ಒಳ ಮೀಸಲಾತಿ ವರದಿ| ಸೋರಿಕೆ ಅಂಕಿ ಅಂಶಗಳಿಗೆ ಆಕ್ಷೇಪ; ಮತ್ತೆ ಮೀಸಲಾತಿ ಬಡಿದಾಟದ ಆತಂಕ
ಒಳ ಮೀಸಲಾತಿ ವರದಿಯನ್ನು ಆ.7 ರಂದು ಸಚಿವ ಸಂಪುಟದ ಮುಂದೆ ಮಂಡಿಸಲು ನಿರ್ಧರಿಸಲಾಗಿದೆ. ಆದರೆ, ಅದಕ್ಕೂ ಮುನ್ನವೇ ವರದಿಯ ಅಂಕಿ ಅಂಶಗಳು ಮಾಧ್ಯಮಗಳಿಗೆ ಸೋರಿಕೆಯಾಗಿ ಮೀಸಲಾತಿ ಪ್ರಮಾಣ ಪ್ರಕಟವಾಗಿರುವುದು ಹೊಸ ತಲೆ ನೋವಿಗೆ ಕಾರಣವಾಗಿದೆ.;
ಒಳ ಮೀಸಲಾತಿ ಹಂಚಿಕೆ ಸಂಬಂಧ ನಿವೃತ್ತ ನ್ಯಾ.ಎಚ್.ಎನ್.ನಾಗಮೋಹನ್ ದಾಸ್ ನೇತೃತ್ವದಲ್ಲಿ ನಡೆಸಲಾದ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ಪೂರ್ಣಗೊಂಡು, ರಾಜ್ಯ ಸರ್ಕಾರಕ್ಕೆ ವರದಿಯನ್ನೂ ಸಲ್ಲಿಸಿದೆ. ಒಳ ಮೀಸಲಾತಿ ಹಂಚಿಕೆ ಹೇಗಾಗಿದೆ ಎಂಬ ಕುತೂಹಲ ಜತೆಗೆ ಸೋರಿಕೆಯಾದ ಮಾಹಿತಿಯಲ್ಲಿನ ಮೀಸಲಾತಿ ಹಂಚಿಕೆಗೆ ಆಕ್ಷೇಪಗಳೂ ವ್ಯಕ್ತವಾಗಿವೆ. ಆ ಮೂಲಕ ವರದಿ ಜಾರಿಯ ಅನಿಶ್ಚಿತತೆ ಆತಂಕ ಮತ್ತೆ ಎದುರಾಗಿದೆ.
ಒಳ ಮೀಸಲಾತಿ ವರದಿಯನ್ನು ಇಂದು (ಆ.7 ರಂದು) ಸಚಿವ ಸಂಪುಟದ ಮುಂದೆ ಮಂಡಿಸಲು ನಿರ್ಧರಿಸಲಾಗಿದೆ. ಆದರೆ, ಅದಕ್ಕೂ ಮುನ್ನವೇ ವರದಿಯ ಅಂಕಿ ಅಂಶಗಳು ಮಾಧ್ಯಮಗಳಿಗೆ ಸೋರಿಕೆಯಾಗಿ ಮೀಸಲಾತಿ ಪ್ರಮಾಣ ಪ್ರಕಟಿಸಿವೆ. ಆದರೆ, ಈ ಅಂಕಿ ಅಂಶಗಳಿಗೆ ಸಮುದಾಯಗಳಿಂದ ಆಕ್ಷೇಪ ವ್ಯಕ್ತವಾಗಿರುವುದು ಸರ್ಕಾರಕ್ಕೆ ತಲೆ ನೋವು ತರಿಸುವ ಸಾಧ್ಯತೆ ಇದೆ.
