ಒಳಮೀಸಲಾತಿ | ಶೀಘ್ರ ಸುಗ್ರೀವಾಜ್ಞೆ ಹೊರಡಿಸಿ: ರಾಜ್ಯ ಸರ್ಕಾರಕ್ಕೆ ಎಡಗೈ ಸಮುದಾಯದ ಒತ್ತಾಯ
ಒಳ ಮೀಸಲಾತಿ ಕುರಿತ ಸುಪ್ರೀಂಕೋರ್ಟಿನ ಐತಿಹಾಸಿಕ ತೀರ್ಪನ್ನು ರಾಜ್ಯ ಸರ್ಕಾರ ಕೂಡಲೇ ಜಾರಿಗೆ ತರಬೇಕು. ಅಲ್ಲದೆ ಕೆಎಎಸ್ ಪರೀಕ್ಷೆ ಅಧಿಸೂಚನೆ ಸೇರಿದಂತೆ ಸರ್ಕಾರದ ಎಲ್ಲಾ ಯೋಜನೆಗಳನ್ನು ಒಳ ಮೀಸಲಾತಿ ಹಂಚಿಕೆ ಆಗುವವರೆಗೆ ತಡೆ ಹಿಡಿಯಬೇಕು ಎಂದು ಎಡಗೈ ಸಮುದಾಯದ ಸಚಿವರು ಹಾಗೂ ನಾಯಕರು ಒತ್ತಾಯಿಸಿದ್ದಾರೆ.;
ಒಳ ಮೀಸಲಾತಿ ಕುರಿತ ಸುಪ್ರೀಂಕೋರ್ಟಿನ ಐತಿಹಾಸಿಕ ತೀರ್ಪನ್ನು ರಾಜ್ಯ ಸರ್ಕಾರ ಕೂಡಲೇ ಜಾರಿಗೆ ತರಬೇಕು. ಅಲ್ಲದೆ ಕೆಎಎಸ್ ಪರೀಕ್ಷೆ ಅಧಿಸೂಚನೆ ಸೇರಿದಂತೆ ಸರ್ಕಾರದ ಎಲ್ಲಾ ಯೋಜನೆಗಳನ್ನು ಒಳ ಮೀಸಲಾತಿ ಹಂಚಿಕೆ ಆಗುವವರೆಗೆ ತಡೆ ಹಿಡಿಯಬೇಕು ಎಂದು ಎಡಗೈ ಸಮುದಾಯದ ಸಚಿವರು ಹಾಗೂ ನಾಯಕರು ಒತ್ತಾಯಿಸಿದ್ದಾರೆ.
ಎಡಗೈ ಸಮುದಾಯದ ಪ್ರಮುಖರು ಶುಕ್ರವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಮಾಜಿ ಸಚಿವ ಎಚ್ ಆಂಜನೇಯ, ʻʻಧೈರ್ಯವಾಗಿ ಯಾರೂ ಒಳ ಮೀಸಲಾತಿ ಬಗ್ಗೆ ಮಾತನಾಡಲು ತಯಾರಿರಲಿಲ್ಲ. ನ್ಯಾ. ಎ ಜೆ ಸದಾಶಿವ ವರದಿ ಕೈಯಲ್ಲಿದ್ದರೂ ಅದನ್ನು ಜಾರಿ ಮಾಡಲು ಸಾಧ್ಯವಾಗಿಲ್ಲ. ಕೆಲವರು ತಕರಾರು ತೆಗೆದರು. ಆಗ ಸಿದ್ದರಾಮಯ್ಯ ಒಳನೀಸಲಾತಿ ಕೊಟ್ಟರೆ ನಿಮಗೆ ಏನು ಕಷ್ಟ? ಎಂದು ಪ್ರಶ್ನಿಸಿದರು. ಈಗ ಒಳ ಮೀಸಲಾತಿಗೆ ನಾವು ಬದ್ಧರಾಗಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆʼʼ ಎಂದು ಹೇಳಿದರು.
ಅಧಿಸೂಚನೆ ತಡೆಹಿಡಿಯಬೇಕು
ʻʻಸರ್ಕಾರ ಒಳಮೀಸಲಾತಿ ಬಗ್ಗೆ ಶೀಘ್ರ ಸುಗ್ರೀವಾಜ್ಞೆ ಹೊರಡಿಸಬೇಕು. ಕೆಪಿಎಸ್‌ಸಿ ಕೆಎಎಸ್ ಪರೀಕ್ಷೆಗೆ ಅಧಿಸೂಚನೆ ಹೊರಡಿಸಿದೆ. ಆ ಅಧಿಸೂಚನೆಯನ್ನು ವಾಪಸು ಪಡೆಯಬೇಕು. ಒಳ ಮೀಸಲಾತಿ ಹಂಚಿಕೆಯಾಗುವ ವರೆಗೆ ಅಧಿಸೂಚನೆ ತಡೆಹಿಡಿಯಬೇಕುʼʼ ಎಂದು ಆಗ್ರಹಿಸಿದರು.
