Karnataka Politics | ರಾಜ್ಯ ರಾಜಕಾರಣದ ಮೇಲೆ ಮತ್ತೆ ʼಸಾಹುಕಾರ್‌ ಪೊಲಿಟಿಕ್ಸ್‌ʼ ಹಿಡಿತ!

ಎರಡು ರಾಷ್ಟ್ರೀಯ ಪಕ್ಷಗಳ ರಾಜ್ಯಾಧ್ಯಕ್ಷರ ಬದಲಾವಣೆಯ ವಿಷಯವನ್ನು ʼಸಾಹುಕಾರ್‌ʼ ಜಾರಕಿಹೊಳಿ ಕುಟುಂಬದ ಇಬ್ಬರು ನಾಯಕರು ಗಟ್ಟಿಯಾಗಿ ಪ್ರತಿಪಾದಿಸುತ್ತಿದ್ದು, ಆ ಮೂಲಕ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬದಲಾವಣೆಗೆ ಮುನ್ನುಡಿ ಬರೆದಿದ್ದಾರೆ.;

Update: 2025-01-19 12:02 GMT

ಕಳೆದ ಒಂದು ದಶಕದಿಂದ ರಾಜ್ಯ ರಾಜಕಾರಣವನ್ನು ತನ್ನದೇ ವರಸೆಯಲ್ಲಿ ಪ್ರಭಾವಿಸುತ್ತಿರುವ ಕುಂದಾನಗರಿ ಬೆಳಗಾವಿಯ ಸ್ಥಳೀಯ ರಾಜಕಾರಣ ಇದೀಗ ಮತ್ತೊಮ್ಮೆ ತನ್ನ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ.

ಕೆಲವೇ ವರ್ಷಗಳ ಹಿಂದೆ ಸಕ್ಕರೆ ಲಾಬಿಯ ಮಟ್ಟಿಗೆ ಸೀಮಿತವಾಗಿದ್ದ ಗಡಿನಾಡು ಬೆಳಗಾವಿಯ ಸ್ಥಳೀಯ ರಾಜಕೀಯ ಪ್ರಾಬಲ್ಯ, ಕಳೆದ ಒಂದು ದಶಕದಿಂದ ರಾಜ್ಯ ರಾಜಕಾರಣದ ಗತಿಯನ್ನೇ ಬದಲಿಸುವ ಮಟ್ಟಿಗೆ ಬೆಳೆದು ನಿಂತಿದೆ. ಕಳೆದ ಶತಮಾನದ ಎಂಭತ್ತು- ತೊಂಭತ್ತರ ದಶಕದ ಕೌಜಲಗಿ, ಕತ್ತಿ ಕುಟುಂಬಗಳ ಪಾರುಪಥ್ಯದಿಂದ ಆರಂಭವಾಗಿ ಇದೀಗ ಜಾರಕಿಹೊಳಿ, ಹೆಬ್ಬಾಳ್ಕರ ಕುಟುಂಬಗಳವರೆಗೆ ಬೆಳಗಾವಿಯ ಪ್ರಭಾವಿ ʼಕುಟುಂಬ ರಾಜಕಾರಣʼ ಕೇವಲ ಜಿಲ್ಲೆಗೆ ಅಥವಾ ಪ್ರಾದೇಶಿಕ ಮಟ್ಟಕ್ಕೆ ಮಾತ್ರವಲ್ಲದೆ; ರಾಜ್ಯ ರಾಜಕಾರಣವನ್ನೂ ತನ್ನ ಮೂಗಿನ ನೇರಕ್ಕೆ ಆಡಿಸತೊಡಗಿದೆ.

ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ಬೆಳಗಾವಿಯ ರಾಜಕಾರಣ, ಬೇಕೆಂದಾಗ ಸರ್ಕಾರಗಳನ್ನು ಉರುಳಿಸುವ, ಪಕ್ಷಗಳನ್ನು ಅಧಿಕಾರಕ್ಕೆ ತರುವ ಮಟ್ಟಿಗೆ ತನ್ನ ಪ್ರಾಬಲ್ಯ ಸಾಧಿಸಿದೆ. ಕಳೆದ 2019ರಲ್ಲಿ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಮೈತ್ರಿ ಸರ್ಕಾರದ ಪತನಕ್ಕೆ ನಾಂದಿ ಹಾಡಿದ್ದೇ ಬೆಳಗಾವಿಯ ರಾಜಕಾರಣ ಎಂಬುದನ್ನು ಮರೆಯುವಂತಿಲ್ಲ. ಎಚ್ ಡಿ ಕುಮಾರಸ್ವಾಮಿ ಅವರ ಅಂದಿನ ಸರ್ಕಾರ ಉರುಳಲು ಬೆಳಗಾವಿಯ ಒಂದು ಡಿಸಿಸಿ ಬ್ಯಾಂಕ್ ಚುನಾವಣೆಯ ಮೇಲಾಟವೇ ಮುಳುವಾಯಿತು ಎಂಬುದನ್ನು ಯಾರೂ ಅಲ್ಲಗಳೆಯಲಾರರು.

ಎಚ್ ಡಿಕೆ ಸರ್ಕಾರವನ್ನು ಆಪರೇಷನ್ ಕಮಲದ ಖೆಡ್ಡಾಕ್ಕೆ ಬೀಳಿಸಿ ಉರುಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಜಾರಕಿಹೊಳಿ ಕುಟುಂಬದ ಹಿರಿಯಣ್ಣ ರಮೇಶ್ ಜಾರಕಿಹೊಳಿ. ಡಿಸಿಸಿ ಬ್ಯಾಂಕ್ ಚುನಾವಣೆಯ ವಿಷಯದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಬಣದ ಕೈಮೇಲಾಗಿ, ಜಾರಕಿಹೊಳಿ ಬಣಕ್ಕೆ ಹಿನ್ನಡೆಯಾಗಲು ಕಾರಣ ಡಿ ಕೆ ಶಿವಕುಮಾರ್ ಎಂಬ ಹಿನ್ನೆಲೆಯಲ್ಲಿ ಆಗ ಜಾರಕಿಹೊಳಿ ಮತ್ತು ಡಿ ಕೆ ಶಿವಕುಮಾರ್ ಸಹೋದರರ ನಡುವೆ ಆರಂಭವಾದ ಸಂಘರ್ಷ ಅಂತಿಮವಾಗಿ ಮೈತ್ರಿ ಸರ್ಕಾರವನ್ನು ಬಲಿ ತೆಗೆದುಕೊಂಡಿದ್ದಲ್ಲದೆ, ಬಿ ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಕಾರಣವಾಯಿತು. ಬಳಿಕ ಯಡಿಯೂರಪ್ಪ ವಿರುದ್ಧದ ಭಿನ್ನಮತ ಮತ್ತು ಅದರ ಪರಿಣಾಮವಾಗಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗುವಲ್ಲಿ ಕೂಡ ಜಾರಕಿಹೊಳಿ ಕುಟುಂಬದ ಕೈವಾಡ ಸಾಕಷ್ಟು ಕೆಲಸ ಮಾಡಿತ್ತು. ಅಷ್ಟರಮಟ್ಟಿಗೆ ಬೆಳಗಾವಿಯ ʼಸಾಹುಕಾರ್‌ ಪೊಲಿಟಿಕ್ಸ್ʼ ರಾಜ್ಯ ರಾಜಕಾರಣದ ಕಡಿವಾಣಕ್ಕೇ ಕೈಹಾಕಿದೆ.

