RCB champion | ನನ್ನ ಕನಸು ಕೊನೆಗೂ ನನಸು; ಆರ್ಸಿಬಿ ಗೆಲುವಿಗೆ ತಂಡದ ಮಾಜಿ ಮಾಲೀಕ ವಿಜಯ್ ಮಲ್ಯ ಭಾವುಕ ಪೋಸ್ಟ್
ನಾನು ಆರ್ಸಿಬಿ ತಂಡ ಆರಂಭಿಸಿದಾಗ ಬೆಂಗಳೂರಿಗೆ ಐಪಿಎಲ್ ಟ್ರೋಫಿ ಬರಬೇಕು ಎಂಬುದು ನನ್ನ ಕನಸಾಗಿತ್ತು. ಯುವಕನಾಗಿದ್ದ ಕ್ರಿಕೆಟ್ ದಂತಕಥೆ ʼಕಿಂಗ್ ಕೊಹ್ಲಿʼಯನ್ನು ಆಯ್ಕೆ ಮಾಡುವ ಸೌಭಾಗ್ಯ ನನ್ನದಾಗಿತ್ತು ಮಾಜಿ ಮಾಲೀಕ ವಿಜಯ್ ಮಲ್ಯ ಸ್ಮರಿಸಿ, ತಂಡದ ಗೆಲುವಿಗೆ ಅಭಿನಂದನೆ ಸಲ್ಲಿಸಿದ್ದಾರೆ.;
ಐಪಿಎಲ್-2025 ಫೈನಲ್ ಪಂದ್ಯದಲ್ಲಿ ರಣ ರೋಚಕ ಗೆಲುವು ಸಾಧಿಸಿ ʼಈ ಸಲ ಕಪ್ ನಮ್ದೆʼ ಎಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡಕ್ಕೆ ಮಾಜಿ ಮಾಲೀಕ ವಿಜಯ್ ಮಲ್ಯ ಹರ್ಷ ವ್ಯಕ್ತಪಡಿಸಿದ್ದಾರೆ.
ತಮ್ಮ ʼಎಕ್ಸ್ʼ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ನಾನು ಆರ್ಸಿಬಿ ತಂಡ ಆರಂಭಿಸಿದಾಗ ಬೆಂಗಳೂರಿಗೆ ಐಪಿಎಲ್ ಟ್ರೋಫಿ ಬರಬೇಕು ಎಂಬುದು ನನ್ನ ಕನಸಾಗಿತ್ತು. ಯುವಕನಾಗಿದ್ದ ಕ್ರಿಕೆಟ್ ದಂತಕಥೆ ʼಕಿಂಗ್ ಕೊಹ್ಲಿʼಯನ್ನು ಆಯ್ಕೆ ಮಾಡುವ ಸೌಭಾಗ್ಯ ನನ್ನದಾಗಿತ್ತು. ಅವರು 18 ವರ್ಷಗಳ ಕಾಲ ಆರ್ಸಿಬಿಯೊಂದಿಗೆ ಇದ್ದಾರೆ ಎಂಬುದೇ ಗಮನಾರ್ಹ ಎಂದು ಸ್ಮರಿಸಿದ್ದಾರೆ.
ಆರ್ಸಿಬಿ ಇತಿಹಾಸದಲ್ಲಿ ಅಳಿಸಲಾಗದ ಭಾಗವಾಗಿ ಉಳಿದಿರುವ ಕ್ರಿಸ್ ಗೇಲ್ ಮತ್ತು ಮಿಸ್ಟರ್ 360 ಎಂದೇ ಹೆಸರಾದ ಎಬಿ ಡಿವಿಲಿಯರ್ಸ್ ಅವರನ್ನು ಆಯ್ಕೆ ಮಾಡುವ ಗೌರವವೂ ನನಗಿತ್ತು. ಅಂತಿಮವಾಗಿ, ಐಪಿಎಲ್ ಟ್ರೋಫಿ ಬೆಂಗಳೂರಿಗೆ ಸಂದಿದೆ. ನನ್ನ ಕನಸನ್ನು ನನಸಾಗಿಸಿದ ಎಲ್ಲರಿಗೂ ಅಭಿನಂದನೆಗಳು. ಆರ್ಸಿಬಿ ಅಭಿಮಾನಿಗಳು ಅತ್ಯುತ್ತಮರು. ಐಪಿಎಲ್ ಟ್ರೋಫಿಗೆ ಅರ್ಹರು. ಈ ಸಲ ಕಪ್ ಬೆಂಗಳೂರು ಬರುತ್ತೆ ಎಂದು ಪೋಸ್ಟ್ನಲ್ಲಿ ತಿಳಿಸಿದ್ದಾರೆ.
2008 ರಲ್ಲಿ ಯುನೈಟೆಡ್ ಸ್ಪಿರಿಟ್ಸ್ (ಯುಬಿ) ಮಾಲೀಕ ವಿಜಯ್ ಮಲ್ಯ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಕಟ್ಟಿದ್ದರು. ಬೆಂಗಳೂರು ಫ್ರಾಂಚೈಸಿಯನ್ನು ವಿಜಯ್ ಮಲ್ಯ ಅವರು 111.6 ಮಿಲಿಯನ್ಗೆ ಅಮೆರಿಕನ್ ಡಾಲರ್ಗೆ (ಅಂದಾಜು 910 ಕೋಟಿ) ಖರೀದಿಸಿದ್ದರು. ಐಪಿಎಲ್ನಲ್ಲಿ ಹರಾಜಿನಲ್ಲಿ ಮುಕೇಶ್ ಅಂಬಾನಿ ಒಡೆತನದ ಮುಂಬೈ ಇಂಡಿಯನ್ಸ್ ಬಳಿಕ ಎರಡನೇ ಅತ್ಯಧಿಕ ಬಿಡ್ ಆರ್ಸಿಬಿಯವರದ್ದಾಗಿತ್ತು.
ಆರ್ಸಿಬಿ ತಂಡವು 2009, 2011 ಮತ್ತು 2016 ರಲ್ಲಿ ಮೂರು ಬಾರಿ ಫೈನಲ್ನಲ್ಲಿ ಮುಗ್ಗರಿಸಿ ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಐಪಿಎಲ್ ಟೂರ್ನಿಯ ಹತ್ತು ಆವೃತ್ತಿಗಳಲ್ಲಿ ಆರ್ಸಿಬಿ ಪ್ಲೇಆಫ್ಗೆ ಅರ್ಹತೆ ಪಡೆದಿತ್ತು.