Internal Reservation | ಒಳ ಮೀಸಲಾತಿ ವರದಿ ; ವಿಶೇಷ ಸಂಪುಟ ಸಭೆಯಲ್ಲಿ ಇಂದು ಮಹತ್ವದ ತೀರ್ಮಾನ ಸಾಧ್ಯತೆ
ಒಳ ಮೀಸಲಾತಿ ವರದಿ ಜಾರಿಗೆ ಆರಂಭದಲ್ಲಿ ಒಮ್ಮತ ಸೂಚಿಸಿದ್ದ ಬಲಗೈ ಸಮುದಾಯದ ಸಚಿವರು ಮೀಸಲಾತಿ ಹಂಚಿಕೆ ಬಳಿಕ ಅಸಮಾಧಾನ ವ್ಯಕ್ತಪಡಿಸಿರುವುದು ಈಗ ಬಿಕ್ಕಟ್ಟಿಗೆ ಕಾರಣವಾಗಿದೆ.;
ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ನೀಡುವ ಸಂಬಂಧ ನಿವೃತ್ತ ನ್ಯಾ.ಎಚ್.ಎನ್.ನಾಗಮೋಹನ್ ದಾಸ್ ನೇತೃತ್ವದ ಆಯೋಗ ಸಲ್ಲಿಸಿರುವ ವರದಿ ಜಾರಿ ಕುರಿತಂತೆ ಇಂದು ನಡೆಯುವ ವಿಶೇಷ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
ಒಳ ಮೀಸಲಾತಿ ವರದಿ ಜಾರಿ ಕುರಿತಂತೆ ಪರ-ವಿರೋಧದ ಚರ್ಚೆಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ ಸಂಪುಟದ ನಿರ್ಧಾರ ತೀವ್ರ ಕುತೂಹಲ ಮೂಡಿಸಿದೆ.
ಹಂಚಿಕೆ ಮಾಡಿರುವ ಮೀಸಲಾತಿ ಪ್ರಮಾಣಕ್ಕೆ ಬಲಗೈ ಸಮುದಾಯ ಆಕ್ಷೇಪ ವ್ಯಕ್ತಪಡಿಸಿ, ಪ್ರತಿಭಟನೆಗೆ ಇಳಿದರೆ, ಎಡಗೈ ಸಮುದಾಯ ವರದಿಯನ್ನು ಯಥಾವತ್ತಾಗಿ ಜಾರಿ ಮಾಡುವಂತೆ ಪಟ್ಟು ಹಿಡಿದಿದೆ. ಈ ಮಧ್ಯೆ, ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳು ಕೂಡ ವರದಿ ಜಾರಿಯಾಗುವುದೇ, ಇಲ್ಲವೇ ಎಂಬ ಆತಂಕದಲ್ಲಿ ಕಾಲ ಕಳೆಯುವಂತಾಗಿದೆ.
ಒಳ ಮೀಸಲಾತಿ ವರದಿ ಜಾರಿಯಾಗುವವರೆಗೂ ಯಾವುದೇ ನೇಮಕಾತಿ ಅಧಿಸೂಚನೆ ಹಾಗೂ ಪ್ರಕ್ರಿಯೆ ನಡೆಸದಂತೆ ರಾಜ್ಯ ಸರ್ಕಾರ ಆದೇಶಿಸಿರುವುದು ಆತಂಕಕ್ಕೆ ಕಾರಣವಾಗಿದೆ.
ನಾಗಮೋಹನ್ ದಾಸ್ ವರದಿಯಲ್ಲಿ ಎಡಗೈ ಸಮುದಾಯಕ್ಕೆ ಶೇ 6 ಹಾಗೂ ಬಲಗೈ ಸಮುದಾಯಕ್ಕೆ ಶೇ 5 ರಷ್ಟು ಮೀಸಲಾತಿ ಹಂಚಿಕೆ ಮಾಡಲಾಗಿದೆ. ಜನಸಂಖ್ಯೆ, ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವಿಕೆ ಆಧಾರದ ಮೇಲೆ ಮೀಸಲಾತಿ ಹಂಚಿಕೆ ಮಾಡಲಾಗಿದೆ ಎಂದು ಆಯೋಗ ಸ್ಪಷ್ಟಪಡಿಸಿದ್ದರೂ ಬಲಗೈ ಸಮುದಾಯ ವಿರೋಧ ವ್ಯಕ್ತಪಡಿಸುತ್ತಿದೆ. ಮಾದಿಗಷ್ಟೇ ಹೊಲೆಯ ಸಮುದಾಯದ ಜನಸಂಖ್ಯೆ ಇದೆ. ಹಾಗಾಗಿ ಶೇ7 ರಷ್ಟು, ಇಲ್ಲವೇ ಎಡಗೈ ಸಮುದಾಯಕ್ಕೆ ನೀಡಿರುವಷ್ಟೇ ಮೀಸಲಾತಿ ನೀಡಬೇಕು ಎಂಬುದು ಬಲಗೈ ಸಮುದಾಯಗಳ ಆಗ್ರಹವಾಗಿದೆ.
ಒಳ ಮೀಸಲಾತಿ ವರದಿ ಜಾರಿಗೆ ಆರಂಭದಲ್ಲಿ ಒಮ್ಮತ ಸೂಚಿಸಿದ್ದ ಬಲಗೈ ಸಮುದಾಯದ ಸಚಿವರು ಮೀಸಲಾತಿ ಹಂಚಿಕೆ ಬಳಿಕ ಅಸಮಾಧಾನ ವ್ಯಕ್ತಪಡಿಸಿರುವುದು ಈಗ ಬಿಕ್ಕಟ್ಟಿಗೆ ಕಾರಣವಾಗಿದೆ.
ಒಳ ಮೀಸಲಾತಿ ವರದಿ ಜಾರಿ ಮಾಡದಂತೆ ಬಲಗೈ ಸಮುದಾಯದ ಸಂಘಟನೆಗಳು ವಿವಿಧೆಡೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿವೆ. ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಧರಣಿ ಸತ್ಯಾಗ್ರಹ ಕೂಡ ಆರಂಭಿಸಿವೆ. ಇನ್ನೊಂದೆಡೆ ವರದಿ ಯಥಾವತ್ ಜಾರಿಗೆ ಒತ್ತಾಯಿಸಿ ಹಿರಿಯ ಸಾಹಿತಿ ದೇವನೂರ ಮಹಾದೇವ ಅವರು ಮುಖ್ಯಮಂತ್ರಿ ಸಿದ್ದರಾಮಯ್ತ ಅವರಿಗೆ ಪತ್ರ ಬರೆದಿದ್ದಾರೆ. ಮಾಜಿ ಸಚಿವ ಎಚ್.ಆಂಜನೇಯ ಕೂಡ ವರದಿ ಜಾರಿಗೆ ಒತ್ತಡ ಹಾಕಿರುವ ಹಿನ್ನೆಲೆಯಲ್ಲಿ ಇಂದಿನ ಸಂಪುಟ ಸಭೆ ಕೈಗೊಳ್ಳುವ ನಿರ್ಧಾರದತ್ತ ಎಲ್ಲರ ಚಿತ್ತ ನೆಟ್ಟಿದೆ.