ಇದೀಗ ಮತ್ತೆ ಬೆಳಗಾವಿ ಜಿಲ್ಲೆಗೇ ಸೀಮಿತವಾಗಿದ್ದ ಒಂದು ಸಂಗತಿ, ʼಸಾಹುಕಾರ್‌ʼ ಜಾರಕಿಹೊಳಿ ಮತ್ತು ʼಕನಕಪುರ ಬಂಡೆʼ ಡಿಕೆ ಶಿವಕುಮಾರ್ ನಡುವಿನ ರಾಜಕೀಯ ಜಿದ್ಧಾಜಿದ್ದಿಯ ಕಾರಣಕ್ಕೆ ರಾಜ್ಯ ರಾಜಕಾರಣದ ಮೇಲೂ ಕರಿನೆರಳು ಚಾಚಿದೆ. ಬೆಳಗಾವಿಯಲ್ಲಿ ನಿರ್ಮಾಣವಾಗಿರುವ ಕಾಂಗ್ರೆಸ್ ಪಕ್ಷದ ಕಚೇರಿಯ ವಿಷಯದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಸಚಿವ ಸತೀಶ್ ಜಾರಕಿಹೊಳಿ ನಡುವೆ ಶ್ರೇಯಸ್ಸಿನ ಸಂಘರ್ಷ(ಕ್ರೆಡಿಟ್‌ ವಾರ್) ಆರಂಭವಾಗಿದೆ. ಕಚೇರಿ ನಿರ್ಮಾಣದ ಕ್ರೆಡಿಟನ್ನು ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ನೀಡಿದರು. ಕೆಪಿಸಿಸಿ ಸಭೆಯಲ್ಲಿ, ದೆಹಲಿ ಹೈಕಮಾಂಡ್ ನಾಯಕರ ಎದುರು ನೀಡಿದ ಈ ‌ʼಕ್ರೆಡಿಟ್ʼ ವಿಷಯ ಸಹಜವಾಗೇ ಸಭೆಯಲ್ಲಿದ್ದ ಸತೀಶ್ ಜಾರಕಿಹೊಳಿ ಅವರನ್ನು ಕೆರಳಿಸಿತು.

ಜಿಲ್ಲಾ ಕಾಂಗ್ರೆಸ್ ಕಚೇರಿ ನಿರ್ಮಾಣದ ಕ್ರೆಡಿಟ್ ವಿಷಯದಲ್ಲಿ ಮತ್ತೆ ಭುಗಿಲೆದ್ದಿರುವ ಜಾರಕಿಹೊಳಿ- ಡಿಕೆ ನಡುವಿನ ಜಿದ್ದಾಜಿದ್ದಿಗೆ ತುಪ್ಪು ಸುರಿದ ಇತರೆ ಹಲವು ವಿದ್ಯಮಾನಗಳೂ ಬೆಳಗಾವಿಯಲ್ಲಿ ಇತ್ತೀಚೆಗೆ ನಡೆದಿವೆ. ಆ ವಿದ್ಯಮಾನಗಳ ಹಿಂದೆ ಮತ್ತದೇ ಡಿ ಕೆ ಶಿವಕುಮಾರ್ ಅವರ ನೆರಳಿದೆ ಎಂಬ ಸಂಗತಿ ಇದೀಗ ಕಾಂಗ್ರೆಸ್ ಸರ್ಕಾರದಲ್ಲಿ ಕಂಪನ ಹುಟ್ಟಿಸಿದೆ.

ತುಪ್ಪ ಸುರಿದ ವಿದ್ಯಮಾನಗಳು

ಬೆಳಗಾವಿ ಚಳಿಗಾಲದ ಅಧಿವೇಶನದ ವೇಳೆ ಸಚಿವೆ ಹೆಬ್ಬಾಳ್ಕರ್ ಗೆ ಅಪಮಾನಕರ ಬೈಗುಳ ಬಳಸಿದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಸಿ ಟಿ ರವಿ ಅವರನ್ನು ಪೊಲೀಸರು ರಾತ್ರಿ ಇಡೀ ಜಿಲ್ಲೆಯಾದ್ಯಂತ ಸುತ್ತಾಡಿಸಿದ ಘಟನೆ ಕುರಿತು ಪ್ರತಿಕ್ರಿಯಿಸಿದ್ದ ಸತೀಶ್ ಜಾರಕಿಹೊಳಿ, ಪೊಲೀಸರ ನಡೆಯನ್ನು ಬಹಿರಂಗವಾಗಿ ಟೀಕಿಸುವ ಮೂಲಕ ಪ್ರಕರಣದ ವಿಷಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಪಕ್ಷದ ʼಚುಕ್ಕಾಣಿ ಹಿಡಿದವರುʼ ಹುಕುಂ ಚಲಾಯಿಸಿದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

