ರಾಜಭವನ ಚಲೋ ಬದಲು ಸೋನಿಯಾ ಗಾಂಧಿ ಮನೆ ಚಲೋ ಮಾಡಲಿ: ಎಚ್‌ ಡಿ ಕುಮಾರಸ್ವಾಮಿ ವ್ಯಂಗ್ಯ

"ಅಧಿಕಾರ ದುರುಪಯೋಗಪಡಿಸಿಕೊಂಡು ಸತ್ತವರ ಹೆಸರಲ್ಲಿ ಭೂಮಿ ಖರೀದಿ ಮಾಡಿದ್ದಾರೆ. ಡಿ ನೋಟಿಫಿಕೇಷನ್ ಮಾಡಿಕೊಂಡು ಜೀವನ ಮಾಡುವವರು ಇವರು. ಕುಮಾರಸ್ವಾಮಿ ಬಗ್ಗೆ ಮಾತನಾಡುವ ನೈತಿಕತೆ ಇವರಿಗೆ ಇದೆಯಾ?ʼʼ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Update: 2024-08-28 12:59 GMT

ʻʻಕಾಂಗ್ರೆಸ್ ನಾಯಕರು ರಾಜಭವನ ಚಲೋ ಮಾಡುತ್ತಿರುವುದಕ್ಕೆ ಬಹಳ ಸಂತೋಷ. ಅವರು ರಾಜಭವನದ ಜೊತೆಗೆ ರಾಷ್ಟ್ರಪತಿ ಭವನ ಚಲೋ ಕೂಡ ಮಾಡಲಿ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮನೆಗೆ ಕೂಡ ಹೋಗಲಿ. ಸತ್ತಿರುವ ವಿಚಾರ ಇಟ್ಟುಕೊಂಡು ನನ್ನ ಬಗ್ಗೆ ಮಾತನಾಡುತ್ತಿದ್ದಾರೆʼʼ ಎಂದು ಎಚ್‌ ಡಿ ಕುಮಾರಸ್ವಾಮಿ ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದ್ದಾರೆ.

ಮಂಡ್ಯ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಪ್ರಕ್ರಿಯೆ ಮುಗಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ʻʻಮಹಾನ್ ಅಪರಾಧ ಮಾಡಿದ್ದೇನೆ ಎಂದು ಕಾಂಗ್ರೆಸ್‌ ನಾಯಕರು ಹೇಳುತ್ತಿದ್ದಾರೆ. ನಾನೇ ಕೈ ಜೋಡಿಸಿ ಮನವಿ ಮಾಡುತ್ತೇನೆ, ರಾಜ್ಯಪಾಲರ ಅನುಮತಿ ಪಡೆದು ತನಿಖೆ ಮಾಡಲಿʼʼ ಎಂದು ಸವಾಲು ಹಾಕಿದ್ದಾರೆ.

ʻʻನನ್ನ ಬಗ್ಗೆ ಮಾತನಾಡುವ ಅಸಾಮಿಯ ಬಗ್ಗೆ ಚರ್ಚೆ ಮಾಡಲು ಬಹಳಷ್ಟು ವಿಚಾರಗಳು ಇವೆ. ಪಾಪ ನಮ್ಮನ್ನು ಕೆದಕಿದ್ದಾರೆ. ನಿನ್ನೆಯ ದಿನ ಅಸಲಿ ನಕಲಿ ಎಂದು ಹೇಳಿದ್ದಾರೆ. ಅಧಿಕಾರ ದುರುಪಯೋಗಪಡಿಸಿಕೊಂಡು ಸತ್ತವರ ಹೆಸರಲ್ಲಿ ಭೂಮಿ ಖರೀದಿ ಮಾಡಿದ್ದಾರೆ. ಡಿ ನೋಟಿಫಿಕೇಷನ್ ಮಾಡಿಕೊಂಡು ಜೀವನ ಮಾಡುವವರು ಇವರು. ಕುಮಾರಸ್ವಾಮಿ ಬಗ್ಗೆ ಮಾತನಾಡುವ ನೈತಿಕತೆ ಇವರಿಗೆ ಇದೆಯಾ?ʼʼ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ʻʻಮಂತ್ರಿಗಳ ಲೇಟರ್ ಪ್ಯಾಡ್ ನಲ್ಲಿ ಈ ಜನ ಏನೆಲ್ಲಾ ದುರುಪಯೋಗ ಪಡಿಸಿಕೊಂಡಿದ್ದಾರೆ ಎನ್ನುವ ಮಾಹಿತಿ ಎಲ್ಲರಿಗೂ ಇದೆ. ಮೂಡಾ ದಾಖಲೆಗಳಲ್ಲಿ ಸಹಿ ವ್ಯತ್ಯಾಸದ ಬಗ್ಗೆ ಜನ ಮಾತನಾಡುತ್ತಿದ್ದಾರೆ. ಈ ಹಗರಣದಲ್ಲಿ ಆಗಿರುವ ಬೆಳವಣಿಗೆ ಬಗ್ಗೆ ಟಾರ್ಚ್ ಹಾಕಿ ನೋಡಿದರೂ ಅಷ್ಟೇ, ಹಾಕದೇ ನೋಡಿದರೂ ಅಷ್ಟೇ. ಅದು ಸರ್ಕಾರಿ ಭೂಮಿ. ಸರ್ಕಾರಿ ಭೂಮಿ ಲಪಟಾಯಿಸಿ ಮೂಡಾ ಸೈಟ್ ಪಡೆದಿದ್ದಾರೆ. ಇದಕ್ಕೆ ಉತ್ತರ ಕೊಡಲಿʼʼ ಎಂದು ಒತ್ತಾಯಿಸಿದ್ದಾರೆ.

ʻʻಕಾನೂನು ಪ್ರಕಾರ ಎಷ್ಟು ಸೈಟ್ ಬೇಕಾದರೂ ಪಡೆಯಿರಿ. ಇದಕ್ಕೆ ನಮ್ಮ ವಿರೋಧವಿಲ್ಲ. ಸುಳ್ಳು ದಾಖಲೆ ಸೃಷ್ಟಿ ಮಾಡಿ, ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಂಡು ಇಂಥ ಕೆಲಸ ಮಾಡಿದ್ದಾರೆ. ಸಾಮಾನ್ಯ ರೈತನೊಬ್ಬ ಬಂದು ಜಮೀನು ಖಾತೆ ಮಾಡಲು ಹೇಳಿದರೆ ಮಾಡಿಕೊಡುತ್ತಾರಾ? ಭೂ ಪರಿವರ್ತನೆ ಮಾಡಿದ್ದೀರಿ ಅಲ್ಲವೇ? ಅದು ಯಾರ ಭೂಮಿ? ಆ ವ್ಯಕ್ತಿ ಸತ್ತು 25 ವರ್ಷವಾಗಿದೆ. ಸತ್ತಿರುವ ವ್ಯಕ್ತಿಯ ಹೆಸರಲ್ಲಿ ಡಿನೋಟಿಫಿಕೇಷನ್ ಮಾಡಿದ್ದೀರಿ. ಸತ್ತಿರುವ ಲಿಂಗನ ಹೆಸರಲ್ಲಿ ಡಿನೋಟಿಫಿಕೇಷನ್ ‌ಮಾಡಿಸಿದ್ದು ಯಾರು?ʼʼ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

Similar News