ನಾಗಮೋಹನ್ ದಾಸ್ ಆಯೋಗವು 2011 ಜನಗಣತಿ, ಕಾಂತರಾಜು ಆಯೋಗದ ವರದಿ ಅಂಕಿ ಅಂಶಗಳು ಹಾಗೂ ಸರ್ಕಾರದ ಬಳಿ ಲಭ್ಯವಿದ್ದ ಅಂಕಿ ಅಂಶಗಳ ಆಧಾರದ ಮೇಲೆ ಸಮೀಕ್ಷೆ ನಡೆಸಿತ್ತು. ಸರ್ಕಾರಕ್ಕೆ ಸಲ್ಲಿಸಿರುವ ವರದಿ ಅಂಕಿ ಅಂಶಗಳು 2012 ರಲ್ಲಿ ನಿವೃತ್ತ ನ್ಯಾ. ಎ.ಜೆ. ಸದಾಶಿವ ಆಯೋಗದ ಅಂಕಿ ಅಂಶಗಳನ್ನೇ ಹೋಲುತ್ತಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಸಮುದಾಯದ ಜನಸಂಖ್ಯೆ ಹೆಚ್ಚಳವಾಗಿದ್ದರೂ ಮೀಸಲಾತಿ ಹೆಚ್ಚಿಸಿಲ್ಲ ಎಂಬ ಆರೋಪಗಳು ಎಡಗೈ ಹಾಗೂ ಬಲಗೈ ಸಮುದಾಯದ ನಾಯಕರಿಂದ ಕೇಳಿ ಬರುತ್ತಿವೆ.
ಈ ಹಿಂದೆ ಎಚ್. ಕಾಂತರಾಜು ಸಮೀಕ್ಷೆ ವರದಿಯ ಅಂಕಿ ಅಂಶ ಸೋರಿಕೆಯಾದ ಒಂದೇ ಕಾರಣಕ್ಕೆ ಪ್ರಬಲ ಸಮುದಾಯಗಳು ತಮ್ಮ ಜನಸಂಖ್ಯೆ ಹೆಚ್ಚಳದ ನೆಪವೊಡ್ಡಿ ವರದಿಗೆ ವಿರೋಧ ವ್ಯಕ್ತಪಡಿಸಿದ್ದವು. ಅದರಿಂದ ಇಡೀ ವರದಿಯೇ ಮೂಲೆಗುಂಪಾಯಿತು. ಈಗ ಇಲ್ಲಿಯೂ ವರದಿ ಅಂಕಿ ಅಂಶಗಳನ್ನು ಸೋರಿಕೆ ಆಗಿರುವುದು ನೋಡಿದರೆ ಅಂತಹ ಆತಂಕ ಮೂಡಿಸಿರುವುದು ಸುಳ್ಳಲ್ಲ.
ಎಡಗೈ ಸಮುದಾಯದ ಜನಸಂಖ್ಯೆ ಹೆಚ್ಚಿದ್ದು, ಶೇ 8 ರಷ್ಟು ಮೀಸಲಾತಿ ನಿರೀಕ್ಷಿಸಿದ್ದೆವು. ಆದರೆ, ಸೋರಿಕೆಯಾದ ಮಾಹಿತಿಯಲ್ಲಿ ಎಡಗೈ ಸಮುದಾಯದವರಿಗೆ ಕೇವಲ 6 ರಷ್ಟು ಮೀಸಲಾತಿ ಒದಗಿಸಲಾಗಿದೆ. ಮೂರನೇ ಗುಂಪಿನಲ್ಲಿರುವ ಸ್ಪೃಶ್ಯ ಜಾತಿಗಳು ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿದರೂ ಶೇ 4 ರಷ್ಟು ಮೀಸಲಾತಿ ನೀಡಿರುವುದು ಸರಿಯಾದ ಕ್ರಮವಲ್ಲ. ಈವರೆಗೆ ಮೀಸಲಾತಿ ಪ್ರಯೋಜನ ಪಡೆಯದ ಹಾಗೂ ಅಲೆಮಾರಿ ಸಮುದಾಯಗಳಿಗೆ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕಿತ್ತು ಎಂಬುದು ಮೀಸಲಾತಿ ಹೋರಾಟಗಾರರ ಆಗ್ರಹವಾಗಿದೆ.
