಂಭವಾಗಿದೆ. ಬಿಸಿಲಿನ ತಾಪದಿಂದ ಬಸವಳಿದ ಬೆಂಗಳೂರಿನಲ್ಲಿ ವರುಣನ ಆಗಮನವಾಗಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ.;
ಬಿಸಿಲಿನ ಬೇಗೆಯಿಂದ ಬೆಂದಿರುವ ಸಿಲಿಕಾನ್ ಸಿಟಿಯ ಕೆಲವೆಡೆ ಗುರುವಾರ ಸಂಜೆ ವರುಣನ ಆಗಮನವಾಗಿದೆ. ಬಿರುಬಿಸಿಲು ಮತ್ತು ಧಗೆಯಿಂದಾಗಿ ಜನ ಮನೆಯಿಂದ ಹೊರಬರದಂತಹ ಸ್ಥಿತಿ ತಲುಪಿದ್ದ ಬೆಂಗಳೂರಿನಲ್ಲಿ ಜಿಟಿ ಜಿಟಿ ಮಳೆ ಆರಂಭವಾಗಿದೆ. ಮಹಾನಗರದ ಮೆಜೆಸ್ಟಿಕ್, ರಾಜಾಜಿನಗರ, ರೇಸ್ ಕೋರ್ಸ್, ಫ್ರೇಜರ್ ಟೌನ್, ರಿಚ್ಮಂಡ್ ಟೌನ್, ಬನಶಂಕರಿ, ಜಯನಗರ ಸೇರಿದಂತೆ ಹಲವೆಡೆ ಮಳೆಯಾಗಿದೆ.
ರಾಜ್ಯದಲ್ಲಿ ಇನ್ನೂ ಕೆಲವು ದಿನಗಳ ಕಾಲ ಬಿಸಿಗಾಳಿ ಮುಂದುವರಿಯಲಿದ್ದು, ಈ ಮಧ್ಯೆ ಏ.30 ರಿಂದ ಮೇ 3ರ ನಡುವೆ ಬೆಂಗಳೂರಿನಲ್ಲಿ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ಹೇಳಿತ್ತು. ಅದರಂತೆ ಗುರುವಾರ(ಮೇ 2) ತುಂತುರು ಮಳೆ ಆರಂಭವಾಗಿದೆ. ಬಿಸಿಲಿನ ತಾಪದಿಂದ ಬಸವಳಿದ ಬೆಂಗಳೂರಿನಲ್ಲಿ ವರುಣನ ಆಗಮನವಾಗಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ.
ಬೆಂಗಳೂರಿಗರಿಗೆ ಉತ್ತರ ಕರ್ನಾಟಕ ತಾಪಮಾನದ ಅನುಭವ
ರಾಜಧಾನಿ ಬೆಂಗಳೂರಿನ ಜನರು ಹಿಂದೆಂದೂ ಕಂಡಿರದ ರಣಬಿಸಿಲನ್ನು ಕಳೆದ ಒಂದು ತಿಂಗಳಿನಿಂದ ಅನುಭವಿಸಿದ್ದಾರೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಏಪ್ರಿಲ್ ತಿಂಗಳಿನಲ್ಲಿ ಮಳೆ ಇಲ್ಲದೇ ರಣ ಬಿಸಿಲಿನಲ್ಲಿಯೇ ಕೊನೆಗೊಂಡಿದೆ. 3 ಬಾರಿ 38 ಡಿಗ್ರಿಗಿಂತ ಹೆಚ್ಚು ತಾಪಮಾನ ದಾಖಲಾಗಿದೆ. ಏಪ್ರಿಲ್ 28ರ ಭಾನುವಾರ 38.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗುವ ಮೂಲಕ 13 ವರ್ಷದಲ್ಲಿ ಏಪ್ರಿಲ್‌ನಲ್ಲಿ ಎರಡನೇ ಅತಿ ಹೆಚ್ಚು ಬಿಸಿಲು ದಾಖಲಾಗಿದೆ. ಏ.19 ಹಾಗೂ ಏ.27ರಂದು 38 ಡಿಗ್ರಿ ಸೆಲ್ಸಿಯಸ್ ಸೇರಿದಂತೆ ಒಟ್ಟು ಮೂರು ಬಾರಿ 38 ಡಿಗ್ರಿ ಸೆಲ್ಸಿಯಸ್ ಹಾಗೂ ಅದಕ್ಕಿಂತ ಹೆಚ್ಚು ಉಷ್ಣಾಂಶ ದಾಖಲಾಗಿದೆ. ಉಳಿದಂತೆ ಹಲವು ದಿನ 37 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ಬಿಸಿಲು ವರದಿಯಾಗಿದೆ.
ಹವಾಮಾನ ಇಲಾಖೆಯ ಅಂಕಿ- ಅಂಶಗಳ ಪ್ರಕಾರ 1901ರಿಂದ 2023ರವರೆಗೆ ಎಲ್ಲಾ ಏಪ್ರಿಲ್‌ನಲ್ಲಿ ಬೆಂಗಳೂರಿನಲ್ಲಿ ಮಳೆಯಾದ ವರದಿಯಾಗಿದೆ. ಈ ಬಾರಿ ಏಪ್ರಿಲ್‌ನಲ್ಲಿ ಕನಿಷ್ಠ ಪ್ರಮಾಣ ಮಳೆಯಾದ ವರದಿಯಾಗಿಲ್ಲ.1983ರ ಏಪ್ರಿಲ್‌ನಲ್ಲಿ 0.2 ಮಿ.ಮೀ.ನಷ್ಟು ಮಳೆಯಾಗಿತ್ತು. ಇದು ಈವರೆಗಿನ ಏಪ್ರಿಲ್‌ನಲ್ಲಿ ವರದಿಯಾದ ಅತಿ ಕನಿಷ್ಠ ಮಳೆಯಾಗಿದೆ. ಹವಾಮಾನ ಇಲಾಖೆ ಪ್ರಕಾರ ಏಪ್ರಿಲ್‌ನಲ್ಲಿ 41.5 ಮಿ.ಮೀ. ವಾಡಿಕೆ ಮಳೆಯಾಗಿದ್ದು, 3.1 ದಿನ ಮಳೆಯ ದಿನಗಳನ್ನು ನಗರದ ಹೊಂದಿದೆ.
ವಾಡಿಕೆ ಪ್ರಕಾರ ನಗರದಲ್ಲಿ ಮಾರ್ಚ್‌ನಲ್ಲಿ 18.5 ಮಿ.ಮೀ. ಹಾಗೂ ಏಪ್ರಿಲ್‌ನಲ್ಲಿ 41.5 ಮಿ.ಮೀ.ನಷ್ಟು ಸೇರಿದಂತೆ ಎರಡು ತಿಂಗಳಲ್ಲಿ ಒಟ್ಟಾರೆ 54.3 ಮಿ.ಮೀ ಮಳೆಯಾಗಬೇಕು. ಆದರೆ, ಕಳೆದ ಮಾರ್ಚ್‌ನಲ್ಲಿ 0.1 ಮಿ.ಮೀ.ಗಿಂತ ಕಡಿಮೆ ಹಾಗೂ ಏಪ್ರಿಲ್‌ನಲ್ಲಿ ಮಳೆಯಾಗಿಲ್ಲ. ಹೀಗಾಗಿ, ಶೇ.99 ರಷ್ಟು ಮಳೆ ಕೊರತೆ ಉಂಟಾಗಿದೆ.