ʻವಲಸಿಗರಿಲ್ಲದೆ ಬೆಂಗಳೂರು ಇರುವುದಿಲ್ಲʼ ಎಂದಾಕೆಗೆ ಮುಖಭಂಗ
ತೀವ್ರ ಟೀಕೆ ಬಳಿಕ ಸುಗಂಧ್ ಶರ್ಮಾ ಅವರು ಮೂಲ ವಿಡಿಯೋ ಅಳಿಸಿಹಾಕಿದ್ದಾರೆ ಮತ್ತು ಸ್ಪಷ್ಟೀಕರಣದೊಂದಿಗೆ ಇನ್ನೊಂದನ್ನು ಪೋಸ್ಟ್ ಮಾಡಿದ್ದಾರೆ. ಅಷ್ಟರಲ್ಲಿ ಅವರಿಗೆ ಚೆನ್ನಾಗಿ ಮರ್ಯಾದೆ ಆಗಿದೆ.;
ಬೆಂಗಳೂರಿನಲ್ಲಿ ವಾಸಿಸುತ್ತಿರುವ ಮತ್ತು ತನ್ನನ್ನು ಪ್ರಯಾಣಿಕಳು ಎಂದು ಕರೆದುಕೊಳ್ಳುವ ಇನ್‌ಸ್ಟಾಗ್ರಾಂ ಪ್ರಭಾವಿಯೊಬ್ಬರು ವಿಡಿಯೋದಲ್ಲಿ ʻಟೆಕ್ ಸಿಟಿಯನ್ನು ನಿರ್ಮಿಸಲು ಉತ್ತರ ಭಾರತೀಯರು ಸಹಾಯ ಮಾಡಿದ್ದಾರೆ. ವಲಸಿಗರಿಲ್ಲದೆ ಬೆಂಗಳೂರು ಇರುವುದಿಲ್ಲʼ ಎಂದು ಹೇಳಿ, ಮುಖಭಂಗ ಅನುಭವಿಸಿದ್ದಾರೆ.
ಉತ್ತರ ಭಾರತೀಯರು ಬೆಂಗಳೂರು ತೊರೆದರೆ ಏನಾಗುತ್ತದೆ ಎಂದು ಊಹಿಸಿ. ಪಿಜಿ (ಪೇಯಿಂಗ್ ಗೆಸ್ಟ್) ಮಾಲೀಕರು ಆದಾಯ ನಿಲ್ಲುತ್ತದೆ. ಕೋರಮಂಗಲ ಪಬ್‌ಗಳಲ್ಲಿ ಪಂಜಾಬಿ ಸಂಗೀತಕ್ಕೆ ಯಾರು ನೃತ್ಯ ಮಾಡುತ್ತಾರೆ?,ʼ ಸುಗಂಧ್ ಶರ್ಮಾ ಎಂಬುವರು ವಿಡಿಯೋದಲ್ಲಿ ಈ ರೀತಿ ಲಘು ಧಾಟಿಯಲ್ಲಿ ಹೇಳಿದ್ದರು.
ʻವಲಸಿಗರು ಹೊರಹೋಗಲು ಪ್ರಾರಂಭಿಸಿದರೆ ಬೆಂಗಳೂರು ತನ್ನ ಸೊಬಗು ಕಳೆದುಕೊಳ್ಳುತ್ತದೆ. ನಮ್ಮನ್ನು ಹೊರಹೋಗಲು ಹೇಳುವ ಮೊದಲು ಕನ್ನಡಿಗರು ಇದನ್ನು ಅರ್ಥಮಾಡಿಕೊಳ್ಳಬೇಕು,ʼ ಎಂದು ಇನ್‌ಸ್ಟಾಗ್ರಾಂನಲ್ಲಿ 17,400 ಅನುಯಾಯಿಗಳಿರುವ ಶರ್ಮಾ ಹೇಳಿದ್ದಾರೆ.
ಸೆಲೆಬ್ರಿಟಿಗಳ ಕೋಪ
ಅವರ ಹೇಳಿಕೆಯಲ್ಲಿ ಹೆಚ್ಚಿನವರಿಗೆ ತಮಾಷೆ ಕಾಣಿಸಲಿಲ್ಲ. ನಟಿಯರಾದ ಚೈತ್ರ ಆಚಾರ್ ಮತ್ತು ಅನುಪಮಾ ಗೌಡ, ಬಿಗ್ ಬಾಸ್ ಖ್ಯಾತಿಯ ರೂಪೇಶ್ ರಾಜಣ್ಣ ಮತ್ತು ಧನರಾಜ್ ಸೇರಿದಂತೆ ಹಲವರು ʼನಗರವನ್ನು ತೊರೆಯುವಂತೆ ಹೇಳಿದ್ದಾರೆʼ.