ರಾಜಕಾರಣವೇ ಬೇರೆ, ಸಮುದಾಯದ ತೀರ್ಮಾನ ಬೇರೆ
ಒಳ ಮೀಸಲಾತಿ ವರದಿಗೆ ಯಾವುದೇ ಆಕ್ಷೇಪ ವ್ಯಕ್ತಪಡಿಸದಿರಲು ಸರ್ಕಾರದಲ್ಲಿನ ಎಡಗೈ ಹಾಗೂ ಬಲಗೈ ಸಮುದಾಯದ ಶಾಸಕರು, ಸಚಿವರು ಒಮ್ಮತದ ತೀರ್ಮಾನ ಕೈಗೊಂಡಿದ್ದಾರೆ. ಆದರೆ, ಅದು ರಾಜಕಾರಣಿಗಳ ನಿರ್ಧಾರ. ಮೀಸಲಾತಿಗಾಗಿ ದಶಕಗಳಿಂದ ಹೋರಾಟ ಮಾಡಿರುವ ಸಮುದಾಯಗಳು ಈ ವಿಚಾರದಲ್ಲಿ ಸ್ವತಂತ್ರ ನಿರ್ಧಾರ ಕೈಗೊಳ್ಳಲು ಅರ್ಹವಿವೆ. ಸಮುದಾಯಗಳ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂಬುದಾದರೆ ವಿರೋಧಿಸಲೂ ಹಿಂದೆ ಸರಿಯುವುದಿಲ್ಲ. ಹಾಗಾಗಿ ಇಲ್ಲಿ ಸಮುದಾಯಗಳ ನಿರ್ಧಾರ ಪ್ರಮುಖವಾಗಲಿದೆ ಎಂದು ದಲಿತ ಮುಖಂಡ ಮಾವಳ್ಳಿ ಶಂಕರ್ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಹೆಚ್ಚು ಮೀಸಲಾತಿಗೆ ಬಲಗೈ ಸಮುದಾಯ ಆಗ್ರಹ
ಬಲಗೈ ಸಮುದಾಯವು ಹೆಚ್ಚು ಜನಸಂಖ್ಯೆ ಹೊಂದಿರುವ ಕಾರಣ ಶೇ 8 ರಷ್ಟು ಮೀಸಲಾತಿಗೆ ಬೇಡಿಕೆ ಇಟ್ಟಿದೆ. ಪ್ರಸ್ತುತ, ನಾಗಮೋಹನ್ ದಾಸ್ ವರದಿಯ ಮಾಹಿತಿ ಎನ್ನಲಾಗಿರುವ ಶೇ 6 ಮೀಸಲಾತಿ ಹಂಚಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ. ಈಗಾಗಲೇ ಮಾಜಿ ಸಚಿವ ಎಚ್.ಆಂಜನೇಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ, ಮಾದಿಗ ಸಮುದಾಯಗಳ ಸ್ವಾಭಿಮಾನಿ ಒಕ್ಕೂಟ ಇದೇ 11ರಂದು ಸ್ವಾತಂತ್ರ್ಯ ಉದ್ಯಾನದಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದೆ. ಹಾಗಾಗಿ ಮೀಸಲಾತಿ ಹಂಚಿಕೆ ಇನ್ನೂ ಕಗ್ಗಂಟಾಗಿ ಉಳಿದಿದೆ. ಕೆಲವರು ವರದಿಯ ಅಂಕಿ ಅಂಶಗಳಿಗೆ ಆಕ್ರೋಶ ವ್ಯಕ್ತಪಡಿಸಿ ನ್ಯಾಯಾಲಯದ ಕಟೆಕಟೆಗೆ ಕೊಂಡೊಯ್ಯುವ ಸಾಧ್ಯತೆಯೂ ನಿಚ್ಚಳವಾಗಿದೆ.