ʻʻಒಳ ಮೀಸಲಾತಿ ಹಂಚಿಕೆಯಾಗುವ ವರೆಗೆ ಎಸ್ ಇ ಎಸ್ ಪಿ, ಟಿಎಸ್ ಪಿ ಅನುದಾನವನ್ನು ತಡೆ ಹಿಡಿಯಬೇಕು. ಎಲ್ಲಾ ಯೋಜನೆಗಳನ್ನು ಒಳ ಮೀಸಲಾತಿ ಹಂಚಿಕೆಯಾಗುವವರೆಗೆ ತಡೆ ಹಿಡಿಯಬೇಕುʼʼ ಎಂದು ಒತ್ತಾಯಿಸಿದರು.
ಸಚಿವ ಕೆ ಎಚ್ ಮುನಿಯಪ್ಪ ಮಾತನಾಡಿ, ʻʻ30 ವರ್ಷಗಳ ಹೋರಾಟಕ್ಕೆ ಸುಪ್ರೀಂ ಐತಿಹಾಸಿಕ ತೀರ್ಪು ನೀಡಿದೆ. ಸರ್ವೋಚ್ಚ ನ್ಯಾಯಾಲಯಕ್ಕೆ ಅಭಿನಂದನೆ ಸಲ್ಲಿಸುತ್ತೇವೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್ ಹಾಗೂ ಪರಮೇಶ್ವರ್ ಅವರನ್ನು ಭೇಟಿ ಯಾಗಿದ್ದೇವೆ. ಸುಪ್ರೀಂ ಆದೇಶವನ್ನು ಆದಷ್ಟು ಶೀಘ್ರವಾಗಿ ಕಾರ್ಯಗತ ಮಾಡುವ ಆಶ್ವಾಸನೆ ನೀಡಿದ್ದಾರೆʼʼ ಎಂದು ತಿಳಿಸಿದರು.
ʻʻಒಳಮೀಸಲಾತಿ ಪರವಾಗಿ ದೊಡ್ಡ ಪ್ರಮಾಣದ ಹೋರಾಟ ನಡೆದಿತ್ತು. ಅಸಮಾನತೆ ಒಳಗಾದವರಿಗೆ ಸಮಾನತೆ ಕಲ್ಪಿಸುವ ನಿಟ್ಟಿನಲ್ಲಿ ಈಗ ತೀರ್ಪು ಸಿಕ್ಕಿದೆ. ಒಳಮೀಸಲಾತಿ ಕಲ್ಪಿಸುವ ಹಕ್ಕನ್ನು ರಾಜ್ಯ ಸರ್ಕಾರಗಳಿಗೆ ನೀಡಿರುವುದು ಸ್ವಾಗತಾರ್ಹʼʼ ಎಂದರು.
ಈ ವೇಳೆ ಸಚಿವ ಆರ್ ಬಿ ತಿಮ್ಮಾಪುರ ಮಾತನಾಡಿ, ʻʻಕಟ್ಟಕಡೆಯ ಜಾತಿಗಳಿಗೆ ಅನ್ಯಾಯ ಆಗುತ್ತಿರುವ ಹಿನ್ನೆಲೆಯಲ್ಲಿ ಹೋರಾಟಗಳು ನಡೆದಿದ್ದವು. ಈ ನಡುವೆ ನ್ಯಾ. ಸದಾಶಿವ ಆಯೋಗ ವರದಿಯನ್ನು ಸರ್ಕಾರಕ್ಕೆ ನೀಡಿತ್ತು. ಹೋರಾಟದ ಫಲವಾಗಿ ಈಗ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಕೊನೆಗೂ ಸುಪ್ರೀಂಕೋರ್ಟ್ ನಿಂದ ನ್ಯಾಯ ಸಿಕ್ಕಿದೆ. ಸುಪ್ರೀಂ ಆದೇಶವನ್ನು ಜಾರಿಗೊಳಿಸಲು ಸಿಎಂ, ಡಿಸಿಎಂ ಸಿದ್ದರಾಗಿದ್ದಾರೆʼʼ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಸಂಸದ ಎಲ್ ಹನುಮಂತಯ್ಯ ಮಾತನಾಡಿ, ʻʻಭಾರತದ ಎಲ್ಲಾ ರಾಜ್ಯಗಳಿಗೆ ಅನುಕೂಲ ಆಗಿದೆ. ಹೊಸ ಮೀಸಲಾತಿ ಪರ್ವದ ಬಾಗಿಲು ತೆರೆದಿದೆ. ಇಂದಿರಾ ಸಹಾನಿ ತೀರ್ಪಿನ ಬಳಿಕ ಇದು ಅತ್ಯಂತ ಮಹತ್ವದ ತೀರ್ಪಾಗಿದೆ. ನಾಲ್ಕು ದಶಕಗಳ ಹೋರಾಟಕ್ಕೆ ಜಯ ಸಿಕ್ಕಿದೆ. ಕರ್ನಾಟಕದಲ್ಲಿ ಇದನ್ನು ಜಾರಿಗೊಳಿಸಲು ಇದ್ದ ಅಡೆ ತಡೆ ತೆರವಾಗಿದೆ. ಸಿಎಂ ಕೂಡಾ ಜಾರಿಗೊಳಿಸುವ ಭವರಸೆ ಕೊಟ್ಟಿದ್ದಾರೆ. ಸಾಮಾಜಿಕ ನ್ಯಾಯ ದೊರಕಿಸುವ ಕೆಲಸ ಶೀಘ್ರ ಆಗಬೇಕುʼʼ ಎಂದು ಒತ್ತಾಯಿಸಿದರು.