IPL 2024| RCB ಅಭಿಮಾನಿಗಳಿಗೆ ಖುಷಿ ವಿಚಾರ: ಮಳೆ ಬಂದರೂ ಪಂದ್ಯಕ್ಕೆ ತೊಂದರೆ ಇಲ್ಲವಂತೆ!
ಶನಿವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಚೆನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೇಂಜರ್ಸ್ ಬೆಂಗಳೂರು ತಂಡಗಳ ನಡುವಿನ ಪಂದ್ಯ ತುಂಬಾ ರೋಚಕತೆ ಪಡೆದುಕೊಂಡಿದೆ. ಇದು ಎರಡೂ ತಂಡಕ್ಕೂ ಮಾಡು ಇಲ್ಲವೇ ಮಡಿ ಪಂದ್ಯ ಎನ್ನುವಂತಾಗಿದೆ. ಈ ಹಂತದಲ್ಲಿ ಮಳೆ ಕಾಟ ಶುರುವಾಗಿದೆ. ಇದರಿಂದ ಆರ್‌ಸಿಬಿ ಅಭಿಮಾನಿಗಳು ನಿರಾಸೆಯಾಗಿದ್ದಾರೆ. ಆದರೆ, ನಿರಾಸೆಯಾಗುವ ಅಗತ್ಯವಿಲ್ಲ ಮೈದಾನದಲ್ಲಿ ಇರುತ ಅತ್ಯಾಧುನಿಕ ತಂತ್ರಜ್ಞಾನದ ಸಹಾಯದಿಂದ ನೀರನ್ನು ಹೊರ ಹಾಕಬಹುದು ಎಂದು ಮಾಜಿ ಕ್ರಿಕೇಟಿಗ ಪಿ ಶ್ರೀನಿವಾಸ ಮೂರ್ತಿ (ಜಾನಿ) ಅವರು ಹೇಳಿದ್ದಾರೆ.
ಮಳೆಯಿಂದ ಪಂದ್ಯ ರದ್ದಾದರೆ ಸಿಎಸ್‌ಕೆ ಪ್ಲೇಆಫ್ ಪ್ರವೇಶ ಮಾಡುತ್ತದೆ ಆದರೆ ಆರ್‌ಸಿಬಿ ಟೂರ್ನಿಯಿಂದಲೇ ಹೊರಬೀಳುತ್ತದೆ. ಸತತ ಐದು ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ಅಭಿಮಾನಿಗಳಲ್ಲಿ ಈ ಸಲ ಕಪ್ ನಮ್ದೇ ಎನ್ನುವ ಕನಸು ಹುಟ್ಟಿಸಿರುವ ಆರ್‌ಸಿಬಿ ಟೂರ್ನಿಯಿಂದ ಹೊರಬಿದ್ದರೆ, ನಿರಾಸೆಯಾಗುವುದು ಸಹಜ. ಆದರೆ, ಮಳೆಯಾದರೂ ಪಂದ್ಯಕ್ಕೆ ತೊಂದರೆ ಇಲ್ಲ ಎಂದಿರುವ ಮಾಜಿ ಆಟಗಾರ ಜಾನಿ ಚಿನ್ನಸ್ವಾಮಿ ಕ್ರೀಡಾಂಗಣದ ವಿಶೇಷತೆಯನ್ನು ತಿಳಿಸಿಕೊಟ್ಟಿದ್ದಾರೆ.
ಈ ಬಗ್ಗೆ ಜಾನಿ ಅವರು ಹೇಳಿದ್ದೇನು?
ʻಇಂತಹ ಪರಿಸ್ಥಿತಿಯಲ್ಲಿ ಅತ್ಯಂತ ಪ್ರಮುಖ ಪಂದ್ಯಗಳನ್ನು ನಡೆಸಬಹುದಾದ ಕ್ರೀಡಾಂಗಣ ಎಂದರೆ ಅವರು ಚಿನ್ನಸ್ವಾಮಿ ಕ್ರೀಡಾಂಗಣ. ಏಕೆಂದರೆ ಇಲ್ಲಿ ಸಬ್‌ಏರ್ ಡ್ರೈನೇಜ್ ಸಿಸ್ಟಮ್ ಇದೆ. ಮಳೆ ಬೀಳುತ್ತಿದ್ದಂತೆ ಈ ಸಿಸ್ಟಮ್ ಆನ್ ಮಾಡಿದ್ರೆ ಎಂತಹ ಧಾರಾಕಾರ ಮಳೆ ಬಂದಿದ್ರೂ ಕೂಡ ಆ ನೀರನ್ನ ಹೀರಿಕೊಂಡುಬಿಡುತ್ತದೆ. ಮಳೆ ನಿಲ್ಲುತ್ತಿದ್ದಂತೆ ಅಂಪೈರ್‌ಗಳು ಮೈದಾನ ಪರೀಕ್ಷೆ ಮಾಡುತ್ತಾರೆ. ಹಾಗಾಗಿ ಅಭಿಮಾನಿಗಳು ನಿರಾಸೆಗೊಳ್ಳುವ ಅಗತ್ಯ ಇಲ್ಲ ಎಂದು ಅವರು ವಿವರಿಸಿದ್ದಾರೆ.
