ಬೆಂಗಳೂರು ದಕ್ಷಿಣ ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳ ಮಾರಾಮಾರಿ: ಸಿಬ್ಬಂದಿಗೂ ಗಾಯ
ಈ ಸಂಬಂಧ ಜಿಲ್ಲಾ ಕಾರಾಗೃಹದ ಅಧೀಕ್ಷಕರು ರಾಮನಗರ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, 27 ವಿಚಾರಣಾಧೀನ ಕೈದಿಗಳು ಗಲಾಟೆಯಲ್ಲಿ ಭಾಗಿಯಾಗಿದ್ದಾರೆಂದು ತಿಳಿಸಿದ್ದಾರೆ.;
ಬೆಂಗಳೂರು ದಕ್ಷಿಣ ಜಿಲ್ಲಾ ಕಾರಾಗೃಹ
ಬೆಂಗಳೂರು ದಕ್ಷಿಣ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳ ಎರಡು ಗುಂಪುಗಳ ನಡುವೆ ಭೀಕರ ಮಾರಾಮಾರಿ ನಡೆದಿದ್ದು, ಘಟನೆಯಲ್ಲಿ ಜೈಲು ಸಿಬ್ಬಂದಿಯೂ ಗಾಯಗೊಂಡಿದ್ದಾರೆ. ಈ ಘಟನೆ ಆಗಸ್ಟ್ 28ರಂದು ಸಂಜೆ ನಡೆದಿದ್ದರೂ, ತಡವಾಗಿ ಬೆಳಕಿಗೆ ಬಂದಿದೆ.
ವಿಚಾರಣಾಧೀನ ಕೈದಿಗಳಾದ ಹರ್ಷ ಮತ್ತು ದೇವರಾಜು ನಡುವೆ ಸಂದರ್ಶನ ಕೊಠಡಿ ಬಳಿ ಆರಂಭವಾದ ಜಗಳವು ಬ್ಯಾರಕ್‌ವರೆಗೂ ವ್ಯಾಪಿಸಿದೆ. ಜಗಳ ಬಿಡಿಸಲು ಹೋದ ಕಾರಾಗೃಹದ ಸಿಬ್ಬಂದಿಯ ಮೇಲೆ ಕೈದಿಗಳು ಹಲ್ಲೆ ನಡೆಸಿ, ಅವರನ್ನು ತಳ್ಳಾಡಿ ಗಾಯಗೊಳಿಸಿದ್ದಾರೆ. ಘಟನೆಯಲ್ಲಿ ಎರಡೂ ಗುಂಪಿನ ಕೈದಿಗಳಿಗೂ ಗಾಯಗಳಾಗಿವೆ.
ಈ ಸಂಬಂಧ ಜಿಲ್ಲಾ ಕಾರಾಗೃಹದ ಅಧೀಕ್ಷಕರು ರಾಮನಗರ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, 27 ವಿಚಾರಣಾಧೀನ ಕೈದಿಗಳು ಗಲಾಟೆಯಲ್ಲಿ ಭಾಗಿಯಾಗಿದ್ದಾರೆಂದು ತಿಳಿಸಿದ್ದಾರೆ. ಗಲಾಟೆಯ ಪ್ರಮುಖ ಆರೋಪಿ ಹರ್ಷ (ಕೈಮಾ), ಈ ಹಿಂದೆ ಕನಕಪುರ ತಾಲೂಕಿನಲ್ಲಿ ದಲಿತ ಯುವಕನ ಕೈ ಕತ್ತರಿಸಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ. ಬಂಧಿಸುವ ವೇಳೆ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿದ್ದರು ಎನ್ನಲಾಗಿದೆ. ಘಟನೆಯ ನಂತರ ಬಂದೀಖಾನೆ ಇಲಾಖೆಯ ಕೇಂದ್ರ ವಲಯದ ಡಿಐಜಿ ದಿವ್ಯಶ್ರೀ ಅವರು ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.