ಅದಾದ ಬೆನ್ನಲ್ಲೇ ನಡೆದ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ನೆನಪಿನ ಹಿನ್ನೆಲೆಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಕಾರ್ಯಕಾರಿಣಿ ಮತ್ತು ʼಗಾಂಧಿ ಭಾರತʼ ಕಾರ್ಯಕ್ರಮದ ವಿಷಯದಲ್ಲಿ ಕೂಡ ಕೆಪಿಸಿಸಿ ಅಧ್ಯಕ್ಷರು ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಸಚಿವೆ ಹೆಬ್ಬಾಳ್ಕರ್ ಮೂಲಕ ಎಲ್ಲವನ್ನೂ ನಿಯಂತ್ರಣಕ್ಕೆ ಪಡೆದುಕೊಂಡರು. ಆ ಕಾರ್ಯಕ್ರಮದಲ್ಲಿ ತಮ್ಮನ್ನು ಸಂಪೂರ್ಣವಾಗಿ ಮೂಲೆಗುಂಪು ಮಾಡಲಾಯಿತು ಎಂಬ ಅಸಮಾಧಾನವನ್ನು ಕೂಡ ಸತೀಶ್ ಜಾರಕಿಹೊಳಿ ಹೊರಹಾಕಿದ್ದರು.

ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಪಟ್ಟು

ಈ ಎಲ್ಲಾ ಸರಣಿ ಸಂಘರ್ಷಗಳ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ವಿಷಯದಲ್ಲಿ ಸತೀಶ್ ಜಾರಕಿಹೊಳಿ ಇದೀಗ ಸಿಡಿದೆದ್ದಿದ್ದಾರೆ. ಪಕ್ಷದ ನಿಯಮದಂತೆ ಒಬ್ಬರಿಗೆ ಒಂದೇ ಹುದ್ದೆ ಎಂಬುದನ್ನು ಪಾಲಿಸಬೇಕು. ಡಿಸಿಎಂ ಹುದ್ದೆಯನ್ನೂ ಹೊಂದಿರುವ ಕೆಪಿಸಿಸಿ ಅಧ್ಯಕ್ಷರು ಪಕ್ಷದ ಅಧ್ಯಕ್ಷ ಸ್ಥಾನವನ್ನು ಈಗಲಾದರೂ ಬಿಟ್ಟುಕೊಡಬೇಕು. ಹೆಚ್ಚು ಮತ ತರುವಂತಹ ಸಾಮರ್ಥ್ಯ ಇರುವ ನಾಯಕರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಬೇಕು ಎಂದು ಸತೀಶ್ ಹೇಳಿದ್ದಾರೆ.

ಜಾರಕಿಹೊಳಿ ಅವರ ಈ ಪಟ್ಟಿನ ಹಿಂದೆ ಕಳೆದ ಕೆಲವು ತಿಂಗಳುಗಳಿಂದ ಬೆಳಗಾವಿಯ ರಾಜಕಾರಣದಲ್ಲಿ ಕೆಪಿಸಿಸಿ ಅಧ್ಯಕ್ಷರು ಸಾಧಿಸುತ್ತಿರುವ ಹಿಡಿತವೇ ಪ್ರಬಲವಾಗಿ ಕೆಲಸ ಮಾಡಿದೆ ಎನ್ನುವುದಕ್ಕೆ ಸತೀಶ್ ಅವರ ಸಹೋದರ, ರಮೇಶ್ ಜಾರಕಿಹೊಳಿ ಅವರು ಇತ್ತೀಚೆಗೆ ನೀಡಿದ ಹೇಳಿಕೆಯೇ ಸಾಕ್ಷಿ. ಬೆಳಗಾವಿ ಕಾಂಗ್ರೆಸ್ ಭವನದ ವಿಷಯದಲ್ಲಿ ಪ್ರತಿಕ್ರಿಯೆ ನೀಡಿದ್ದ ರಮೇಶ್, ಸತೀಶ್ ಗೆ ಈಗಲಾದರೂ ಮಾತನಾಡುವ ಶಕ್ತಿ ಬಂದಿರುವುದಕ್ಕೆ ಅವರನ್ನು ಅಭಿನಂದಿಸುತ್ತೇನೆ. ನಾನು ಕಾಂಗ್ರೆಸ್‌ನಲ್ಲಿ ಇರುವವರೆಗೆ ಡಿ ಕೆ ಶಿವಕುಮಾರ್‌ ಬೆಳಗಾವಿ ರಾಜಕಾರಣದಲ್ಲಿ ತಲೆ ಹಾಕಲು ಅವಕಾಶ ನೀಡಿರಲಿಲ್ಲ. ಈಗಲೂ ದನಿ ಎತ್ತದೇ ಇದ್ದರೆ ಸತೀಶ್ ಗೆ ಅಪಾಯ ಕಾದಿದೆ ಎಂಬರ್ಥದ ಹೇಳಿಕೆ ನೀಡಿದ್ದಾರೆ.