ಮಾದಿಗ ಸಮುದಾಯಗಳಿಗೆ ಶೇ 8 ಮೀಸಲಾತಿ ಹಾಗೂ ವಿಶೇಷ ಪ್ಯಾಕೇಜ್ ಪ್ರಕಟಿಸುವಂತೆ ಒತ್ತಾಯಿಸಿ ಮಾದಿಗ ಸಮುದಾಯಗಳ ಸ್ವಾಭಿಮಾನಿ ಒಕ್ಕೂಟ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದೆ.
ಆದಿ ದ್ರಾವಿಡ ಜಾತಿಯಿಂದಲೂ ಆಕ್ಷೇಪ
ಕರಾವಳಿ ಭಾಗದಲ್ಲಿ ಪರಿಶಿಷ್ಟರಲ್ಲಿ ಹಲವು ಜಾತಿಗಳಿದ್ದು, ಆದಿ ದ್ರಾವಿಡ ಎಂತಲೇ ಗುರುತಿಸಲಾಗುತ್ತಿದೆ. ಇತ್ತೀಚೆಗೆ ನಾಗಮೋಹನ್ ದಾಸ್ ನೇತೃತ್ವದಲ್ಲಿ ನಡೆದ ಸಮೀಕ್ಷೆಯಲ್ಲಿ ಬಹುಪಾಲು ಜನರು ಆದಿ ದ್ರಾವಿಡ ಎಂದೇ ಬರೆಸಿದ್ದು, ಮೂಲ ಜಾತಿ ದಾಖಲಿಸಿಲ್ಲ. ಆದಿ ದ್ರಾವಿಡ, ಆದಿ ಕರ್ನಾಟಕ ಹಾಗೂ ಆದಿ ಆಂಧ್ರ ಎಂದು ಬರೆಸಿರುವವರನ್ನೇ ಪ್ರತ್ಯೇಕ ಗುಂಪು ಮಾಡಿ ಶೇ 1 ರಷ್ಟು ಮೀಸಲಾತಿ ಒದಗಿಸಿರುವುದು ಕರಾವಳಿ ಪರಿಶಿಷ್ಟರಿಗೆ ಮಾಡಿದ ಅನ್ಯಾಯ. ಮಂಗಳೂರು, ಉಡುಪಿ ಜಿಲ್ಲೆ ಸೇರಿದಂತೆ ಹಲವೆಡೆ ದೈವ ಹಾಗೂ ವೃತ್ತಿ ಆಧರಿತವಾದ ಕುಲಗಳಿದ್ದು, ಆದಿ ದ್ರಾವಿಡ ಜಾತಿ ಸೂಚಕದಲ್ಲಿವೆ. ಸಾಕಷ್ಟು ಜನರು ಆರ್ಥಿಕವಾಗಿ ದುರ್ಬಲರಾಗಿದ್ದಾರೆ. ಪರಿಶಿಷ್ಟರಿಗೆ ಮೀಸಲಾಗಿರುವ ಶೇ 17 ರಷ್ಟು ಮೀಸಲಾತಿಯಿಯನ್ನು ಕೇವಲ ಎಡಗೈ ಹಾಗೂ ಬಲಗೈ ಸಮುದಾಯದವರಿಗೆ ಹಂಚಿದರೆ ಸಣ್ಣ ಪುಟ್ಟ ಸಮುದಾಯಗಳಿಗೆ ಪ್ರಾತಿನಿಧ್ಯ ಒದಗಿಸಿದಂತೆ ಆಗುವುದಿಲ್ಲ. ಈ ಬಗ್ಗೆ ಮಂಗಳೂರಿನಲ್ಲಿ ಸಭೆ ನಡೆಸಿ, ಕಾನೂನು ಹೋರಾಟದ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಉಡುಪಿಯ ನಿವೃತ್ತ ಶಿಕ್ಷಕರು ಆಗಿರುವ ಅಂಬೇಡ್ಕರ್ ಸಂಘಟನೆ ಸಂಚಾಲಕ ಸುರೇಶ್ ಮಾಸ್ಟರ್ ದ ಫೆಡರಲ್ ಕರ್ನಾಟಕಕ್ಕೆ ತಿಳಿಸಿದರು.