Kho Kho World Cup | ಭಾರತದ ಪುರುಷ-ಮಹಿಳಾ ತಂಡಗಳಿಗೆ ಚೊಚ್ಚಲ ವಿಶ್ವಕಪ್ ಕಿರೀಟ
ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (IOA) ಸಹಯೋಗದಲ್ಲಿ ನಡೆದ ಖೋ ಖೋ ವಿಶ್ವಕಪ್ ಪಂದ್ಯಾವಳಿಯಲ್ಲಿ ವಿವಿಧ ದೇಶಗಳ ಪುರುಷರ 20 ತಂಡಗಳು ಹಾಗೂ ಮಹಿಳೆಯರ 19 ತಂಡಗಳು ಭಾಗವಹಿಸಿದ್ದವು.;
ವೇಗ, ಕಾರ್ಯತಂತ್ರ ಮತ್ತು ಕೌಶಲ್ಯದ ಅದ್ಬುತ ಪ್ರದರ್ಶನ ತೋರಿದ ಭಾರತದ ಪುರುಷ ಮತ್ತು ಮಹಿಳಾ ತಂಡಗಳು ಚೊಚ್ಚಲ ಖೋ ಖೋ ವಿಶ್ವಕಪ್‌ನಲ್ಲಿಪ್ರಶಸ್ತಿ ಗೆಲ್ಲುವುದರೊಂದಿಗೆ ಇತಿಹಾಸ ಸೃಷ್ಟಿಸಿವೆ.
ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿಭಾನುವಾರ ನಡೆದ ಹೈವೋಲ್ಟೇಜ್ ಫೈನಲ್ ಪಂದ್ಯದಲ್ಲಿ ನಾಯಕ ಪ್ರತೀಕ್ ವೈಕರ್ ಮತ್ತು ರಾಮ್ಜಿ ಕಶ್ಯಪ್ ಅವರ ಅತ್ಯುತ್ತಮ ಪ್ರದರ್ಶನದ ನೆರವಿನಿಂದ ಮೆನ್ ಇನ್ ಬ್ಲೂತಂಡ, ಪ್ರವಾಸಿ ನೇಪಾಳ ವಿರುದ್ಧ 54-36 ಅಂಕಗಳಿಂದ ಭರ್ಜರಿ ಜಯ ದಾಖಲಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಇದಕ್ಕೂ ಮುನ್ನ ನಡೆದ ಮಹಿಳೆಯರ ವಿಭಾಗದ ಫೈನಲ್‌ನಲ್ಲಿಅತ್ಯುತ್ತಮ ಪ್ರದರ್ಶನ ನೀಡಿದ ಭಾರತ ಮಹಿಳಾ ತಂಡವು 78-40 ಅಂಕಗಳಿಂದ ನೇಪಾಳ ಮಹಿಳಾ ತಂಡವನ್ನು ಸೋಲಿಸಿ ವಿಜಯದ ಕೇಕೆ ಹಾಕಿತು.
ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (IOA) ಸಹಯೋಗದಲ್ಲಿ ನಡೆದ ಖೋ ಖೋ ವಿಶ್ವಕಪ್ ಪಂದ್ಯಾವಳಿಯಲ್ಲಿ ವಿವಿಧ ದೇಶಗಳ ಪುರುಷರ 20 ತಂಡಗಳು ಹಾಗೂ ಮಹಿಳೆಯರ 19 ತಂಡಗಳು ಭಾಗವಹಿಸಿದ್ದವು.
ಪುರುಷರ ಫೈನಲ್ ಪಂದ್ಯದಲ್ಲಿ ನೇಪಾಳ ಟಾಸ್ ಗೆದ್ದು ರಕ್ಷಣೆ ಆಯ್ಕೆ ಮಾಡಿಕೊಂಡಿತು. ಭಾರತದ ಆಟಗಾರರು ಸ್ಟ್ರೈಕ್ ಮಾಡುವ ಅವಕಾಶವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರು. ಮೊದಲಾರ್ಧದ ಪಂದ್ಯದಲ್ಲಿ 26-0 ಅಂಖಗಳೊಂದಿಗೆ ಭಾರತ ಮುನ್ನಡೆ ಕಾಯ್ದುಕೊಂಡಿತು.