ಪ್ರತಿಪಕ್ಷ ಪಾಳೆಯದಲ್ಲೂ ಜಾರಕಿಹೊಳಿ ದನಿ

ಆಡಳಿತರೂಢ ಕಾಂಗ್ರೆಸ್‌ನಲ್ಲಿ ಸತೀಶ್, ಬೆಳಗಾವಿ ರಾಜಕಾರಣದ ದನಿಯಾಗಿ ಪಕ್ಷ ಮತ್ತು ಸರ್ಕಾರದ ಮಟ್ಟದಲ್ಲಿ ತಮ್ಮ ಹಿಡಿತ ಸಾಧಿಸುವ ಪ್ರಯತ್ನವನ್ನು ಮುಂದುವರಿಸಿದ್ದರೆ, ಅತ್ತ ಪ್ರತಿಪಕ್ಷ ಬಿಜೆಪಿ ಪಾಳೆಯದಲ್ಲೂ ಅದೇ ಜಾರಕಿಹೊಳಿ ಕುಟುಂಬದ ರಮೇಶ್, ಪಕ್ಷದ ಅಧ್ಯಕ್ಷರ ಬದಲಾವಣೆಯ ಕೂಗಿಗೆ ದನಿಯಾಗಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಿರುದ್ಧ ಕಳೆದ ಒಂದು ವರ್ಷದಿಂದ ಬಹಿರಂಗ ವಾಗ್ದಾಳಿ ನಡೆಸುತ್ತಿರುವ ರಮೇಶ್, ಇದೀಗ ತಮ್ಮ ದನಿಯನ್ನು ಇನ್ನಷ್ಟು ಎತ್ತರಿಸಿದ್ದು, “ವಿಜಯೇಂದ್ರ ಬಚ್ಚಾ, ನಾಲಾಯಕ್. ಎಲ್ಲಿಗೆ ಕರೆಯುತ್ತೀಯೋ ಕರಿ, ನಾನೊಬ್ಬನೇ ಬರ್ತೀನಿ..” ಎಂದು ಏಕವಚನದಲ್ಲಿ ಪಕ್ಷದ ರಾಜ್ಯಾಧ್ಯಕ್ಷರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಬಿಜೆಪಿಯ ಭಿನ್ನಮತೀಯ ನಾಯಕರಾಗಿ ಗುರುತಿಸಿಕೊಂಡಿರುವ ರಮೇಶ್, ಯಡಿಯೂರಪ್ಪ ಕುಟುಂಬದ ವಿರುದ್ಧ ಸಮರ ಸಾರಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಆಪ್ತರಾಗಿದ್ದು, ಈ ಜೋಡಿ ರಾಜ್ಯ ಬಿಜೆಪಿಯನ್ನು ಉಳಿಸುವ ಅಭಿಯಾನದ ನೇತೃತ್ವ ವಹಿಸಿದ್ದಾರೆ ಕೂಡ.

ರಾಜಕಾರಣದಲ್ಲಿ ಜಾರಕಿಹೊಳಿ ಕುಟುಂಬ

ಜಾರಕಿಹೊಳಿ ಕುಟುಂಬದ ಐವರು ಸಹೋದರರ ಪೈಕಿ ಭೀಮ್‌ಶೀ ಜಾರಕಿಹೊಳಿ ಹೊರತುಪಡಿಸಿ ಸದ್ಯ ಉಳಿದ ನಾಲ್ವರೂ ರಾಜಕಾರಣದಲ್ಲಿ ಸಕ್ರಿಯರಾಗಿದ್ದು, ರಮೇಶ್ ಮತ್ತು ಬಾಲಚಂದ್ರ ಜಾರಕಿಹೊಳಿ ಬಿಜೆಪಿಯಲ್ಲಿದ್ದರೆ, ಸತೀಶ್ ಕಾಂಗ್ರೆಸ್ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿದ್ದಾರೆ. ಲಖನ್ ಜಾರಕಿಹೊಳಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ವಿಧಾನಪರಿಷತ್ ಸದಸ್ಯರಾಗಿದ್ದಾರೆ.

