ಬೀದಿ ನಾಯಿ ಹತ್ಯೆ | ಮೇನಕಾ ಗಾಂಧಿ ಮಧ್ಯಪ್ರವೇಶ, ಕ್ಷಣದಲ್ಲೇ ಆರೋಪಿ ಬಂಧನ

Update: 2025-01-19 13:04 GMT
ಪ್ರಾತಿನಿಧಿಕ ಚಿತ್ರ

ಕಲ್ಲು ಎತ್ತಿಹಾಕಿ ಬೀದಿ ನಾಯಿಯನ್ನು ಸಾಯಿಸಿದ್ದಲ್ಲದೆ, ಅರೆಜೀವ ಸ್ಥಿತಿಯಲ್ಲಿದ್ದ ಅದನ್ನು ಲಗ್ಗೇಜ್ ಆಟೋಕ್ಕೆ ಕಟ್ಟಿ ರಸ್ತೆಯಲ್ಲಿ ಎಳೆದೊಯ್ದು ಪ್ರಕರಣದಲ್ಲಿ ಪ್ರಾಣಿ ಹಕ್ಕು ಪ್ರತಿಪಾದಕಿ ಮೇನಕಾ ಗಾಂಧಿ ಅವರ ಮಧ್ಯಪ್ರವೇಶದೊಂದಿಗೆ ಆರೋಪಿಯನ್ನು ಬಂಧಿಸಿದ ಘಟನೆ ಶಿವಮೊಗ್ಗ ಜಿಲ್ಲೆಯ ರಿಪ್ಪನ್ಪೇಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

ರಿಪ್ಪನ್ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಕೆಂಚನಾಲ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ತನ್ನ ಮನೆಯ ಕೋಳಿ ತಿಂದಿದೆ ಎಂಬ ಕೋಪದಲ್ಲಿ ಆಟೋ ಚಾಲಕ ನಾಯಿಯನ್ನು ಹುಡುಕಿಕೊಂಡು ಹೋಗಿ ಕಲ್ಲು ಎತ್ತಿಹಾಕಿ ಗಾಯಗೊಳಿಸಿದ್ದ. ಗ್ರಾಮದ ರೈಲ್ವೆ ನಿಲ್ದಾಣದ ಬಳಿ ಮಲಗಿದ್ದ ಬೀದಿ ನಾಯಿಯ ಮೇಲೆ ಮೂರು ಬಾರಿ ಕಲ್ಲು ಎತ್ತಿಹಾಕಿದ್ದಲ್ಲದೆ, ಅರೆಜೀವವಾಗಿದ್ದ ಅದನ್ನು ತನ್ನ ಲಗ್ಗೇಜು ಆಟೋಕ್ಕೆ ಕಟ್ಟಿ ಎಳೆದೊಯ್ದಿದ್ದ.

ಈ ಘಟನೆಯನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದರು. ಬಳಿಕ ಅವರು ರಿಪ್ಪನ್ಪೇಟೆಯ ವ್ಯಕ್ತಿಯೊಬ್ಬರ ನೆರವಿನಿಂದ ಈ ವಿಡಿಯೋವನ್ನು ಪ್ರಾಣಿ ಹಕ್ಕು ಕಾರ್ಯಕರ್ತೆ ಹಾಗೂ ಮಾಜಿ ಕೇಂದ್ರ ಸಚಿವೆ ಮೇನಕಾ ಗಾಂಧಿಯವರಿಗೆ ಮತ್ತು ಪ್ರಾಣಿ ದಯಾ ಸಂಘದವರಿಗೆ ಇ ಮೇಲ್‌ ಮೂಲಕ ಕಳಿಸಿದ್ದಾರೆ.

ಅಮಾನುಷ ಘಟನೆಯ ವಿಡಿಯೋ ತಲುಪಿದ ಕೆಲವೇ ಕ್ಷಣಗಳಲ್ಲಿ ಶಿವಮೊಗ್ಗ ಪೊಲೀಸ್ ವರಿಷ್ಠಾಧಿಕಾರಿ(ಎಸ್ಪಿ) ಮಿಥುನ್ ಕುಮಾರ್ ಹಾಗೂ ರಿಪ್ಪನ್ಪೇಟೆಯ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ ಮೇನಕಾ ಗಾಂಧಿಯವರು ಕೂಡಲೇ ಆರೋಪಿಯ ಮೇಲೆ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳುವಂತೆ ಸೂಚಿಸಿದ್ದಾರೆ. ಜೊತೆಗೆ ಶಿವಮೊಗ್ಗ ಪ್ರಾಣಿದಯಾ ಸಂಘದವರೂ ರಿಪ್ಪನ್ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮೇನಕಾ ಗಾಂಧಿಯವರ ಕರೆಯ ಹಿನ್ನೆಲೆಯಲ್ಲಿ ಕೂಡಲೇ ಎಚ್ಚೆತ್ತ ಪೊಲೀಸರು, ಘಟನೆಯ ಸಂಬಂಧ ಪ್ರಕರಣ ದಾಖಲಾದ ಹದಿನೈದು ನಿಮಿಷದಲ್ಲೇ ಆರೋಪಿಯನ್ನು ಪತ್ತೆ ಮಾಡಿ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ವಾಜೀದ್ ಎಂದು ಗುರುತಿಸಲಾಗಿದ್ದು, ಆತನ ವಿರುದ್ಧ ಬಿಎನ್ಎಸ್ ಮತ್ತು ಪ್ರಾಣಿ ಹಕ್ಕು ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಈ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿರುವ ವಾಜೀದ್ ಕುಟುಂಬದವರು, ಮನೆಯಲ್ಲಿ ಸಾಕಿದ್ದ ಕೋಳಿಗಳನ್ನು ಬೀದಿ ನಾಯಿ ತಿನ್ನುತ್ತಿದ್ದ ಹಿನ್ನೆಲೆಯಲ್ಲಿ ಕೋಪಗೊಂಡು ವಾಜೀದ್ ಆ ಕೃತ್ಯ ಎಸಗಿದ್ದಾಗಿ ಹೇಳಿದ್ದಾರೆ.

Tags:    

Similar News