ದ್ವಿತಿಯಾರ್ಧ ಪಂದ್ಯದಲ್ಲಿ ನೇಪಾಳವು ಭಾರತೀಯ ಡಿಫೆಂಡರ್‌ಗಳ ಕಠಿಣ ಪ್ರತಿರೋಧದ ಹೊರತಾಗಿಯೂ ಹಿನ್ನಡೆಯನ್ನು 26-18ಕ್ಕೆ ಇಳಿಸಿಕೊಂಡರು.
3ನೇ ತಿರುವಿನಲ್ಲಿ ಆತಿಥೇಯ ಭಾರತದ ಪುರುಷರ ತಂಡ ಮತ್ತಷ್ಟು ಮುನ್ನಡೆ ಹೆಚ್ಚಿಸಿಕೊಂಡು, ನೇಪಾಳದ ಡಿಫೆಂಡರ್‌ಗಳ ಮೇಲೆ ದಾಳಿ ಮುಂದುವರಿಸಿ 54-18ಕ್ಕೆ ಮುನ್ನಡೆ ವಿಸ್ತರಿಸಿದರು.
ಅಂತಿಮವಾಗಿ ನೇಪಾಳ ತಂಡ 36 ಅಂಕಗಳ ಹಿನ್ನಡೆಯೊಂದಿಗೆ ಸೋಲು ಕಂಡಿತು. ಭಾರತ ತಂಡ ಚೊಚ್ಚಲ ಖೋ ಖೋ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತು. ಪಂದ್ಯಾವಳಿ ಉದ್ದಕ್ಕೂ ಭಾರತ ತಂಡ ಸತತ ಗೆಲುವಿನೊಂದಿಗೆ ಅಜೇಯವಾಗಿ ಉಳಿಯಿತು.
ವಿಶ್ವಕಪ್‌ಗೆ ಮುತ್ತಿಟ್ಟ ಮಹಿಳಾ ತಂಡ
ಮಹಿಳೆಯರ ಫೈನಲ್ ಪಂದ್ಯದಲ್ಲಿ ನೇಪಾಳ ಟಾಸ್ ಗೆದ್ದು ಭಾರತವನ್ನು ದಾಳಿಗೆ ಇಳಿಸಿತು. ಆರಂಭದಿಂದಲೇ ಭಾರತದ ವನಿತೆಯರು ತ್ವರಿತವಾಗಿ ಅಂಕ ಗಳಿಸುವ ಮೂಲಕ ಎದುರಾಳಿಗಳ ಮೇಲೆ ಆರಂಭಿಕ ಒತ್ತಡ ಹೇರಿದರು.
ಭಾರತ ತಂಡವು ನೇಪಾಳದ ಮೊದಲ ಬ್ಯಾಚ್‌ನ ಡಿಫೆಂಡರ್‌ಗಳನ್ನು ಒಂದು ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲೇ ಔಟ್ ಮಾಡಿ ಮುನ್ನಡೆ ಕಾಯ್ದುಕೊಂಡರು.
ಭಾರತದ ವನಿತೆಯರ ವೇಗದ ಆಟದ ಮುಂದೆ ನೇಪಾಳ ಆಟಗಾರರ ಪ್ರದರ್ಶನ ನೀರಸವಾಗಿತ್ತು. ಭಾರತದ ತಂಡದ ನಾಯಕಿ ಪ್ರಿಯಾಂಕಾ ಇಂಗಲ್ ಅವರು ಡಬಲ್ ಗೋಲು ಗಳಿಸಿ ಮೊದಲ ಸುತ್ತಿನಲ್ಲಿ 34-0 ಅಂಕಗಳ ಮುನ್ನಡೆ ಸಾಧಿಸಿದರು.