ಇದೀಗ ರಾಜ್ಯದ ಎರಡು ರಾಷ್ಟ್ರೀಯ ಪಕ್ಷಗಳ ಅಧ್ಯಕ್ಷರ ಬದಲಾವಣೆಯ ವಿಷಯವನ್ನು ಇದೇ ಕುಟುಂಬದ ಇಬ್ಬರು ಗಟ್ಟಿಯಾಗಿ ಪ್ರತಿಪಾದಿಸುತ್ತಿದ್ದು, ಆ ಮೂಲಕ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬದಲಾವಣೆಗೆ ಮುನ್ನುಡಿ ಬರೆದಿದ್ದಾರೆ.

ಈಗಾಗಲೇ ಬಿಜೆಪಿ ಹೈಕಮಾಂಡ್ ನಾಯಕರು ಪಕ್ಷದ ರಾಜ್ಯಾಧ್ಯಕ್ಷರ ಬದಲಾವಣೆಗೆ ಗ್ರೀನ್ ಸಿಗ್ನಲ್ ನೀಡಿದ್ದು, ಚುನಾವಣೆಯ ಮೂಲಕ ಶೀಘ್ರವೇ ರಾಜ್ಯಾಧ್ಯಕ್ಷರ ಆಯ್ಕೆ ನಡೆಸಲಾಗುವುದು ಎಂದಿದ್ದಾರೆ. ಆ ಮೂಲಕ ರಮೇಶ್ ಜಾರಕಿಹೊಳಿ ಮತ್ತು ಯತ್ನಾಳ್ ಜೋಡಿಗೆ ಮೊದಲ ಹಂತದ ಜಯ ಸಿಕ್ಕಂತಾಗಿದೆ. ಆದರೆ, ಕಾಂಗ್ರೆಸ್‌ನಲ್ಲಿ ಅಂತಹ ಸ್ಪಂದನೆ ಹೈಕಮಾಂಡ್ ಮಟ್ಟದಿಂದ ಇನ್ನೂ ಸಿಕ್ಕಿಲ್ಲ. ಬದಲಾಗಿ, ಪಕ್ಷದ ರಾಜ್ಯ ಮುಖಂಡರು ಸಿಎಂ ಅಥವಾ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ವಿಷಯದಲ್ಲಿ ʼಬಾಯಿ ಮುಚ್ಚಿಕೊಂಡು ಇರಬೇಕು. ಏನನ್ನು, ಯಾವಾಗ ಮಾಡಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸಲಿದೆʼ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಖಡಕ್ ಸೂಚನೆ ನೀಡಿದ್ದಾರೆ.

ಆದರೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ಒತ್ತಡ ಪಕ್ಷದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಹೆಚ್ಚು ದಿನ ಆ ಕೂಗನ್ನು ಹತ್ತಿಕ್ಕಲಾಗದು ಎಂಬ ವಾತಾವರಣವಂತೂ ನಿರ್ಮಾಣವಾಗಿದೆ. ಆ ದೃಷ್ಟಿಯಲ್ಲಿ ಸತೀಶ್ ಜಾರಕಿಹೊಳಿಯ ದನಿಗೂ ಗೆಲುವು ಸಿಗುವ ದಿನ ದೂರವಿಲ್ಲ ಎನ್ನಲಾಗುತ್ತಿದೆ.

ಒಟ್ಟಾರೆ, ರಾಜ್ಯ ರಾಜಕಾರಣದಲ್ಲಿ ಕಳೆದ ಒಂದು ದಶಕದ ಅವಧಿಯಲ್ಲಿ ಯಾವಾಗೆಲ್ಲಾ ʼಜಾರಕಿಹೊಳಿ ಬ್ರದರ್ಸ್ʼ ದನಿ ಏರಿದೆಯೋ, ಆಗೆಲ್ಲಾ ಒಂದಿಲ್ಲೊಂದು ಬದಲಾವಣೆ ಖಾತರಿಯಾಗಿದೆ. ಆ ಮೂಲಕ ಬೆಳಗಾವಿಯ ರಾಜಕಾರಣ, ರಾಜ್ಯ ರಾಜಕಾರಣದ ಮೇಲೆ ಮೇಲುಗೈ ಸಾಧಿಸುತ್ತಲೇ ಇದೆ.

Tags:    

Similar News