ʻನಿಜವಾಗಿಯೂ ಬೆಂಗಳೂರು ಬಿಡುವುದಾದರೆ, ನಾವು ಆ ಶೂನ್ಯದಲ್ಲಿ ಮತ್ತು ಡ್ಯಾನ್ಸರ್‌ಗಳಿಲ್ಲದ ಪಬ್ ಜೊತೆಗೆ ಬದುಕಲು ಸಿದ್ಧರಿದ್ದೇವೆ. ಖಂಡಿತವಾಗಿಯೂ ನಾವು ಬದುಕುತ್ತೇವೆ. ಉಳಿದ ಉತ್ತರ ಭಾರತೀಯರನ್ನು ಮರೆತುಬಿಡಿ. ನೀವು ಹೊರಡುಬಿಡಿ ಮೇಡಂ!ʼ ಎಂದು ನಟಿ ಚೈತ್ರ ಆಚಾರ್ ಬರೆದಿದ್ದಾರೆ.
ಇದು ಕೂಲ್ ಅಲ್ಲ
ʻಇದು ಕೂಲ್ ಎಂದು ನೀವು ಭಾವಿಸಿದ್ದರೆ, ಅದು ತಪ್ಪು. ನಿಮಗೆ ಎಲ್ಲಕ್ಕಿಂತ ಹೆಚ್ಚಾಗಿ ಬೆಂಗಳೂರು ಬೇಕಿದೆ ಮತ್ತು ನೀವು ಬೆಂಗಳೂರು ತೊರೆದರೆ, ನಮ್ಮ ಊರಿಗೆ ಯಾವುದೇ ನಷ್ಟವಿಲ್ಲ ಮತ್ತು ನಾವ್ಯಾರೂ ಬೆಂಗಳೂರು ಬಿಡುವುದಿಲ್ಲ,ʼ ಎಂದು ಅನುಪಮಾ ಗೌಡ ಪೋಸ್ಟ್ ಮಾಡಿದ್ದಾರೆ.
ನಟ-ಹಾಡುಗಾರ ಚಂದನ್ ಶೆಟ್ಟಿ ಮತ್ತು ನಟಿ ವರ್ಷಾ ಬೊಳ್ಳಮ್ಮ ಕೂಡ ʼದಯವಿಟ್ಟು ತೊಲಗಿʼ ಎಂದು ಬರೆದಿದ್ದಾರೆ.
ಜನರನ್ನು ಸೆಳೆಯಲು ʻಮೂರ್ಖ ರೀಲ್‌ಗಳನ್ನು ಮಾಡಿದ್ದಾರೆʼ ಎಂದು ವಾಣಿಜ್ಯೋದ್ಯಮಿಯೊಬ್ಬರು ದೂರಿದ್ದಾರೆ. ʻಒಬ್ಬ ಕನ್ನಡಿಗ ಮತ್ತು ಹೆಮ್ಮೆಯ ಬೆಂಗಳೂರಿಗನಾಗಿರುವ ನನಗೆ ಉತ್ತರ ಭಾರತದ ಸ್ನೇಹಿತರೊಂದಿಗೆ ಯಾವುದೇ ಸಮಸ್ಯೆಯಿಲ್ಲ. ವೈಯಕ್ತಿಕ ಅಜೆಂಡಾ ಇರಿಸಿಕೊಂಡವರು ನಿರಂತರವಾಗಿ 'ಉತ್ತರ ಭಾರತ ವಿರುದ್ಧ ಬೆಂಗಳೂರು' ವಿಷಯ ಪೋಸ್ಟ್ ಮಾಡುವ ಮೂಲಕ ಅನಗತ್ಯ ದ್ವೇಷ ಹರಡುತ್ತಿದ್ದಾರೆ. ದಯವಿಟ್ಟು ದ್ವೇಷ ಹರಡುವುದನ್ನು ನಿಲ್ಲಿಸಿ,ʼ ಎಂದು ಯುದಿಷ್ಟರ್ ನಾರಾಯಣ್ ಎಂಬುವರು ಬರೆದಿದ್ದಾರೆ.
ಭಾರಿ ಪ್ರತಿರೋಧದ ಬಳಿಕ ಶರ್ಮಾ, ʼಬೆಂಗಳೂರು ಸಬ್ಕಾ ಹೈ ಕಿಸಿ ಏಕ್ ಕಾ ನಹೀಂ (ಬೆಂಗಳೂರು ಎಲ್ಲರಿಗೂ ಸೇರಿದ್ದು, ಒಬ್ಬರಿಗಲ್ಲ)ʼ ಎಂಬ ಶೀರ್ಷಿಕೆಯ ವಿಡಿಯೋ ಅಳಿಸಿಹಾಕಿದಂತಿದೆ. ತನ್ನ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ʻಐ ಲವ್ ಬೆಂಗಳೂರುʼ ಶೀರ್ಷಿಕೆಯ ಮತ್ತೊಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ. ʻಜನರು ಮುಕ್ತ ಮನಸ್ಸು ಹೊಂದಿರಬೇಕು. ತಮಾಷೆಗೆಂದು ವಿಡಿಯೋ ಮಾಡಿದ್ದೆ,ʼ ಎಂದು ಹೇಳಿದ್ದಾರೆ.