ಎರಡನೇ ಸುತ್ತಿನಲ್ಲೂ ಭಾರತೀಯ ಡಿಫೆಂಡರ್‌ಗಳು ನೇಪಾಳಕ್ಕೆ ಅಂಕ ಗಳಿಸುವ ಅವಕಾಶ ನೀಡಲಿಲ್ಲ. ಎರಡನೇ ಸುತ್ತಿನ ಕೊನೆಯಲ್ಲಿ ನೇಪಾಳ ಸಾಂಘಿಕ ಹೋರಾಟ ನಡೆಸಿ, ಹಿನ್ನಡೆಯನ್ನು 35-24ಕ್ಕೆ ಇಳಿಸುವಲ್ಲಿ ಯಶಸ್ವಿಯಾದರು. 3ನೇ ಸುತ್ತಿನಲ್ಲಿ ಭಾರತದ ವನಿತೆಯರು ಆಕ್ರಮಣಕಾರಿ ಆಟ ಪ್ರದರ್ಶಿಸಿ 73-24ಕ್ಕೆ ಮುನ್ನಡೆ ವಿಸ್ತರಿಸಿ ಚೊಚ್ಚಲ ವಿಶ್ವಕಪ್‌ಗೆ ಮುತ್ತಿಟ್ಟರು.
ಖೋ ಖೋ ಚೊಚ್ಚಲ ವಿಶ್ವಕಪ್ ಮುಡಿಗೇರಿಸಿಕೊಂಡ ಭಾರತದ ಪುರುಷರು ಹಾಗೂ ಮಹಿಳಾ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.
ಮಹಿಳಾ ತಂಡದಲ್ಲಿ ಕನ್ನಡದ ಕುವರಿ
ಮೊದಲ ಖೋ - ಖೋ ವಿಶ್ವಕಪ್ ಪಂದ್ಯಾಕೂಟದಲ್ಲಿ ನೇಪಾಳವನ್ನು ಬಗ್ಗುಬಡಿದು ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಭಾರತದ ಮಹಿಳಾ ಮತ್ತು ಪುರುಷರ ಸಿಎಂ ಸಿದ್ದರಾಮಯ್ಯ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ವಿಶ್ವಕಪ್‌ನಲ್ಲಿ ಭಾರತೀಯ ತಂಡಗಳ ಈ ಅಮೋಘ ಸಾಧನೆ ಇತಿಹಾಸದ ಪುಟಗಳಲ್ಲಿ ಶಾಶ್ವತವಾಗಿ ಉಳಿಯಲಿದೆ. ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲೂಕಿನ ಕುರುಬೂರಿನ ಯುವತಿ ಚೈತ್ರ. ಬಿ ಅವರು ವಿಶ್ವವಿಜೇತ ಮಹಿಳಾ ತಂಡದ ಭಾಗವಾಗಿರುವುದು ನಾಡಿಗೆ ಹೆಮ್ಮೆಯ ಸಂಗತಿ. ಭಾರತೀಯರ ಪಾಲಿಗೆ ಇದೊಂದು ಐತಿಹಾಸಿಕ ದಿನ ಎಂದು ಬಣ್ಣಿಸಿದ್ದಾರೆ.
ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಅವರು ಕೂಡ ಖೋ ಖೋ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ವಿಜಯ ಸಾಧಿಸಿದ್ದಕ್ಕಾಗಿ ಭಾರತೀಯ ಮಹಿಳಾ ಹಾಗೂ ಪುರುಷರ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಆಟಗಾರರ ಶ್ರದ್ಧೆ, ತಂಡದ ಸಂಘಟಿತ ಹೋರಾಟ ಮತ್ತು ದೃಢಸಂಕಲ್ಪ ರಾಷ್ಟ್ರವನ್ನು ಹೆಮ್ಮೆ ಪಡುವಂತೆ ಮಾಡಿದೆ.ಈ ವಿಜಯವು ಸ್ಥಳೀಯ ಕ್ರೀಡೆಗಳಲ್ಲಿ ಭಾರತದ ಬೆಳೆಯುತ್ತಿರುವ ಶಕ್ತಿಗೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.