ಜಾನಿ ಅವರು ಈ ಬಗ್ಗೆ ಮಾತನಾಡಿರುವ ವಿಡಿಯೋ ನೋಡಲು ಲಿಂಕ್ ಮೇಲೆ ಕ್ಲಿಕ್ ಮಾಡಿ:- https://youtube.com/shorts/yb2iG8zSRVM?feature=shared
ಸಧ್ಯದ ಆರ್‌ಸಿಬಿ ಲೆಕ್ಕಾಚಾರ:
ಮೇ 18 ರಂದು ನಡೆಯುವ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಆರ್‌ಸಿಬಿ ಸೋಲಿಸುವ ಅನಿವಾರ್ಯತೆ ಇದೆ. ಈ ವೇಳೆ ಆರ್‌ಸಿಬಿ ಮೊದಲು ಬ್ಯಾಟಿಂಗ್ ಮಾಡಿದ್ದೇ ಆದಲ್ಲಿ, ಚೆನ್ನೈ ನೀಡುವ ಗುರಿಯನ್ನು 18.1 ಓವರ್‌ಗಳಲ್ಲಿ ಮುಟ್ಟಬೇಕು. ಇನ್ನು ಒಂದು ವೇಳೆ ಡಿಫೆಂಡ್ ಮಾಡಿಕೊಳ್ಳುವ ಬೇಕಾದರೆ, ಕನಿಷ್ಠ 18 ರನ್‌ಗಳಿಂದ ಪಂದ್ಯವನ್ನು ಗೆಲ್ಲಬೇಕು. ಅಂದಾಗ ಮಾತ್ರ ಆರ್‌ಸಿಬಿ ಪ್ಲೇ ಆಫ್ ಪ್ರವೇಶಿಸುವ ಕನಸು ನನಸಾಗುತ್ತದೆ.
ಐದು ಓವರ್ ಪಂದ್ಯ ನಡೆದರೆ?
ಮಳೆ ಪಂದ್ಯಕ್ಕೆ ಕಾಟ ನೀಡುತ್ತದೆ ಎಂದು ಅಂದಾಜಿಸಲಾಗಿದೆ. ಹೀಗಾಗಿ ಅಭಿಮಾನಿಗಳು ತಲಾ ಐದು ಓವರ್ ಪಂದ್ಯದ ಲೆಕ್ಕಾಚಾರವನ್ನು ಹಾಕಿಕೊಂಡು ಇಟ್ಟಿದ್ದಾರೆ. ಈ ಸನ್ನಿವೇಶದಲ್ಲೂ ಆರ್‌ಸಿಬಿ ಗೆಲ್ಲುವುದು ಕಷ್ಟ ಎಂದೇ ತೋಚುತ್ತದೆ. ಏಕೆಂದರೆ ಈ ಸನ್ನಿವೇಶದಲ್ಲಿ ಆರ್‌ಸಿಬಿ ಮೊದಲು ಬ್ಯಾಟ್ ಮಾಡಿದರೆ, 100 ರನ್‌ಗಳ ಆಸುಪಾಸಿನಲ್ಲಿ ಹೊಡೆದು, 60 ರನ್‌ಗಳಿಂದ ಗೆಲುವು ಸಾಧಿಸಬೇಕು. ಅಲ್ಲದೆ ಚೆನ್ನೈ ನೀಡಿರುವ ಗುರಿಯನ್ನು ಬೆನ್ನಟ್ಟಿದ ಪಕ್ಷದಲ್ಲಿ ಬೆಂಗಳೂರು 2 ಓವರ್‌ಗಳ ಅಂತರದಲ್ಲಿ ಆ ಮೊತ್ತವನ್ನು ಮುಟ್ಟಬೇಕು. ಲೆಕ್ಕಾಚಾರ ಸ್ಪಷ್ಟ. 20 ಓವರ್‌ಗಳ ಲೆಕ್ಕಾಚಾರವನ್ನು ಐದು ಓವರ್‌ಗಳಿಗೆ ಇಳಿಸಿದಾಗ ರನ್‌ಗಳ ಟಾರ್ಗೆಟ್ ಹೆಚ್ಚಾಗುತ್ತದೆ. ಓವರ್‌ಗಳ ಟಾರ್ಗೆಟ್ ಕಡಿಮೆ ಆಗುತ್ತದೆ.
ಇನ್ನು ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ್ದೇ ಆದ್ದಲ್ಲಿ ಉಭಯ ತಂಡಗಳಿಗೂ ತಲಾ ಒಂದೊಂದು ಅಂಕವನ್ನು ನೀಡಲಾಗುತ್ತದೆ. ಆಗ ಚೆನ್ನೈ ಸೂಪರ್ ಕಿಂಗ್ಸ್ ನೇರವಾಗಿ ಪ್ಲೇ ಆಫ್ ಪ್ರವೇಶಿಸಬಹುದು. ಆರ್‌ಸಿಬಿ ಮುಂದಿನ ಹಂತ ತಲಪುವ ಆಸೆ ಮಣ್ಣು ಪಾಲಾಗುತ್ತದೆ.